ಒಂದು ಮಗುವು ಬೆಳೆಯುತ್ತ ಹೋದಂತೆ ಹೆತ್ತವರ ನೆಗೆಟಿವ್ ಮಾತು ಮತ್ತು ವರ್ತನೆಗಳು ಮಕ್ಕಳ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಹಿಂದಿನ ಅಂಕಣದಲ್ಲಿ ಬರೆದಿದ್ದೆ. ಇಂದು ಅದರ ಮುಂದುವರಿದ ಭಾಗದಲ್ಲಿ ಮಗುವಿನ ವಿವಿಧ ವ್ಯಕ್ತಿತ್ವಗಳು ರೂಪುಗೊಳ್ಳುವ ರೀತಿಯನ್ನು ಬರೆಯುತ್ತಾ ಹೋಗುತ್ತೇನೆ. ಯಾವ ರೀತಿಯ ಮಗು ರೂಪುಗೊಳ್ಳಬೇಕು ಎಂದು ನಿರ್ಧಾರ ಮಾಡುವುದು ಶಿಕ್ಷಕರ ಮತ್ತು ಹೆತ್ತವರ ಜವಾಬ್ದಾರಿ ಎಂದು ಸಂಶೋಧನೆಗಳು ಹೇಳುತ್ತವೆ.
ಇದರಲ್ಲಿ ನಿಮ್ಮ ಮಗುವು ಯಾವ ಗುಂಪಿಗೆ ಸೇರುತ್ತದೆ?
1. ಅಡಾಪ್ಟೆಡ್ ಮಗು
ಅಪ್ಪ, ಅಮ್ಮ ಕೀ ಕೊಟ್ಟರೆ ಅಳುವ, ಕೀ ಕೊಟ್ಟರೆ ನಗುವ ಮಗು ಇದು! ನಿಲ್ಲು ಅಂದ್ರೆ ನಿಲ್ಲುತ್ತದೆ, ಕೂರು ಅಂದರೆ ಕೂರುತ್ತದೆ. ಈ ಮಗುವಿಗೆ ಸ್ವಂತ ಭಾವನೆಗಳು ಇರುವುದಿಲ್ಲ!
‘ನಮ್ಮ ಮಗು ನಾವು ಹೇಳಿದ ಯಾವ ಗೆರೆಯನ್ನು ದಾಟುವುದಿಲ್ಲ. ಒಂದು ಕಡೆ ಕುಳಿತುಕೊಳ್ಳಲು ಹೇಳಿದರೆ ಅಲ್ಲಿಯೇ ಕೂತಿರುತ್ತದೆ!’ ಎಂದು ಪದೇಪದೆ ಹೇಳುವ ಪೋಷಕರು ಈ ರೀತಿಯ ಮಗುವನ್ನು ರೂಪಿಸುತ್ತಾರೆ. ಅಪ್ಪ ಅಥವಾ ಅಮ್ಮ ಹೆಚ್ಚು ಡಾಮಿನೇಟ್ ಮಾಡಿದರೆ ಇಂತಹ ಮಗು ರೂಪುಗೊಳ್ಳುತ್ತದೆ. ನನ್ನ ಮಗು ನಾನು ಹೇಳಿದ ಹಾಗೆಯೇ ಕೇಳುತ್ತದೆ ಅನ್ನುವ ಪೋಷಕರ ಮಾತು ಮುಂದೆ ಆ ಮಗುವಿನಲ್ಲಿ ಹಲವು ವ್ಯಕ್ತಿತ್ವ ದೋಷಗಳನ್ನು ಉಂಟುಮಾಡಬಹುದು.
2. ಕ್ರಿಯೇಟಿವ್ ಮಗು! ( ಸೃಜನಶೀಲ ಮಗು)
ಬಾಲ್ಯದಲ್ಲಿ ಹೆತ್ತವರಿಂದ ಹೆಚ್ಚು ವೈಚಾರಿಕ ಸ್ವಾತಂತ್ರ್ಯವನ್ನು ಪಡೆದ ಮಗುವು ಮುಂದೆ ಕ್ರಿಯೇಟಿವ್ ಮಗು ಆಗುತ್ತದೆ! ಈ ಮಗುವು ಸ್ವಂತ ನಿರ್ಧಾರವನ್ನು ಕೈಗೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ ಮತ್ತು ತುಂಬಾ ಸೃಜನಶೀಲವಾಗಿ ಯೋಚನೆ ಮಾಡುತ್ತದೆ. ಹೊಸ ಹೊಸ ಐಡಿಯಾಗಳನ್ನು ಹುಟ್ಟು ಹಾಕುತ್ತದೆ. ಇದು ನಿಜವಾಗಿಯೂ ಗಿಫ್ಟೆಡ್ ಚೈಲ್ಡ್ ಆಗಿರುತ್ತದೆ! ಅದು ಬಲ ಮೆದುಳಿನಿಂದ ಯೋಚನೆ ಮಾಡುವ ಕಾರಣ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತದೆ. ಹೆತ್ತವರು ತುಂಬಾ ತಾಳ್ಮೆಯಿಂದ ಉತ್ತರ ನೀಡಿದರೆ ಅಥವಾ ಉತ್ತರವನ್ನು ತಾನೇ ಪಡೆಯಲು ಮಗುವಿಗೆ ಸಪೋರ್ಟ್ ಮಾಡಿದರೆ ಆ ಮಗುವು ಜಗತ್ತನ್ನು ಗೆಲ್ಲುತ್ತದೆ.
3. ಸೆಲ್ಫ್ ಡಿಪೆಂಡೆಂಟ್ ಮಗು (ಸ್ವಾವಲಂಬಿ ಮಗು)
ಬಾಲ್ಯದಿಂದಲೂ ತನ್ನ ಯೋಚನೆಗಳನ್ನು ಅಪ್ಲೈ ಮಾಡಲು ಸಪೋರ್ಟ್ ಪಡೆದ ಮಗುವು ಮುಂದೆ ಸೆಲ್ಫ್ ಡಿಪೆಂಡೆಂಟ್ ಮಗು ಆಗುತ್ತದೆ. ಈ ಮಗುವಿನ ಆತ್ಮವಿಶ್ವಾಸವು ಉನ್ನತ ಮಟ್ಟದಲ್ಲಿ ಇರುತ್ತದೆ ಮತ್ತು ನಿರ್ಧಾರಗಳು ಹೆಚ್ಚು ಪ್ರಾಕ್ಟಿಕಲ್ ಆಗಿರುತ್ತವೆ. ಆರಂಭದಲ್ಲಿ ತಪ್ಪುಗಳನ್ನು ಮಾಡಿ ಪಾಠ ಕಲಿಯುವ ಮಗು ಮುಂದೆ ಸ್ವಯಂ ಕಲಿಕೆಯನ್ನು ಮಾಡುತ್ತದೆ. ಮಕ್ಕಳ ಅನುದ್ದೇಶಿತ ತಪ್ಪುಗಳನ್ನು ಕ್ಷಮಿಸುವ ಮತ್ತು ತಪ್ಪುಗಳನ್ನು ಪ್ರೀತಿಯಿಂದ ತಿದ್ದುವ ಪೋಷಕರು ಇಂತಹ ಮಗುವನ್ನು ರೂಪಿಸುತ್ತಾರೆ. ಇದು ಕೂಡ ಮುಂದೆ ಜಗತ್ತನ್ನೇ ಗೆಲ್ಲುವ ಮಗು.
4. ಎಮೋಷನಲ್ ಮಗು (ಭಾವನಾತ್ಮಕ ಮಗು)
ಬಾಲ್ಯದಲ್ಲಿ ಅತಿಯಾದ ಹೆತ್ತವರ ಪ್ರೀತಿ ಮತ್ತು ಕಾಳಜಿ ಪಡೆದ ಮಗು ಮುಂದೆ ಭಾವನಾತ್ಮಕ ಮಗು ಆಗಿ ರೂಪುಗೊಳ್ಳುತ್ತದೆ. ಸಣ್ಣ ಸಣ್ಣ ಕಾರಣಕ್ಕೆ ಪದೇಪದೆ ಅಳುವುದು ಮತ್ತು ನೋವು ಪಟ್ಟುಕೊಳ್ಳುವುದು ಅದರ ನೇಚರ್ ಆಗಿಬಿಡುತ್ತದೆ. ಎಲ್ಲವನ್ನೂ ಭಾವನಾತ್ಮಕ ಆಗಿಯೇ ತೆಗೆದುಕೊಳ್ಳುವ ಮಗು ಪ್ರಾಕ್ಟಿಕಲ್ ಆಗಿ ಬದುಕುವುದನ್ನು ಕಲಿಯುವ ಹೊರತು ಮುಂದೆ ಸಕ್ಸಸ್ ಪಡೆಯುವುದಿಲ್ಲ. ಭಾವನೆಗಳು ಖಂಡಿತವಾಗಿಯು ಮುಖ್ಯ! ಆದರೆ ಪ್ರಾಕ್ಟಿಕಲ್ ಜಗತ್ತಿನಲ್ಲಿ ಮಗು ಪ್ರಾಕ್ಟಿಕಲ್ ಆಗಿ ಬದುಕುವುದು ಅದಕ್ಕಿಂತ ಮುಖ್ಯ!
5. ಹೈಪರ್ ಆ್ಯಕ್ಟಿವ್ ಮಗು (ಅತಿಯಾದ ಕ್ರಿಯಾಶೀಲ ಮಗು)
ಅತಿಯಾಗಿ ತಂಟೆ ಮಾಡುವ ಮತ್ತು ತನ್ನ ಭಾವನೆಗಳ ಮೇಲೆ ಒಂದಿಷ್ಟೂ ನಿಯಂತ್ರಣ ಇಲ್ಲದ ಮಗು ಇದು! ಪ್ರತೀ ಮಗುವಿನಲ್ಲಿ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಇದ್ದೇ ಇರುತ್ತವೆ. ಆ ಚಟುವಟಿಕೆಗಳು ಹೊರಬರಲು ಸರಿಯಾದ ಚಾನೆಲ್ ಸಿಗದೆ ಹೋದರೆ ಆ ಮಗು ತಂಟೆ ಮಾಡಲು ಆರಂಭ ಮಾಡುತ್ತದೆ. ತನ್ನ ಮೇಲೆ ಹೆತ್ತವರ ಗಮನವು ಕಡಿಮೆ ಆಗ್ತಾ ಇದೆ ಎಂಬ ಭಾವನೆ ಮೂಡಿದ ಹಾಗೆ ಮಗು ಇನ್ನೂ ಹೆಚ್ಚು ತಂಟೆ ಮಾಡುತ್ತದೆ! ಬಾಲ್ಯದಲ್ಲಿಯೇ ಇದನ್ನು ಸರಿಪಡಿಸದೇ ಹೋದರೆ ಮುಂದೆ ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಅತಿಯಾದ ಕ್ರಿಯಾಶೀಲತೆ ಇರುವ ಮಗುವನ್ನು ಪೋಷಣೆ ಮಾಡಲು ಹೆತ್ತವರಿಗೆ ಹೆಚ್ಚು ತಾಳ್ಮೆ ಬೇಕು. ಪ್ರೋತ್ಸಾಹದ ವಾತಾವರಣದಲ್ಲಿ ಆ ಮಗುವನ್ನು ಸದಾ ಕಾಲ ಎಂಗೇಜ್ ಆಗಿ ಇಟ್ಟುಕೊಳ್ಳುವುದು ಸುಲಭದ ಕೆಲಸ ಅಲ್ಲ.
6. ನಾಯಕತ್ವದ ಮಗು
ಮೌಲ್ಯಗಳನ್ನು ಪ್ರತಿ ಮಗುವು ಅನುಕರಣೆಯಿಂದ ಮತ್ತು ಅಧ್ಯಯನಗಳಿಂದ ಪಡೆಯುತ್ತದೆ. ತನ್ನದೇ ವಯೋಮಿತಿಯ ಮಕ್ಕಳ ಗುಂಪಿನಲ್ಲಿ ಒಂದು ಮಗು ಇರುವಾಗ ಅದರ ನಡವಳಿಕೆಯನ್ನು ಗಮನಿಸುವುದು ತುಂಬಾ ಮುಖ್ಯ. ಆಗ ಅದು ಬೇರೆಯವರ ಮೇಲೆ ಬೀರುವ ಹಾಗೂ ಬೇರೆಯವರಿಂದ ಪಡೆಯುವ ಪ್ರಭಾವಗಳನ್ನು ಸ್ವಲ್ಪ ಮಾನಿಟರ್ ಮಾಡಿದರೆ ಆ ಮಗು ಮುಂದೆ ಒಳ್ಳೆಯ ನಾಯಕ ಆಗುತ್ತದೆ. ಇಲ್ಲಿ ಮಗುವು ಸ್ವತಂತ್ರವಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಪೋಷಕರು ಪ್ರೋತ್ಸಾಹಿಸುವುದು ತುಂಬಾ ಮುಖ್ಯ. ಅಷ್ಟೇ ಮುಖ್ಯ ಆದದ್ದು ಮಕ್ಕಳು ತನ್ನ ವಯಸ್ಸಿನ ಇತರ ಮಕ್ಕಳ ಜೊತೆ ಬೆರೆಯುವುದು. ಅವರ ಜೊತೆ ಹೋಗಬೇಡ, ಇವರ ಜೊತೆ ಹೋಗಬೇಡ ಅಂತ ಪೋಷಕರು ಬೇಲಿ ಹಾಕುತ್ತಾ ಹೋದರೆ ಆ ಮಗುವಿನ ನಾಯಕತ್ವದ ಗುಣಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.
7. ಇಂಟಲಿಜೆಂಟ್ ಮಗು (ಬುದ್ಧಿವಂತ ಮಗು)
ಹಿಂದಿನ ಕಾಲದಲ್ಲಿ ಚಂದ ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಮಾರ್ಕ್ಸ್ ತೆಗೆದುಕೊಳ್ಳುವ ಮಗುವನ್ನು ಬುದ್ಧಿವಂತ ಮಗು ಅನ್ನುತ್ತಿದ್ದರು. ಮಾರ್ಕ್ಸ ತೆಗೆದುಕೊಳ್ಳುವುದು ಮಗುವಿನ ಪ್ರತಿಭೆಯ ಭಾಗ. ಆದರೆ ಅದೇ ಪ್ರತಿಭೆ ಅಲ್ಲ! ತಾನು ಕಲಿತ ಅಂಶಗಳನ್ನು ಅಪ್ಲೈ ಮಾಡುವ ಮಗುವೇ ಈಗ ಬುದ್ಧಿವಂತ ಮಗು ಎಂದು ತಜ್ಞರು ಗುರುತಿಸುತ್ತಾರೆ. ತಾನು ಕಲಿತದ್ದನ್ನು ತನ್ನ ಜೀವನದಲ್ಲಿ ಅದು ಎಷ್ಟು ಅನ್ವಯ ಮಾಡಿಕೊಳ್ಳುತ್ತದೆ ಅನ್ನುವುದು ನಿಜವಾದ ಬುದ್ಧಿವಂತಿಕೆ. ಗಣಿತ ಮತ್ತು ವಿಜ್ಞಾನ ಸಮಸ್ಯೆಗಳನ್ನು ಬಿಡಿಸುವಾಗ ವೇಗ ಮತ್ತು ನಿಖರತೆಯನ್ನು ಹೊಂದಿರುವ ಮಗು ಖಂಡಿತ ಬುದ್ಧಿವಂತ ಮಗು ಆಗಿರುತ್ತದೆ. ಅದಕ್ಕೆ ಶಾಲೆಯಲ್ಲಿ ಯಾಂತ್ರಿಕ ಕೆಲಸ (ಡ್ರಿಲ್ ವರ್ಕ್)ಗಳನ್ನು ಮಾಡಿಸುವುದರಿಂದ ಅಥವಾ ಬಾಯಿಪಾಠ ಮಾಡಿಸುವುದರಿಂದ ಮಗುವಿನ ಬುದ್ದಿವಂತಿಕೆ ಹಿಂದೆ ಬೀಳುತ್ತದೆ.
8. ನ್ಯಾಚುರಲ್ ಮಗು
ಈ ಮಗು ನಿಜವಾಗಿಯೂ ಅದ್ಭುತ! ತನ್ನ ವಯಸ್ಸಿಗೆ ಸರಿಯಾಗಿ ಮುಗ್ಧತೆ ಹೊಂದಿರುವ ಮಗು ಅದು. ಆ ಮುಗ್ಧತೆಯ ನಿಜವಾಗಿಯೂ ಒಂದು ಅದ್ಭುತವಾದ ಮೌಲ್ಯ ಆಗಿರುತ್ತದೆ. ಆ ಮಗುವಿನ ಮಾತು, ನಡವಳಿಕೆ ಮತ್ತು ವರ್ತನೆಗಳು ಹೆಚ್ಚು ಸಹಜವಾಗಿರುತ್ತದೆ. ತನ್ನ ಮನಸ್ಸಿನ ಭಾವನೆಗಳನ್ನು ಅತ್ಯಂತ ಸಹಜವಾಗಿ ಅಭಿವ್ಯಕ್ತಿ ಮಾಡುವ ಮಗು ಮುಂದೆ ಹೆಚ್ಚು ಯಶಸ್ಸು ಪಡೆಯುತ್ತದೆ. ಅದರ ಕಲಿಕೆಯಲ್ಲಿ ಹೆಚ್ಚು ಪ್ರಾಮಾಣಿಕತೆ ಇರುತ್ತದೆ. ಆ ಮಗುವು ಎಲ್ಲರನ್ನೂ ಪ್ರೀತಿ ಮಾಡುತ್ತದೆ ಮತ್ತು ಅದಕ್ಕೆ ಎಲ್ಲರ ಪ್ರೀತಿಯೂ ಬೇಕು. ಅಂತಹ ಮಗುವನ್ನು ಸಹಜವಾದ ಮತ್ತು ಒತ್ತಡ ಇಲ್ಲದ ವಾತಾವರಣದಲ್ಲಿ ಇರುವ ಹಾಗೆ ನೋಡಿಕೊಂಡರೆ ಅದು ಕೂಡ ಗಿಫ್ಟೆಡ್ ಚೈಲ್ಡ್ ಆಗುತ್ತದೆ.
9. ಟ್ಯಾಲೆಂಟೆಡ್ ಮಗು
ಪ್ರತಿಯೊಂದು ಮಗುವು ಈ ಜಗತ್ತಿಗೆ ಬರುವಾಗ ಒಂದಲ್ಲ ಒಂದು ಪ್ರತಿಭೆಯನ್ನು ಪಡೆದು ಬಂದಿರುತ್ತದೆ. ಆ ಪ್ರತಿಭೆಯನ್ನು ಎಳವೆಯಲ್ಲಿ ಗುರುತಿಸಿ, ಪ್ರೋತ್ಸಾಹಿಸುವ ಮತ್ತು ಅವುಗಳಿಗೆ ಸೂಕ್ತವಾದ ತರಬೇತಿ ನೀಡುವುದು ಸುಲಭ ಅಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳಲ್ಲಿ ಮಕ್ಕಳಿಗೆ ಹೆಚ್ಚು ಪೂರಕ ಪಠ್ಯ ಚಟುವಟಿಕೆ (Extra Curricular Activities) ಬೇಕು. ಶಿಕ್ಷಕರೂ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪೂರಕ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಕಲಿಕೆಯು ಹಿಂದೆ ಬೀಳುತ್ತದೆ ಅನ್ನುವುದನ್ನು ಯಾವ
ಶಿಕ್ಷಣ ತಜ್ಞರೂ ಒಪ್ಪುವುದಿಲ್ಲ.
10. ಸೆನ್ಸಿಟಿವ್ ಮಗು
ತನ್ನ ಪರಿಸರದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅದಕ್ಕೆ ಪೂರಕವಾಗಿ ಸ್ಪಂದನೆ ಕೊಡುವ ಅದ್ಭುತ ಮಗು ಇದು! ಸೂಕ್ಷ್ಮತೆ ಮಗುವಿನ ಸಹಜ ಗುಣ. ಮಗುವಿನಲ್ಲಿ ಅವಲೋಕನ ಗುಣವು ಕೂಡ ಸಹಜವಾಗಿ ಇರುತ್ತದೆ. ಮನೆಯ ಮತ್ತು ಶಾಲೆಯ ಒಳಗಿನ ಸಂಬಂಧಗಳ ಮೂಲಕ ಈ ಮಗುವು ತುಂಬಾ ಕಲಿಯುತ್ತದೆ. ಈ ಸಂದರ್ಭದಲ್ಲಿ ಅವರ ಜೊತೆ ಬೆರೆಯಬೇಡ, ಇವರ ಜೊತೆ ಮಾತಾಡಬೇಡ ಅಂತ ಬೇಲಿ ಹಾಕುವ ಹೆತ್ತವರು ಇಂತಹ ಅದ್ಭುತ ಮಗುವನ್ನು ಕೆಡಿಸುತ್ತಾರೆ!
ಭರತ ವಾಕ್ಯ
ಹೆತ್ತವರ ಮತ್ತು ಶಿಕ್ಷಕರ ವ್ಯಕ್ತಿತ್ವಗಳು ಬಾಲ್ಯ ಮತ್ತು ಹದಿಹರೆಯದಲ್ಲಿ ಮಗುವಿನ ಮೇಲೆ ದಟ್ಟವಾದ ಪ್ರಭಾವ ಬೀರುತ್ತವೆ. ಮುಂದೆ ಗೆಳೆಯರು, ಪುಸ್ತಕಗಳು, ಭಾಷಣಗಳು ಕೂಡ ಮಗುವಿನ ವ್ಯಕ್ತಿತ್ವದ ನಿರೂಪಣೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಹೆತ್ತವರ ಮತ್ತು ಶಿಕ್ಷಕರ ಸಹಜವಾದ ವರ್ತನೆಗಳು ಜಗತ್ತಿಗೆ ಒಂದು ಸುಂದರವಾದ ಮಗುವನ್ನು ಕೊಡುಗೆಯಾಗಿ ನೀಡುತ್ತವೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಬಂಗಾಳದ ಕ್ರಾಂತಿ ಸಿಂಹಿಣಿ ಬೀನಾ ದಾಸ್; ಅನಾಮಧೇಯಳಾಗಿ ಸತ್ತಾಗಲೂ ಆಕೆಯ ಪರ್ಸಲ್ಲಿ ಸುಭಾಷ್ ಫೋಟೊ ಇತ್ತು!