ರವಿ ಬೆಳಗೆರೆ ಬರೆದ ‘ಕಲ್ಪನಾ ವಿಲಾಸ’ ಪುಸ್ತಕವನ್ನು ಕಣ್ಣೀರು ತುಂಬಿಸಿಕೊಂಡು ಓದಿದ್ದೇನೆ. ವಿ. ಶ್ರೀಧರ ಎಂಬ ಲೇಖಕರು ಬರೆದಿರುವ 1114 ಪುಟ ಇರುವ ‘ರಜತ ರಂಗದ ಧ್ರುವತಾರೆ ‘ ಪುಸ್ತಕ ಓದಿ ಮುಗಿಸಿದ್ದೇನೆ. ಅವೆರಡೂ ಪುಸ್ತಕಗಳು ಮಿನುಗುತಾರೆ ಕಲ್ಪನಾ ಅವರ ಬದುಕು ಮತ್ತು ಸಿನಿಮಾಗಳಿಗೆ ಸಂಬಂಧಿಸಿದ್ದು! ಕಲ್ಪನಾ ಅವರ ಬದುಕು ಒಂದು ದುರಂತ ಸಿನಿಮಾದ ಕಥೆಯಂತೆ ಭಾಸವಾಗುತ್ತದೆ. ಮಿನುಗುತಾರೆ ಎಂಬ ಬಿರುದು ಅವರ ಮಟ್ಟಿಗೆ ಅನ್ವರ್ಥ.
ಕಲ್ಪನಾ ಹುಟ್ಟಿದ್ದು, ಬಾಲ್ಯವನ್ನು ಕಳೆದದ್ದು ಮಂಗಳೂರಿನಲ್ಲಿ
ಆಕೆಯ ಮಾತೃಭಾಷೆ ತುಳು. ಹೆತ್ತವರು ಇಟ್ಟ ಚಂದದ ಹೆಸರು ಶರತ್ ಲತಾ. ಕೆ.ಎನ್. ಟೇಲರ್ ಅವರ ತುಳು ಚಿತ್ರ ‘ಏರ್ ಮಾಲ್ತಿನ ತಪ್ಪು?’ ಸಿನಿಮಾದಲ್ಲಿ ನಟಿಸಲು ಆಕೆಗೆ ಮೊದಲ ಅವಕಾಶ ದೊರೆಯಿತು. ಅಮ್ಮನಿಗೆ ಮಗಳು ಸೂಪರ್ ಸ್ಟಾರ್ ಆಗಬೇಕು ಅಂತ ದೊಡ್ಡ ಆಸೆ ಇತ್ತು. ಮಗಳು ಮಹಾ ಪ್ರತಿಭಾವಂತೆ.
ಕನ್ನಡದ ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಮೂಲಕ ಬಿ.ಆರ್. ಪಂತುಲು ಅವರ ಪರಿಚಯ ಆಗಿತ್ತು. ಪಂತುಲು ಅವರ ‘ಸಾಕು ಮಗಳು’ ಕಲ್ಪನಾ ಮೊದಲ ಸಿನಿಮಾ. ಕಲ್ಪನಾ ಎಂದು ಹೆಸರಿಟ್ಟವರು ಪಂತುಲು ಅವರೇ. ನಂತರ ಕನ್ನಡ ಸಿನಿಮಾಗಳ ಅತ್ಯಂತ ಯಶಸ್ವೀ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರ ಪರಿಚಯ ಆಯಿತು.
ಕಣಗಾಲ್ ಸಿನಿಮಾಗಳು ಸಾಲು ಸಾಲು ಸೂಪರ್ ಹಿಟ್!
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ಕಲ್ಪನಾ ಕಥಾ ನಾಯಕಿಯಾಗಿ ಮಿಂಚುತ್ತಾ ಹೋದರು. ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ಕೂಡ ಸಕತ್ ಮಿಂಚಿದರು. 1963ರಿಂದ 1978ರ ಅವಧಿಯಲ್ಲಿ ಆಕೆ ಅಭಿನಯಿಸಿದ್ದು ಬರೋಬ್ಬರಿ 78 ಸಿನೆಮಾಗಳು. ಆ ಅವಧಿಯಲ್ಲಿ ಆಕೆಗೆ ಸ್ಪರ್ಧಿಯೇ ಇರಲಿಲ್ಲ. ಆಗ ಪತ್ರಿಕೆಗಳಲ್ಲಿ ಆಕೆಯ ಸಿನಿಮಾಗಳಷ್ಟೇ ಚರ್ಚೆ ಆಗುತ್ತಿದ್ದದ್ದು ಆಕೆಯ ದುರಹಂಕಾರದ ಘಟನೆಗಳೇ! ಆಕೆ ಯಾರನ್ನೋ ಬೈದರಂತೆ, ಜಗಳ ಮಾಡಿ ಸೆಟ್‌ನಿಂದ ಎದ್ದು ಹೋದರಂತೆ ಎನ್ನುವ ಸುದ್ದಿಗಳು ಪತ್ರಿಕೆಗಳಲ್ಲಿ ಬರುತ್ತಿದ್ದವು. ನಿಜವಾಗಿ ಆಕೆಗೆ ದುರಹಂಕಾರ ಇರಲಿಲ್ಲ. ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ನೋವು ಆಕೆಯನ್ನು ಪದೇಪದೆ ಕಾಡುತ್ತಿತ್ತು.
ಸಾಲು ಸಾಲು ದುರಂತ ಪಾತ್ರಗಳು ಕಲ್ಪನಾ ಪಾಲಿಗೆ!
ಮುಂದೆ ಆಕೆಗೆ ದೊರೆತದ್ದು ಎಲ್ಲವೂ ಭಾವತೀವ್ರತೆಯ ಪಾತ್ರಗಳು. ದುರಂತ ಕಥೆಗಳು. ಹೆಚ್ಚಿನವು ಕಾದಂಬರಿ ಆಧಾರಿತ ಚಿತ್ರಗಳು. ನಾಯಕಿ ಪ್ರಧಾನ ಚಿತ್ರಗಳು. ಆಳವಾದ ಬಟ್ಟಲುಗಣ್ಣು, ಉದ್ದವಾದ ಕುತ್ತಿಗೆ, ನಡುಗುವ ಧ್ವನಿ, ಪಾತ್ರದಲ್ಲಿ ಲೀನವಾಗುವ ಭಾವತೀವ್ರತೆ, ಅದ್ಭುತವಾದ ಸೌಂದರ್ಯ ಪ್ರಜ್ಞೆ ಮತ್ತು ಡ್ರೆಸ್ಸಿಂಗ್ ಸೆನ್ಸ್ ಆಕೆಯ ಬಹುದೊಡ್ಡ ಆಸ್ತಿ. ದುರಂತ ಪಾತ್ರಗಳಿಗೆ ಹೇಳಿ ಮಾಡಿಸಿದ ನಟಿ. ಅಂತಹ ಪಾತ್ರಗಳಿಂದ ಕಲ್ಪನಾ ಕೀರ್ತಿಶಿಖರ ಏರಿದರು.
ಶರಪಂಜರ, ಗೆಜ್ಜೆ ಪೂಜೆ, ಬೆಳ್ಳಿ ಮೋಡ, ಕಪ್ಪು ಬಿಳುಪು, ಗಂಧದ ಗುಡಿ, ಎರಡು ಕನಸು, ಬಂಗಾರದ ಹೂವು, ದಾರಿ ತಪ್ಪಿದ ಮಗ, ಬಯಲು ದಾರಿ, ಹಣ್ಣೆಲೆ ಚಿಗುರಿದಾಗ………… ಸಿನಿಮಾ ನೋಡಿದವರಿಗೆ ಕಲ್ಪನಾ ಅಭಿನಯ ಸಾಮರ್ಥ್ಯವು ಕಣ್ಣಿಗೆ ಕಟ್ಟುತ್ತದೆ. ಅವಳ ಹೆಚ್ಚಿನ ಸಿನಿಮಾ ನಾನು ನೋಡಿದ್ದೇನೆ ಮತ್ತು ಕಣ್ಣೀರು ಸುರಿಸಿದ್ದೇನೆ. ಅವಳ ಅಭಿನಯದ ಬಗ್ಗೆ ಸಾವಿರಾರು ಉಲ್ಲೇಖಗಳು ಲಭ್ಯವಿದ್ದು ಕೆಲವನ್ನು ನಾನು ಇಲ್ಲಿ ದಾಖಲಿಸಬೇಕು.
1) ‘ ಶರಪಂಜರ’ ಸಿನೆಮಾದ ಶೂಟಿಂಗ್ ಸಮಯ. ಪುಟ್ಟಣ್ಣ ಕಣಗಾಲ್ ನಿರ್ದೇಶಕರು. ಕಲ್ಪನಾ ಮಾಡಿದ್ದು ಕಾವೇರಿ ಎಂಬ ಗೃಹಿಣಿಯ ಪಾತ್ರ. ತನ್ನ ಗಂಡ ಮತ್ತು ಮಕ್ಕಳು ತನ್ನನ್ನು ನಿರ್ಲಕ್ಷ್ಯ ಮಾಡಿದಾಗ ಮನಸ್ಸಿನ ನೋವು ಹೆಪ್ಪುಗಟ್ಟಿ ಹುಚ್ಚಿಯಾಗುವ ಸನ್ನಿವೇಶ. ಜೋರಾಗಿ ಅಳುತ್ತ ಕಿಟಕಿಯ ಗಾಜು ಒಡೆದು, ಸೋಫಾ ಹರಿಯುವ ದೃಶ್ಯ. ಕಲ್ಪನಾ ಇಡೀ ಜಗತ್ತನ್ನು ಮರೆತು ಅಭಿನಯಿಸುತ್ತಾ ಹೋಗುತ್ತಾರೆ. ಪುಟ್ಟಣ್ಣ ಕಟ್ ಎಂದು ಕ್ಯಾಮೆರಾ ಆಫ್ ಮಾಡಿದರೂ ಕಲ್ಪನಾ ಸೋಫಾ ಹರಿಯುವುದನ್ನು ನಿಲ್ಲಿಸಲೇ ಇಲ್ಲ. ಗಾಜಿನ ಚೂರು ತಾಗಿ ಅವಳ ಕೈಯಲ್ಲಿ ರಕ್ತ ಸುರಿಯುತ್ತಿತ್ತು. ಅಂದು ಅವಳ ಮೈಯಲ್ಲಿ ಕಾವೇರಿಯ ಆವಾಹನೆ ಆಗಿತ್ತು ಎಂದು ಪುಟ್ಟಣ್ಣ ಹೇಳುತ್ತಾರೆ!
2) ‘ಎರಡು ಕನಸು’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ತನ್ನ ಕೈಹಿಡಿದ ಗಂಡ ರಾಜ್ ಕುಮಾರ್ ತನ್ನನ್ನು ಸರಸವಾಗಿ ಪ್ರೀತಿ ಮಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಳ್ಳುವ ದೃಶ್ಯ. ಕಲ್ಪನಾ ಅಳುತ್ತ ಕುಸಿದುಬೀಳುತ್ತಾರೆ. ಟೇಕ್ ಓಕೆ ಆದಾಗಲೂ ಆಕೆ ಏಳಲೇ ಇಲ್ಲ. ಕಲ್ಪನಾ ಮೂರ್ಛೆ ಹೋಗಿದ್ದರು. ಆಕೆ ಮೂರ್ಛೆಯಿಂದ ಎದ್ದಾಗ ರಾಜಕುಮಾರ್ ಆಕೆಗೆ ಕೈ ಮುಗಿದು ನಾನು ನಮಸ್ಕಾರ ಮಾಡಿದ್ದು ನಿನಗಲ್ಲ. ನಿನ್ನೊಳಗಿನ ಅಭಿನಯ ಸರಸ್ವತಿಗೆ ಎಂದಿದ್ದರು!
3) ಶರಪಂಜರ ಸಿನಿಮಾ ನೋಡಿದ ಹಿಂದಿಯ ಮಹಾ ನಟಿ ಶರ್ಮಿಳಾ ಠಾಗೋರ್ ಈ ರೀತಿಯ ಅಭಿನಯ ನನ್ನಿಂದ ಎಂದಿಗೂ ಸಾಧ್ಯವೇ ಇಲ್ಲ ಎಂದಿದ್ದರು.
4) ‘ಹಣ್ಣೆಲೆ ಚಿಗುರಿದಾಗ’ ಎಂ. ಆರ್.ವಿಠ್ಠಲ್ ನಿರ್ದೇಶಿಸಿದ ಸಿನೆಮಾ. ಅದರಲ್ಲಿ ಆಕೆಯದ್ದು ಸಾಂಪ್ರದಾಯಿಕ ಕುಟುಂಬದ ಕ್ರಾಂತಿಕಾರಿ ವಿಧವೆಯ ಪಾತ್ರ. ಆ ಪಾತ್ರದ ನಿಲುವುಗಳು ಸಂಪ್ರದಾಯವಾದಿಗಳ ಟೀಕೆಗೆ ಗುರಿಯಾದಾಗ ಕಲ್ಪನಾ ಸಿಡಿದು ನಿಲ್ಲುತ್ತಾರೆ. ಪತ್ರಿಕೆಗೆ ಇಷ್ಟುದ್ದ ಲೇಖನ ಬರೆದು ಸಮರ್ಥನೆ ಮಾಡುತ್ತಾರೆ. ಭಾರತದ ಅತೀ ಅದ್ಭುತ ಕ್ಲಾಸಿಕ್ ಸಿನೆಮಾಗಳಲ್ಲಿ ಇದು ಒಂದು ಎಂದು ಪ್ರಶಂಸೆಗೆ ಪಾತ್ರವಾಗಿದೆ. ಆ ಸಿನಿಮಾವನ್ನು ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವರು ಥೇಟರಲ್ಲಿ ನೋಡಿ ನಾನು ಕಲ್ಪನಾ ಅಭಿಮಾನಿ ಎಂದಿದ್ದರು.
5) ‘ ಮುಕ್ತಿ’ ಎಂಬ ಸಿನಿಮಾದಲ್ಲಿ ಆಕೆ ವೇಶ್ಯೆಯ ಮಗಳ ಪಾತ್ರ ಮಾಡುತ್ತಾರೆ. ಲಂಡನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅದು ಸ್ಕ್ರೀನ್ ಆಗಿ ಪ್ರಶಸ್ತಿ ಪಡೆಯಿತು.
6) ಸಾಮಾನ್ಯವಾಗಿ ಯಾರನ್ನೂ ಸುಲಭವಾಗಿ ಪ್ರಶಂಸೆ ಮಾಡದ ಡಾಕ್ಟರ್ ಶಿವರಾಮ ಕಾರಂತರು ತುಳುವಿನ ‘ಕೋಟಿ ಚೆನ್ನಯ್ಯ’ ಸಿನಿಮಾದಲ್ಲಿ ಆಕೆಗೊಂದು ಪಾತ್ರ ನೀಡಿ ಪ್ರಶಂಸೆ ಮಾಡಿದರು. (ಎಕ್ಕ ಸಕ್ಕ ಹಾಡು ನೆನಪು ಮಾಡಿಕೊಳ್ಳಿ). ನಂತರ ಅದೇ ಕಾರಂತರು ತಮ್ಮ ‘ಮಲೆಯ ಮಕ್ಕಳು’ ಸಿನಿಮಾದಲ್ಲಿ ಆಕೆಯಿಂದ ಪ್ರಧಾನ ಪಾತ್ರ ಮಾಡಿಸಿದರು ಮತ್ತು ಆಕೆಯ ಅಭಿನಯವನ್ನು ಪ್ರಶಂಸೆ ಮಾಡಿದರು.
7) ಅಭಿನಯಕ್ಕಾಗಿ ಮೂರು ಬಾರಿ ರಾಜ್ಯಪ್ರಶಸ್ತಿ ಪಡೆದ ಕನ್ನಡದ ಮೊದಲ ನಟಿ ಕಲ್ಪನಾ. ಬೆಳ್ಳಿ ಮೋಡ, ಶರ ಪಂಜರ, ಹಣ್ಣೆಲೆ ಚಿಗುರಿದಾಗ ಆ ಸಿನಿಮಾಗಳು.
8) ಆಕೆಯ ಸೌಂದರ್ಯ ಪ್ರಜ್ಞೆ ಅಂದಿನ ಕಾಲಕ್ಕೆ ಟ್ರೆಂಡ್ ಆಗಿತ್ತು. ಆಕೆ ಹೆಚ್ಚಿನ ಸಿನಿಮಾಗಳಲ್ಲಿ ತನ್ನ ಡ್ರೆಸ್, ಆಭರಣ, ಹೇರ್ ಸ್ಟೈಲ್ ತಾನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಭಿನಯದಲ್ಲಿ ಕಾಂಪ್ರಮೈಸ್ ಇಲ್ಲವೇ ಇಲ್ಲ! ಆ ಕಾಲಕ್ಕೆ ತನ್ನ ಪಾತ್ರಗಳನ್ನು ಆಯ್ಕೆ ಮಾಡಲು ಅವಕಾಶ ಇದ್ದ ಏಕೈಕ ನಟಿ ಕಲ್ಪನಾ. ಜನಪ್ರಿಯತೆಯಲ್ಲಿ ಆಕೆಯನ್ನು ಮೀರಿಸುವವರು ಯಾರೂ ಆಗ ಇರಲಿಲ್ಲ.
ಆಕೆಯ ಬದುಕು ದುರಂತ ಆದದ್ದು ಹೇಗೆ?
ಅಂತಹ ಮಿನುಗುತಾರೆ ತನ್ನ ಮೂವತ್ತಾರನೆಯ ವಯಸ್ಸಿಗೆ ನಿದ್ದೆ ಮಾತ್ರೆ ನುಂಗಿ (ಅಥವಾ ವಜ್ರದ ಹರಳು ನುಂಗಿ) ಆತ್ಮಹತ್ಯೆಯನ್ನು ಮಾಡಿದ್ದರು ಅಂದರೆ ನಂಬೋದು ಹೇಗೆ? ಆಕೆಯ ದುಡುಕಿನ ತಪ್ಪು ನಿರ್ಧಾರಗಳೇ ಆಕೆಗೆ
ಮುಳುವಾದವು ಅನ್ನದೇ ವಿಧಿಯಿಲ್ಲ.
ಆಕೆ ಬಿಟ್ಟುಹೋದ ನೂರಾರು ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರೆತಿಲ್ಲ!
ತನ್ನನ್ನು ಮಿತಿಗಿಂತ ಹೆಚ್ಚು ಪ್ರೀತಿಸುವ ಗುಣವೇ ಆಕೆಗೆ ಮಾರಕವಾಯಿತೆ? ಸಿನಿಮಾಗಳಲ್ಲಿ ಅವಕಾಶಗಳು ಬತ್ತಿಹೋಗಿ ಕೊನೆಗೆ ನಾಟಕಗಳಲ್ಲಿ ಅಭಿನಯಿಸುವ ಮಟ್ಟಕ್ಕೆ ಹೋದದ್ದು ಆಕೆಗೆ ನೋವು ಕೊಟ್ಟಿತೆ? ತನ್ನನ್ನು ಸೂಪರ್ ಸ್ಟಾರ್ ಮಾಡಿದ್ದ ಪುಟ್ಟಣ್ಣ ಕಣಗಾಲ್ ತನ್ನನ್ನು ಬದಿಗೆ ತಳ್ಳಿ ಆರತಿಯ ಸೆರಗು ಹಿಡಿದದ್ದು, ಆರತಿಗೆ ಹೆಚ್ಚು ಅವಕಾಶಗಳನ್ನು ನೀಡಿದ್ದು ಆಕೆಯ ಸಾವಿಗೆ ಕಾರಣವಾಯಿತೇ? ತನ್ನನ್ನು ಮದುವೆ ಆಗುತ್ತಾರೆ ಎಂದು ನಂಬಿಸಿದ ನಾಟಕ ಮಂಡಳಿಯ ಯಜಮಾನ ಗುಡಿಗೆರೆ ಬಸವರಾಜ್ ಕೈ ಕೊಟ್ಟದ್ದು ಕಾರಣವೇ? ಅಥವಾ ಅವರನ್ನು ಅತಿಯಾಗಿ ಕಾಡುತ್ತಿದ್ದ ಅಂತರ್ಮುಖಿ, ಖಿನ್ನತೆ ಮತ್ತು ಒಬ್ಬಂಟಿತನಗಳು ಸಾವಿಗೆ ಕಾರಣವಾದವೇ? ಇವೆಲ್ಲವೂ ಉತ್ತರ ಸಿಗದ ಪ್ರಶ್ನೆಗಳು.
ಮಿನುಗು ತಾರೆಯಾದರು ಕಲ್ಪನಾ
ಬೆಳಗಾವಿಯ ಒಂದು ಸಾಮಾನ್ಯ ಪ್ರವಾಸಿ ಬಂಗಲೆಯಲ್ಲಿ 1979 ಮೇ 12ರಂದು ರಾತ್ರಿ ತಣ್ಣಗೆ ಹೆಣವಾಗಿ ಮಲಗಿದ್ದ ಕಲ್ಪನಾ ಆಗಲೇ ಮರಳಿ ಬಾರದ ಲೋಕಕ್ಕೆ ಹೋಗಿ ಮಿನುಗುತಾರೆ ಆಗಿದ್ದರು. ಆಕೆಯ ಮನಸ್ಸಿನಲ್ಲಿ ಹೆಪ್ಪುಗಟ್ಟಿದ ನೋವನ್ನು ಯಾರ ಜೊತೆಗಾದರೂ ಹಂಚಿಕೊಳ್ಳುವ ಒಂದೆರಡು ಉತ್ತಮ ಗೆಳೆಯರು ಆಕೆಗೆ ದೊರೆತಿದ್ದರೆ ಕಲ್ಪನಾ ಇನ್ನಷ್ಟು ವರ್ಷಗಳ ಕಾಲ ಬದುಕುತ್ತಿದ್ದರು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಭಜನೆಗೆ, ಭಜನಾ ಮಂಡಳಿಗಳಿಗೆ ಒಂದು ಸಂಹಿತೆ ಬೇಡವೇ? ಮನೋರಂಜನೆಯ ಸರಕಾಗುವುದು ಸರಿಯೇ?