Site icon Vistara News

ರಾಜ ಮಾರ್ಗ ಅಂಕಣ : ಒಂದೊಂದು ಚುನಾವಣೆ ಬಂದಾಗಲೂ ನೆನಪಾಗುವ ಆ ಒಂದು ಹೆಸರೇ ಟಿ.ಎನ್. ಶೇಷನ್‌!

Raja Marga column : You cant do an election without remembering TN Sheshan!

Raja Marga column : You cant do an election without remembering TN Sheshan!

ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಎಲ್ಲರಿಂದ ಕರೆಯಲ್ಪಡುವ ಭಾರತದಲ್ಲಿ ಚುನಾವಣೆಗಳು ಬಹಳ ದೊಡ್ಡ ಉತ್ಸವಗಳು! ಈ ಚುನಾವಣೆಗಳು ಇಂದು ಇಷ್ಟೊಂದು ಶಿಸ್ತುಬದ್ಧವಾಗಿ ನಡೆಯುತ್ತಿವೆ ಅಂತಾದರೆ ಅದಕ್ಕೆ ಕಾರಣ ಭಾರತದ ಹತ್ತನೇ ಮುಖ್ಯ ಚುನಾವಣಾ ಕಮೀಷನರ್! ಅವರೇ ಟಿ.ಎನ್. ಶೇಷನ್.
ಪೂರ್ತಿ ಹೆಸರು ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್.

ಕೇರಳದ ಪಾಲ್ಫಾಟ್ ಜಿಲ್ಲೆಯ ಒಂದು ಸಣ್ಣ ಊರಿನಲ್ಲಿ ಸಂಪ್ರದಾಯಬದ್ಧ ಕುಟುಂಬ ಒಂದರಲ್ಲಿ ಜನಿಸಿದ ಅವರು ಮುಂದೆ ತಮಿಳುನಾಡಿಗೆ ವಲಸೆ ಹೋದವರು. ಮುಂದೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಅವರು ಪ್ರತಿಭಾವಂತ ವಿದ್ಯಾರ್ಥಿ. ಭಾರತದ ‘ಮೆಟ್ರೋ ಮ್ಯಾನ್’ ಎಂದು ಮುಂದೆ ಕರೆಸಿಕೊಂಡ ಇ. ಶ್ರೀಧರನ್ ಅವರ ಕಾಲೇಜಿನ ಸಹಪಾಠಿ. ಮುಂದೆ ಅಮೆರಿಕದ ಹಾರ್ವರ್ಡ್ ವಿವಿಗೆ ಹೋಗಿ ಮಾಸ್ಟರ್ಸ್ ಪದವಿಯನ್ನು ಪಡೆದು ಬಂದವರು ಸೇಶನ್ ಅವರು. ಆಗ ಖ್ಯಾತ ವಕೀಲರಾದ ಸುಬ್ರಹ್ಮಣ್ಯನ್ ಸ್ವಾಮಿ ಅವರ ಒಡನಾಟ ಅವರಿಗೆ ದೊರೆಯಿತು.

ಮುಂದೆ ಐಎಎಸ್ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿ ಪಾಸಾದ(1955) ಶೇಷನ್ ಆಗಿನ ಮದ್ರಾಸು ಸರಕಾರದ ಸೇವೆಗೆ ನಿಂತರು. ಹಲವು ಅಧಿಕಾರಿ ಹುದ್ದೆಗಳನ್ನು ಅಧಿಕಾರಯುತವಾಗಿ ನಿರ್ವಹಣೆ ಮಾಡಿದರು. ಹೋದಲ್ಲೆಲ್ಲ ಕ್ರಾಂತಿ ಮಾಡಿದರು. ಯಾರ ಜೊತೆಗೂ ರಾಜಿ ಮಾಡಿಕೊಳ್ಳದ ಮತ್ತು ನೂರಕ್ಕೆ ನೂರರಷ್ಟು ಸಂವಿಧಾನಕ್ಕೆ ಬದ್ಧವಾದ ಅವರ ನೇರ ಸ್ವಭಾವವು ಅವರನ್ನು ತಮಿಳುನಾಡಿನ ಸೇವೆಗೆ ರಾಜೀನಾಮೆ ಕೊಟ್ಟು ದೆಹಲಿಗೆ ಬರುವಂತೆ ಮಾಡಿತು.

ಟಿ.ಎನ್‌. ಶೇಷನ್

ಸ್ವತಂತ್ರ ಭಾರತದ ಹತ್ತನೇ ಮುಖ್ಯ ಚುನಾವಣಾ ಆಯುಕ್ತ!

(1990 ಡಿಸೆಂಬರ್ 12- 1996 ಡಿಸೆಂಬರ್ 11) ಈ ಆರು ವರ್ಷಗಳ ಅವಧಿಯಲ್ಲಿ ಅವರು ಭಾರತದ ಹತ್ತನೇ ಮುಖ್ಯ ಚುನಾವಣಾ ಆಯುಕ್ತರಾಗಿ ನಿಯುಕ್ತರಾದರು. ಅವರ ಬಹುಕಾಲದ ಒಡನಾಡಿ ಸುಬ್ರಹ್ಮಣ್ಯನ್ ಸ್ವಾಮಿ ಆಗ ಕಾನೂನು ಮಂತ್ರಿಯಾಗಿದ್ದು ಈ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದನ್ನು ಶೇಷನ್ ಒಪ್ಪಿಕೊಳ್ಳುತ್ತಾರೆ. ಆದರೆ ಆ ಆರು ವರ್ಷಗಳ ಅವಧಿಯಲ್ಲಿ ಭಾರತದ ಚುನಾವಣೆಗಳ ಶುದ್ಧೀಕರಣದ ಕೆಲಸವನ್ನು ಅವರು ಎಷ್ಟು ಚಂದವಾಗಿ ಮಾಡಿದರು ಅಂದರೆ ಆ ವರ್ಷಗಳನ್ನು ಭಾರತದ ಚುನಾವಣಾ ಇತಿಹಾಸದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ.

ಅವರ ಅವಧಿಗಿಂತ ಮೊದಲು ಭಾರತದಲ್ಲಿ ಚುನಾವಣೆಗಳು ಗೂಂಡಾ ಸಂಸ್ಕೃತಿಯ ಪ್ರತೀಕವಾಗಿಯೇ ಇದ್ದವು! ಉತ್ತರ ಪ್ರದೇಶ, ಬಿಹಾರ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ಗೂಂಡಾಗಳು ಭಯ ಇಲ್ಲದೇ ಬೂತ್ ಕ್ಯಾಪ್ಚರಿಂಗ್ ಮಾಡುತ್ತಿದ್ದವು.‌ ಚುನಾವಣೆ ಎಂದರೆ ದುಡ್ಡು, ಹೆಂಡ, ರಕ್ತ ಪಾತ, ಜಾತೀಯ ವಿಭಜನೆ, ಕೋಮು ಗಲಭೆಗಳು, ರಾಜಕಾರಣಿಗಳ ದರ್ಪ, ಸರಕಾರಿ ಯಂತ್ರದ ದುರುಪಯೋಗ…ಎಲ್ಲವೂ ನಡೆಯುತ್ತಿದ್ದವು! ಅಭ್ಯರ್ಥಿಗಳ ಮೇಲೆ ಆಯೋಗಕ್ಕೆ ಯಾವ ನಿಯಂತ್ರಣವೂ ಇರಲಿಲ್ಲ. ಚುನಾವಣಾ ನೀತಿಸಂಹಿತೆ ಪುಸ್ತಕದಲ್ಲಿ ಮಾತ್ರ ಉಲ್ಲೇಖ ಇತ್ತು. ಸಂಘರ್ಷಪೂರ್ಣ ಮತ್ತು ರಕ್ತ ಚೆಲ್ಲುವ ರಾಲಿಗಳು ಎಲ್ಲೆಡೆಯೂ ನಡೆಯುತ್ತಿದ್ದವು.

ಬಿಗಿ ಆಯಿತು ಚುನಾವಣಾ ನೀತಿ ಸಂಹಿತೆ!

ಸೇಶನ್ ಭಾರತದ CEC ಆಗಿ ಮಾಡಿದ ಮೊದಲ ಕೆಲಸ ಅಂದರೆ ಭಾರತದ ಸಂವಿಧಾನದಲ್ಲಿ ಇದ್ದ ಪವರ್‌ಗಳನ್ನು ಬಳಸಿಕೊಂಡು ಕಡ್ಡಾಯವಾದ ಮತ್ತು ಬಿಗಿಯಾದ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಿದ್ದು! ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗಳನ್ನು ನಡೆಸಲು ಏನೆಲ್ಲ ಬೇಕೋ ಅವುಗಳನ್ನು ಜಾರಿ ಮಾಡುತ್ತ ಹೋದದ್ದು!

ಅವುಗಳಲ್ಲಿ ಕೆಲವನ್ನು ನಾನಿಲ್ಲಿ ಉಲ್ಲೇಖ ಮಾಡಲೇ ಬೇಕು

1) ಭಾರತದಲ್ಲಿ ಮೊದಲ ಬಾರಿಗೆ ಮತದಾರರಿಗೆ ಗುರುತಿನ ಚೀಟಿ (ವೋಟರ್ ಐಡಿ) ನೀಡುವ ಕ್ರಮ ಕೈಗೊಂಡದ್ದು!

2) ಚುನಾವಣಾ ವೀಕ್ಷಕರನ್ನು ಮೊದಲ ಬಾರಿಗೆ ನೇಮಕ ಮಾಡಿ ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕ ಮಾಡಿದ್ದು!

3) ಆಮಿಷ (ಹೆಂಡ, ದುಡ್ಡು, ಲಂಚ, ಉಡುಗೊರೆ)ಗಳನ್ನು ನೀಡಿ ಮತದಾರರನ್ನು ಖರೀದಿ ಮಾಡುವ ಪ್ರಯತ್ನಕ್ಕೆ ತಡೆ ಒಡ್ಡಿದ್ದು!

4) ಆಡಳಿತ ಪಕ್ಷಗಳು ತಮ್ಮ ಅಧಿಕಾರದ ಯಂತ್ರವನ್ನು ದುರುಪಯೋಗ ಮಾಡದಂತೆ ಕಾನೂನು ರೂಪಿಸಿದ್ದು!

5) ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ನಿಯಂತ್ರಣ ಹೇರುವ ಕ್ರಮವನ್ನು ಬಿಗಿ ಮಾಡಿದ್ದು. ವೆಚ್ಚದ ವಿವರಗಳನ್ನು ನೀಡದ 1448 ಅಭ್ಯರ್ಥಿಗಳನ್ನು ದೇಶದಾದ್ಯಂತ ಅನರ್ಹ ಮಾಡಿದ್ದು! ಅವರು ಮುಂದಿನ ಮೂರು ವರ್ಷ ಯಾವುದೇ ಚುನಾವಣೆ ಸ್ಪರ್ಧೆ ಮಾಡದಂತೆ ಶಿಕ್ಷೆ ನೀಡಿದ್ದು!

ರಾಜಿಯೇ ಇಲ್ಲದ ಅಧಿಕಾರಿ

6) ಜಾತಿ, ಮತಗಳ ಆಧಾರದಲ್ಲಿ ಮತವನ್ನು ಕೇಳಿದ ಅಭ್ಯರ್ಥಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಒಳಪಡಿಸಿದ್ದು! ಕೋಮು ಭಾವನೆಗಳನ್ನು ಪ್ರಚೋದಿಸುವ ಭಾಷಣಗಳಿಗೆ ಬ್ರೇಕ್ ಹಾಕಿದ್ದು!

7) ಗೂಂಡಾ ಸಂಸ್ಕೃತಿಯ ರಾಜ್ಯಗಳಾದ ಬಿಹಾರ್ ಮತ್ತು ಪಂಜಾಬ್‌ಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವತನಕ ಚುನಾವಣೆಯನ್ನು ನಡೆಸದೆ ಹೋದದ್ದು!

8) ಧಾರ್ಮಿಕ ಸ್ಥಳಗಳಲ್ಲಿ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಮಾಡದಿರಲು ನಿರ್ಬಂಧ ಹೇರಿದ್ದು!

8) ಶಬ್ದಮಾಲಿನ್ಯ ಉಂಟುಮಾಡುವ ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕಿದ್ದು!

9) ಆಯೋಗದ ಅನುಮತಿ ಪಡೆಯದೆ ಚುನಾವಣಾ ರ‍್ಯಾಲಿಗಳನ್ನು ನಡೆಸದಿರಲು ನಿಯಮ ರೂಪಿಸಿದ್ದು.

10) ಮತದಾನ ಜಾಗೃತಿ ಅಭಿಯಾನ ನಡೆಸುವುದರ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಕ್ರಮ ತೆಗೆದುಕೊಂಡದ್ದು. ಮತದಾರರು ಯಾವ ಭಯವೂ ಇಲ್ಲದೆ ಮತ ಚಲಾಯಿಸುವ ವಾತಾವರಣ ಕ್ರಿಯೇಟ್ ಮಾಡಿದ್ದು!

ಯಾರಿಗೂ ಕ್ಯಾರೇ ಅನ್ನದ CEC!

ನಾವು ಹಾಕುವ ಮತಕ್ಕೆ ಘನತೆ ತಂದುಕೊಟ್ಟವರು ಶೇಷನ್

ತಪ್ಪು ಮಾಡಿದ ಅಭ್ಯರ್ಥಿಯು ಎಷ್ಟು ಪ್ರಭಾವಿ ಆದರೂ, ಯಾವ ಪಕ್ಷದವರೇ ಆದರೂ ಅನರ್ಹ ಮಾಡುವ ದಿಟ್ಟತನವು ಶೇಷನ್ ಅವರಿಗೆ ಇತ್ತು! ವಿರೋಧಿಗಳು, ಟೀಕಾಕಾರರು ಏನೇ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ತನಗೆ ಸಂವಿಧಾನವು ನೀಡಿದ ಅಧಿಕಾರವನ್ನು ಪೂರ್ಣವಾಗಿ ಉಪಯೋಗ ಮಾಡಿದ ಕೀರ್ತಿಯು ಅವರಿಗೆ ಸಲ್ಲುತ್ತದೆ.

ರಾಜಕೀಯ ಪಕ್ಷಗಳು ಅವರನ್ನು ಅಲ್ಸೇಶನ್ ನಾಯಿ ಎಂದು ಕರೆದವು. ಅದಕ್ಕೆ ಅವರು ನಗುತ್ತ ಹೌದು, ನಾನು ಪ್ರಜಾಪ್ರಭುತ್ವದ ಕಾವಲುನಾಯಿ ಎಂದರು! ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಅವರನ್ನು ಉದ್ಧಟ (ಅರೋಗಂಟ್) ಎಂದು ಕರೆದರು. ಶೇಷನ್ ಸರ್ ಸುಮ್ಮನೆ ನಕ್ಕರು.

1993ರಲ್ಲಿ ಅವರ ಪವರನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ತ್ರಿಸದಸ್ಯ ಸಮಿತಿ ಎಂದು ಘೋಷಣೆ ಮಾಡಿ ಇನ್ನಿಬ್ಬರು ಆಯುಕ್ತರನ್ನು ನೇಮಕ ಮಾಡಿತು. ಇದರ ಹಿಂದಿನ ಉದ್ದೇಶ ಶೇಷನ್ ಸರ್ ಅವರ ಅಧಿಕಾರವನ್ನು ಮೊಟಕು ಮಾಡುವುದೇ ಆಗಿತ್ತು! ಇದ್ಯಾವುದಕ್ಕೂ ಅವರು ಸೊಪ್ಪು ಹಾಕಲಿಲ್ಲ. ನಿವೃತ್ತಿ ಆಗುವವರೆಗೆ ತನ್ನ ಅಧಿಕಾರದ ಒಂದು ಎಳೆ ಕೂಡ ಬಿಟ್ಟುಕೊಡಲಿಲ್ಲ!

ನಿವೃತ್ತಿ ಆದ ನಂತರ…

ನಿವೃತ್ತಿ ಆದ ನಂತರ ಅವರು 1997ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿ ಎಲ್ಲ ಪಕ್ಷಗಳ ಸಹಕಾರ ಕೋರಿದರು. ಈ ಬಾರಿ ಅವರ ಮೇಲೆ ಸೇಡು ತೀರಿಸಿಕೊಂಡ ರಾಜಕೀಯ ಪಕ್ಷಗಳು ಅವರನ್ನು ಸೋಲಿಸಿಬಿಟ್ಟವು! ಮುಂದೆ ಅವರು ಗುಜರಾತಲ್ಲಿ ಅಡ್ವಾಣಿ ವಿರುದ್ದ ಲೋಕಸಭೆಗೆ ಸ್ಪರ್ಧೆ ಮಾಡಿ ಅಲ್ಲಿಯೂ ಸೋತರು!

ಆದರೆ ಭಾರತದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ಅವರು ತೆಗೆದುಕೊಂಡ ವಿಧಾಯಕ ಮತ್ತು ಬಿಗಿ ಕ್ರಮಗಳನ್ನು ಮುಂದೆ ಬಂದ ಆಯೋಗದ ಆಯುಕ್ತರು ಮುಂದುವರಿಸಿಕೊಂಡು ಹೋದರು ಅನ್ನುವುದು ಡೆಮಾಕ್ರಸಿಯ ವಿಜಯ ಎಂದೇ ಹೇಳಬಹುದು!

ಟಿ.ಎನ್. ಶೇಷನ್ ಅವರು 2019ರಲ್ಲಿ ನಮ್ಮನ್ನು ಅಗಲಿದರು. ಆದರೆ ಇಂದಿಗೂ ಭಾರತದಲ್ಲಿ ಯಾವುದೇ ಚುನಾವಣೆಯನ್ನು ನಡೆಸುವಾಗ ಶೇಷನ್ ಸರ್ ಅವರ ನೆನಪನ್ನು ಮಾಡದೆ ಮುಂದೆ ಹೋಗಲು ಸಾಧ್ಯವೇ ಇಲ್ಲ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅಪ್ಪ ಕೂಲಿ ಕಾರ್ಮಿಕ, ಅಮ್ಮ ಕುರುಡಿ, ಮಗ ಕಿವುಡ…ಆದರೂ ಕನಸು ದೊಡ್ಡದು!

Exit mobile version