ಕೆಲವರ ಬದುಕಿನ ಕಥೆಗಳೇ ಸಿನಿಮಾದ ಕಥೆಗಳಿಗಿಂತ ರೋಚಕವಾಗಿರುತ್ತವೆ. ಇಂದು ಹಿಂದಿ ಸಿನಿಮಾ ರಂಗದಲ್ಲಿ (Hindi cinema) ಸ್ಕ್ರಿಪ್ಟ್ ರೈಟರ್ (Script writer) ಆಗಿ ತನ್ನದೇ ಛಾಪು ಮೂಡಿಸಿರುವ ಶಗುಫ್ತ ರಫೀಕ್ (shagufta rafique) ಅವರ ನೋವಿನ ಬದುಕು, ಅವರು ಕ್ರಮಿಸಿದ ದುರ್ಗಮ ಹಾದಿ, ತುಂಬಾ ಅನೂಹ್ಯ ತಿರುವುಗಳು ಅಚ್ಚರಿ ಮೂಡಿಸುತ್ತವೆ. ಹಾಗೆಯೇ ಮರುಕವನ್ನು ಕೂಡ!
ಓವರ್ ಟು ಶಗುಫ್ತಾ….
“ನನ್ನ ಜೀವನ ತೆರೆದ ಪುಸ್ತಕದ ಹಾಗೆ. ಮುಚ್ಚಿಡಲು ಏನೂ ಇಲ್ಲ . ನನಗೆ ನನ್ನ ಭೂತ ಕಾಲದ ಬಗ್ಗೆ ಯಾವುದೇ ವಿಷಾದ ಇಲ್ಲ” ಎಂದು ಟಿವಿ ಸಂದರ್ಶನದಲ್ಲಿ ಮಾತು ಆರಂಭಿಸಿದ ಶಗುಫ್ತಾ ಹೇಳಿದ್ದನ್ನು ಹಾಗೆಯೇ ದಾಖಲು ಮಾಡುತ್ತ ಹೋಗುತ್ತೇನೆ (ರಾಜ ಮಾರ್ಗ ಅಂಕಣ).
ನನ್ನ ತಂದೆ, ತಾಯಿ ಯಾರು? ನನಗೆ ಇದುವರೆಗೂ ಉತ್ತರ ಸಿಗದ ಪ್ರಶ್ನೆಯಿದು! ನನ್ನನ್ನು ಪ್ರೀತಿಯಿಂದ ಸಾಕಿದ್ದು ಅನ್ವರಿ ಬೇಗಂ ಎಂಬ ಮಾಜಿ ಸಿನಿಮಾ ನಟಿ. ನನ್ನ ಜನ್ಮ ಕೊಟ್ಟ ಅಮ್ಮನಿಗಿಂತ ನನಗೆ ಹೆಚ್ಚು ಪ್ರೀತಿ ಕೊಟ್ಟದ್ದು ಅವರೇ. ಆಕೆಗೆ ಕೋಲ್ಕೊತಾದ ಒಬ್ಬ ಉದ್ಯಮಿಯ ಜೊತೆಗೆ ಸಂಬಂಧವಿತ್ತು. ಆ ದಿನಗಳು ತುಂಬಾ ಚೆನ್ನಾಗಿದ್ದವು. ಶಾಲೆಯಲ್ಲಿ ನನ್ನ ಬೆನ್ನ ಹಿಂದೆ ನನ್ನನ್ನು ‘ಅನೈತಿಕ ಸಂಬಂಧದ ಕೂಸು’ ಎನ್ನುತ್ತಿದ್ದರು. ನನಗೆ ಅದೆಲ್ಲ ಅರ್ಥವಾಗದ ವಯಸ್ಸು ಅದು. ಆದರೆ ಕಲಿಕೆಯಲ್ಲಿ ನಂಗೆ ಆಸಕ್ತಿ ಚಿಗುರಲಿಲ್ಲ.
ಸಿನಿಮಾದಲ್ಲಿ ನಟಿಸುವ ಆಸೆ…
ನಾನು ಸಿನಿಮಾದಲ್ಲಿ ನಟಿಸಬೇಕು ಎಂದು ನನ್ನಮ್ಮನ ಆಸೆ. ನನಗೂ ಅದೇ ಆಸೆ ಇತ್ತು. ಅದಕ್ಕಾಗಿ ನನಗೆ ಡ್ಯಾನ್ಸ್ ಕಲಿಸಿದರು. ಆದರೆ ಒಂದು ದಿನ ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಕೋಲ್ಕೊತಾದ ಉದ್ಯಮಿ ತೀರಿ ಹೋದರು. ನಮ್ಮ ಕುಟುಂಬಕ್ಕೆ ಅವರ ಆಸ್ತಿಯಲ್ಲಿ ಚಿಕ್ಕಾಸೂ ದೊರೆಯಲಿಲ್ಲ. ನಮ್ಮ ಸಣ್ಣ ಕುಟುಂಬ ಬೀದಿಗೆ ಬರುವ ಪ್ರಸಂಗ. ನನ್ನ ಮಲ ಅಣ್ಣ ಮತ್ತು ಅವನ ಹೆಂಡತಿ ಪದೇಪದೆ ‘ನೀನು ನಮ್ಮವಳಲ್ಲ’ ಎಂದು ಚುಚ್ಚಿ ಚುಚ್ಚಿ ಮಾತಾಡುತ್ತಿದ್ದರು. ನನ್ನ ಅಕ್ಕ ಸಯೀದಾ ಖಾನ್ ನನ್ನನ್ನು ಪ್ರೀತಿಯಿಂದ ಅಮ್ಮನ ಹಾಗೆ ನೋಡಿಕೊಳ್ಳುತ್ತಿದ್ದಳು. ಆದರೆ ಅವಳಿಗೆ ಕುಡುಕ ಗಂಡನ ಕಾಟ. ನನ್ನ ಅಮ್ಮ ಮತ್ತು ಕುಟುಂಬಕ್ಕೆ ನಾನು ಆಧಾರವಾಗಬೇಕು ಎನ್ನುವುದು ಮಾತ್ರ ನನಗೆ ಗೊತ್ತಿತ್ತು. ಅದಕ್ಕೆ 12ನೆಯ ವಯಸ್ಸಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡತೊಡಗಿದೆ. ಸ್ವಲ್ಪ ಹಣ ದೊರೆಯುತ್ತಿತ್ತು. 17ನೆಯ ವಯಸ್ಸಿಗೆ ಯಾರೋ ಮದುವೆ ಆಗಲು ಮುಂದೆ ಬಂದ. ನನ್ನ ಮೇಲೆ ದೌರ್ಜನ್ಯ ನಡೆಸಿದ. ನನ್ನ ಸ್ವಾಭಿಮಾನವನ್ನು ಕೆಣಕಿದ. ಎರಡೇ ವರ್ಷಕ್ಕೆ ನಾನು ಅವನನ್ನು ಬಿಟ್ಟು ಹೊರಬಂದೆ. ಹಸಿವು, ಹತಾಶೆ ಮತ್ತು ಅಸಹಾಯಕತೆಗಳು ನನ್ನನ್ನು ಕತ್ತಲೆಯ ದಾರಿಗೆ ಕರೆದುಕೊಂಡು ಹೋದವು.
ಮುಂದೆ ಇದ್ದದ್ದು ಎಲ್ಲವೂ ಕತ್ತಲಿನ ದಾರಿಗಳೇ!
ಮತ್ತೆ ಬಾರ್ ಡ್ಯಾನ್ಸರ್, ಸಿಂಗರ್ ಆಗಿಬಿಟ್ಟೆ. ಸಂಬಂಧಗಳಲ್ಲಿ ನಂಬಿಕೆ ಹೊರಟುಹೋಗಿತ್ತು. ಯಾರ್ಯಾರೋ ಬಂದು ಮೈ ಸವರಿ ಹೋಗುತ್ತಿದ್ದರು. ಆರಂಭದಲ್ಲಿ ಮೈ ಮೇಲೆ ಚೇಳು ಕುಟುಕಿದ ಹಾಗೆ ಆಗುತ್ತಿತ್ತು. ಹಸಿವು ಮತ್ತು ಕಾಣದ ಕೈಗಳು ನನ್ನನ್ನು ವೇಶ್ಯಾವೃತ್ತಿಗೆ ದೂಡಿದವು. ನನ್ನ ಇಚ್ಛೆಗೆ ವಿರುದ್ಧವಾಗಿ ನಾನು ವ್ಯವಸ್ಥೆಯ ಬಲಿಪಶು ಆಗಿ ಬಿಟ್ಟಿದ್ದೆ. ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟ ಹಾಗೆ ಆಗಿತ್ತು. ನನ್ನ ಕುಟುಂಬದ ಭದ್ರತೆಗಾಗಿ 10 ವರ್ಷ ರೌರವ ನರಕ ಅನುಭವಿಸಿದೆ! ಲಂಪಟರು, ಕುಡುಕರು, ರೋಗಿಗಳು ಬಂದು ನನ್ನನ್ನು ಹುರಿದು ಮುಕ್ಕಿದರು. ನನ್ನ ಆತ್ಮಸಾಕ್ಷಿಗೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತಾ ಹೋದೆ. ದುಬಾಯಿಗೂ ಹೋದೆ. ಅಲ್ಲಿಯ ಡ್ಯಾನ್ಸ್ ಬಾರ್‌ಗಳು, ಸಂಜೆ ಆದ ಕೂಡಲೇ ಜಗಮಗಿಸುವ ವೇದಿಕೆಗಳು, ಹಾಡುತ್ತ, ಕುಣಿಯುತ್ತ ವರ್ಷ ಕಳೆದದ್ದು ಗೊತ್ತೇ ಆಗಲಿಲ್ಲ. ಆದರೆ ಒಳಮನಸ್ಸು ಚೀರಿ ಹೇಳುತ್ತಿತ್ತು, ನೀನು ಬೇರೇನೋ ಮಾಡಲಿಕ್ಕೆ ಬಾಕಿ ಇದೆ ಎಂದು! ಕತ್ತಲೆಯ ಕೋಣೆಯಿಂದ ಹೊರಗೆ ಬಾ ಎಂದು!
ನನ್ನೊಳಗೆ ಸಶಕ್ತವಾದ ಕಥೆಗಾರ್ತಿ ಇದ್ದದ್ದು ನನಗೆ ಗೊತ್ತೇ ಇರಲಿಲ್ಲ!
ನನ್ನನ್ನು ಭೇಟಿಯಾದ, ಪ್ರೀತಿಯ ನಾಟಕ ಮಾಡಿ ಮೋಸ ಮಾಡಿದ, ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರ ಬದುಕಿನ ಕಥೆಯನ್ನು ದಿನವೂ ಬರೆದಿಡಲು ಆರಂಭ ಮಾಡಿದ್ದೆ. ನನ್ನೊಳಗೆ ಒಬ್ಬಳು ಸಶಕ್ತ ಕಥೆಗಾರಳು ಇರುವುದು ನನಗೆ ಅರ್ಥವಾಗಿತ್ತು!
ಇದನ್ನೂ ಓದಿ: ರಾಜ ಮಾರ್ಗ ಅಂಕಣ: ನಿಮ್ಮ ಮಕ್ಕಳಿಗೆ ಭಯ ಕಾಡ್ತಿದೆಯಾ? ಫೋಬಿಯಾ ಗೆಲ್ಲೋದು ಹೇಗೆ?
1999ರಲ್ಲಿ ಅಮ್ಮ ತೀರಿ ಹೋದಾಗ ಭಾರತಕ್ಕೆ ಬಂದೆ. ನನ್ನಲ್ಲಿ ಅದ್ಭುತವಾದ ಕಥೆಗಳು ಇದ್ದವು. ಸುಲಲಿತವಾಗಿ ಸಂಭಾಷಣೆ ಬರೆಯುವ ಕಲೆ ಸಿದ್ಧಿಸಿತ್ತು. ಸಿನಿಮಾದ, ಧಾರಾವಾಹಿಯ ಮಂದಿಗೆ ನನ್ನ ಕಥೆಗಳನ್ನು ರಸವತ್ತಾಗಿ ಹೇಳಿದೆ. ನಾಲ್ಕು ವರ್ಷ ಮತ್ತೆ ಕಷ್ಟ ಪಟ್ಟೆ. ಯಾರೂ ನನಗೆ ಅವಕಾಶ ಕೊಡಲಿಲ್ಲ. ಕೊನೆಗೆ ಹಿಂದಿಯ ಖ್ಯಾತ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಅವರ ಪರಿಚಯವಾಯಿತು. ನಾನು ಬರೆದುಕೊಟ್ಟ ಕಥೆಯು ಅವರಿಗೆ ಇಷ್ಟವಾಯ್ತು. 2006ರಲ್ಲಿ ಬಿಡುಗಡೆಯಾದ ನಾನು ಬರೆದ ಕಥೆಯ ‘ ವೋ ಲಮ್ಹೆ’ ಸಿನೆಮಾ ಸೂಪರ್ ಹಿಟ್ ಆಯಿತು.
ಮತ್ತೆ ಅವರಿಗೆ 11 ಸಿನಿಮಾ ಕಥೆಗಳನ್ನು ಬರೆದುಕೊಟ್ಟೆ. ಸಂಭಾಷಣೆಯನ್ನು ಕೂಡ ಬರೆದೆ. ಆವಾರಪನ್, ದೋಖಾ, ಶೋಬೀಝ್, ಕಜರಾರೆ, ರಾಜ್ 2, ರಾಜ್ 3, ಜನ್ನತ್ 2, ಜಿಸ್ಮ 2, ಮರ್ಡರ್ 2, ಆಶಿಕಿ 2, ದುಷ್ಮನ್, ಜಶ್ನ್, ಹಮಾರಿ ಅಧೂರಿ ಕಹಾನಿ….ಹೀಗೆ ನನ್ನ ಕಥೆಗಳು ಬಾಲಿವುಡ್ ಜಗತ್ತಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದವು. ಅವೆಲ್ಲವೂ ನನ್ನ ಬದುಕಿನ ಅನುಭವಗಳಿಂದ ಮತ್ತು ನೋವುಗಳಿಂದ ಹುಟ್ಟಿದ ಕಥೆಗಳು.
ಶಗುಫ್ತಾ ಈಗ ಬಾಲಿವುಡ್ಡಿನ ಸ್ಟಾರ್ ಲೇಖಕಿ!
ನಾನಿಂದು ಹಿಂದಿಯ ಬಹಳ ಬೇಡಿಕೆಯ ರೈಟರ್ ಆಗಿದ್ದೇನೆ. ಹಲವು ಫಿಲಂ ಫೇರ್ ಪ್ರಶಸ್ತಿಗಳು ದೊರೆತಿವೆ. ಮೊನ್ನೆ ಒಂದು ಬೆಂಗಾಲಿ ಸಿನೆಮಾ ‘ಮೋನ್ ಜಾನೆನ ನಾ’ ನಿರ್ದೇಶನ ಮಾಡಿದ್ದೇನೆ. ದುರ್ಗಮವಾದ ಹಾದಿಯನ್ನು ಕ್ರಮಿಸಿ ತಲುಪಬೇಕಾದ ‘ಮಂಜಿಲ್’ ಈಗ ತಲುಪಿದ್ದೇನೆ ಅಂತ ಅನ್ನಿಸುತ್ತಿದೆ! ಯಾರದೋ ಬದುಕಿನ ಬಗ್ಗೆ ಬರೆಯೋದಕ್ಕಿಂತ ನನ್ನ ಬಗ್ಗೆ ಬರೆಯೋದು ನನಗೆ ಖುಷಿ ಕೊಡುತ್ತದೆ. ಆಷಿಕಿ 2 ಅದು ನನ್ನದೇ ಬದುಕಿನ ಕಥೆ!
ನನ್ನ ಬದುಕಿನಿಂದ ನೀವು ಯಾವ ಸಂದೇಶವನ್ನು ಕೂಡ ಪಡೆಯುವುದು ಬೇಡ. ಆದರೆ ನನ್ನನ್ನು ಒಬ್ಬ ಕಥೆಗಾರಳಾಗಿ ಒಪ್ಪಿಕೊಂಡರೆ ಸಾಕು! ಎಂದಾಕೆ ಮಾತು ಮುಗಿಸಿದರು.
ಶಗುಫ್ತಾ ಬದುಕು ನಮಗೆ ಸ್ಫೂರ್ತಿ ಕೊಡುತ್ತದೆ ಅಲ್ಲವೇ?