ಮಾರ್ಚ್ 8ರಂದು ವಿಶ್ವ ಮಹಿಳಾ ದಿನ. ಇದು ಆಕೆಯ ದಿನ. ಆಕೆಗೋಸ್ಕರ ಮುಡಿಪಾದ ದಿನ! ಆಕೆಯ ಅಜ್ಞಾತವಾದ ತ್ಯಾಗವನ್ನು ನೆನೆಯುವ ದಿನ! ಅಜ್ಜಿಯಾಗಿ, ತಾಯಿಯಾಗಿ, ಮಗಳಾಗಿ, ಮೊಮ್ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಸೊಸೆಯಾಗಿ, ಅತ್ತೆಯಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಓರಗಿತ್ತಿಯಾಗಿ, ಗೆಳತಿಯಾಗಿ, ಹೆಂಡತಿಯಾಗಿ, ಪ್ರಿಯತಮೆಯಾಗಿ, ಶಿಕ್ಷಕಿಯಾಗಿ, ಸಹೋದ್ಯೋಗಿಯಾಗಿ….. ಹೀಗೆ ನೂರು ರೂಪಗಳಲ್ಲಿ ನಮ್ಮ ಬದುಕನ್ನು ಪ್ರಭಾವಿಸಿದ, ನೂರಾರು ಆಯಾಮಗಳಲ್ಲಿ ನಮ್ಮ ಬದುಕಿನಲ್ಲಿ ತಂಗಾಳಿ ಬೀಸಲು ಕಾರಣರಾದ, ಬದುಕಿನ ಇಂಚಿಂಚು ಹ್ಯಾಪಿನೆಸನ್ನು ಸಂಭ್ರಮಿಸಿದ ಪ್ರತಿಯೊಬ್ಬ ಸಹೃದಯಿ ಮಹಿಳೆಗೂ ಇಂದಿನ ಮಹಿಳಾ ದಿನದ ಶುಭಾಶಯಗಳು!
ಆ ನೆಪದಲ್ಲಿ ಒಂದು ಸುತ್ತು ಪಟ್ಟಿ ಮಾಡೋಣ!
ಮಹಿಳಾ ದಿನದ ನೆಪದಲ್ಲಿ ಹೀಗೊಂದು ಅರ್ಥಪೂರ್ಣ ಮಹಿಳಾ ಸಾಧಕರನ್ನು ಪಟ್ಟಿ ಮಾಡುತ್ತ ಹೋಗೋಣ ಹಾಗೂ ಅವರನ್ನು ಅಭಿನಂದಿಸೋಣ.
1. ನೂರಾರು ಆಲದ ಮರ ನೆಟ್ಟು ಅವುಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ..!
2. ಸಾವಿರಾರು ಜಾನಪದ ಹಾಡುಗಳನ್ನು ನೆನಪಿಟ್ಟು ಅವುಗಳನ್ನು ಹಾಡುತ್ತ ಜನಜಾಗೃತಿ ಮೂಡಿಸುತ್ತಿರುವ ಸುಕ್ರಜ್ಜಿಗೆ…!
3. ಚಾರ್ಲಿ ಚಾಪ್ಲಿನ್ ಎಂಬ ಅದ್ಭುತ ಪ್ರತಿಭೆಗೆ ಜನ್ಮ ಕೊಟ್ಟ ಮತ್ತು ಅವನ ಪ್ರತಿಭೆಗೆ ಕೊನೆಯ ಉಸಿರಿನತನಕ ಪ್ರೇರಣೆಯಾಗಿ ನಿಂತ ಅವನ ತಾಯಿ ಹಾನ್ನಾ ಚಾಪ್ಲಿನ್ ಅವರಿಗೆ…
4. ಎಡಿಸನ್ ಎಂಬ ಸಮಸ್ಯಾತ್ಮಕ ಮಗುವಿಗೆ ಜನ್ಮ ಕೊಟ್ಟು ನೂರಾರು ಸವಾಲುಗಳ ನಡುವೆ ಕೂಡ ಆತನ ಅಷ್ಟೂ ಸಂಶೋಧನೆಗಳಿಗೆ ಬೆಂಬಲವಾಗಿ ನಿಂತ ತಾಯಿ ಗ್ಲಾಡಿಸರಿಗೆ…
5. ಡಾಕ್ಟರ್ ರಾಜಕುಮಾರ್ ಎಂಬ ಲೆಜೆಂಡ್ ನಟನ ಮುಗ್ಧತೆಗೆ ಬೇಲಿಯಾಗಿ ನಿಂತ ಮಡದಿ ಪಾರ್ವತಮ್ಮ ಅವರಿಗೆ…
6. ಕಾಳಿದಾಸನ ಕಾವ್ಯ ಪ್ರತಿಭೆಗೆ ಸ್ಫೂರ್ತಿ ದೇವತೆಯಾಗಿ ನಿಂತ ವಿದ್ಯಾಧರೆ ಎಂಬ ರಾಜಕುಮಾರಿಗೆ…
7. ಶಿವಾಜಿ ಎಂಬ ಶಕ್ತಿಶಾಲಿ ಮಗನ ಮೂಲಕ ತಾನು ಕನಸು ಕಂಡ ಹಿಂದವೀ ಸಾಮ್ರಾಜ್ಯವನ್ನು ಕಡೆದು ನಿಲ್ಲಿಸಿದ ಮಹಾಮಾತೆ ಜೀಜಾ ಬಾಯಿಗೆ….
8. ನರೇಂದ್ರ (ಸ್ವಾಮಿ ವಿವೇಕಾನಂದ) ಎಂಬ ಆಧ್ಯಾತ್ಮ ಶಿಖರಕ್ಕೆ ಒತ್ತಾಸೆಯಾಗಿ ನಿಂತ ಆತನ ತಾಯಿಯಾದ ಭುವನೇಶ್ವರಿ ದೇವಿಗೆ…
9. ಅಂಕೋಲಾದ ಕಾಡುಗಳಲ್ಲಿ ವೃಕ್ಷ ರಾಶಿಯನ್ನು ಬೆಳೆಸಿ ಅದರ ಸಂರಕ್ಷಣೆ ಮಾಡಿ ನೇಪಥ್ಯದಲ್ಲಿ ನಿಂತ ತುಳಸೀ ಗೌಡ ಅವರಿಗೆ…
10. ಕರ್ನಾಟಕ ಸಂಗೀತವನ್ನು ಉಸಿರಾಗಿ ಬೆಳೆಸಿದ, ಸಂಗೀತದ ಕಂಪನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ಭಾರತ ರತ್ನ ಡಾ. ಎಂ ಎಸ್ ಸುಬ್ಬುಲಕ್ಷ್ಮಿ ಅವರಿಗೆ…
11. ಮಹಿಳಾ ಕ್ರಿಕೆಟನ್ನು ಭಾರತದಲ್ಲಿ ಜನಪ್ರಿಯತೆಯ ಶಿಖರದ ತುದಿಗೆ ಮುಟ್ಟಿಸಿದ ಬಲಿಷ್ಠ ಕ್ರಿಕೆಟರ್ ಮಿತಾಲಿ ರಾಜ್ ಅವರಿಗೆ ……
12. ಭಾರತದ ಮೊದಲ ಮಹಿಳಾ ವೈದ್ಯೆ ಎಂಬ ಕೀರ್ತಿ ಪಡೆದು, ಪ್ರಾಕ್ಟೀಸ್ ಆರಂಭ ಮಾಡುವ ಮೊದಲೇ ನಿಧನರಾದ ಡಾಕ್ಟರ್ ಆನಂದಿಬಾಯಿ ಜೋಶಿ ಅವರಿಗೆ…
13. ಸರಳತೆ, ಸಮಾಜಸೇವೆ ಇವುಗಳಿಗೆ ಅನನ್ಯ ಮಾದರಿ ಆದ ಮತ್ತು ತನ್ನ ಪತಿಯ ಪ್ರತೀ ಉದ್ಯಮದ ಕನಸಿಗೂ
ಒತ್ತಾಸೆಯಾಗಿ ನಿಂತ ಡಾಕ್ಟರ್ ಸುಧಾಮೂರ್ತಿ ಅವರಿಗೆ …….
14. ಎರಡೆರಡು ನೊಬೆಲ್ ಬಹುಮಾನಗಳನ್ನು ಪಡೆದು, ತನ್ನ ಸಂಶೋಧನೆಗಳ ಮೂಲಕ ಮನು ಕುಲದ ಕಲ್ಯಾಣವನ್ನು ಹಾರೈಸಿದ ಮೇಡಂ ಕ್ಯೂರಿ ಅವರಿಗೆ…
15. ಮದುವೆಯಾಗಲು ತನ್ನನ್ನು ಒತ್ತಾಯಿಸಿದ ಹಿಂದೀ ಸಿನೆಮಾದ ಶೋ ಮ್ಯಾನ್ ರಾಜಕಪೂರ್ ಅವರ ಪ್ರಸ್ತಾಪವನ್ನು ಪ್ರೀತಿಯಿಂದ ನಿರಾಕರಿಸಿ, ಕೊನೆಯವರೆಗೂ ಆತನ ಪ್ರಿಯತಮೆ ಆಗಿ ಉಳಿದು ಆತನಿಂದ ಮಹಾ ಸಿನೆಮಾಗಳನ್ನು ಮಾಡಿಸಿದ ಮೇರು ನಟಿ ನರ್ಗೀಸ್ ಅವರಿಗೆ…
16. ಹಾಡುವುದಕ್ಕೇ ಹುಟ್ಟಿ ಬಂದ, ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಭಾರತದ ಧ್ವನಿ ಎಂದೇ ಪ್ರಸಿದ್ಧಿ ಪಡೆದ ಮೇರುಗಾಯಕಿ ಲತಾ ಮಂಗೇಷ್ಕರ್ ಅವರಿಗೆ…
17. ಗಟ್ಟಿತನ, ದಿಟ್ಟತನ ಮತ್ತು ಕಠಿಣ ನಿರ್ಧಾರಗಳಿಗೆ ಹೆಸರು ಮಾಡಿದ, ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ…
18. ತಾನೇ ಸ್ವತಃ ಅನಾಥೆ ಆಗಿದ್ದರೂ, ಭಿಕ್ಷೆ ಬೇಡಿ ಅನಾಥಾಶ್ರಮಗಳನ್ನು ಕಟ್ಟಿ ಸಾವಿರಾರು ಅನಾಥ ಮಕ್ಕಳ ತಾಯಿಯಾದ ಸಿಂಧುತಾಯಿ ಸಪ್ಕಲ್ ಅವರಿಗೆ….
19.. ಇಡೀ ಜಗತ್ತಿನ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾಗಿ ಪೋರ್ಚುಗೀಸರ ಜೊತೆಗೆ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ರಾಣಿ ಅಬ್ಬಕ್ಕ ಅವರಿಗೆ….
20. ದ ವುಮನ್ ವಿದ್ ದ ಲ್ಯಾಂಪ್ ಎಂದು ಎಲ್ಲರಿಂದ ಕರೆಸಿಕೊಂಡು ಯುದ್ಧದಲ್ಲಿ ಸಂತ್ರಸ್ತರಾದ, ವಿಶ್ವದ ಮೊದಲ ನರ್ಸಿಂಗ್ ಕಾಲೇಜು ತೆರೆದ ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ…
21. ರೆಕ್ಕೆ ಬಿಚ್ಚಿ ಹಾರಾಡುವ ತನ್ನ ಕನಸನ್ನು ಬಾಹ್ಯಾಕಾಶ ಯಾನದ ಮೂಲಕ ನನಸು ಮಾಡಲು ಹೊರಟು ಅರ್ಧದಲ್ಲಿಯೇ ಬೂದಿ ಆಗಿ ಹೋದ ಕಲ್ಪನಾ ಚಾವ್ಲಾ ಅವರಿಗೆ…
22. ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಪ್ರಾಣವನ್ನು ಉಳಿಸಲೆಂದು ತನ್ನ ಗಂಡನನ್ನೇ ಕೊಂದು ಹಾಕಿದ ಧೀರ ಮಹಿಳೆ ನೀರಾ ಆರ್ಯ ಅವರಿಗೆ…
23. ‘ಕಲಾ ಮಂಡಲಮ್ ‘ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಡಿ ಸಂಗೀತ ಮತ್ತು ನೃತ್ಯಗಳನ್ನು ಆರಾಧನೆ ಮಾಡಿದ ಮಹಾನ್ ಕಲಾವಿದೆ ರುಕ್ಮಿಣೀ ದೇವಿ ಆರುಂಡೇಲ್ ಅವರಿಗೆ…
24. ಗಂಡಾಗಿ ಹುಟ್ಟಿ, ಒಳಗಿನ ಧ್ವನಿಗಳಿಗೆ ಕಿವಿಕೊಟ್ಟು ಮುಂದೆ ಹೆಣ್ಣಾಗಿ ಪರಿವರ್ತನೆ ಆಗಿ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರೂ, ಕನ್ನಡದ ಜಾನಪದ ಜಗತ್ತನ್ನು ವಿಸ್ತರಿಸಿದ ಮಂಜಮ್ಮ ಜೋಗತಿ ಅವರಿಗೆ….
25. ಶಂಕರನಾಗ್ ಅವರ ನೂರಾರು ಅಪೂರ್ಣ ಕನಸುಗಳನ್ನು ಅವರ ಮರಣದ ನಂತರ ಒಂದೊಂದಾಗಿ ಪೂರ್ತಿ ಮಾಡಿ ಕನ್ನಡದಲ್ಲಿ ರಂಗ ಸಂಸ್ಕೃತಿಯನ್ನು ಬೆಳೆಸಿದ ಅವರ ಪತ್ನಿ ಅರುಂಧತಿ ನಾಗ್ ಅವರಿಗೆ…
26. ಕನ್ನಡದ ಅತೀ ಶ್ರೇಷ್ಠವಾದ ಕಾದಂಬರಿಗಳನ್ನು ಬರೆದು ಸಾರಸ್ವತ ಲೋಕಕ್ಕೆ ಪರಿಚಯ ಮಾಡಿದ ಕನ್ನಡದ ಮಹಾಲೇಖಕಿ ತ್ರಿವೇಣಿ ಅವರಿಗೆ….
27. ಬೆಂಗಳೂರಿನಲ್ಲಿ ಬಯೋಕಾನ್ ತೆರೆದು ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಉದ್ಯಮಿ ಕಿರಣ್ ಮಜುಂದಾರ್ ಅವರಿಗೆ….
28. ಮಹಾಕವಿ ರನ್ನನ ಕಾವ್ಯ ಪ್ರತಿಭೆಗೆ ಸ್ಫೂರ್ತಿ ಮತ್ತು ಬೆಂಬಲವಾಗಿ ನಿಂತ ಮಹಾದಾನಿ ಅತ್ತಿಮಬ್ಬೆಗೆ……
29. ಭಾರತದ ಮೊದಲ ಐಪಿಎಸ್ ಅಧಿಕಾರಿ ಆಗಿ ಮೂಡಿಬಂದು, ತನಗೆ ದೊರೆತ ಅವಕಾಶಗಳನ್ನು ಅತ್ಯಂತ ಸಮರ್ಥವಾಗಿ ಬೆಳೆಸಿಕೊಂಡ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ ……….
30. ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಸಿಗಲು ಸಾಧ್ಯವೇ ಇಲ್ಲ ಎಂಬ ಕೂಗಿನ ನಡುವೆಯೂ ಎಂಬತ್ತರ ದಶಕದಲ್ಲಿ ಭಾರತೀಯರಿಗೆ ಮೊದಲ ಬೆಳಕಿನ ಕಿಟಕಿ ತೆರೆದ ಪಯ್ಯೋಳಿ ಎಕ್ಸ್‌ಪ್ರೆಸ್ ಪಿ. ಟಿ. ಉಷಾ ಅವರಿಗೆ…!
ನಮ್ಮ ಜಗತ್ತನ್ನು ತನ್ನ ಶಕ್ತಿಗಳ ಮೂಲಕ ಶ್ರೀಮಂತಗೊಳಿಸಿದ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರು ಇನ್ನೂ ಸಾವಿರ ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಅಷ್ಟರ ಮಟ್ಟಿಗೆ ಭಾರತವನ್ನು ಪುಣ್ಯಗರ್ಭೆ ಎಂದೇ ಕರೆಯಬಹುದು. ಅವರಿಗೆಲ್ಲ ಮತ್ತೆ ಅವರದೇ ದಿನಗಳ ಶುಭಾಶಯಗಳು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅವಳ ಬಳಿ ಟ್ರ್ಯಾಕ್ ಶೂ ಕೊಳ್ಳಲೂ ದುಡ್ಡಿರಲಿಲ್ಲ, ಈಗ ಆಕೆ ಜಗತ್ತಿನ ದೊಡ್ಡ ಶೂ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್!