Site icon Vistara News

ರಾಜ ಮಾರ್ಗ ಅಂಕಣ : ಕಣ್ಣೇ ಇಲ್ಲದಿದ್ದರೂ ಜಗತ್ತು ಕಣ್‌ ಕಣ್‌ ಬಿಟ್ಟು ನೋಡುವ ಉದ್ಯಮ ಸಾಮ್ರಾಜ್ಯ ಕಟ್ಟಿದ ಶ್ರೀಕಾಂತ್‌ ಬೊಳ್ಳ!

Raja Marga : He cant see the world, But world is watching his achievements with open eyes, story of Srikanth bolla

Raja Marga : He cant see the world, But world is watching his achievements with open eyes, story of Srikanth bolla

ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದ ಅಲ್ಲ, ಅದು ಹಾರುವುದು ಭರವಸೆಗಳ ಬಲದಿಂದ ಅಂದಿದ್ದರು ಶ್ರೀಕಾಂತ್‌ ಬೊಳ್ಳಾ! ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನ ಆಗಿತ್ತು. ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಅವರು ಅಂದು ಮಾಡಿದ ಭಾಷಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ!

ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳುತ್ತ ಹೋಗೋಣ.

ನಾನು ಹುಟ್ಟಿದ್ದು ಆಂಧ್ರದ ಮಚಲೀಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20,000 ರೂಪಾಯಿಗಿಂತ ಕಡಿಮೆ ಇದ್ದ ಕಾಲ ಅದು! ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಕಾಯಂ. ಆಟಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ತಿರುವುಗಳು ಆರಂಭ ಆದವು.

ಕಲಿಕೆಯಲ್ಲಿ ನಾನು ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಅಂಧರ ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ. ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನವನ್ನು ಪಡೆದೆ. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 90% ಅಂಕಗಳು ಬಂದವು.

ಕುರುಡ ಎಂಬ ಕಾರಣಕ್ಕೆ ನೂರಾರು ಅಡ್ಡಿಗಳು!

ನನಗೆ ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ. ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ!

ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟು ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆ ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ 98% ಅಂಕಗಳು ಬಂದವು!

ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಪ್ರವೇಶ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಪ್ರಯತ್ನ ಕೈ ಬಿಡಲಿಲ್ಲ. ಅಮೆರಿಕದ ನಾಲ್ಕು ಶ್ರೇಷ್ಠವಾದ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ನನಗೆ ಆಹ್ವಾನ ನೀಡಿದವು.

ಅಮೆರಿಕಾದ ವಿವಿಯಿಂದ ಪದವಿ!

ನಾನು ಅಮೆರಿಕದ ಮಸ್ಸಾಚುಸೆಟ್ಸ್ ವಿವಿಯನ್ನು ನನ್ನ ಅಧ್ಯಯನಕ್ಕೆ ಆರಿಸಿಕೊಂಡೆ. ಅಮೆರಿಕದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿಯು ನಾನಾಗಿದ್ದೆ! ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗಲ್ಲಿ ವಿವಿಯ ದಾಖಲೆಯನ್ನು ಕೂಡ ಮಾಡಿದ್ದೆ. ಆಗ ಅಮೆರಿಕದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು. ಆದರೆ ಅದೆಲ್ಲವನ್ನೂ ಬಿಟ್ಟು ನಾನು ಭಾರತಕ್ಕೆ ಬಂದೆ.

ಏಕೆಂದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು!

2011ರಲ್ಲಿ ನಾನು ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹುವಿಕಲತೆಯ ಮಕ್ಕಳಿಗಾಗಿ ‘ಸಮನವೈ ಸೆಂಟರ್’ ಎಂಬ ಸೇವಾಸಂಸ್ಥೆಯನ್ನು ಆರಂಭಿಸಿದೆನು. ಬ್ರೈಲ್ ಲಿಪಿಯ ಪ್ರಿಂಟಿಂಗ್ ಪ್ರೆಸ್ಸನ್ನು ತೆರೆದೆ. 3000 ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

2011ರಲ್ಲಿ ನನ್ನ ಬೊಳ್ಳಂಟ್ ಇಂಡಸ್ಟ್ರಿಯು ಆರಂಭ

ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಹೆಚ್ಚು ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪನಿಯಲ್ಲಿ ಹೂಡಿಕೆಯನ್ನು ಮಾಡಲು ಮುಂದೆ ಬಂದರು.

ನಾನು ಕಂಪೆನಿ ಮಾಡುವ ವಿಷಯ ನಾಡಿನ ಉದ್ದಗಲಕ್ಕೂ ಹರಡಿತು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಅಲ್ಲಿಂದ ನನ್ನ ಬದುಕಿನ ಗತಿಯೇ ಬದಲಾಯಿತು.

ಆ ಕಂಪನಿಯು ಪ್ರತೀ ತಿಂಗಳು 20% ಪ್ರಗತಿ ದಾಖಲಿಸುತ್ತಾ ಬಂದಿತು. ಇಂದು ನನ್ನ ಕಂಪನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳಿವೆ. 130 ಕೋಟಿ ರೂಪಾಯಿಗೂ ಅಧಿಕ ವಾರ್ಷಿಕ ಟರ್ನ್ ಓವರ್ ಇದೆ! ನನ್ನ ಕಂಪನಿಯು ನೂರಕ್ಕೆ ನೂರರಷ್ಟು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿಯಾದ ಬದುಕಿನ ಅವಕಾಶ ನೀಡಿದ ಖುಷಿ ಇದೆ.

ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡತೀ ಹೈ ಪಂಖೋ ಕೀ ತಾಕತ್ ಸೆ ನಹೀಂ. ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಕೋಟನ ಜೊತೆಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು!

ಉದ್ಯಮದಲ್ಲಿ ಭಾರೀ ದೊಡ್ಡ ಯಶಸ್ಸು ಅವರದ್ದು

ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಝಿನ್ 2017ರಲ್ಲಿ ನಡೆಸಿದ ಏಷಿಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವು ದೊರೆತಿದೆ.

‘ NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ ಟಿವಿ9 ನವ ನಕ್ಷತ್ರ ಪ್ರಶಸ್ತಿ ‘ ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ಈಗಾಗಲೇ ದೊರೆತಿವೆ. ಶ್ರೀಕಾಂತ್ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ. ಇನ್ನೂ 31 ವರ್ಷದ ಶ್ರೀಕಾಂತ್ ಹೈದರಾಬಾದಿನಲ್ಲಿ ಒಬ್ಬ ಅದ್ಭುತವಾದ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ: ಯಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್‌, ಐಪಿಎಲ್‌ ಶಿಖರದಲ್ಲಿ ಸಿಎಸ್‌ಕೆ

Raja Marga : He cant see the world, But world is watching his achievements with open eyes, story of Srikanth bolla

Exit mobile version