Site icon Vistara News

ರಾಜ ಮಾರ್ಗ ಅಂಕಣ: You Cant believe, ಅವನು ಮೊದಲ ರನ್‌ ಗಳಿಸಲು ಆರು ಇನಿಂಗ್ಸ್‌ ಒದ್ದಾಡಿದ್ದ!

Marvan atapattu

#image_title

ಸತತ ಸೋಲುಗಳು, ಅಪಮಾನ, ನಿರಾಸೆ ಮತ್ತು ತಿರಸ್ಕಾರ ಯಾರನ್ನೇ ಆದರೂ ಖಿನ್ನತೆಯ ಕಡೆಗೆ ದೂಡುವ ಸಾಧ್ಯತೆ ಇದೆ ಎನ್ನುತ್ತದೆ ಮನಶ್ಶಾಸ್ತ್ರ. ಆದರೆ ಅತ್ಯಂತ ಪ್ರಬಲವಾದ ಇಚ್ಛಾಶಕ್ತಿ, ತಾಳ್ಮೆ ಮತ್ತು ಪಾಸಿಟಿವ್ ಥಿಂಕಿಂಗ್ ಇದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು ಎಂದು ನಮಗೆಲ್ಲಾ ತೋರಿಸಿಕೊಟ್ಟ ಒಬ್ಬ ಕ್ರಿಕೆಟರ್ ಕಥೆ ಇಂದು (ರಾಜ ಮಾರ್ಗ ಅಂಕಣ) ನಿಮ್ಮ ಮುಂದೆ!

ಆತನಿಗೆ ಕ್ರಿಕೆಟೇ ಲೈಫ್ ಆಗಿತ್ತು!

ಅವನು ಶ್ರೀಲಂಕಾದ ಕಳುತರ ಎಂಬ ಸಣ್ಣ ಊರಿನವನು. ಬಾಲ್ಯದಿಂದಲೂ ಕ್ರಿಕೆಟ್ ಅಂದರೆ ಪ್ರಾಣ. ಕಲಿಕೆಯಲ್ಲಿಯು ಕೂಡ ಮುಂದಿದ್ದ. ಆದರೆ ಅವನ ಕನಸು ಮಹಾ ಕ್ರಿಕೆಟರ್ ಆಗುವುದು.
ರೋಷನ್ ಮಹಾನಾಮ, ಅರ್ಜುನ್ ರಣತುಂಗಾ, ಸನತ್ ಜಯಸೂರ್ಯ, ರಮೇಶ್ ಕಾಲುವಿತರಣ ಇವರೆಲ್ಲ ಅವನ ಐಕಾನಗಳು. ಅಂತರ್ಕಾಲೇಜು ಮಟ್ಟದ, ಯೂನಿವರ್ಸಿಟಿ ಮಟ್ಟದ ಪಂದ್ಯಗಳಲ್ಲಿ ದಾಖಲೆಯ ಇನಿಂಗ್ಸ್ ಕಟ್ಟಿದವನು ಅವನು. ಮುಂದೆ ಶ್ರೀಲಂಕಾ ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಮೊದಲ ಬಾರಿ ಆಯ್ಕೆ ಆದ. ಆಗ ಅವನ ವಯಸ್ಸು 20.

ಸತತವಾದ ಸೋಲು ಅವನಿಗಿಂತ ಮುಂದೆ ಇತ್ತು!

ಆತನ ಮೊದಲ ಟೆಸ್ಟ್ ಪಂದ್ಯದ ಮೊದಲನೇ ಇನಿಂಗ್ಸ್. ತುಂಬಾ ನಿರೀಕ್ಷೆಗಳನ್ನು ಹೊತ್ತು ಬ್ಯಾಟ್ ಹಿಡಿದು ಕ್ರೀಸಿಗೆ ಬಂದ. ಮೊದಲ ಇನ್ನಿಂಗ್ಸ್ ಸೊನ್ನೆಗೆ ಔಟ್. ಮತ್ತೆ ಎರಡನೇ ಇನಿಂಗ್ಸ್‌ ಕೂಡ ಸೊನ್ನೆ! ತಡೆದುಕೊಳ್ಳಲು ಆಗದೆ ಡ್ರೆಸ್ಸಿಂಗ್ ರೂಮಿನ ಬಾಗಿಲನ್ನು ಹಾಕಿಕೊಂಡು ಪುಟ್ಟ ಮಗುವಿನಂತೆ ಗಟ್ಟಿಯಾಗಿಯೆ ಅತ್ತ ಆ ಕ್ರಿಕೆಟರ್! ನಿರೀಕ್ಷೆಯಂತೆ ಟೆಸ್ಟ್ ತಂಡದಿಂದ ಔಟ್ ಆದ. ಸೋಲು ಅವನಿಗಿಂತ ತುಂಬಾ ಮುಂದೆ ಇತ್ತು!

ಮತ್ತೆ ಪ್ರಯತ್ನ, ನಿರಂತರ ಸೋಲು!

ಮತ್ತೆ ಒಂದಿಷ್ಟು ಪ್ರಥಮ ದರ್ಜೆಯ ಪಂದ್ಯಗಳು, ನೆಟ್ ಪ್ರಾಕ್ಟೀಸ್ ಮಾಡಿದ. ತನ್ನ ಕ್ರಿಕೆಟ್ ಕೌಶಲಗಳನ್ನು ಶಾರ್ಪ್ ಮಾಡಿಕೊಂಡ. ಆಯ್ಕೆ ಸಮಿತಿಯ ಕರೆಗಾಗಿ ಚಾತಕ ಪಕ್ಷಿಯಂತೆ ಕಾದು ಕೂತ. 21 ತಿಂಗಳ ನಂತರ ಅವನಿಗೆ ಕರೆ ಬಂದೇ ಬಂತು.
ಈ ಬಾರಿ ಆತ್ಮವಿಶ್ವಾಸವನ್ನು ಬೆಟ್ಟದಂತೆ ಪೇರಿಸಿ ಬ್ಯಾಟ್ ಹಿಡಿದು ಕ್ರೀಸಿಗೆ ಬಂದ. ಮೊದಲ ಇನಿಂಗ್ಸ್‌ ಮತ್ತೆ ಸೊನ್ನೆ, ಎರಡನೇ ಇನಿಂಗ್ಸ್‌ ಕೇವಲ ಒಂದು! ಅಲ್ಲಿಗೆ ಆತನ ಕನಸು ಎರಡನೇ ಬಾರಿಗೆ ಭಗ್ನ ಆಗಿತ್ತು. ಪೆಚ್ಚು ಮೋರೆಯನ್ನು ಹಾಕಿಕೊಂಡು ಮನೆಗೆ ಬಂದ. ಈ ಬಾರಿ ಕೂಡ ಅವನು ಶ್ರೀಲಂಕಾ ಟೆಸ್ಟ್ ತಂಡದಿಂದ ಔಟ್ ಆಗಿದ್ದ!

ಗೆಳೆಯರು ಕ್ರಿಕೆಟ್ ತೊರೆಯಲು ಹೇಳಿದರು!

ಆಗ ಅವನ ಆಪ್ತವಲಯದ ಬಹುತೇಕ ಗೆಳೆಯರು ಕ್ರಿಕೆಟ್ ಆಟವನ್ನು ಕೈ ಬಿಡುವಂತೆ ಅವನನ್ನು ಒತ್ತಾಯ ಮಾಡಿದರು ಮತ್ತು ಬೇರೆ ಆಟಗಳ ಕಡೆಗೆ ಗಮನವನ್ನು ಕೊಡಲು ಸಲಹೆ ನೀಡಿದರು. ಆದರೆ ಆತ ಯಾವುದಕ್ಕೂ ರೆಸ್ಪಾಂಡ್ ಮಾಡದೆ ಸಾಲು ಸಾಲಾಗಿ ಪ್ರಥಮ ದರ್ಜೆ ಪಂದ್ಯಗಳನ್ನು ಆಡುತ್ತ ಹೋದ. ಹತ್ತಾರು ಶತಕಗಳನ್ನು ಹೊಡೆದ. ಈ ಬಾರಿ 17 ತಿಂಗಳ ನಂತರ ಆಯ್ಕೆ ಮಂಡಳಿಯು ಅವನಿಗೆ ಕೃಪೆ ತೋರಿತು.

ಮತ್ತೆ ಸೊನ್ನೆ, ಸೊನ್ನೆ ಮತ್ತು ಸೊನ್ನೆ!

ಅವನು ತುಂಬಾ ಎಕ್ಸೈಟ್ ಆಗಿ ಮೂರನೇ ಬಾರಿಗೆ ಭಾರೀ ಖುಷಿಯಿಂದ ಬ್ಯಾಟಿಂಗ್ ಮಾಡಲು ಇಳಿದ. ಆದರೆ ಈ ಬಾರಿ ಕೂಡ ಸೊನ್ನೆ ಮತ್ತು ಸೊನ್ನೆ ಸುತ್ತಿ ಹೊರಬಿದ್ದ!

ಅಂದು ರಾತ್ರಿ ಆಯ್ಕೆ ಸಮಿತಿಯ ಅಧ್ಯಕ್ಷರಿಗೆ ಕರೆಮಾಡಿ ತನ್ನ ಶಾರ್ಟ್‌ ಫಾಲ್ ಏನೆಂದು ಕೇಳಿದ. ಅವರು ಹೇಳಿದ ವಾಕ್ಯವು ಅತ್ಯಂತ ಪರಿಣಾಮಕಾರಿ ಆಗಿತ್ತು. “My Boy, You Lack Big Match Temperament! We are Sorry”

ಆತನು ಸೋಲುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೆ ಇಲ್ಲ!

ಈ ಬಾರಿಯೂ ಅವನು ತಲೆಕೆಡಿಸಿಕೊಳ್ಳಲಿಲ್ಲ. ಮತ್ತೆ ಭಾರವಾದ ಬ್ಯಾಟ್ ಹಿಡಿದು ಪ್ರಾಕ್ಟೀಸ್ ಪಂದ್ಯಗಳನ್ನು ಆಡತೊಡಗಿದ. ಹಗಲು ರಾತ್ರಿ ಬೆವರು ಹರಿಸಿದ. ತನ್ನ ಮೇಲೆ ಭರವಸೆಯನ್ನು ಹೆಚ್ಚು ಮಾಡಿಕೊಂಡ. ತನ್ನ ಸಾಮರ್ಥ್ಯಗಳನ್ನು ಮತ್ತೆ ಸ್ಟ್ರಾಂಗ್ ಮಾಡಿಕೊಂಡ ಮತ್ತು ಆಯ್ಕೆ ಸಮಿತಿಯ ಕರೆಗಾಗಿ ಕಾದು ಕೂತ.

ಈ ಸಲ ಮೂರು ವರ್ಷ ಕಾಯಿಸಿದ ನಂತರ ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿಯು ಆತನಿಗೆ ಕರೆಮಾಡಿತು. “Gentleman, This is the LAST chance for you. Give your BEST” ಎಂದು ಆತ ತನಗೆ ತಾನೇ ಹೇಳಿಕೊಂಡ!

ಈ ಬಾರಿ ಆತನು ಸೋಲುಗಳನ್ನು ಸೋಲಿಸಿದ!

ಆರಂಭಿಕ ಆಟಗಾರನಾಗಿ ಈ ಬಾರಿ ಕ್ರೀಸಿಗೆ ಇಳಿದು ಆತ ಭರ್ಜರಿಯಾದ ಆಟ ಆಡಿದ. ಅವನ ಬ್ಯಾಟು ಈ ಬಾರಿ ಭಾರೀ ಸೌಂಡ್ ಮಾಡತೊಡಗಿತು. ಮತ್ತೆ 10 ವರ್ಷ ಒಂದು ಪಂದ್ಯ ಕೂಡ ಡ್ರಾಪ್ ಆಗದೆ 90 ಟೆಸ್ಟ್ ಪಂದ್ಯಗಳನ್ನು ಆಡಿದ! 5504 ರನ್ ಚಚ್ಚಿದ! 16 ಶತಕ ಮತ್ತು ಆರು ದ್ವಿಶತಕಗಳನ್ನು ಸಿಡಿಸಿದ!

ಆತನ ODI ದಾಖಲೆಗಳು ಕೂಡ ತುಂಬಾ ರೋಚಕವೇ ಆಗಿವೆ. ಶ್ರೀಲಂಕಾ ತಂಡದ ಪರವಾಗಿ ಬರೋಬ್ಬರಿ 228 ಏಕದಿನದ ಪಂದ್ಯಗಳನ್ನು ಆಡಿರುವ ಆತ ಒಟ್ಟಾಗಿ 14,591 ರನ್ನುಗಳನ್ನು ತನ್ನ ಖಾತೆಗೆ ಸೇರಿಸಿದ್ದಾನೆ. ಅದೇ ರೀತಿ ಹನ್ನೊಂದು ಶತಕಗಳನ್ನು ಕೂಡ ಸಿಡಿಸಿದ್ದಾನೆ.

ಅವನು ಟೆಸ್ಟ್‌ನಲ್ಲಿ ಸಿಡಿಸಿರುವ ಡಬಲ್‌ ಸೆಂಚುರಿಗಳ ಸಂಖ್ಯೆ ಆರು. ಟೆಸ್ಟ್‌ ಆಡುವ ಪ್ರತಿಯೊಂದು ದೇಶದ ವಿರುದ್ಧ ಅವನು ಶತಕದ ದಾಖಲೆ ಬರೆದಿದ್ದಾನೆ.

Marvan atapattu

ಆ ಆಟಗಾರನ ಹೆಸರು ಮರ್ವನ್ ಆತ್ತಪಟ್ಟು!

ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಸ್ಟೈಲಿಶ್ ಆರಂಭಿಕ ಆಟಗಾರ ಎಂದರೆ ಮರ್ವನ್ ಅತ್ತಪಟ್ಟು! ಮುಂದೆ ಶ್ರೀಲಂಕಾದ ಯಶಸ್ವಿ ಕ್ಯಾಪ್ಟನ್ ಆದ. ನಂತರ ರಾಷ್ಟ್ರೀಯ ತಂಡದ ಕೋಚ್ ಆಗಿ ದುಡಿದ.

ಆದರೆ ಇದ್ಯಾವುದೂ ನಮಗೆ ನೆನಪಿಲ್ಲ!

ಅದೇ ಕ್ರಿಕೆಟರ್ ತನ್ನ ಮೊದಲ ರನ್ ಪಡೆಯಲು ಆರು ಇನಿಂಗ್ಸ್‌ ಆಡಿದ್ದ!
ಹನ್ನೊಂದು ಟೆಸ್ಟ್ ಪಂದ್ಯಗಳನ್ನು ಮುಗಿಸಿದಾಗ ಅವನ ಗರಿಷ್ಠ ರನ್ 29 ಆಗಿತ್ತು!
ತನ್ನ ಟೆಸ್ಟ್ ಜೀವನದಲ್ಲಿ 22 ಬಾರಿ ಸೊನ್ನೆಗೆ ಔಟ್ ಆಗಿದ್ದ!
ನಾಲ್ಕು ಬಾರಿ ಎರಡೂ ಇನಿಂಗ್ಸ್‌ ಸೊನ್ನೆ ಗಳಿಸಿದ್ದ!
ತನ್ನ ಮೊದಲ ಶತಕ ಗಳಿಸಲು ಏಳು ವರ್ಷಗಳ ಕಾಲ ಉಸಿರು ಕಟ್ಟಿ ಕಾದಿದ್ದ!

ಅದೇ ಮರ್ವನ್ ಆತ್ತಪಟ್ಟು ಮುಂದೆ ಕ್ರಿಕೆಟ್ ಜಗತ್ತನ್ನು ಅದ್ಭುತವಾಗಿಯೇ ಆಳಿದ! ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದ.

ಈಗ ತೀರ್ಮಾನವನ್ನು ನಿಮಗೆ ಬಿಟ್ಟಿದ್ದೇನೆ.

ರಾಜ ಮಾರ್ಗ ಅಂಕಣ: ರಾಜ ಮಾರ್ಗ ಅಂಕಣ: ಯೋಗವನ್ನು ಜಗದಗಲ ಹರಡಿದ ಮಹಾ ಗುರು ಬಿಕೆಎಸ್ ಅಯ್ಯಂಗಾರ್

Exit mobile version