ಇಂದು (ಮೇ 12) ವಿಶ್ವ ದಾದಿಯರ ದಿನ (World nurses day- May 12). ಈ ಹೊತ್ತಿನಲ್ಲಿ ನೆನಪಾಗುವವರು ಜಗತ್ತಿನ ಬೆಳಕೆಂದೇ ಹೆಸರಾದ ದೀಪಧಾರಿ ದೇವತೆ (Lady with lamp) ಫ್ಲಾರೆನ್ಸ್ ನೈಟಿಂಗೇಲ್. ಫ್ಲಾರೆನ್ಸ್ ಬದುಕಿದ ರೀತಿಯೇ ಒಂದು ಅದ್ಭುತವಾದ ಯಶೋಗಾಥೆ!
ಯಾರು ಈಕೆ ಫ್ಲಾರೆನ್ಸ್ ನೈಟಿಂಗೇಲ್?
ಆಕೆಯನ್ನು ಏನೆಂದು ಕರೆಯಬೇಕು? ಫ್ಲಾರೆನ್ಸ್ ಜಗತ್ತಿನ ಆಸ್ಪತ್ರೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಪ್ರಯತ್ನಪಟ್ಟ ವೃತ್ತಿಪರವಾದ ನರ್ಸ್ ಆಕೆ ನರ್ಸಿಂಗ್ ವೃತ್ತಿಯನ್ನು ಗಣಿತ ಮತ್ತು ಸಂಖ್ಯಾಶಾಸ್ತ್ರ ಬಳಸಿ ಆಧುನಿಕಗೊಳಿಸಿದ ಮಹಿಳೆ. ತಾನು ಬದುಕಿದ್ದ 90 ವರ್ಷ ಕೂಡ ರೋಗಿಗಳ ಸುರಕ್ಷೆಯ ಬಗ್ಗೆ ಚಿಂತಿಸಿದ ಮಹಾಮಾತೆ. ಜಗತ್ತಿನ ಮೊತ್ತ ಮೊದಲನೆಯ ವೃತ್ತಿಪರ ನರ್ಸಿಂಗ್ ಕಾಲೇಜು ಸ್ಥಾಪಿಸಿದ ವಿಷನರಿ. ಫ್ಲಾರೆನ್ಸ್ ಈ ಎಲ್ಲಾ ವಿಶೇಷಣಗಳನ್ನು ಮೀರಿ ಬೆಳೆದವರು!
ಎಲ್ಲವನ್ನೂ ತ್ಯಜಿಸಿ ನರ್ಸ್ ಆದವರು!
1820ರಲ್ಲಿ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಆಕೆ ಸ್ವತಃ ಆಸಕ್ತಿಯಿಂದ ನರ್ಸ್ ಆಗಲು ಹೊರಟಾಗ ಹೆತ್ತವರು ಒಂದಿಷ್ಟೂ ಪ್ರೋತ್ಸಾಹ ನೀಡಲಿಲ್ಲ. ಅದಕ್ಕೆ ಕಾರಣ ಆಗಿನ ಕಾಲದಲ್ಲಿ ನರ್ಸಿಂಗ್ ವೃತ್ತಿಯ ಬಗ್ಗೆ ಸಮಾಜದಲ್ಲಿ ಗೌರವದ ಭಾವನೆ ಇರಲಿಲ್ಲ. ಅದು ಕೇವಲ ‘ಬಡವರ ಅನ್ನದ ಬಟ್ಟಲು’ ಆಗಿತ್ತು. ಆದರೆ ಫ್ಲಾರೆನ್ಸ್ ಹೆತ್ತವರ ವಿರೋಧವನ್ನು ಲೆಕ್ಕಿಸದೆ ನರ್ಸಿಂಗ್ ಶಿಕ್ಷಣ ಪಡೆದು ಸೇವೆಗಿಳಿದರು.
ಒಬ್ಬ ಲೆಜೆಂಡ್ ಹುಟ್ಟಲು ಒಂದು ವಿಕ್ಷಿಪ್ತ ಸನ್ನಿವೇಶ ಬೇಕು. ಅದರಂತೆ ಜಗತ್ತು ಫ್ಲಾರೆನ್ಸ್ ಅವರ ಸಾಮರ್ಥ್ಯದ ವಿರಾಟ್ ರೂಪವನ್ನು ನೋಡಿದ್ದು 1854ರ ಹೊತ್ತಿಗೆ! ಆಗ ಆಕೆಗೆ 34 ವರ್ಷ.
ಜಗತ್ತಿನ ಭಯಾನಕ ಯುದ್ಧವು ಆಗಲೇ ಆರಂಭ ಆಗಿತ್ತು!
ಆಗ ರಷ್ಯಾ ವಿರುದ್ಧ ಐರೋಪ್ಯ ರಾಷ್ಟ್ರಗಳು ಕ್ರಿಮಿಯನ್ ಯುದ್ಧ ಶುರು ಮಾಡಿದವು. ಆ ಯುದ್ಧ ಎರಡು ವರ್ಷಗಳ ಕಾಲ ನಿಲ್ಲದೆ ಮುಂದುವರಿಯಿತು. ಈ ಭಯಾನಕವಾದ ಯುದ್ಧದಲ್ಲಿ 18,000 ಬ್ರಿಟಿಷ್ ಸೈನಿಕರು ಗಾಯಗೊಂಡು ಬೇರೆ ಬೇರೆ ಆಸ್ಪತ್ರೆಗಳಿಗೆ ಭರ್ತಿ ಆದರು.
ಆಸ್ಪತ್ರೆಯ ತೀರಾ ಅನಾರೋಗ್ಯಪೂರ್ಣ ವ್ಯವಸ್ಥೆಯಿಂದ ಸಾಂಕ್ರಾಮಿಕ ರೋಗಗಳು ಹರಡಲು ಆರಂಭ ಆಯಿತು. ಆಗ ಬ್ರಿಟನ್ ಸರಕಾರವು ಫ್ಲಾರೆನ್ಸ್ ಅವರ ಪ್ರತಿಭೆಯನ್ನು ಮತ್ತು ಸೇವಾ ಮನೋಭಾವವನ್ನು ಗುರುತಿಸಿ ಅವರನ್ನು ಆಮಂತ್ರಿಸಿ ಅವರಿಗೆ ಆಸ್ಪತ್ರೆಗಳ ಉಸ್ತುವಾರಿ ವಹಿಸಿತು.
ಆರಂಭ ಆಯಿತು ಮಹಾ ಸೇವಾ ಮಿಷನ್!
ತನ್ನ 38 ಜನ ದಾದಿಯರ ತಂಡದೊಂದಿಗೆ ಆಕೆ ಬ್ರಿಟಿಷ್ ಮಿಲಿಟರಿ ಆಸ್ಪತ್ರೆಗೆ ಬಂದರು. ಕಾಲರಾ ಮತ್ತು ಟೈಫಾಯಿಡ್ ಸೋಂಕಿನಿಂದ ಬಳಲುತ್ತಿದ್ದ ಸೈನಿಕರನ್ನು ನೋಡಿ ಕಣ್ಣೀರು ಸುರಿಸಿದರು. ಆಸ್ಪತ್ರೆಯ ಆರೋಗ್ಯವೇ ಸರಿ ಇರಲಿಲ್ಲ. ಆಕೆ ಅಲ್ಲಿ ಮುಂದಿನ ಒಂದೂವರೆ ವರ್ಷಗಳ ಕಾಲ ಮಾಡಿದ ಕ್ರಾಂತಿಕಾರಕ ಪರಿಕ್ರಮಗಳು ಇಂದಿಗೂ ಮಾದರಿಯಾಗಿ ನಿಂತಿವೆ.
ಅವರು ಆಗಿನ ಆಸ್ಪತ್ರೆಯನ್ನು ‘ನರಕದ ರಾಜಧಾನಿ’ ಎಂದು ಕರೆದರು. ಆಗಲೇ 4000ರಷ್ಟು ಸೈನಿಕರು ಸೋಂಕಿನಿಂದ ಬಳಲುತ್ತಿದ್ದರು. ಫ್ಲಾರೆನ್ಸ್ ತಮ್ಮ ತಂಡದೊಂದಿಗೆ ಮೊದಲು ಆಸ್ಪತ್ರೆಯ ಸ್ವಚ್ಛತೆಗೆ ಇಳಿದರು. ಆಗ ಮಿಲಿಟರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಪ್ರತಿರೋಧ ಒಡ್ಡಿದರೂ ಆಕೆ ಹಠ ಬಿಡಲಿಲ್ಲ. ಅವರು ಮಾಡಿದ ಕೆಲವು ಕ್ರಮಗಳು ಈ ರೀತಿ ಇವೆ.
ಆಸ್ಪತ್ರೆಯ ಸ್ವಚ್ಛತೆಗೆ ಆಕೆ ಕೈಗೊಂಡ ಹತ್ತಾರು ಕ್ರಮಗಳು
1) ಆಸ್ಪತ್ರೆಯ ನೆಲ, ಜಗಲಿಗಳನ್ನು ದಿನವೂ ಶುಚಿ ಮಾಡಿದ್ದು.
2)ವೈದ್ಯರು, ದಾದಿಯರು, ರೋಗಿಗಳು ಎಲ್ಲರಿಗೂ ಕೈ ತೊಳೆಯುವ ವ್ಯವಸ್ಥೆ ಕಡ್ಡಾಯ ಮಾಡಿದ್ದು.
3) ರೋಗಿಗಳನ್ನು ದಿನವೂ ಸ್ನಾನ ಮಾಡಿಸಿದ್ದು.
4) ಅವರಿಗೆ ಪೌಷ್ಠಿಕ ಆಹಾರವನ್ನು ನೀಡಲು ವ್ಯವಸ್ಥೆ ಮಾಡಿದ್ದು. ಕಿಚನ್ ಸಿದ್ಧಪಡಿಸಿದ್ದು.
5) ರೋಗಿಗಳಿಗೆ ಸ್ವಚ್ಚ ಬಟ್ಟೆಗಳನ್ನು ಒದಗಿಸಲು ಲಾಂಡ್ರಿ ತೆರೆದದ್ದು.
6) ಆಸ್ಪತ್ರೆಯಲ್ಲಿ ಕುಡಿಯುವ ಶುದ್ಧ ನೀರನ್ನು ನೀಡಲು ವ್ಯವಸ್ಥೆ ಮಾಡಿದ್ದು.
7) ಪ್ರತಿಯೊಬ್ಬ ರೋಗಿಯ ವಿವರಗಳನ್ನು ದಾಖಲಿಸಿದ್ದು.
8) ಇಡೀ ಆಸ್ಪತ್ರೆಯ ದಾಖಲೆ ಅಪ್ಡೇಟ್ ಮಾಡಿ ಗ್ರಾಫಿಕ್ಸ್ ರೂಪ ಕೊಟ್ಟದ್ದು.
9) ರೋಗಿಗಳ ಮನರಂಜನೆಗೆ ವ್ಯವಸ್ಥೆ ಮಾಡಿದ್ದು ಮತ್ತು ಓದುವವರಿಗೆ ಲೈಬ್ರರಿ ಸ್ಥಾಪನೆ ಮಾಡಿದ್ದು.
10) ಆಸ್ಪತ್ರೆಯ ಒಳಗೆ ಶುದ್ಧ ಗಾಳಿ, ಬೆಳಕಿನ ವ್ಯವಸ್ಥೆ ಮಾಡಿದ್ದು….ಹೀಗೆ ನೂರಾರು ಕ್ರಮಗಳ ಮೂಲಕ ಆಕೆ ಆಸ್ಪತ್ರೆಗಳಿಗೆ ಜೀವದಾನವನ್ನು ಮಾಡಿದರು.
ದೀಪಧಾರಿ ದೇವತೆಯೇ ಆದರು!
ರಾತ್ರಿಯ ಹೊತ್ತು ಕತ್ತಲೆಗೆ ಆಕೆ ಕೈಯಲೊಂದು ದೀಪ ಹಿಡಿದು ಪ್ರತಿಯೊಬ್ಬ ರೋಗಿಯ ಬಳಿ ಹೋಗಿ ಪರೀಕ್ಷೆಯನ್ನು ಮಾಡಿ ಬರುತ್ತಿದ್ದರು. ಅದರಿಂದ ಅವರಿಗೆ The Lady With The LAMP ಎಂಬ ಹೆಸರು ಬಂದಿತು. ಅವರು ತೆಗೆದುಕೊಂಡ ಗಟ್ಟಿಯಾದ ನಿರ್ಧಾರಗಳು, ಸೇವಾಪರತೆ ಮತ್ತು ದಣಿವಿರದ ದುಡಿಮೆಗಳಿಂದ ಮಿಲಿಟರಿ ಆಸ್ಪತ್ರೆಯ ಮರಣ ದರವನ್ನು 60% ದಿಂದ 2.5%ಕ್ಕೆ ಇಳಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ!
ಯುದ್ಧ ಮುಗಿದರೂ ಮಿಷನ್ ನಿಲ್ಲಲೇ ಇಲ್ಲ!
ಮುಂದೆ ಯುದ್ಧ ಮುಗಿದ ನಂತರವೂ ಅವರು ಬ್ರಿಟನ್ನಿನ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿವರ ಸಂಗ್ರಹಿಸಿದರು. ಗ್ರಾಫಿಕ್ಸ್ ರೂಪ ನೀಡಿ ಸರಕಾರಕ್ಕೆ ವರದಿಯನ್ನು ನೀಡಿದರು. ಆಸ್ಪತ್ರೆಗಳ ಸ್ವಚ್ಛತೆಯಿಂದ ರೋಗಿಗಳ ಮರಣದ ಪ್ರಮಾಣ ಕಡಿಮೆ ಮಾಡಲು ಸಾಧ್ಯವೆಂಬುದನ್ನು ಫ್ಲಾರೆನ್ಸ್ ಕೊನೆಯ ಉಸಿರಿನವರೆಗೂ ಪ್ರತಿಪಾದನೆ ಮಾಡಿದರು.
ಜಗತ್ತಿನ ಮೊತ್ತಮೊದಲ ವೃತ್ತಿಪರ ನರ್ಸಿಂಗ್ ಕಾಲೇಜು ಸ್ಥಾಪಿಸಿದರು!
1860ರಲ್ಲಿ ಲಂಡನ್‌ನಲ್ಲಿ ಜಗತ್ತಿನ ಮೊತ್ತಮೊದಲ ವೃತ್ತಿಪರ ನರ್ಸಿಂಗ್ ಕಾಲೇಜು ಸ್ಥಾಪಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ನರ್ಸಿಂಗ್ ವೃತ್ತಿಗೆ ಒಂದು ಎತ್ತರದ ಘನತೆ ಮತ್ತು ಗೌರವ ತಂದುಕೊಟ್ಟ ಹಿರಿಮೆ ಕೂಡ ಅವರಿಗೆ ಸಲ್ಲುತ್ತದೆ. ಮುಂದೆ ಅವರ ಹುಟ್ಟುಹಬ್ಬವು ವಿಶ್ವ ದಾದಿಯರ ದಿನವಾಗಿ ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆಯಿತು. ಅಂತಾರಾಷ್ಟ್ರೀಯ LIONS ಸಂಸ್ಥೆಯು ಅವರನ್ನು ತಮ್ಮ ಸಂಸ್ಥೆಯ ಲೇಜೆಂಡರಿ ಐಕಾನ್ ಆಗಿ ಗೌರವ ನೀಡಿತು.
ಅವರ ಹೆಸರಲ್ಲಿ ಜಗತ್ತಿನ ಶ್ರೇಷ್ಟವಾದ ದಾದಿಯರು ಫ್ಲಾರೆನ್ಸ್ ನೈಟಿಂಗೆಲ್ ಅವರ ಹೆಸರಿನ ಮೆಡಲಗಳನ್ನು ಪಡೆಯುತ್ತಿದ್ದಾರೆ. ಅದು ಪ್ರತೀ ದಾದಿಯರಿಗೆ ನೊಬೆಲ್ ಬಹುಮಾನಕ್ಕೆ ಸಮ ಎಂಬ ಭಾವನೆ ಇದೆ.
ಫ್ಲಾರೆನ್ಸ್ ನಿಮಗೆ ನಮನಗಳು
ಜೀವನವಿಡೀ ಮದುವೆ ಆಗದೆ ಉಳಿದು ಜಗತ್ತಿನ ಆರೋಗ್ಯ ಕ್ಷೇತ್ರದ ಯೋಧರಿಗೆ ಗೌರವ ತಂದುಕೊಟ್ಟ ಅವರಿಗೆ ನನ್ನ ನಮನಗಳು. ಹಾಗೆಯೇ ಜಗತ್ತಿನಾದ್ಯಂತ ಮಾನವೀಯ ಅಂತಃಕರಣದ ಸೇವೆ ಸಲ್ಲಿಸುತ್ತಿರುವ ನರ್ಸ್ ಎಂಬ ದೇವತೆಗೆ ನನ್ನ ಧನ್ಯವಾದಗಳು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಬುದ್ಧಿವಂತಿಕೆ ಒಂದೇ ನಿಮ್ಮ ಮಗುವಿನ ಆಸ್ತಿ ಅಲ್ಲ, ಅದಕ್ಕೆ ಬೇಕು ಈ ನಾಲ್ಕು Qಗಳು