Site icon Vistara News

ರಾಜ ಮಾರ್ಗ ಅಂಕಣ | ಸ್ವಚ್ಛ ಭಾರತ: ಗಾಂಧಿ ಕಂಡ ಕನಸು, ಮೋದಿ ಕಾಲದಲ್ಲೂ ನನಸಾಗುತ್ತಿಲ್ಲ; ಅಡ್ಡಿ ಆಗಿರುವುದು ಯಾರೆಂದರೆ…

swaccha Bharath

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತದ ಅಭಿಯಾನಕ್ಕೆ ಕರೆ ನೀಡಿದರು. ಅದನ್ನು ಅವರು ನೂರಕ್ಕೆ ನೂರರಷ್ಟು ಪಾಲಿಸಿದರು. ಆದರೆ, ಭಾರತದಲ್ಲಿ ಇನ್ನೂ ಕೂಡ ಪರಿಸ್ಥಿತಿ ಯಾತನದಾಯಕವಾಗಿಯೇ ಇದೆ.

೧) ಭಾರತದ 120 ಕೋಟಿ ಜನರಲ್ಲಿ ಅರ್ಧಾಂಶ ಜನ ಮಾತ್ರ ಶೌಚಾಲಯ ಬಳಸುತ್ತಾರೆ!
೨) ವಾರ್ಷಿಕ ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ 1.86 ಲಕ್ಷ ಮಕ್ಕಳು ಕಲುಷಿತ ನೀರಿನಿಂದಾಗಿ ಸಾಯುತ್ತಾರೆ!
೩) ಸ್ವಚ್ಛತೆಯ ಲೋಪದ ಕಾರಣಕ್ಕೆ ಭಾರತದ ರಾಷ್ಟ್ರೀಯ ಉತ್ಪನ್ನದಲ್ಲಿ 6.5% ಪ್ರತೀ ವರ್ಷ ನಷ್ಟ ಆಗ್ತಾ ಇದೆ!
೪) ದೇಶದ 11.3 ಕೋಟಿ ಜನರಿಗೆ ಶೌಚಾಲಯ ಇಲ್ಲ!
೫) ದೇಶದ 10% ಶಾಲೆಗಳಲ್ಲಿ ಶೌಚಾಲಯ ಇಲ್ಲ!
೬) ದೇಶದಲ್ಲಿ ಊಟಕ್ಕೂ ಮೊದಲು ಕೈ ತೊಳೆಯುವವರ ಸಂಖ್ಯೆ 53% ಮಾತ್ರ!
೭) ದೇಶದಲ್ಲಿ ಪ್ರತೀ ನಿಮಿಷಕ್ಕೆ 11 ಲಕ್ಷ ಲೀಟರ್ ಮಲಿನ ನೀರು ಗಂಗೆಯನ್ನು ಸೇರುತ್ತಿದೆ!

ಈ ಅಂಕಿ ಅಂಶಗಳನ್ನು ಮೀರಿ…!
ಎಲ್ಲೆಂದರಲ್ಲಿ ಕಸಗಳನ್ನು ಬಿಸಾಡಿ ಮತ್ತೆ ಸ್ವಚ್ಛ ಮಾಡುವುದು ಸ್ವಚ್ಛತಾ ಪ್ರಜ್ಞೆ ಅಲ್ಲ! ಕಸವನ್ನು ಹಾಕದಿರುವುದು ಸ್ವಚ್ಛತಾ ಪ್ರಜ್ಞೆ! ಸ್ವಚ್ಛತೆಯು ದೈವಿಕತೆಗೆ ಹತ್ತಿರ ಎಂದವರು ಗಾಂಧೀಜಿ. ಆದರೆ ನಮ್ಮಲ್ಲಿ ಹೆಚ್ಚಿನವರು ಮಾಡುವ ಅಕೃತ್ಯಗಳಿಂದ ಭಾರತವು ಇಂದಿಗೂ ಕಸದ ಕೊಂಪೆ ಆಗ್ತಾ ಇದೆ.

ನನ್ನ ಗೆಳೆಯರೊಬ್ಬರು ಅಮೆರಿಕದಿಂದ ಬಂದಿದ್ದರು. ಮಂಗಳೂರಿನಲ್ಲಿ ಒಂದು ಐಸ್ ಕ್ರೀಮ್ ತೆಗೆದುಕೊಂಡು ಅದನ್ನು ಸವಿಯುತ್ತ ರಸ್ತೆಯ ಉದ್ದಕ್ಕೂ ತುಂಬಾ ದೂರ ನಾವು ಮಾತಾಡುತ್ತ ನಡೆದೆವು. ಅವರ ಕೈಯ್ಯಲ್ಲಿ ಇದ್ದ ಐಸ್ ಕ್ರೀಮ್ ಕಪ್ ಖಾಲಿ ಆಗಿತ್ತು. ಅವರು ಸುತ್ತಮುತ್ತ ದೃಷ್ಟಿ ಹಾಯಿಸುತ್ತ ಇನ್ನಷ್ಟು ದೂರ ನಡೆದರು. ಕೊನೆಗೆ ಅವರು ನನ್ನಲ್ಲಿ ಕೇಳಿದ ಪ್ರಶ್ನೆ – ಈ ಕಪ್ ಎಲ್ಲಿ ಎಸೆಯಲಿ?

ಅವರಿಗೆ ಆ ಐಸ್ ಕ್ರೀಮ್ ಕಪ್ ಎಸೆಯಲು ಆ ರಸ್ತೆಯುದ್ದಕ್ಕೂ ಒಂದು ಸರಿಯಾದ ಜಾಗವನ್ನು ಮಹಾನಗರ ಪಾಲಿಕೆ ವ್ಯವಸ್ಥೆ ಮಾಡಿರಲಿಲ್ಲ!

ಭಾರತೀಯರ ಸಣ್ಣತನಗಳು!

೧) ನಮ್ಮ ಮನೆಯ ಕಸವನ್ನು ಮೂಲದಲ್ಲಿಯೇ ವಿಂಗಡಣೆ ಮಾಡಿ ಅದನ್ನು ಪುರಸಭೆ ಮೊದಲಾದ ಸ್ಥಳೀಯ ಸರಕಾರಗಳು ತಮ್ಮ ವಾಹನದಲ್ಲಿ ತೆಗೆದುಕೊಂಡು ಹೋಗಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತವೆ. ಆದರೆ ಮೂಲದಲ್ಲಿಯೇ ವಿಂಗಡಣೆ ಮಾಡುವ ಸಣ್ಣ ಕೆಲಸವನ್ನು ನಾವು ಮಾಡುವುದಿಲ್ಲ. ಶಾಲಾ ಕಾಲೇಜು ಮಕ್ಕಳಿಗೆ ತ್ಯಾಜ್ಯ ನಿರ್ವಹಣೆ ಮಾಡುವ ಶಿಕ್ಷಣ ಇಂದು ಸರಿಯಾಗಿ ದೊರೆಯುತ್ತಿಲ್ಲ.

೨) ಪ್ಲಾಸ್ಟಿಕ್ ನಿಷೇಧ ಕಾನೂನು ಕಡತದಲ್ಲಿ ಇದೆ! ಆದರೆ ಸ್ಥಳೀಯ ಸರಕಾರಗಳು ಚಾಪೆಯ ಕೆಳಗೆ ನುಸುಳಿದರೆ ವ್ಯಾಪಾರಿಗಳು ರಂಗೋಲಿ ಕೆಳಗೆ ನುಸುಳುತ್ತಾರೆ! ಅಂಗಡಿಗೆ ಹೋಗುವಾಗ ಒಂದು ಬಟ್ಟೆಯ ಚೀಲ ತೆಗೆದುಕೊಂಡು ಹೋಗಲು ನಾವು ಇನ್ನೂ ಉದಾಸೀನ ಮಾಡುತ್ತೇವೆ!

೩) ಬೆಳಗಾವಿ, ಬಳ್ಳಾರಿ, ಬೀದರ್ ಮೊದಲಾದ ಜಿಲ್ಲೆಗಳ ಹಲವು ಕಡೆ ಸರಕಾರಗಳು ಸಾರ್ವಜನಿಕರಿಗೆ ಉಚಿತವಾದ ಶೌಚಾಲಯ ಕಟ್ಟಿಸಿಕೊಟ್ಟಿವೆ. ಆದರೆ ಆ ಕುಟುಂಬಗಳ ಹಲವರು ಇನ್ನೂ ಚೆಂಬು ಹಿಡಿದುಕೊಂಡು ಬಯಲಿಗೆ ಹೋಗುತ್ತಿದ್ದಾರೆ ಅನ್ನುತ್ತದೆ ವರದಿ!

೪) ಗಂಗಾ ನದಿಯ ದಡದಲ್ಲಿ ಹೆಣಗಳನ್ನು ಸುಡುವವರು ಕಟ್ಟಿಗೆ ಉಳಿಸಲು ಅರ್ಧ ಮಾತ್ರ ಸುಟ್ಟು ಆ ಹೆಣಗಳನ್ನು ಗಂಗಾನದಿಗೆ ಎಸೆಯುತ್ತಾರೆ. ಹೀಗೆ ಗಂಗಾ ನದಿಗೆ ಅರ್ಪಣೆ ಆಗುವ ಅರ್ಧ ಸುಟ್ಟ ಹೆಣಗಳ ಸಂಖ್ಯೆ ಇನ್ನೂ ಸಾವಿರ ಸಾವಿರ ಇದೆ!

೫) ನಗರಗಳಲ್ಲಿ ಶೌಚಾಲಯಕ್ಕೆ ಕೊಡುವ ಎರಡು ರೂಪಾಯಿ ಉಳಿಸಲು ಶೌಚಾಲಯದ ಹೊರಗೆ ಮೂತ್ರ ಹೊಯ್ಯುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ!

೬) ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವರಿಗೆ ವಿದೇಶಗಳಲ್ಲಿ ಕಠಿಣವಾದ ಶಿಕ್ಷೆ ಇದೆ. ಭಾರತದಲ್ಲಿ ಇರುವ ಕಾನೂನು ಹಲ್ಲಿಲ್ಲದ ಹಾವು ಆಗಿದೆ. ಅದನ್ನು ಉದ್ದೇಶಪೂರ್ವಕ ಆಗಿ ಮುರಿಯುವ ನಿಸ್ಸೀಮರು ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ!

೭) ಭಾರತದಲ್ಲಿ ಅತೀ ದೊಡ್ಡ ಸಮಸ್ಯೆ ಎಂದರೆ ನಗರಗಳ ಘನ ತ್ಯಾಜ್ಯ ನಿರ್ವಹಣೆ! ನಗರಗಳ ಹೊರ ಪ್ರದೇಶಗಳಲ್ಲಿ ಡಂಪಿಂಗ್ ಯಾರ್ಡಗಳನ್ನು ಗುರುತಿಸಿ ನಗರದ ಘನ ತ್ಯಾಜ್ಯಗಳನ್ನು ತಂದು ಅಲ್ಲಿ ಸುರಿಯಲಾಯಿತು. ಆದರೆ ನಗರಗಳು ಬೆಳೆದಂತೆ ಆ ಡಂಪಿಂಗ್ ಯಾರ್ಡ್‌ಗಳು ನಗರಗಳ ಒಳಗೆ ಬಂದಿವೆ ಮತ್ತು ಡಂಪಿಂಗ್ ಯಾರ್ಡ್‌ಗಳ ಸುತ್ತ
ಕೊಳಚೆಗೇರಿಗಳು ನಿರ್ಮಾಣ ಆದವು. ಸಮಸ್ಯೆಗಳು ಉಲ್ಬಣ ಆಗುತ್ತಾ ಹೋಗುತ್ತಿವೆ!

೮) ನಮಗೆ ಇಂದು ಬಹುದೊಡ್ಡ ಸವಾಲು ಆಗಿರುವುದು ಎಲೆಕ್ಟ್ರಾನಿಕ್ ವೇಸ್ಟ್‌ಗಳು ಮತ್ತು ಮೆಡಿಕಲ್ ವೇಸ್ಟ್‌ಗಳು! ಅದರಲ್ಲಿಯೂ ಆಸ್ಪತ್ರೆಗಳಲ್ಲಿ ಉಂಟಾಗುವ ಮೆಡಿಕಲ್ ತ್ಯಾಜ್ಯಗಳ ವಿಲೇವಾರಿಗೆ ಕಠಿಣವಾದ ಕಾನೂನು ಮತ್ತು ವ್ಯವಸ್ಥೆಗಳು ಇವೆ. ಆದರೆ ಅತ್ಯಂತ ಭೃಷ್ಟವಾಗಿರುವ ಸರಕಾರಿ ವ್ಯವಸ್ಥೆಗಳಲ್ಲಿ ಈ ಮೆಡಿಕಲ್ ವೇಸ್ಟ್ ನಿರ್ವಹಣೆಯೇ ಬಹು ದೊಡ್ಡ ಸವಾಲು ಆಗಿದೆ.

೯) ನಾವು ಕಸವನ್ನು ಎಸೆಯಲು ಆರಿಸಿಕೊಂಡ ಸುರಕ್ಷಿತ ತಾಣ ಎಂದರೆ ನದಿ ಮತ್ತು ತೊರೆಗಳು! ಈ ಕಸಗಳು ನದಿ ಮೂಲಗಳನ್ನು ಕಲುಷಿತ ಮಾಡಿ ದಶಕಗಳೇ ಕಳೆದಿವೆ! ಈಗಿನ ಅಪ್ಡೇಟ್ ಎಂದರೆ ಈ ತ್ಯಾಜ್ಯಗಳು ಅಂತರ್ಜಲ ಮಟ್ಟವನ್ನು ತಲುಪಿವೆ ಎಂಬುದು! ಅಪಾಯದ ಗಂಟೆ ನಮಗೆ ಕೇಳುತ್ತಿದೆಯಾ?

೧೦) ಎಲ್ಲೆಂದರಲ್ಲಿ ಉಗಿಯುವ, ಎಲ್ಲೆಂದರಲ್ಲಿ ಕಸ ಎಸೆಯುವ, ನಿಂತಲ್ಲಿ ಕೂತಲ್ಲಿ ಮೂತ್ರ ಮಾಡುವ ನಮ್ಮ ಅಭ್ಯಾಸಗಳು ಸ್ವಚ್ಛ ಭಾರತ ಅಭಿಯಾನಕ್ಕೆ ಭಾರೀ ಗಂಡಾಂತರ ಎಂದು ನನಗೆ ಅನಿಸುತ್ತದೆ.

ಇದೆಲ್ಲವೂ ಸರಿ ಆಗುವುದು ಯಾವಾಗ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಯಶಸ್ಸು ಅನ್ನೋದು ನಿರಂತರ ಪಯಣ, ನಿಲ್ದಾಣ ಅಲ್ಲ! ಪರಿಶ್ರಮವಿಲ್ಲದೆ ಸಿಗುವುದೂ ಇಲ್ಲ!

Exit mobile version