ಡಿಸೆಂಬರ್ 20, 1921. ಬನಾರಸ್ ನಗರದ ಒಂದು ಬ್ರಿಟಿಷ್ ಕೋರ್ಟಲ್ಲಿ ಒಬ್ಬ ಪಾರ್ಸಿ ಮ್ಯಾಜಿಸ್ಟ್ರೇಟ್ ಜಸ್ಟೀಸ್ ಖಾರೇಘಾಟ್ ಅವನ ಮುಂದೆ ಒಬ್ಬ ತೀಕ್ಷ್ಣ ಕಣ್ಣುಗಳ ಹುಡುಗ ಎದೆ ಉಬ್ಬಿಸಿ ನಿಂತುಕೊಂಡಿದ್ದ! ಆತನ ವಯಸ್ಸು ಕೇವಲ 15 ವರ್ಷ ಆಗಿತ್ತು!
ಆತ ಮಾಡಿದ್ದ ತಪ್ಪು ಏನೆಂದರೆ ಬ್ರಿಟಿಷ್ ಸರಕಾರದ ವಿರುದ್ಧ ನಡೆದ ರಾಲಿಯಲ್ಲಿ ಭಾಗವಹಿಸಿದ್ದು ಮತ್ತು ಒಬ್ಬ ಮುದುಕನನ್ನು ಲಾಠಿಯಿಂದ ಹೊಡೆಯುತ್ತಿದ್ದ ಬ್ರಿಟಿಷ್ ಪೋಲಿಸನ ಹಣೆಗೆ ಗುರಿ ಇಟ್ಟು ಕಲ್ಲು ಎಸೆದು ಗಾಯ ಮಾಡಿದ್ದು!
ಮ್ಯಾಜಿಸ್ಟ್ರೇಟ್ ಮೊದಲ ಪ್ರಶ್ನೆ ಕೇಳಿದ್ದರು. ನಿನ್ನ ಹೆಸರು?
ಹುಡುಗ ಸಿಡಿದು ಹೇಳಿದ -ಆಝಾದ್!(ಅಂದರೆ ಸ್ವತಂತ್ರ)
ಮ್ಯಾಜಿಸ್ಟ್ರೇಟ್ ಎರಡನೆಯ ಪ್ರಶ್ನೆ ಕೇಳಿದರು. ನಿನ್ನ ತಂದೆ ಯಾರು?
ಮತ್ತೆ ಸಿಡಿಲಿನಿಂತ ಉತ್ತರ – ಸ್ವತಂತ್ರತಾ!
ಮೂರನೇ ಪ್ರಶ್ನೆ – ನಿನ್ನ ಮನೆ ಎಲ್ಲಿದೆ?
ಮತ್ತೆ ಗುಂಡು ಹೊಡೆದಂತ ಉತ್ತರ – ಸೆರೆಮನೆ!
ಇದ್ಯಾವುದೂ ಸಿದ್ಧಮಾಡಿ ಬಂದ ಉತ್ತರಗಳು ಅಲ್ಲ! ಎಲ್ಲವೂ ಬ್ರಿಟಿಷ್ ಸಾಮ್ರಾಜ್ಯದ ಎದೆ ನಡುಗಿಸುವ ಧಿಮಾಕಿನ ಉತ್ತರಗಳು!
ಈ ಉತ್ತರಗಳಿಂದ ಕುದ್ದುಹೋದ ನ್ಯಾಯಾಧೀಶರು ಅವನ ವಯಸ್ಸನ್ನು ಕೂಡ ಲೆಕ್ಕಿಸದೆ ಅವನಿಗೆ ಆ ಕಾಲದಲ್ಲಿ ಕ್ರೂರ ಶಿಕ್ಷೆ ಎಂದೇ ಪರಿಗಣಿಸಲ್ಪಟ್ಟ 15 ಚಡಿ ಏಟಿನ ಶಿಕ್ಷೆಯನ್ನು ವಿಧಿಸಿ ಎದ್ದುಹೋದರು!
ಮರುದಿನ ಅದೇ ಹುಡುಗನನ್ನು ಬರೇ ಕೌಪೀನದಲ್ಲಿ ನಿಲ್ಲಿಸಿ ಅತ್ಯಂತ ಬಲಿಷ್ಠವಾದ ಒಬ್ಬ ಆಳಿನ ಕೈಯಲ್ಲಿ ಹರಿತವಾದ ಅಲಗು ಹೊಂದಿದ್ದ ಚಾಟಿ ಕೊಟ್ಟು ಹದಿನೈದು ಏಟುಗಳನ್ನು ಹೊಡೆಸಲಾಯಿತು. ರಕ್ತ ಛಿಲ್ಲೆಂದು ಚಿಮ್ಮಿತ್ತು. ಚರ್ಮ ಕಿತ್ತು ಬಂದಿತ್ತು. ಹುಡುಗ ಪ್ರತೀ ಏಟಿಗೂ ವಂದೇ ಮಾತರಮ್, ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತ ಎಲ್ಲ ಏಟುಗಳನ್ನು ಸಹಿಸಿಕೊಂಡ!
ಜೈಲಿಂದ ಬಿಡುಗಡೆ ಆಗಿ ಹೊರ ಬಂದ ನಂತರ ಇನ್ನು ಯಾವತ್ತೂ ಬ್ರಿಟಿಷ್ ಪೊಲೀಸರ ಕೈಗೆ ಸಿಕ್ಕಿ ಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ!
ಮೈ ಆಜಾದ್ ಹೂಂ. ಆಜಾದ್ ಹೀ ರಹೂಂಗಾ! ಇದು ಅವನು ಮಾಡಿದ ಪ್ರತಿಜ್ಞೆ.
ಮುಂದೆ 10 ವರ್ಷಗಳ ಕಾಲ ಆತ ತನ್ನ ಕ್ರಾಂತಿಕಾರಿಗಳ ಸೈನ್ಯ ಕಟ್ಟಿಕೊಂಡು ಬ್ರಿಟಿಷ್ ಸರಕಾರವನ್ನು ಅಕ್ಷರಶಃ ನಡುಗಿಸಿದ್ದ. ಭಗತ್ ಸಿಂಗ್ ಅಂತವರಿಗೆ ಪ್ರೇರಣೆ ಕೊಟ್ಟ. ಆತನಿಗೆ ಹಿಂಸೆಯಿಂದ ಮಾತ್ರ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂಬ ಬಲವಾದ ನಂಬಿಕೆ ಇತ್ತು. ಆತನ ಕ್ರಾಂತಿಕಾರಕ ಚಟುವಟಿಕೆಗಳ ಬಗ್ಗೆ ನಾನಿಂದು ಬರೆಯಲು ಹೋಗುವುದಿಲ್ಲ.
ಮುಂದೆ ಆ ಅಗ್ನಿಪರೀಕ್ಷೆಯ ದಿನ ಬಂದೇ ಬಿಟ್ಟಿತು!
ಫೆಬ್ರುವರಿ 27, 1931! ಆ ಕ್ರಾಂತಿಕಾರಿ ತನ್ನ ಸಹವರ್ತಿಯ ಜೊತೆಗೆ ಅಲಹಾಬಾದನ ಆಲ್ಫ್ರೆಡ್ ಪಾರ್ಕಿನಲ್ಲಿ ರಹಸ್ಯವಾಗಿ ಮಾತನಾಡುತ್ತಿದ್ದಾಗ ಪೊಲೀಸರಿಗೆ ಸೂಚನೆ ಹೋಯಿತು. ಕೆಲವೇ ಕ್ಷಣದಲ್ಲಿ ಪೊಲೀಸರು ಪಾರ್ಕಿಗೆ ಬಂದು ನಾಲ್ಕು ದಿಕ್ಕುಗಳಲ್ಲಿ ಸುತ್ತುವರೆದರು. ತುಂಬಾ ಹೊತ್ತಿನವರೆಗೆ ಭಾರೀ ಗುಂಡಿನ ಚಕಮಕಿ ನಡೆಯಿತು. ಶೂಟೌಟ್ ಸದ್ದಿಗೆ ಪಾರ್ಕ್ ನಡುಗಿ ಹೋಯಿತು. ಇನ್ನೇನು ಪೊಲೀಸರ ಕೈ ಮೇಲಾಗಿ ಆತನನ್ನು ಅರೆಸ್ಟ್ ಮಾಡಲು ಸಮೀಪ ಬಂದ ಹಾಗೆ ಏಕಾಂಗಿಯಾಗಿ ಹೋರಾಡುತ್ತಿದ್ದ ಆ ಕ್ರಾಂತಿ ಸಿಂಹ ತನ್ನ ಪಿಸ್ತೂಲಿನ ಕೊನೆಯ ಗುಂಡು ತನ್ನ ಹಣೆಯನ್ನು ಸೀಳಿಕೊಂಡು ಹೋಗುವ ಹಾಗೆ ತಾನೇ ಶೂಟ್ ಮಾಡಿಕೊಂಡು ತನ್ನ ಪ್ರಾಣವನ್ನು ಕಳೆದುಕೊಂಡ!
ಬ್ರಿಟಿಷ್ ಪೊಲೀಸರ ಕೈಗೆ ತಾನು ಯಾವಾಗಲೂ ಸೆರೆ ಆಗಲಾರೆ ಎಂದು ತನ್ನ ಹದಿನೈದನೇ ವರ್ಷದಲ್ಲಿ ಮಾಡಿದ್ದ ಪ್ರತಿಜ್ಞೆಯನ್ನು ಆತ ಸಾವಿನಲ್ಲಿಯೂ ಉಳಿಸಿಕೊಂಡಿದ್ದ! ಸಾಯುವಾಗ ಆತನ ವಯಸ್ಸು ಕೇವಲ 25!
ಆತನ ಹೆಸರು ಚಂದ್ರಶೇಖರ್ ಆಜಾದ್! ಭಾರತ ಸ್ವಾತಂತ್ರ್ಯ ಪಡೆದ ನಂತರ ಆ ಪಾರ್ಕನ್ನು ‘ಆಜಾದ್ ಪಾರ್ಕ್’ ಎಂದು ಮರು ನಾಮಕರಣ ಮಾಡಲಾಗಿದೆ. ನಾನು 1999ರ ಒಂದು ಮುಂಜಾನೆ ಆ ಪಾರ್ಕಿನ ಆಜಾದ್ ಪ್ರತಿಮೆಯ ಎದುರು ನಿಂತು ಕಣ್ಣೀರು ಸುರಿಸಿ ಹಿಂದೆ ಬಂದಿದ್ದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆತ ಡೆತ್ ಬೆಡ್ ಮೇಲೆ ಮಲಗಿ ಕೂಡ ಗಣಿತದ ಕನಸು ಬರೆದಿದ್ದ!