Site icon Vistara News

ರಾಜ ಮಾರ್ಗ ಅಂಕಣ | ಮಕ್ಕಳು ಯಾವ ಪುಸ್ತಕ ಓದಬೇಕು ಮತ್ತು ಹೇಗೆ ಓದಬೇಕು: ಇಲ್ಲಿದೆ ಮಹತ್ವದ ಟಿಪ್ಸ್‌- ಭಾಗ 2

ಮಕ್ಕಳು ಯಾವ ಪುಸ್ತಕ ಓದಬೇಕು ಮತ್ತು ಹೇಗೆ ಓದಬೇಕು?

(ನಿನ್ನೆಯ ಸಂಚಿಕೆಯಿಂದ ಮುಂದುವರಿದಿದೆ)
ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಯಾವ ರೀತಿಯ ಪುಸ್ತಕಗಳನ್ನು ಓದಬೇಕು ಎಂದು ನಿನ್ನೆಯ ಲೇಖನದಲ್ಲಿ ವಿವರವಾಗಿ ಬರೆದಿದ್ದೆ. ಇಂದು 10-14 ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಇಷ್ಟ ಆಗುವ ಪುಸ್ತಕಗಳ ಬಗ್ಗೆ ನಾನು ಬರೆಯಬೇಕು. ಈ ವಯಸ್ಸಿನ ಮಕ್ಕಳು ಕಲ್ಪನೆಗಳಿಂದ ನಿಧಾನವಾಗಿ ಹೊರಬಂದು ವಾಸ್ತವದ ಕಡೆಗೆ ಹೆಜ್ಜೆ ಹಾಕುತ್ತಿರುತ್ತಾರೆ. ಅವರಲ್ಲಿ ಸ್ವಅರಿವು ದಟ್ಟವಾಗಿ ಮೂಡುವ ವಯಸ್ಸು ಅದು. ಅಂತಹ ಮಕ್ಕಳಿಗೆ ವಾಸ್ತವದ ಪರಿಕಲ್ಪನೆ ಮೂಡಿಸುವ ಪುಸ್ತಕಗಳನ್ನು ಓದಿಸಬಹುದು. ಮಕ್ಕಳ ಗ್ರಹಣ ಸಾಮರ್ಥ್ಯವು ನಾವು ನೀವು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿದೆ ಎಂದು ನನಗೆ ಕನ್ವಿನ್ಸ್ ಆಗಿದೆ.

1) ವಿಜ್ಞಾನಿಗಳ ಬದುಕಿನ ಕತೆಗಳು
ಆ ವಯಸ್ಸಿನ ಮಕ್ಕಳಿಗೆ ಹೆಚ್ಚು ಇಷ್ಟ ಆಗುವುದು ಮೇರು ವಿಜ್ಞಾನಿಗಳ ಸಂಶೋಧನೆಯ ಕತೆಗಳು. ಎಡಿಸನ್ ಬಲ್ಬ್ ಹೇಗೆ ಕಂಡು ಹಿಡಿದ? ಲೂಯಿ ಪಾಶ್ಚರ್ ರೇಬಿಸ್ ಕಾಯಿಲೆಗೆ ಲಸಿಕೆ ಹೇಗೆ ಕಂಡು ಹಿಡಿದ? ಫ್ಯಾರಡೆ ಡೈನಮೋ ಹೇಗೆ ಆವಿಷ್ಕಾರ ಮಾಡಿದ? ಜಗತ್ತಿನ ಮೊದಲ ಎಣಿಕೆಯ ಯಂತ್ರವನ್ನು ಚಾರ್ಲ್ಸ್ ಬ್ಯಾಬೇಜ್ ಹೇಗೆ ಸಂಶೋಧನೆ ಮಾಡಿದ? ಜಗತ್ತಿನ ಮೊದಲ ತೆರೆದ ಹೃದಯದ ಸರ್ಜರಿಯನ್ನು ಯಾರು ಮತ್ತು ಹೇಗೆ ಮಾಡಿದರು? ರೈಟ್ ಸೋದರರು ಮೊದಲ ವಿಮಾನವನ್ನು ಹೇಗೆ ತಯಾರು ಮಾಡಿದರು?…ಇಂಥ ಪ್ರಶ್ನೆಗಳಿಗೆ ಉತ್ತರ ನೀಡುವ ಸರಳ ಭಾಷೆಯ ಸಣ್ಣ ಪುಸ್ತಕಗಳು ಬೇಕಾದಷ್ಟು ಸಿಗುತ್ತವೆ. ಅವುಗಳನ್ನು ಓದುವುದರಿಂದ ಮಕ್ಕಳಲ್ಲಿ ವಿಜ್ಞಾನದ ಮೇಲೆ ಪ್ರೀತಿ ಹೆಚ್ಚಾಗುವುದರ ಜೊತೆಗೆ ವೈಜ್ಞಾನಿಕ ಮನೋಭಾವ ರೂಪುಗೊಳ್ಳಲು ಸಹಕಾರಿ ಆಗುತ್ತದೆ.

2) ವ್ಯಕ್ತಿ ಚಿತ್ರಣದ ಕತೆಗಳು
40-50 ಪುಟಗಳ ವ್ಯಾಪ್ತಿಯ ವ್ಯಕ್ತಿ ಚಿತ್ರಣದ ಕತೆಗಳ ಪುಸ್ತಕಗಳು ಈ ವಯಸ್ಸಿನ ಮಕ್ಕಳನ್ನು ತಟ್ಟನೆ ಸೆಳೆಯುತ್ತವೆ. ಆ ಪ್ರಾಯದ ಮಕ್ಕಳ ಧಾರಣ ಶಕ್ತಿಯು ವಿಕಸನ ಆಗಿರುವ ಕಾರಣ ಮಕ್ಕಳು ಒಂದೇ ದಿನದಲ್ಲಿ ಅಂತಹ ಪುಸ್ತಕ ಓದಿ ಮುಗಿಸುತ್ತಾರೆ. ಶ್ರೇಷ್ಠ ವ್ಯಕ್ತಿಗಳ ಬದುಕನ್ನು ಮಕ್ಕಳು ಓದುವ ಕಾರಣ ಅವರಲ್ಲಿ ಬದುಕಿನ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಪಡೆಯಲು ಈ ಪುಸ್ತಕಗಳು ಸಹಾಯ ಮಾಡುತ್ತವೆ.

3) ಮೌಲ್ಯಾಧಾರಿತ ನೀತಿ ಕಥೆಗಳು
ಮಕ್ಕಳು ಹುಟ್ಟುತ್ತಾ ಮೌಲ್ಯಗಳನ್ನು ಪಡೆದು ಈ ಜಗತ್ತಿಗೆ ಬಂದಿರುತ್ತಾರೆ. ಅಂತಹ ಮಕ್ಕಳಿಗೆ ಮತ್ತೆ ಮೌಲ್ಯಗಳನ್ನು ಬೋಧನೆ ಮಾಡುವ ಅಗತ್ಯ ಇಲ್ಲ. ಆದರೆ 10-14 ವಯಸ್ಸಿನ ಮಕ್ಕಳು ಮೌಲ್ಯಗಳನ್ನು ಗುರುತಿಸುವ ವಯಸ್ಸಿಗೆ ಬಂದಿರುವ ಕಾರಣ ಅವರು ಮೌಲ್ಯಾಧಾರಿತ ಪುಸ್ತಕಗಳನ್ನು ತುಂಬಾ ಪ್ರೀತಿಯಿಂದ ಸ್ವೀಕಾರ ಮಾಡುತ್ತಾರೆ. ನೀವು ಮೂರನೇ ಅಥವ ನಾಲ್ಕನೇ ತರಗತಿಯಲ್ಲಿ ಓದಿರುವ ಪುಣ್ಯ ಕೋಟಿ ದನದ ಕತೆ ನಮಗೆ ಜೀವನಪೂರ್ತಿ ನೆನಪು ಇರುತ್ತದೆ ಅಲ್ವಾ? ಅದಕ್ಕೆ ಕಾರಣ ಅದರಲ್ಲಿ ಇರುವ ಮೌಲ್ಯಗಳು ಮತ್ತು ಭಾವಸ್ಪರ್ಶ. ಸತ್ಯ ಹರಿಶ್ಚಂದ್ರ ನಾಟಕ ನೋಡಿ ಬಾಲಕ ಮೋಹನದಾಸ ಕರಮಚಂದ ಗಾಂಧಿ ಜೀವನಪೂರ್ತಿ ಸತ್ಯ ಹೇಳುವ ಸಂಕಲ್ಪ ಮಾಡಿದ್ದು ನಮಗೆ ನೆನಪಿದೆ ಅಲ್ವಾ? ಕೇವಲ ಬೋಧನೆಯ ಸ್ತರದಲ್ಲಿ ಉಳಿಯದ ನೀತಿಕತೆಗಳು ಈ ವಯಸ್ಸಿನ ಮಕ್ಕಳಿಗೆ ಹೆಚ್ಚು ಪ್ರಸ್ತುತ ಆಗುತ್ತವೆ.

4) ವಿಕಸನದ ಲಘು ಅಂಕಣಗಳು
ಹೆಚ್ಚು ಭಾರವಾದ ವೈಚಾರಿಕತೆ ಮತ್ತು ಬೌದ್ಧಿಕತೆ ಇಲ್ಲದ ಲಘು ಅಂಕಣಗಳು ಆ ಪ್ರಾಯದ ಮಕ್ಕಳಿಗೆ ಇಷ್ಟ ಆಗುತ್ತವೆ. ಆ ಅಂಕಣಗಳು ಹೇಗಿರಬೇಕು ಎಂದರೆ ಕಡಿಮೆ ಮಾಹಿತಿ ಮತ್ತು ಹೆಚ್ಚು ಪ್ರೇರಣೆ ಇರಬೇಕು. ಷಡಕ್ಷರಿ ಬರೆದಿರುವ ‘ಕ್ಷಣ ಹೊತ್ತು ಆಣಿ ಮುತ್ತು’ ತುಂಬಾ ಜನಪ್ರಿಯ ಆಗಲು ಈ ಗುಣವೇ ಕಾರಣ. ರವಿ ಬೆಳಗೆರೆ ಅವರ ಖಾಸ್ ಬಾತ್ ಅಂಕಣಗಳು, ವಿಶ್ವೇಶ್ವರ ಭಟ್ಟರ ಹಲವು ಸಂಪಾದಕೀಯ ಬರಹಗಳು, ನೇಮೀಚಂದ್ರರ ‘ಬದುಕು ಬದಲಿಸಬಹುದು’ ಸರಣಿ ಬರಹಗಳು, ಆರ್ ಮಣಿಕಾಂತ್ ಅವರು ಬರೆದ ‘ಅಪ್ಪ ಅಂದರೆ ಆಕಾಶ ‘ ಮತ್ತು ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಮೊದಲಾದ ಸಣ್ಣ ಕತೆಗಳು ಮಕ್ಕಳನ್ನು ನೇರವಾಗಿ ತಲುಪುತ್ತವೆ. ಇವುಗಳು ವ್ಯಕ್ತಿತ್ವದ ವಿಕಸನದ ಮಹಾ ಉದ್ದೇಶವನ್ನು ಹೊಂದಿರುತ್ತವೆ.

5) ಪುರಾಣಗಳ ಸಣ್ಣ ಕತೆಗಳ ಕ್ಯಾನ್ವಾಸ್
ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಭಾರತೀಯ ಮೌಲ್ಯಗಳ ಮಹಾಕಾವ್ಯಗಳು ಸರಳ ಭಾಷೆಯಲ್ಲಿ ಬಂದರೆ ಮಕ್ಕಳು ತುಂಬಾ ಇಷ್ಟ ಪಡುತ್ತಾರೆ.

ಉದಾಹರಣೆಗೆ ಮಕ್ಕಳಿಗೆ ಬಾಲ ರಾಮಾಯಣ, ಬಾಲಭಾರತ, ಕಿಷ್ಕಿಂಧಾ ಕಾಂಡ, ಕಾರ್ಟೂನ್ ರಾಮಾಯಣ, ಎಳೆಯರಿಗಾಗಿ ಭಾರತ, ಚಿತ್ರಸಹಿತ ರಾಮಾಯಣ ಇತ್ಯಾದಿ ಭಾರತದ ಮೌಲ್ಯ ಹೆಚ್ಚಿಸುವ ಕಿರು ಪುಸ್ತಕಗಳು ಮಕ್ಕಳ ಕೈ ಸೇರಿದರೆ ಅವುಗಳು ಪೂರ್ತಿಯಾಗಿ ಓದಲ್ಪಟ್ಟು ಕಪಾಟು ಸೇರುತ್ತವೆ. ಅದರ ಜೊತೆಗೆ ನಿಮ್ಮ ಮಕ್ಕಳ ವಿಕಸನದ ಹಾದಿ ಸುಗಮ ಆಗುತ್ತದೆ.

ಮಕ್ಕಳಲ್ಲಿ ಓದುವಿಕೆಯನ್ನು ಉದ್ದೀಪನ ಮಾಡಲು ಕೆಲವು ಟಿಪ್ಸಗಳು ಇಲ್ಲಿವೆ.

೧) ಶಾಲೆಗಳಲ್ಲಿ ಗ್ರಂಥಾಲಯದ ಉಪಯೋಗ ಸರಿಯಾಗಿ ಆಗಬೇಕು. ಮಕ್ಕಳಿಗೆ ಪುಸ್ತಕ ಮನೆಗೆ ಎರವಲು ಕೊಡುವ ವ್ಯವಸ್ಥೆ ಕೂಡ ಆಗಬೇಕು.

೨) ವಾರಕ್ಕೆ ಒಂದು ಅಥವಾ ಎರಡು ಅವಧಿ ಗ್ರಂಥಾಲಯ ಪೀರಿಯಡ್ ಎಂದು ಇರಬೇಕು. ಅದನ್ನು ಮಕ್ಕಳು ಗ್ರಂಥಾಲಯದಲ್ಲಿ ಕಳೆಯಬೇಕು.

೩) ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಬಹುಮಾನ ಕೊಡುವಾಗ ಪುಸ್ತಕ ಬಹುಮಾನ ಕೊಡಬೇಕು.

೪) ‘ಪುಸ್ತಕ ಓದಿ ಬಹುಮಾನ ಗೆಲ್ಲಿ ‘ ಎಂಬ ಅರ್ಥಪೂರ್ಣ ಸ್ಪರ್ಧೆ ಉಡುಪಿಯ ಒಳಕಾಡು ಪ್ರೌಢಶಾಲೆಯಲ್ಲಿ ಪ್ರತೀ ವರ್ಷ ನಡೆಯುತ್ತಿದೆ( ಅದರ ಬಗ್ಗೆ ವಿವರವಾಗಿ ಮುಂದೆ ಬರೆಯುತ್ತೇನೆ). ಅದನ್ನು ಎಲ್ಲ ಶಾಲೆಗಳು ಅನುಷ್ಟಾನ ಮಾಡಬಹುದು.

೫) ಶಾಲೆಯಲ್ಲಿ ಗೋಡೆಪತ್ರಿಕೆ (Wall Magazine)ಯಲ್ಲಿ ಮಕ್ಕಳ ಬರವಣಿಗೆಗಳು ಪ್ರಕಾಶಿಸಬೇಕು.

೬) ತರಗತಿಯಲ್ಲಿ ಅಧ್ಯಾಪಕರು ತಮ್ಮ ಪಾಠದ ನಡುವೆ ಪಾಠಕ್ಕೆ ಪೂರಕವಾಗಿ ಬೇರೆ ಬೇರೆ ಪುಸ್ತಕಗಳ ಉಲ್ಲೇಖ ಕೊಡಬೇಕು.

೭) ಮಕ್ಕಳಲ್ಲಿ ದಿನಪತ್ರಿಕೆಯ ವಾರ್ತೆಗಳನ್ನು ಬೆಳಿಗ್ಗೆ ಅಸೆಂಬ್ಲಿಯಲ್ಲಿ ಓದುವ ವ್ಯವಸ್ಥೆ ಮಾಡಬೇಕು.

೮) ಹೆತ್ತವರು ತಮ್ಮ ಮಕ್ಕಳಿಗಾಗಿ ಬಾಲ್ಯದಿಂದಲೇ ಒಂದು ಮನೆ ಲೈಬ್ರೆರಿ ಮಾಡಬೇಕು. ವಿಶೇಷ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಪುಸ್ತಕಗಳ ಉಡುಗೊರೆ ಕೊಡಬೇಕು.

೯) ಮಕ್ಕಳಲ್ಲಿ ಓದುವ ಜೊತೆಗೆ ಬರೆಯುವ ಹವ್ಯಾಸವನ್ನು ಉತ್ತೇಜನ ಮಾಡಬೇಕು. ಮಕ್ಕಳು ಪತ್ರಿಕೆಗೆ ಲೇಖನ ಬರೆಯುವ ಅಂಕಣಗಳು ಇವೆ. ಅವುಗಳನ್ನು ಮಕ್ಕಳಿಗೆ ಪರಿಚಯ ಮಾಡುವುದು ಒಳ್ಳೇದು.

೧೦) ಎಲ್ಲಕ್ಕಿಂತ ಮುಖ್ಯವಾಗಿ ಹೆತ್ತವರು ಮತ್ತು ಶಿಕ್ಷಕರು ಪುಸ್ತಕ ಓದಲು ಆರಂಭ ಮಾಡಬೇಕು.
ಪುಸ್ತಕ ಓದುವ, ಓದಿಸುವ ನಿಮ್ಮ ಅಭಿಯಾನ ಇಂದಿನಿಂದಲೇ ಆರಂಭ ಆಗಲಿ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನಮ್ಮ ಮಕ್ಕಳು ಎಂತಹ ಪುಸ್ತಕಗಳನ್ನು ಓದಬೇಕು? ಇಲ್ಲಿದೆ ಮಹತ್ವದ ಟಿಪ್ಸ್‌ ಭಾಗ-1

Exit mobile version