ಮಹಾವಿಷ್ಣುವಿನ ಆರನೇ ಅವತಾರವಾಗಿ ಮೂಡಿಬಂದವರು ಪರಶುರಾಮರು. ಮಹಾ ಶಕ್ತಿಶಾಲಿ ಆಗಿ ತನ್ನ ತಂದೆ ಜಮದಗ್ನಿಯಿಂದ ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಗಳನ್ನು ಕಲಿತವರು ಅವರು. 21 ಬಾರಿ ಜಗತ್ತನ್ನು ಸುತ್ತಿ ಸರ್ವಾಧಿಕಾರಿ ಕ್ಷತ್ರಿಯರನ್ನು ಕತ್ತರಿಸಿ ಭೂಮಿಯ ಭಾರವನ್ನು ಇಳಿಸಿದವರು. ಕೊನೆಗೆ ತನಗೆ ದೊರೆತ ಅಪಾರ ಭೂಭಾಗವನ್ನು ಕಶ್ಯಪ ಮುನಿಗೆ ಧಾರೆಯೆರೆದು ತನ್ನ ಪಾಪದ ಹೊರೆಯನ್ನು ಕಳೆದುಕೊಳ್ಳುತ್ತಾರೆ. ಆಮೇಲೆ ಸಮುದ್ರರಾಜನ ಅನುಮತಿ ಪಡೆದು ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದು ತುಳುನಾಡನ್ನು ಸೃಷ್ಟಿಸಿದರು ಎನ್ನುವುದು ಪೌರಾಣಿಕ ನಂಬಿಕೆ. ತುಳುನಾಡಿನ ಜನರ ಕೃತಜ್ಞತೆಯ ಪ್ರತೀಕವಾಗಿ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಉಮಿಕ್ಕಳ ಬೆಟ್ಟದಲ್ಲಿ ಅತ್ಯದ್ಭುತವಾದ ‘ಪರಶುರಾಮ ಥೀಮ್ ಪಾರ್ಕ್’ ಸೃಷ್ಟಿಸಲಾಗಿದೆ.
ಬೈಲೂರಿನ ಉಮಿಕ್ಕಳ ಬೆಟ್ಟ ಆಯ್ಕೆ ಯಾಕೆ?
ಸಮುದ್ರ ಮಟ್ಟದಿಂದ 500 ಮೀಟರ್ ಎತ್ತರದಲ್ಲಿ ಇರುವ ಈ ಬೈಲೂರಿನ ಉಮಿಕ್ಕಳ ಬೆಟ್ಟವು ಅತ್ಯಂತ ನಯನ ಮನೋಹರವಾದ ಪ್ರಕೃತಿಯನ್ನು ಹೊಂದಿದೆ. ಎತ್ತರಕ್ಕೆ ಏರುತ್ತ ಹೋದಂತೆ ಸಹ್ಯಾದ್ರಿಯ ಪರ್ವತದ ಶ್ರೇಣಿಯ ಹಸಿರು ಸೌಂದರ್ಯವು ಕಣ್ಣಿಗೆ ರಾಚುತ್ತದೆ. ಬೀಸಿ ಬರುವ ತಂಗಾಳಿಯು ಸ್ವರ್ಗದ ಅನುಭವ ನೀಡುತ್ತದೆ. ಆಧ್ಯಾತ್ಮ ಸ್ಪರ್ಶ ಇರುವವರಿಗೆ ಅಲ್ಲಿ ಗುರುತ್ವ ಶಕ್ತಿಯು ಅನುಭವ ಆಗುತ್ತದೆ. ಅಲ್ಲಿ ಪೂರ್ವಾಭಿಮುಖವಾಗಿ ನಿಂತರೆ ಅರ್ಧ ಕಾರ್ಕಳದ ನಗರವು ನಮಗೆ ಗೋಚರ ಆಗುತ್ತದೆ. ಅಂತಹ ಚುಂಬಕ ಸ್ಥಳವನ್ನು ಪರಶುರಾಮ ಥೀಮ್ ಪಾರ್ಕ್‌ಗಾಗಿ ಆರಿಸಿದ್ದಾರೆ ಕಾರ್ಕಳದ ಶಾಸಕರೂ, ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆದ ವಿ. ಸುನೀಲ್ ಕುಮಾರ್ ಅವರು.
ಏನುಂಟು ಪರಶುರಾಮ ಥೀಮ್ ಪಾರ್ಕ್‌ನಲ್ಲಿ?
ಆ ಗುಡ್ಡದ ಮೇಲೆ 33 ಅಡಿ ಎತ್ತರದ ಪರಶುರಾಮರ ಕಂಚಿನ ಪ್ರತಿಮೆಯು ಈಗಾಗಲೇ ತಲೆಯೆತ್ತಿ ನಿಂತಿದೆ. ಉತ್ತರಕನ್ನಡದ ಹೊನ್ನಾವರದ ಚತುರ ಶಿಲ್ಪಿಗಳಿಂದ ಈ ಪ್ರತಿಮೆಯು ಪೂರ್ತಿ ಆಗಿದ್ದು ಅತ್ಯಂತ ಸುಂದರವಾಗಿದೆ. ಅದರ ಮುನ್ನೆಲೆಗೆ ಒಂದು ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಒಂದು ಬಯಲು ರಂಗಮಂದಿರವು ನಿರ್ಮಾಣ ಆಗಿದೆ. ಬಹಳ ಸುಂದರವಾದ ಭಜನಾ ಮಂದಿರವು ಮುಕ್ತಾಯ ಆಗಿದ್ದು ಆಧ್ಯಾತ್ಮದ ವಾತಾವರಣ ನಿರ್ಮಿಸಿದೆ. ಅದರ ಪಕ್ಕದಲ್ಲಿ ಬಹಳ ಸುಂದರವಾದ ಪರಶುರಾಮರ ಜೀವನದ ದೃಶ್ಯಗಳು ಇರುವ ಮ್ಯೂಸಿಯಂ ಇದೆ. ಕಲಾಪ್ರದರ್ಶನದ ಗ್ಯಾಲರಿ ಕೂಡ ಸುಂದರವಾಗಿದೆ. ಹಸಿವು ಮತ್ತು ದಾಹಗಳನ್ನು ತಣಿಸುವ ರೆಸ್ಟೋರೆಂಟ್ ಇದೆ.
ಸಚಿವರು ಹೇಳುವ ಪ್ರಕಾರ ಇದು ಆರಂಭ ಮಾತ್ರ! ಮುಂದೆ ಈ ಬೆಟ್ಟದ ಮೇಲೆ ಇನ್ನಷ್ಟು ಆಕರ್ಷಣೆಗಳನ್ನು ಸೃಷ್ಟಿಸುವ ಯೋಜನೆಗಳು ಇವೆ. ಒಂದು ಕಡೆ ಪುರಾಣ ಪುರುಷನ ನೆನಪು, ಮತ್ತೊಂದು ಕಡೆ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಎರಡೂ ಸೇರಿ ಮುಂದೆ ಪರಶುರಾಮ ಥೀಮ್ ಪಾರ್ಕ್ ಮತ್ತು ಸೃಷ್ಟಿಕರ್ತನ ಪ್ರತಿಮೆಗಳು ಕಾರ್ಕಳದ ಸೌಂದರ್ಯಕ್ಕೆ ಮತ್ತೊಂದು ಗರಿಯಾಗಲಿವೆ. ಈ ಥೀಮ್ ಪಾರ್ಕಗೆ ಸರಕಾರದ ವಿವಿಧ ಅನುದಾನಗಳಿಂದ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ಸ್ವರ್ಣ ಕಾರ್ಕಳವು ಈಗಲೇ ನಳನಳಿಸುತ್ತಿದೆ!
ಸಚಿವ ಸುನಿಲ್ ಕುಮಾರ್ ಅವರ ಸ್ವರ್ಣ ಕಾರ್ಕಳದ ಕನಸು ಇಲ್ಲಿ ಮತ್ತೆ ಎದ್ದುಬಂದಿದೆ. ಶತಮಾನಗಳಷ್ಟು ಇತಿಹಾಸ ಇರುವ ‘ಪಡುತಿರುಪತಿ ‘ ಎಂದು ಕೀರ್ತಿ ಪಡೆದ ಶ್ರೀ ವೆಂಕಟರಮಣ ದೇವಾಲಯ ಇರುವ ಕಾರ್ಕಳದಲ್ಲಿ, ಜಗತ್ತಿನ ಎರಡನೇ ಅತೀ ಎತ್ತರದ ಗೊಮ್ಮಟೇಶ್ವರ ಮೂರ್ತಿ, ಅತ್ತೂರು ಸೈಂಟ್ ಲಾರೆನ್ಸ್ ಶ್ರೈನ್, ಪಾರಂಪರಿಕ ಚತುರ್ಮುಖ ಬಸದಿ, ಭೈರವರಸರ ಕಾಲದ ಆನೆಕೆರೆ, ಸಿಗಡಿಕೆರೆ, ಹಿರಿಯಂಗಡಿಯ ಏಕಶಿಲಾ ಮಾನಸ್ತಂಭ, ಹೆಬ್ಬೇರಿಯ ನಿಸರ್ಗ ಧಾಮ, ಸಾಲು ಮರದ ತಿಮ್ಮಕ್ಕನ ಹೆಸರಿನ ಉದ್ಯಾನವನ ಮತ್ತು ಧುಮ್ಮಿಕ್ಕುವ ಜಲಪಾತಗಳು, ಕಾರ್ಕಳದ 18 ಬಸದಿಗಳು, ವರಂಗದ ಆಕರ್ಷಕ ಕೆರೆ ಬಸದಿ, ನಂದಳಿಕೆಯ ಚಾವಡಿ ಅರಮನೆ……. ಹೀಗೆ ಎಲ್ಲರನ್ನೂ ಸೂಜಿಗಲ್ಲಿನ ಹಾಗೆ ಸೆಳೆಯುವ ತಾಣಗಳು ಈಗಾಗಲೇ ಇಲ್ಲಿವೆ. ದಶಕದ ಹಿಂದೆ ನಿರ್ಮಾಣವಾದ ಕೋಟಿ ಚೆನ್ನಯ ಥೀಮ್ ಪಾರ್ಕ್ ಇಲ್ಲೇ ಇದೆ. ಸಚಿವರ ಪ್ರಯತ್ನದ ಫಲವಾಗಿ ಕಾರ್ಕಳಕ್ಕೆ ಬಂದಿರುವ ‘ಯಕ್ಷ ರಂಗಾಯಣ’ವು ಈಗಲೇ ಭರವಸೆ ಮೂಡಿಸಿದೆ.
ಇದಕ್ಕೆಲ್ಲ ಶೋಭಾಯಮಾನವಾದ ಪರಶುರಾಮ ಥೀಮ್ ಪಾರ್ಕ್ ಇಂದು ಲೋಕಾರ್ಪಣೆ ಆಗುತ್ತಿದೆ. 15 ಕಿಲೋಮೀಟರ್ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಅತ್ಯಾಕರ್ಷಕ ಬೆಳಕಿನ ಅಲಂಕಾರ ಮಾಡಲಾಗಿದ್ದು ಜನರ ಮನವನ್ನು ಗೆದ್ದಿದೆ.
ಇನ್ನು ನಾಲ್ಕು ದಿನ ಕಾರ್ಕಳ ನಿದ್ದೆ ಮಾಡುವುದಿಲ್ಲ!
ಜನವರಿ 2೭ರಿಂದ 30ರವರೆಗಿನ ದಿನಗಳು ಕಾರ್ಕಳದ ಪಾಲಿಗೆ ಸ್ಮರಣೀಯ ಆಗಲಿವೆ. ಬೈಲೂರು ಜೂನಿಯರ್ ಕಾಲೇಜು ಮೈದಾನದಲ್ಲಿ ಬಹು ದೊಡ್ಡ ವೇದಿಕೆಯು ನಿರ್ಮಾಣವಾಗಿದೆ. ವಸ್ತು ಪ್ರದರ್ಶನ, ಕಲಾ ಪ್ರದರ್ಶನ, ಆಹಾರ ಮೇಳ, ಬಿಡುವಿಲ್ಲದ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆ ಏರಲಿವೆ! ಕಳೆದ ವರ್ಷ ಇದೇ ಹೊತ್ತಲ್ಲಿ ಕಾರ್ಕಳ ಉತ್ಸವದ ನೆಪದಲ್ಲಿ ಸಂತಸದ ಕಡಲಲ್ಲಿ ಮಿಂದೆದ್ದ ಕರಿಯಕಲ್ಲಿನ ಊರು ಇನ್ನೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ. ಇನ್ನು ನಾಲ್ಕು ದಿನ ಇಡೀ ನನ್ನ ಕಾರ್ಕಳ ತಾಲೂಕು ಮಲಗುವುದಿಲ್ಲ! ಸಚಿವ ಸುನಿಲ್ ಕುಮಾರ್ ಅವರ ಕರ್ತೃತ್ವ ಶಕ್ತಿ ಹಾಗೂ ನಾಯಕತ್ವದ ಉತ್ಸಾಹಕ್ಕೆ ಒಂದು ಅಭಿನಂದನೆ ಹೇಳೋಣ ಅಲ್ಲವೇ?
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ವಿರಾಲಿ ಮೋದಿಯ ಎರಡೂ ಕಾಲುಗಳಲ್ಲಿ ಬಲವಿಲ್ಲ, ಆದರೆ ಆಕೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಾಳೆ!