Site icon Vistara News

ರಾಜ ಮಾರ್ಗ ಅಂಕಣ| ಟೈಮಿಂಗ್‌ ಅಂತೀವಲ್ಲಾ.. ಏನಿದು? ಜಿಂಕೆಗೂ, ವಿರಾಟ್‌ ಕೊಹ್ಲಿಗೂ ಏನು ಸಂಬಂಧ?

deer hunting in Nagarahole National Park

ಅಮೆರಿಕದಲ್ಲಿ ಮೊತ್ತಮೊದಲ ಬಾರಿಗೆ ಎಂಟು ಪಥಗಳ ರಸ್ತೆಗಳು ನಿರ್ಮಾಣ ಆಗಿದ್ದವು. ಅದರ ಪರಿಣಾಮವಾಗಿ ವಾಹನಗಳು ಭಾರಿ ವೇಗದಲ್ಲಿ ಸಂಚರಿಸಲು ಆರಂಭವಾದವು. ಆಗ ಕಾಡಿನ ದಾರಿಯಲ್ಲಿ ರಸ್ತೆಯನ್ನು ದಾಟುವಾಗ ಹಲವು ಜಿಂಕೆಗಳು ಅಪಘಾತಕ್ಕೆ ಒಳಗಾಗಿ ಸಾವನ್ನು ಅಪ್ಪುತ್ತಿದ್ದವು. ಅದನ್ನು ತಡೆಯುವ ಸರಕಾರದ ಎಲ್ಲ ಪ್ರಯತ್ನಗಳೂ ವಿಫಲ ಆದವು.

ಅಮೆರಿಕದಲ್ಲಿ ಪ್ರಾಣಿಹಿಂಸೆಯ ವಿರುದ್ಧ ಹೋರಾಡುವ ‘ಪೇಟಾ’ ಸಂಸ್ಥೆಯು ಹೆಚ್ಚು ಸಕ್ರಿಯ ಆಗಿದೆ. ಅವರು ಜಿಂಕೆಗಳ ಸಾವಿನ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಿದರು. ಅಮೆರಿಕದ ಸರಕಾರವು ಬೇರೆ ದಾರಿಯಿಲ್ಲದೆ ಆ ರಸ್ತೆಯುದ್ದಕ್ಕೆ ಸಿಸಿ ಕ್ಯಾಮೆರಾ ಹಾಕಿ ವಿಡಿಯೋ ತರಿಸಿಕೊಂಡಿತು. ಆಗ ಲಭ್ಯವಾದ ವಿಡಿಯೊಗಳ ವೀಕ್ಷಣೆಯು ತುಂಬಾ ಅಚ್ಚರಿಯ ಫಲಿತಾಂಶವನ್ನು ತಂದುಕೊಟ್ಟವು.

ರಸ್ತೆಯನ್ನು ನೇರವಾಗಿ ದಾಟುವ ಜಿಂಕೆಗಳು ಯಾವುದೇ ಅಪಘಾತ ಇಲ್ಲದೆ ರಸ್ತೆ ದಾಟುತ್ತಿದ್ದವು. ಯಾವ ಜಿಂಕೆಗಳು ಅರ್ಧ ರಸ್ತೆಯವರೆಗೆ ಹೋಗಿ ಆಚೀಚೆ ಕಣ್ಣು ಹಾಯಿಸಿ, ಕಿವಿಗಳನ್ನು ಅಗಲಿಸಿ ದೂರದಿಂದ ವಾಹನಗಳು ಬರುವುದನ್ನು ಗಮನಿಸಿ ಅಲ್ಲಿಂದ ಯೂಟರ್ನ್ ಮಾಡಿ ಹಿಂದಕ್ಕೆ ಓಡುತ್ತಿದ್ದವೊ ಅಂತಹ ಜಿಂಕೆಗಳು ಅಪಘಾತಕ್ಕೆ ಒಳಗಾಗಿ ಸಾಯುತ್ತಿದ್ದವು! ಅಂದರೆ ಮನಸಿನಲ್ಲಿ ಗೊಂದಲ ಉಂಟಾಗಿ ಎರಡೆರಡು ಯೋಚನೆ ಮಾಡುವ ಜಿಂಕೆಗಳು ಸಾವನ್ನು ಅಪ್ಪುತ್ತಿದ್ದವು!

ಸಂದಿಗ್ಧತೆ ಎಂಬ ಅಪಾಯಕಾರಿ ಯೋಚನೆ!

ನಮ್ಮಲ್ಲಿ ಕೂಡ ಕೆಲವು ಬಾರಿ ಈ ಎರಡೆರಡು ಯೋಚನೆ ಮಾಡುವ ಮನಸ್ಸು ಇರುತ್ತದೆ.
ಯಾವುದೇ ಕೆಲಸವನ್ನು ಮಾಡುವುದೋ, ಬಿಡುವುದೋ ಎಂಬ ಸಂದಿಗ್ಧ ಒಂದೆಡೆ!
ಕೆಲವೆಡೆ ಹೆಜ್ಜೆಯನ್ನು ಮುಂದಕ್ಕೆ ಇಡುವುದೋ, ಹಿಂದಕ್ಕೆ ಇಡುವುದೋ ಎಂಬ ಗೊಂದಲ!
ಇನ್ನೂ ಕೆಲವು ಸಲ ಅವರನ್ನು ನಂಬುವುದೋ, ಇವರನ್ನು ನಂಬುವುದೋ ಎಂಬ ಅನಿಶ್ಚಿತತೆ!
ಇನ್ನೂ ಕೆಲವು ಬಾರಿ ಹಾಗೆ ಮಾಡುವುದೋ, ಹೀಗೆ ಮಾಡುವುದೋ ಎಂಬ ಗೊಂದಲ!
ಇನ್ನೂ ಹಲವು ಬಾರಿ ಅದನ್ನು ಮೊದಲು ಮಾಡಲೋ, ಇದನ್ನು ಮೊದಲು ಮಾಡಲೋ ಎಂಬ ಸಂದಿಗ್ಧ!
ಈ ರೀತಿ ಎರಡೆರಡು ಯೋಚನೆಗಳು ನಮ್ಮನ್ನು ಪೂರ್ತಿ ಖಾಲಿ ಮಾಡುತ್ತವೆ.

ನಾವು ತುಂಬಾ ಯೋಚನೆ ಮಾಡಿ ಹೆಚ್ಚು ತಪ್ಪುಗಳನ್ನು ಮಾಡುತ್ತೇವೆ! ಎಷ್ಟೋ ಬಾರಿ ನಾವು ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ತಡಮಾಡಿ ಸೋಲನ್ನು ಮೈಮೇಲೆ ಎಳೆದುಕೊಂಡು ಬಿಡುತ್ತೇವೆ. ಇನ್ನೂ ಕೆಲವು ಬಾರಿ ದುಡುಕು ನಿರ್ಧಾರ ಮಾಡಿ ಗೆಲುವನ್ನು ಕೈ ಚೆಲ್ಲುತ್ತೇವೆ! ನಮ್ಮ ಮನಸಿನ ಒಳಗಿನ ದ್ವಂದ್ವವೇ ನಮ್ಮ ಹೆಚ್ಚಿನ ಸೋಲುಗಳಿಗೆ ಕಾರಣ ಆಗಿರುತ್ತದೆ.

ನಾವು ಪರೀಕ್ಷೆಯಲ್ಲಿ ಮಾಮೂಲಿ ಬಿಟ್ಟ ಸ್ಥಳಗಳನ್ನು ತುಂಬಿಸುವ ಪ್ರಶ್ನೆಗಳನ್ನು ಉತ್ತರಿಸುವಾಗ ನಾಲ್ಕು ಆಯ್ಕೆಗಳನ್ನು ಕೊಟ್ಟರೆ ಹೆಚ್ಚು ತಪ್ಪು ಮಾಡುತ್ತೇವೆ! ನಾಲ್ಕು ಆಯ್ಕೆಗಳನ್ನು ಕೊಡದಿದ್ದರೆ ತಪ್ಪುಗಳು ಕಡಿಮೆ ಆಗುತ್ತವೆ!
ಈ ಆಪ್ಷನ್ ಹುಡುಕುವ ಸವಾಲೇ ತುಂಬಾ ಕಷ್ಟ ಅಂತ ನನಗೆ ಹಲವು ಬಾರಿ ಅನ್ನಿಸುತ್ತದೆ.

ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಟೈಮ್

ವಿರಾಟ್ ಕೊಹ್ಲಿ ಅಂತಹ ಮಹಾನ್ ಆಟಗಾರ ಕೂಡ ಬೇಗನೆ ಔಟ್ ಆಗಲು ಕಾರಣ ಈ ಸಂದಿಗ್ಧವೇ ಆಗಿದೆ. ವೇಗದ ಬೌಲರ್ ಕೈಯ್ಯಿಂದ ಬಾಲ್ ಜಾರಿ ಬ್ಯಾಟಿಗೆ ಬಂದು ತಾಗುವ ಅವಧಿ ತುಂಬಾ ಕಡಿಮೆ. ನೂರನೇ ಒಂದು ಸೆಕೆಂಡಿಗಿಂತ ಕಡಿಮೆ! ಆ ಅತೀ ಸಣ್ಣ ಅವಧಿಯಲ್ಲಿ ಬ್ಯಾಟರ್ ಸ್ಟ್ರೋಕ್ ಬಗ್ಗೆ ನಿರ್ಧಾರ ಮಾಡಬೇಕು! ಆ ನಿರ್ಧಾರ ತಪ್ಪು ಆದರೆ, ಅಥವಾ ಬಾಲನ್ನು ಸರಿಯಾಗಿ ರೀಡ್ ಮಾಡದಿದ್ದರೆ ಬ್ಯಾಟರ್ ಔಟ್ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಇದನ್ನು ಟೈಮಿಂಗ್ ಅನ್ನುತ್ತೇವೆ.

ಯಾವನೇ ಒಬ್ಬ ಕಲಾವಿದನ, ಭಾಷಣಕಾರನ ಅಥವಾ ನಟನ ಟೈಮಿಂಗ್ ಸರಿ ಇಲ್ಲದಿದ್ದರೆ ಗೆಲ್ಲುವ ಸಾಧ್ಯತೆ ತುಂಬಾ ಕಡಿಮೆ ಆಗುತ್ತದೆ.‌ ನಮ್ಮ ಯಶಸ್ಸು ಅಡಗಿರುವುದು ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಮತ್ತು ನಾವದನ್ನು ತೆಗೆದುಕೊಳ್ಳುವ ವೇಗದ ಮೇಲೆ!

ಸರಿಯಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಅವಸರ ಮಾಡಿದರೆ ಸೋಲು ಖಚಿತ! ಹಾಗೆಯೇ ವೇಗವಾಗಿ ನಿರ್ಧರಿಸುವ ಹೊತ್ತಲ್ಲಿ ನಿಧಾನ ಮಾಡಿದರೆ ಸೋಲು ಕಟ್ಟಿಟ್ಟ ಬುತ್ತಿ! ಯಾವುದಕ್ಕೂ ಈ ಟೈಮಿಂಗ್ಸ್ ಪಾಲಿಸಿದರೆ ನಾವು ನೂರಾರು ಯುದ್ಧಗಳನ್ನು ಗೆಲ್ಲಬಹುದು.

ಇದನ್ನೂ ಓದಿ |ರಾಜ ಮಾರ್ಗ | ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!

Exit mobile version