Site icon Vistara News

ರಾಜ ಮಾರ್ಗ ಅಂಕಣ : ಕನಸುಗಳಿಗೆ ರೆಕ್ಕೆ ಕಟ್ಟಿದ ಹುಡುಗಿ ಕಲ್ಪನಾ ಚಾವ್ಲಾ; ಆಕೆಗೆ ಆಕಾಶದ ಎತ್ತರವೂ ಕಡಿಮೆಯೇ!

Kalpana Chawla

#image_title

1962ರ ಮಾರ್ಚ್ 17ರಂದು ಹರಿಯಾಣದ ಕರ್ನಾಲ್‌ನಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೋತಿ ದಂಪತಿಯ ಹಿರಿಯ ಮಗಳಾಗಿ ಜನಿಸಿದ ಆಕೆಗೆ ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆ ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜೊತೆ ಹೇಳುತ್ತಾ ಬೆಳೆದವರು ಆಕೆ. ಬಾಲ್ಯದಿಂದಲೂ ಆಕೆಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ! ಮೂರನೇ ವಯಸ್ಸಿಗೇ ಅಪ್ಪನಿಗೆ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ! ಅಪ್ಪನೂ ಆಕೆಯ ಪ್ರತಿಯೊಂದು ಕನಸಿನ ಈಡೇರಿಕೆಗೆ ಊರುಗೋಲಾಗಿ ನಿಂತಿದ್ದರು.

ತನ್ನ ಕನಸಿನ ಭಾಗವಾಗಿ ನಾಸಾ ಸೇರಿದರು ಕಲ್ಪನಾ

ಹರಿಯಾಣದಲ್ಲಿ ಬೇಸಿಕ್ ಶಿಕ್ಷಣ ಪೂರ್ತಿ ಮಾಡಿದ ಕಲ್ಪನಾ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದರು. ಕೊಲರೆಡೋ ವಿವಿಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪಡೆದರು.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸೇರಬೇಕು ಎಂದು ಆಕೆಯ ಭಾರೀ ದೊಡ್ಡ ಕನಸು. ಅದಕ್ಕಾಗಿ ಹತ್ತಾರು ಪರೀಕ್ಷೆ, ಸಂದರ್ಶನ ಎದುರಿಸಿ 1988ರಲ್ಲಿ ಆಕೆ ನಾಸಾಕ್ಕೆ ಆಯ್ಕೆ ಆಗುತ್ತಾರೆ. ಮುಂದೆ ಅತ್ಯಂತ ಕಠಿಣವಾದ ತರಬೇತು. ದೇಹ ಮತ್ತು ಮನಸ್ಸನ್ನು ಹುರಿಗೊಳಿಸಲು ಯೋಗ, ಪ್ರಾಣಾಯಾಮಗಳ ಮೊರೆ ಹೊಕ್ಕವರು ಅವರು. ಮುಂದೆ ಯಾವ ಸವಾಲು ಕೂಡ ಎದುರಿಸಲು ಮಾನಸಿಕವಾಗಿ ಆಕೆ ಸಿದ್ಧರಾಗಲು ಕನಿಷ್ಠ ಎಂಟು ವರ್ಷ ಬೇಕಾಯಿತು. ಪ್ರತಿ ನಿತ್ಯವೂ ಅಪ್ಪನ ಜೊತೆ ಮಾತಾಡುತ್ತ ತನ್ನ ಕನಸುಗಳನ್ನು ಜೀವಂತ ಆಗಿ ಇರಿಸಿದವರು ಕಲ್ಪನಾ.

1997 ನವೆಂಬರ್ 19, ಆ ದಿನವು ಬಂದೇ ಬಿಟ್ಟಿತು!

ಪ್ರತಿಯೊಬ್ಬ ಸಾಧಕರು ಒಂದು ದೊಡ್ಡ ಅವಕಾಶಕ್ಕಾಗಿ ಕಾಯುತ್ತಾ ಇರುತ್ತಾರೆ. ಹಾಗೆ ಕಲ್ಪನಾ ಬದುಕಿನಲ್ಲಿ ಆ ಒಂದು ದೊಡ್ಡ ಅವಕಾಶವು ಬಂದೇ ಬಿಟ್ಟಿತು. STS 87 ಕೊಲಂಬಿಯಾ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರುವ ಅವಕಾಶವು ಆಕೆಗೆ ದೊರೆಯಿತು. ಓರ್ವ ಭಾರತೀಯ ಮೂಲದವರಾಗಿ ಅದೊಂದು ಐತಿಹಾಸಿಕ ಸಾಧನೆ! ಕಲ್ಪನಾ ಆ ಕೊಲಂಬಿಯಾ ನೌಕೆಯಲ್ಲಿ ಕುಳಿತು ಬಾಹ್ಯಾಕಾಶಕ್ಕೆ ಹಾರಿದರು. ಎರಡು ವಾರಗಳ ಕಾಲ ಬಾಹ್ಯಾಕಾಶದಲ್ಲಿಯೇ ಕಳೆದರು!ಹತ್ತಾರು ಸಂಶೋಧನೆ ಮಾಡಿದರು. ಅವರನ್ನು ಹೊತ್ತ ಕೊಲಂಬಿಯಾ ನೌಕೆಯು 65 ಲಕ್ಷ ಕಿಲೋಮೀಟರ್ ಹಾರಿತು! 252 ಬಾರಿ ತನಗೆ ನಿಗದಿ ಪಡಿಸಿದ ಕಕ್ಷೆಯನ್ನು ಆಕೆ ಸುತ್ತಿ ಮುಗಿಸಿ ಮತ್ತೆ ಭೂಮಿಗೆ ಬಂದಾಗ ಕಲ್ಪನಾ ಚಾವ್ಲಾ ಭಾರತೀಯರ ಪಾಲಿಕೆ ದೇವಕನ್ಯೆಯೇ ಆಗಿ ಬಿಟ್ಟಿದ್ದರು!

ಜಗತ್ತಿನ ಎಲ್ಲ ಪತ್ರಿಕೆಗಳೂ ಆಕೆಯ ಬಗ್ಗೆ ಕಾಲಂ ಬರೆದವು. ಜಾಗತಿಕ ಮಟ್ಟದ ಟಿವಿ ಚಾನೆಲಗಳು ಆಕೆಯ ಸಂದರ್ಶನಕ್ಕೆ ತುದಿಗಾಲಲ್ಲಿ ನಿಂತವು. ಭಾರತದಿಂದ ನಾಸಾ ಸೇರಿದ ಓರ್ವ ಮಧ್ಯಮ ವರ್ಗದ ಹೆಣ್ಣು ಮಗಳು ಭಾರತೀಯ ಮಹಿಳೆಯರಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಮಾಡಿ ತೋರಿಸಿದ್ದರು!

ಎರಡನೇ ಬಾರಿ ಬಾಹ್ಯಾಕಾಶ ಯಾನಕ್ಕೆ ಕಲ್ಪನಾ ಆಯ್ಕೆ ಆದರು!

ಮೊದಲ ಬಾಹ್ಯಾಕಾಶಯಾನವು ಯಶಸ್ವಿಯಾದ ನಂತರ ಆಕೆ ನಾಸಾದಲ್ಲಿ ಎಲ್ಲರ ಕಣ್ಮಣಿ ಆಗಿದ್ದರು. ಆಕೆಯು ತನ್ನ 21ನೇ ವಯಸ್ಸಿನಲ್ಲಿ ತನ್ನ ಸಹಪಾಠಿ ಜೀನ್ ಹ್ಯಾರಿಸನ್ ಅವರನ್ನು ಪ್ರೀತಿ ಮಾಡಿ ಮದುವೆಯಾದರು. ಅವರು ಕೂಡಾ ಕಲ್ಪನಾ ಅವರ ಪ್ರತೀಯೊಂದು ಕನಸುಗಳಿಗೆ ಬೆಂಬಲವಾಗಿ ನಿಂತದ್ದು ಕೂಡ ಉಲ್ಲೇಖನೀಯ. ಸುಮಾರು ಐದು ವರ್ಷಗಳ ದೊಡ್ಡ ಗ್ಯಾಪ್ ನಂತರ ನಾಸಾ ತನ್ನ ಮುಂದಿನ ವ್ಯೋಮ ಯಾತ್ರೆಯನ್ನು ಯೋಜನೆ ಮಾಡಿತು. ಅದು STS -107 ಕೊಲಂಬಿಯಾ ಹೆಸರಿನ ನೌಕೆ. ಈ ಬಾರಿ ಒಟ್ಟು ಏಳು ಮಂದಿ ಆಕಾಶಯಾನಿಗಳು ಆಯ್ಕೆ ಆಗಿದ್ದು ಆ ತಂಡದಲ್ಲಿ ಕಲ್ಪನಾ ಚಾವ್ಲಾ ಸೀನಿಯರ್ ಆಗಿದ್ದರು. 2003ರ ಜನವರಿ ತಿಂಗಳಲ್ಲಿ ಈ ಯಾತ್ರೆಯು ಆರಂಭವಾಯಿತು. ಎಲ್ಲ ಭಾರತೀಯರು ಕಣ್ಣು ತೆರೆದು ಈ ಯಾತ್ರೆಯನ್ನು ಗಮನಿಸುತ್ತಿದ್ದರು.

ಆ ದುರಂತವು ಸಂಭವಿಸಿಯೇ ಬಿಟ್ಟಿತು!

ಸಾಕಷ್ಟು ಸಂಶೋಧನೆ ಮಾಡಿದ ಈ ತಂಡವು ಹಿಂದೆ ಬರುತ್ತಿರುವ ಸಂದರ್ಭದಲ್ಲಿ 2003 ಫೆಬ್ರವರಿ 1ರಂದು ದುರಂತ ನಡೆದೇ ಹೋಯಿತು. ಏಳು ಜನ ಆಕಾಶಯಾತ್ರಿಗಳನ್ನು ಹೊತ್ತ STS 107 ನೌಕೆಯು ಭೂಮಿಯ ವಾಯುಮಂಡಲ ಪ್ರವೇಶ ಮಾಡುವ ಸಂದರ್ಭ ಆಕಾಶದಲ್ಲಿಯೇ ಸ್ಫೋಟವಾಗಿ ಎಲ್ಲ ಏಳು ಮಂದಿ ಬೂದಿಯಾಗಿ ಹೋದರು. ಅದರಲ್ಲಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಆಗ ಆಕೆಗೆ ಕೇವಲ 41 ವರ್ಷ ವಯಸ್ಸು ಆಗಿತ್ತು!

ಆಕೆಗಾಗಿ ಮಿಡಿಯಿತು ಇಡೀ ಜಗತ್ತು!

ಏಳು ಜನ ಆಕಾಶಯಾನಿಗಳನ್ನು ಆಪೋಶನ ತೆಗೆದುಕೊಂಡ ಆ ದುರಂತದ ಬಗ್ಗೆ ಇಡೀ ಜಗತ್ತು ಕಂಬನಿ ಮಿಡಿಯಿತು. ಕಲ್ಪನಾ ಚಾವ್ಲಾ ಬಗ್ಗೆ ಭಾರತದ ಮೂಲೆ ಮೂಲೆಗಳಲ್ಲಿ ಶೃದ್ಧಾಂಜಲಿ ಸಭೆಗಳು ನಡೆದವು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಕೆಯನ್ನು ಭಾರತದ ಪುತ್ರಿ ಎಂದು ಕರೆದು ಶ್ರದ್ಧಾಂಜಲಿ ನೀಡಿದರು. ಮುಂದೆ ಭಾರತ ಹಾರಿಸಿದ ಒಂದು ಕೃತಕ ಉಪಗ್ರಹಕ್ಕೆ ಕಲ್ಪನಾ ಹೆಸರು ಇಡಲಾಯಿತು. ನಾಸಾ ಆಕೆಯನ್ನು ಭಾವಪೂರ್ಣವಾಗಿ ಸ್ಮರಿಸಿತು. ಕರ್ನಾಟಕ ಸರಕಾರವು ಆಕೆಯ ಹೆಸರಿನಲ್ಲಿ ಓರ್ವ ಯುವ ವಿಜ್ಞಾನಿಯನ್ನು ಗೌರವಿಸುವ ಒಂದು ಪ್ರಶಸ್ತಿಯನ್ನು ಸ್ಥಾಪನೆ ಮಾಡಿತು. ತಮಿಳುನಾಡಿನ ಒಂದು ಪ್ರಮುಖ ರಸ್ತೆಗೆ ಕಲ್ಪನಾ ಚಾವ್ಲಾ ಹೆಸರು ಇಡಲಾಯಿತು.

ಭರತ ವಾಕ್ಯ

ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋಗಿ ಭಾರತದ ಮೊದಲ ಬಾಹ್ಯಾಕಾಶ ಯಾನಿಯಾದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನ ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ನಕ್ಷತ್ರವಾದದ್ದು ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ! ಭಾರತದ ಮಹಾನ್ ಪುತ್ರಿಗೆ ನಮ್ಮ ಶ್ರದ್ಧಾಂಜಲಿ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಡಾಕ್ಟರ್ ಕೊಟ್ನಿಸ್ ಕೀ ಅಮರ್ ಕಹಾನಿ; ಇವತ್ತಿಗೂ ಇಡೀ ಚೀನಾ ಎದ್ದು ನಿಂತು ಗೌರವಿಸುವ ಭಾರತೀಯ ವೈದ್ಯನ ಕಥೆ!

Exit mobile version