Site icon Vistara News

ರಾಜ ಮಾರ್ಗ ಅಂಕಣ : ಶೂನ್ಯ ಬಂಡವಾಳದಿಂದ DOSA PLAZA ಸಾಮ್ರಾಜ್ಯ ಕಟ್ಟಿದ ಪ್ರೇಮ್ ಗಣಪತಿ

Dosa plaza Prem Ganapati

1990ರ ಒಂದು ತೀವ್ರ ಚಳಿಗಾಲದ ಮುಂಜಾನೆ. ಮುಂಬೈಯ ನಿಬಿಡ ಬಾಂದ್ರಾ ರೈಲು ನಿಲ್ದಾಣದಲ್ಲಿ ಒಬ್ಬ 17 ವರ್ಷದ ಹುಡುಗ ಅಳುತ್ತಾ ನಿಂತಿದ್ದ. ಅವನು ಹಾಕಿಕೊಂಡಿದ್ದ ಬಟ್ಟೆ ಮತ್ತು ಕಿಸೆಯಲ್ಲಿದ್ದ 200 ರೂಪಾಯಿ ಬಿಟ್ಟರೆ ಅವನ ಹತ್ತಿರ ಇದ್ದ ಎಲ್ಲವನ್ನೂ ಅವನ ಗೆಳೆಯ ಕದ್ದು ಓಡಿ ಹೋಗಿದ್ದ! ಈ ಹುಡುಗನಿಗೆ ತಮಿಳು ಬಿಟ್ಟರೆ ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ! ಸರಿಯಾಗಿ 23 ವರ್ಷಗಳ ನಂತರ ಅದೇ ಹುಡುಗ ಜಗತ್ತಿನಾದ್ಯಂತ ದೋಸೆಗಳ ಸಾಮ್ರಾಜ್ಯವನ್ನೇ ಕಟ್ಟಿದ್ದಾನೆ! 30 ಕೋಟಿ ಬೆಲೆ ಬಾಳುವ ಉದ್ಯಮವನ್ನು ಆರಂಭ ಮಾಡಿ ಆಗಿದೆ! ಜಗತ್ತಿನ ಏಳು ರಾಷ್ಟ್ರಗಳಲ್ಲಿ ಉದ್ಯಮವನ್ನು ವಿಸ್ತಾರ ಮಾಡಿದ್ದಾನೆ. ಅದು ‘DOSA PlAZA’ ಬೆಳೆದ ರೀತಿ! ಅದನ್ನು ಕಟ್ಟಿದವರು ಪ್ರೇಮ್ ಗಣಪತಿ (Prem Ganapati) ಎಂಬ ತಮಿಳು ಹುಡುಗ. ಅದೊಂದು ನಿಜವಾಗಿ ರೋಚಕ ಇತಿಹಾಸ (ರಾಜ ಮಾರ್ಗ ಅಂಕಣ).

ತೂತುಕುಡಿಯಿಂದ ಮುಂಬೈಯ ಬಾಂದ್ರಾದವರೆಗೆ

ಪ್ರೇಮ್ ಗಣಪತಿ ಅವರು ಹುಟ್ಟಿದ್ದು ತಮಿಳುನಾಡಿನ ತೂತುಕುಡಿಯ ನಾಗಲಾಪುರಂ ಎಂಬ ಹಳ್ಳಿಯಲ್ಲಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅವನಿಗೆ ಭರ್ತಿ ಏಳು ಜನ ಒಡಹುಟ್ಟಿದವರು. ಅಪ್ಪ ಅಮ್ಮನಿಗೆ ಒಂದು ತುತ್ತಿನ ಊಟವನ್ನು ಜೋಡಿಸುವುದು ಕೂಡ ಕಷ್ಟವೇ ಆಯಿತು. ಪ್ರೇಮ್ ಗಣಪತಿ ಕಲಿಯುವುದರಲ್ಲಿ ಬಹಳ ಬುದ್ಧಿವಂತ ಆಗಿದ್ದರು.

ಆದರೆ ಮನೆಯವರ ಕಷ್ಟವನ್ನು ನೋಡಲು ಸಾಧ್ಯವಾಗದೆ ಎಸ್ಸೆಸ್ಸೆಲ್ಸಿ ಪಾಸಾದ ಕೂಡಲೇ ಚೆನ್ನೈಯ ದಾರಿ ಹಿಡಿದರು. ಅಲ್ಲಿ ಮಾಡದಿರುವ ವೃತ್ತಿಗಳಿಲ್ಲ. ಪ್ರತೀ ತಿಂಗಳಿಗೆ 250 ರೂಪಾಯಿ ಸಂಪಾದನೆ ಆಗುತಿತ್ತು. ತಾನು ಅರೆಹೊಟ್ಟೆ ಉಂಡು ಅಷ್ಟೂ ಹಣವನ್ನು ಅವರು ಮನೆಯ ಖರ್ಚಿಗೆ ಕಳುಹಿಸಿಕೊಡುತ್ತಿದ್ದರು.

ಪ್ರೇಮ್‌ ಗಣಪತಿ

ಚಾಲಾಕಿ ಗೆಳೆಯನು ಕೈ ಕೊಟ್ಟ!

ಅದೇ ಹೊತ್ತಿಗೆ ಅವರ ದೌರ್ಭಾಗ್ಯ ಅಂದ ಹಾಗೆ ಒಬ್ಬ ಮುಂಬೈಯ ಚಾಲಾಕಿ ಗೆಳೆಯನು ದೊರೆತಿದ್ದ. ಗಣಪತಿಯಲ್ಲಿ ಮುಂಬೈಯ ಬಣ್ಣ ಬಣ್ಣದ ಕನಸುಗಳನ್ನು ಬಿತ್ತಿದನು. ಅಲ್ಲಿ ತಿಂಗಳಿಗೆ 1200 ರೂ. ಸಂಬಳದ ಕೆಲಸವನ್ನು ಕೊಡಿಸುವುದಾಗಿ ನಂಬಿಸಿ ಗಣಪತಿಯನ್ನು ಮುಂಬೈಗೆ ಕರೆದುಕೊಂಡು ಹೋದನು. ಬಾಂದ್ರಾ ಸ್ಟೇಷನ್ನಿನಲ್ಲಿ ಇವನನ್ನು ಮಲಗಿಸಿ ರಾತ್ರಿ ಎಲ್ಲವನ್ನೂ ಕದ್ದು ಓಡಿ ಹೋದ! ಪ್ರೇಮ್ ಬೆಳಗ್ಗೆ ಅದೇ ಸ್ಟೇಷನ್ನಿನಲ್ಲಿ ಅಳುತ್ತಾ ನಿಂತಿದ್ದರು. ಆಗ ಅವರ ವಯಸ್ಸು ಕೇವಲ 17. ತಮಿಳು ಬಿಟ್ಟರೆ ಬೇರೆ ಯಾವ ಭಾಷೆಯೂ ಗೊತ್ತಿರಲಿಲ್ಲ. ಮುಂಬೈಯಲ್ಲಿ ಆತನಿಗೆ ಯಾವ ಸಂಬಂಧಿಕರೂ ಇರಲಿಲ್ಲ. ಹಿಂದೆ ಹೋಗುವ ಎಲ್ಲ ಬಾಗಿಲು ಮುಚ್ಚಿದ್ದವು.

ಅವನ ಕಷ್ಟವನ್ನು ನೋಡಿ ತಮಿಳು ಗೊತ್ತಿದ್ದ ಒಬ್ಬರು ಅರ್ಚಕರು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬಾ ಊಟ ಹಾಕಿದರು. ನಂತರ ಸ್ವಲ್ಪ ಹಣ ಒಟ್ಟು ಮಾಡಿ ಕೊಟ್ಟು ಚೆನ್ನೈಗೆ ಟಿಕೆಟ್ ಮಾಡಿ ಕೊಡುತ್ತೇನೆ, ಹಿಂದೆ ಹೋಗು ಅಂದರು.

ದೋಸಾ ಪ್ಲಾಜಾದ ಗರಿಗರಿ ದೋಸೆ

ಆಗ ಪ್ರೇಮ್ ಹೇಳಿದ ಮಾತು ಕೇಳಿ….

ಆಗ ಕೇವಲ 17 ವರ್ಷದ ಪ್ರೇಮ್ ಹೇಳಿದ ಮಾತುಗಳು ಅದ್ಭುತವಾಗಿ ಇದ್ದವು. “ನಾನು ಹಿಂದೆ ಹೋಗಿ ನನ್ನ ಸೋತ ಮುಖವನ್ನು ಮನೆಯವರಿಗೆ ತೋರಿಸುವುದಿಲ್ಲ. ಮನೆಯಲ್ಲಿ ತುಂಬಾ ಕಷ್ಟ ಇದೆ. ಸ್ವಂತ ಕಾಲ ಮೇಲೆ ನಿಲ್ಲದೆ ಊರಿಗೆ ಹೋಗುವುದಿಲ್ಲ. ನಿಮಗೆ ಸಾಧ್ಯವಾದರೆ ನನಗೊಂದು ಉದ್ಯೋಗ ಕೊಡಿಸಿ” ಎಂದು ವಿನಂತಿ ಮಾಡಿದ. ಒಪ್ಪಿದ ಆ ಅರ್ಚಕರು ಅವನನ್ನು ಮಾಹೀಮ್ ಬೇಕರಿಗೆ ಕರೆದುಕೊಂಡು ಹೋಗಿ ಅಲ್ಲಿ ಪಾತ್ರೆ ತೊಳೆಯುವ ಕೆಲಸವನ್ನು ಕೊಡಿಸಿದರು. ತಿಂಗಳಿಗೆ 150 ರೂ. ಸಂಬಳ. ಬಿಡುವಿನ ಹೊತ್ತಲ್ಲಿ ಅದೇ ಕೆಲಸವನ್ನು ಬೇರೆ ಎರಡು ಹೋಟೆಲುಗಳಲ್ಲಿ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡಿದರು. ಆಗಲೂ ಪ್ರತೀ ತಿಂಗಳು ಮನೆಗೆ ಹಣ ಕಳಿಸುವುದನ್ನು ಮರೆಯಲಿಲ್ಲ.

ತಳ್ಳುಗಾಡಿಯ ವ್ಯಾಪಾರ!

ಎರಡು ವರ್ಷ ಪ್ರೇಮ್ ಬಹಳ ಚಂದವಾಗಿ ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಕಲಿತರು. ಆಗ ಬಂದಿತು ತಳ್ಳುಗಾಡಿಯ ಕನಸು! ಬೇಕರಿಯ ಕೆಲಸ ಬಿಟ್ಟರು.

150 ರೂಪಾಯಿ ತಿಂಗಳ ಬಾಡಿಗೆಯ ತಳ್ಳುಗಾಡಿಯನ್ನು ಪಡೆದು, 1,000 ರೂ.ವೆಚ್ಚದಲ್ಲಿ ಪಾತ್ರೆ ಮತ್ತು ಸ್ಟೋವ್ ಖರೀದಿ ಮಾಡಿದರು. ಚಂದವಾಗಿ ಇಡ್ಲಿ, ದೋಸೆ ಮಾರುತ್ತಾ ವಾಶಿ ರೈಲ್ವೆ ಸ್ಟೇಶನ್ ಹೊರಗೆ ಒಂದಿಷ್ಟು ವ್ಯಾಪಾರ ಮಾಡಿದರು. ಅವರ ಗಾಡಿಗೆ ಲೈಸೆನ್ಸ್ ಇರಲಿಲ್ಲ. ಅದರಿಂದ ಪೊಲೀಸರು ಆಗಾಗ ಅವರ ಗಾಡಿಯನ್ನು ಸೀಜ್ ಮಾಡಿ ಸ್ಟೇಷನ್ನಿಗೆ ಹೋಗುತ್ತಿದ್ದರು. ಹಲವು ಬಾರಿ ದಂಡ ಕಟ್ಟಿ ಅಥವಾ ಲಂಚ ಕೊಟ್ಟು ಬಿಡಿಸಿ ಬರುವಾಗ ಸುಸ್ತೋ ಸುಸ್ತು! ಆದರೆ ಎರಡು ವರ್ಷ ಆದಾಗ 50,000 ರೂ. ಆತನ ಕಿಸೆಯಲ್ಲಿತ್ತು ಮತ್ತು ಗ್ರಾಹಕರ ಸಂತೃಪ್ತಿಯು ಜೊತೆಗಿತ್ತು.

ಜಯನಗರದಲ್ಲಿರುವ ದೋಸಾ ಪ್ಲಾಜಾ

ಆಗ ಶುರುವಾಯಿತು ಸ್ವಂತ ಕ್ಯಾಂಟೀನ್ ಕನಸು!

ಮುಂದೆ ವಾಶಿಯ ಜನ ನಿಬಿಡ ರೈಲು ನಿಲ್ದಾಣದ ಮುಂದೆ 50,000 ರೂಪಾಯಿ ಮುಂಗಡ ಮತ್ತು 5,000 ರೂ. ಬಾಡಿಗೆಯ ಒಂದು ಜಾಗವನ್ನು ಪಡೆದು ಕ್ಯಾಂಟೀನ್ ಆರಂಭ ಮಾಡಿದರು. ಅಲ್ಲಿ ಹೆಚ್ಚು ಕಾಲೇಜು ಮಕ್ಕಳು ತಿಂಡಿ ತಿನ್ನಲು ಬರುತ್ತಿದ್ದರು. ಆಗ ಅವರ ಭಿನ್ನ ಭಿನ್ನವಾದ ಅಭಿರುಚಿಗಳನ್ನು ಅಧ್ಯಯನ ಮಾಡಿದರು. ಹಲವು ವಿಧವಾದ ತಿಂಡಿಗಳನ್ನು ಮಾಡಿದರೆ ಗೆಲುವು ಸಾಧ್ಯವಿಲ್ಲ ಎಂದು ಅರಿತರು. ದೋಸೆಗಳ ಸಾಮ್ರಾಜ್ಯ ಕಟ್ಟಲು ಸಂಕಲ್ಪ ಮಾಡಿದ್ದೇ ಆಗ! 10-20 ವಿಧ ವಿಧವಾದ ದೋಸೆಗಳನ್ನು ಇಂಟರ್ನೆಟ್ ನೋಡಿ ಮಾಡಲು ಕಲಿತರು. ಚಟ್ನಿ ಮತ್ತು ಸಾಂಬಾರ್ ಕೂಡ ರುಚಿ ರುಚಿಯಾಗಿ ಮಾಡಲು ಕಲಿತರು. ಈ ಪ್ರಯೋಗವು ಗ್ರಾಹಕರಿಗೆ ಇಷ್ಟವಾಯಿತು. ಈಗ ಆರಂಭವಾದದ್ದು ಕಾರ್ಪೊರೇಟ್ ಜಗತ್ತಿನ ಕನಸು! ‘ದೋಸಾ ಪ್ಲಾಜಾ’ ಎಂಬ ಬ್ರಾಂಡ್ ನೇಮ್ ಆಗಲೇ ಸಿದ್ಧವಾಗಿತ್ತು.

ದೋಸಾ ಪ್ಲಾಜಾ ದೊಡ್ಡ ಬ್ರಾಂಡ್ ಆಯಿತು

ಮುಂಬೈ ಮಹಾನಗರದ ಬೃಹತ್ ಮಾಲ್‌ಗಳಲ್ಲಿ ತನ್ನ ವಿಶೇಷವಾದ ಬ್ರಾಂಡ್ ರೆಸ್ಟೋರೆಂಟ್ ಶುರು ಮಾಡಬೇಕು ಎಂಬ ತೀವ್ರ ಕನಸು ಟ್ರಿಗರ್ ಆಗಿತ್ತು. ಅದಕ್ಕಾಗಿ ಹಲವು ಕಡೆ ವಿಚಾರಿಸಿದರು.

ಆಗ ಎಲ್ಲಾ ಮಾಲ್‌ಗಳಲ್ಲಿ ಅಮೆರಿಕಾದ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ಗಳು ದೊಡ್ಡ ಸದ್ದು ಮಾಡುತ್ತಿದ್ದವು. ಅಪ್ಪಟ ಭಾರತದ್ದೇ ಆದ ಒಂದು ಬ್ರಾಂಡ್ ಅವರೊಂದಿಗೆ ಸ್ಪರ್ಧಿಸುವುದು ಸುಲಭದ ಮಾತಾಗಿರಲಿಲ್ಲ. ಕೊನೆಗೆ ವಾಷಿಯ ‘ಸೆಂಟರ್ ಒನ್ʼ ಮಾಲ್‌ನಲ್ಲಿ ಭಾರತದ ಮೊದಲ ‘ದೋಸಾ ಪ್ಲಾಜಾ’ ಉದ್ಘಾಟನೆ ಆಯಿತು!

Prem Ganapati Dosa Plaza Brand

ಅದು ಕೇವಲ ದೋಸೆಗಳದ್ದೇ ಸಾಮ್ರಾಜ್ಯ!

Sezwaan Dosa, Spring Roll Dosa, Panneer Chilli Dosa, Mashroom Dosa…. ಹೀಗೆ 107 ವಿಧವಾದ ಕುರು ಕುರು ಶಬ್ದ ಮಾಡುವ ದೋಸೆಗಳು ಅಲ್ಲಿ ಸಿದ್ಧವಾದವು! ಐದು ಜನ ಗೆಳೆಯರು ಸೇರಿ ಒಂದೇ ದೋಸೆಯನ್ನು ಜೊತೆಯಾಗಿ ಸವಿಯುವ ಕಾಂಟಿನೆಂಟಲ್ ದೋಸೆ ಬಹಳ ಜನಪ್ರಿಯ ಆಯಿತು. ಕೆಲವೇ ವರ್ಷಗಳಲ್ಲಿ DOSA PLAZA ಭಾರೀ ಮನ್ನಣೆ ಪಡೆಯಿತು. ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ದೋಸೆಗಳು ಕೆಲವೇ ನಿಮಿಷಗಳಲ್ಲಿ ರೆಡಿ ಆದವು.

ಈಗ ನಮ್ಮ ಮುಂದಿದೆ ಪ್ರೇಮ್ ಗಣಪತಿ ಅವರ ರೋಚಕವಾದ ಯಶೋಗಾಥೆ! ಭಾರತದ ಹನ್ನೊಂದು ರಾಜ್ಯಗಳ 45 ಮಹಾನಗರಗಳಲ್ಲಿ DOSA PLAZA ರೆಸ್ಟುರಾಗಳು ಈಗಲೇ ಯಶಸ್ವಿ ಆಗಿವೆ. ನ್ಯೂಜಿಲ್ಯಾಂಡ್, ದುಬೈ, ಮಸ್ಕತ್, ಯುಎಇ…. ಮೊದಲಾದ ಏಳು ರಾಷ್ಟ್ರಗಳಲ್ಲಿ ಅವರ ದೋಸೆಗಳ ಹೋಟೆಲುಗಳು ಇಂದು ಭಾರೀ ಕೀರ್ತಿಯನ್ನು ಪಡೆದಿವೆ!

ಹೇಗಿದ್ದ ಹೇಗಾದ ಗೊತ್ತಾ?

ಬಾಂದ್ರಾ ಸ್ಟೇಷನ್ನಿನಲ್ಲಿ ಅಸಹಾಯಕತೆಯಿಂದ ಅಳುತ್ತಾ ನಿಂತಿದ್ದ ತಮಿಳು ಹುಡುಗ ಇಂದು ಜಾಗತಿಕ ಬ್ರಾಂಡ್ ಆಗಿದ್ದಾನೆ! ಅವರ ಇಂದಿನ ಬ್ರಾಂಡ್ ವೇಲ್ಯು ಮೂವತ್ತು ಕೋಟಿ ರೂಪಾಯಿಗೂ ಅಧಿಕ ಎಂದು ಮ್ಯಾಗಝಿನ್‌ಗಳು ಬರೆದಿವೆ.

ಇದನ್ನೂ ಓದಿ: ರಾಜ ಮಾರ್ಗ : Doctros day; ಮುಖ್ಯಮಂತ್ರಿ ಆದರೂ ವೈದ್ಯ ಸೇವೆ ಬಿಡದ ಬಿ.ಸಿ ರಾಯ್!

ಭರತವಾಕ್ಯ

‘ಕಠಿಣ ಪರಿಶ್ರಮ, ಗ್ರಾಹಕರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮತ್ತು ಬಹಳ ದೊಡ್ಡ ಕನಸು ಇಂದು ನನ್ನನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಿವೆ’ ಎಂದು ಪ್ರೇಮ್ ಗಣಪತಿ ನಗುನಗುತ್ತ ಹೇಳುತ್ತಾರೆ. ಅವರ ಕಣ್ಣಿನಲ್ಲಿ ಗೆದ್ದ ನಗು ಇದೆ.

Exit mobile version