ಅವರು ಗಗನ್ ಜೈನ್. ಅವರ ಪತ್ನಿ ನೀತಿ ಜೈನ್. ಇಬ್ಬರೂ ದೆಹಲಿಯ ಮೂಲದವರು. ವ್ಯಾಪಾರದ ಕುಟುಂಬದವರು. ಮದುವೆಯ ನಂತರ ಅವರು ವರ್ಕಿಂಗ್ ವೀಸಾ ಪಡೆದು ಮಸ್ಕತ್ತಿಗೆ ಹೋದರು. ಅಲ್ಲಿ ಗಗನ್ ಜೈನ್ ಅವರು ಫ್ಯಾಶನ್ ಬ್ರಾಂಡ್ (Fashion brand) ಮೇಲೆ ಸಂಶೋಧನೆ ಮಾಡುತ್ತಿದ್ದರು. ಬಿಡುವಿನ ಸಮಯ ಕಳೆಯುವುದು ಹೆಂಡತಿಗೆ ಕಷ್ಟ ಆಯಿತು. ಗಂಡ ಕೆಲಸಕ್ಕೆ ಬೆಳಗ್ಗೆ ಹೋದರೆ ಸಂಜೆಯೇ ಹಿಂದೆ ಬರುವುದು. ಹೆಂಡತಿ ನೀತಿ ಜೈನ್ ಬಹಳ ಬುದ್ಧಿವಂತೆ. ಅವರ ಮನೆಯ ಕೆಲಸ ಬೆಳಿಗ್ಗೆ ಬೇಗ ಮುಗಿಯುತ್ತಿತ್ತು. ಮತ್ತೆ ಸಂಜೆಯವರೆಗೂ ಸಮಯ ಕಳೆಯುವುದು ಹೇಗೆ? ಯಾವ ಟಿವಿಯ ಚಾನೆಲ್‌ಗಳನ್ನು ತೆರೆದರೂ ಉರ್ದು, ಅರೇಬಿಕ್ ಭಾಷೆಯ ಕಾರ್ಯಕ್ರಮಗಳು. ನೆರೆಹೊರೆಯಲ್ಲಿ ಕೂಡ ಹಿಂದಿ ಅರ್ಥವಾಗದ ಕುಟುಂಬಗಳು. ಯಾರ ಜೊತೆ ಮಾತಾಡುವುದು?
ಆಗ ನೀತಿ ಜೈನ್ ಅವರಿಗೆ ಥಟ್ಟನೆ ತನ್ನ ವಿದ್ಯಾರ್ಥಿ ಜೀವನದ ದಿನಗಳ ನೆನಪು ಆಗತೊಡಗಿತು. ಅವರು ಬಾಲ್ಯದಲ್ಲಿ ಒಳ್ಳೆಯ ಪೈಂಟಿಂಗ್ ಕಲಿತಿದ್ದರು. ಕಾಲೇಜು ದಿನಗಳಲ್ಲೂ ಅವರಿಗೆ ಪೈಂಟಿಂಗ್ ಸ್ಪರ್ಧೆಗಳಲ್ಲಿ ತುಂಬಾ ಬಹುಮಾನಗಳು ಬಂದಿದ್ದವು. ಮನೆ ಸಮೀಪದ ಆರ್ಟ್ ಗ್ಯಾಲರಿಗೆ ಹೋಗಿ ಅವರು ನೇಚರ್ ಪೈಂಟಿಂಗ್ಸ್ ಅಭ್ಯಾಸ ಮಾಡಿದವರು. ಮದುವೆಯ ನಂತರ ಅವರಿಗೆ ಅದನ್ನು ಮುಂದುವರಿಸಲು ಆಗಿರಲಿಲ್ಲ. ಈಗ ಮತ್ತೆ ಅವರಿಗೆ ತನ್ನ ಕ್ರಿಯೇಟಿವ್ ಪ್ಯಾಶನ್ ನೆನಪಾಯಿತು.
ಗಂಡನ ಶರ್ಟ್ ಮೇಲೆಯೇ ಪೇಂಟಿಂಗ್ ಮಾಡಿದರು ನೀತಿ ಜೈನ್!
ಒಂದು ದಿನ ಗಂಡ ಆಫೀಸಿಗೆ ಹೋದ ನಂತರ ನಿಧಿ ಜೈನ್ ಅವರು ಯಾವುದೋ ಒಂದು ಲಹರಿಯಲ್ಲಿ ಗಂಡನ ತಿಳಿಬಣ್ಣದ ಶರ್ಟ್ ತೆಗೆದುಕೊಂಡು ಅದರ ಮೇಲೆ ಚೆಂದದ ಬಣ್ಣದ ಒಂದು ಪೈಂಟಿಂಗ್ ಮಾಡಿಬಿಟ್ಟರು! ಅದನ್ನು ಭಯದಿಂದ ಗಂಡನಿಗೆ ಹೇಳಲಿಲ್ಲ.
ಮರುದಿನ ಗಂಡ ಆ ಶರ್ಟ್ ಧರಿಸಿ ತನ್ನ ಆಫೀಸಿಗೆ ಬಂದಾಗ ಎಲ್ಲರೂ ಅವರನ್ನು ಬೆರಗುಗಣ್ಣಿಂದ ನೋಡಲು ಆರಂಭಿಸಿದರು. ಮೊದಲು ಯಾಕೆಂದು ಗಗನ್ ಅವರಿಗೆ ಗೊತ್ತಾಗಲಿಲ್ಲ. ನಂತರ ಒಬ್ಬೊಬ್ಬರೇ ಅವರ ಸಹೋದ್ಯೋಗಿಗಳು ಹತ್ತಿರ ಬಂದು ಅವರ ಶರ್ಟಿನ ಪೈಂಟಿಂಗ್ ಬಗ್ಗೆ ತುಂಬು ಮೆಚ್ಚುಗೆಯನ್ನು
ವ್ಯಕ್ತಪಡಿಸಿದರು. ನಗರದಲ್ಲಿ ಓಡಾಡುವಾಗ ಕೂಡ ಶರ್ಟಿನ ಪೈಂಟಿಂಗ್ ಬಗ್ಗೆ ಹೊಗಳಿಕೆಯ ಮಾತು ಕೇಳಿಬಂತು. ಮನೆಗೆ ಬಂದು ಅವರು ಪತ್ನಿಯ ಜೊತೆಗೆ ಮಾತಾಡಿದಾಗ ನಿಧಿ ಭಯ ಪಡುತ್ತಾ ತಾನು ಮಾಡಿದ ಕೆಲಸವನ್ನು ಒಪ್ಪಿಕೊಂಡು ಕ್ಷಮೆ ಕೇಳಿದರು.
ಹೆಂಡತಿಯ ಪೇಂಟಿಂಗ್ ಹೊಸ ಉದ್ಯಮಕ್ಕೆ ನಾಂದಿ ಹಾಡಿತು!
ಆಗ ಗಗನ್ “ಯಾಕೆ ಕ್ಷಮೆ ಕೇಳುತ್ತಿ ಡಿಯರ್! ನಿನ್ನ ಪ್ರತಿಭೆಯೇ ಅದ್ಭುತ. ಇವತ್ತು ಪ್ರತೀ ಒಬ್ಬರು ನನ್ನ ಶರ್ಟನ್ನು ಮೆಚ್ಚಿಕೊಂಡರು. ನಿನಗೆ ಥ್ಯಾಂಕ್ಸ್” ಅಂದರು. ಮುಂದೆ ಒಂದು ಗಂಟೆಯ ಗಂಡ ಹೆಂಡಿರ ಮಾತುಕತೆಯು ಒಂದು ಶ್ರೇಷ್ಠವಾದ ಬ್ರಾಂಡನ್ನು ಹುಟ್ಟು ಹಾಕಿತು! ಹೆಂಡತಿಯ ಪ್ರತಿಭೆಯನ್ನು ಬಂಡವಾಳ ಮಾಡಲು ಗಂಡ ನಿರ್ಧಾರ ಮಾಡಿ ಆಗಿತ್ತು!
ಹೆಂಡತಿ ಕೂಡ ಅದಕ್ಕೆ ಒಪ್ಪಿದರು. ಗಂಡ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಅವರಿಬ್ಬರೂ ವಿದೇಶದಿಂದ ಹೊರಟು ಭಾರತದ ಇಂದೋರ್ ನಗರಕ್ಕೆ ಬಂದರು.
ರಂಗ್ ರೇಜ್ ಕಂಪೆನಿ ಆರಂಭ ಆದ ಕಥೆ
‘ಸ್ಟಾರ್ಟ್ ಅಪ್’ ಆರಂಭ ಮಾಡಲು ಒಂದಿಷ್ಟು ಪ್ರಕ್ರಿಯೆಗಳು ನಡೆದು ಬ್ಯಾಂಕುಗಳು ಸಾಲ ಕೊಡಲು ಮುಂದೆ ಬಂದವು. ಒಟ್ಟು ಹದಿನೈದು ಲಕ್ಷ ರೂಪಾಯಿ ಹಣ ಹೊಂದಿಸಲು ಸಾಧ್ಯವಾಯಿತು.
ಈಗ ನಿಜವಾದ ದೊಡ್ಡ ಸವಾಲು ಎದುರಾಯಿತು. ನಿಧಿ ಅವರಂತೆ ಪೈಂಟಿಂಗ್ ಕೆಲಸವನ್ನು ಮಾಡಬಲ್ಲ ಇನ್ನೂ ಹಲವು ಕಲಾವಿದರನ್ನು ಗುರುತಿಸಿ ಕೆಲಸಕ್ಕೆ ನೇಮಿಸುವುದು! ಅದಕ್ಕೆ ಇಂದೋರ್ ನಗರದಲ್ಲಿ ಒಂದು ಮೆಗಾ ಪೈಂಟಿಂಗ್ ಸ್ಪರ್ಧೆಯನ್ನು ನಡೆಸಿ ಹಲವು ಚಿತ್ರಕಾರರನ್ನು ಆರಿಸಲಾಯಿತು. ಒನ್ ಫೈನ್ ಡೇ ‘ರಂಗ್ ರೇಜ್’ ಬ್ರಾಂಡ್ ಉದ್ಘಾಟನೆ ಆಗಿಬಿಟ್ಟಿತು.
ಸವಾಲುಗಳನ್ನು ಎದುರಿಸಿದವರು
ಮೊದಲ ವರ್ಷಪೂರ್ತಿ ಮಹಾ ಸವಾಲುಗಳು ಬಂದಾಗ ಅವರು ಹತಾಶೆ ಆದದ್ದು ಇದೆ. ಒಂದು ಕಡೆ ಮಾರುಕಟ್ಟೆಯ ಸಮಸ್ಯೆ. ಇನ್ನೊಂದೆಡೆ ಕೆಲಸಗಾರರ ನಿರ್ವಹಣೆಯ ಸಮಸ್ಯೆ. ಕಟ್ಟಡದ ಕೆಲಸ ಮುಗಿದಾಗ ಗಂಡ ಹೆಂಡತಿ ಕೈ ಖಾಲಿಯಾಗಿ ತುಂಬಾ ಕಷ್ಟಪಟ್ಟರು. ಎಂಟು ತಿಂಗಳ ಪುಟ್ಟ ಮಗಳು ಕಾರಿನಲ್ಲಿಯೇ ಮಲಗಿ ಬಿಡುತ್ತಿದ್ದಳು. ಕೆಲಸದಲ್ಲಿ ಮುಳುಗಿ ಹೋದ ಇಬ್ಬರಿಗೂ ಕಚೇರಿಯೇ ಮನೆ ಆಗಿತ್ತು.
ಮೊದ ಮೊದಲು ಸೀರೆ ಮತ್ತು ಶರ್ಟ್‌ಗಳ ಮೇಲೆ ಮಾತ್ರ ಪೈಂಟಿಂಗ್ ಕೆಲಸ ನಡೆಯಿತು. ನಂತರ ನಿಧಾನವಾಗಿ ಕುರ್ತಾ, ಟೀ ಶರ್ಟ್, ಲೆಹಂಗಾ, ರವಿಕೆ, ಫ್ಯಾನ್ಸಿ ಸೀರೆಗಳು, ತಲೆ ದಿಂಬು, ಬೆಡ್ ಶೀಟ್…….. ಇತ್ಯಾದಿಗಳ ಮೇಲೆ ಕೂಡ ಪೈಂಟಿಂಗ್ ಕೆಲಸವು ಮುಂದುವರಿಯಿತು.
ಆರಂಭದಲ್ಲಿ ಎಲ್ಲಾ ಡಿಸೈನ್‌ಗಳನ್ನೂ ನಿಧಿ ಅವರೇ ಮಾಡುತ್ತಿದ್ದರು. ನಂತರ ಉಳಿದವರಿಗೆ ತರಬೇತಿ ನೀಡಿದರು. ಕಂಪ್ಯೂಟರ್ ಮೂಲಕ ಹೊಸ ಹೊಸ ವಿನ್ಯಾಸಗಳನ್ನು ಡೆವಲಪ್ ಮಾಡಿದರು. ಕುಶಲ ಕೆಲಸಗಾರರು ಬಟ್ಟೆಯನ್ನು ಅವರ ಮನೆಗೇ ತೆಗೆದುಕೊಂಡು ಹೋಗಿ ಪೈಂಟಿಂಗ್ ಕೆಲಸ ಮಾಡಲು ಅನುಮತಿ ದೊರೆಯಿತು. ‘ ವರ್ಕ್ ಫ್ರಮ್ ಹೋಂ’ ಕಂಪೆನಿಯ ಖರ್ಚನ್ನು ಇಳಿಸಿತು.
ರಂಗ್ ರೇಜ್ ಈಗ ಜಾಗತಿಕ ಕಂಪನಿ
ವೆಬ್ಸೈಟ್, ಜಾಲತಾಣ ಮತ್ತು ಫೇಸ್ ಬುಕ್‌ಗಳ ಮೂಲಕ ಜಾಗತಿಕ ಗ್ರಾಹಕರನ್ನು ಸೆಳೆಯಲು ಅವರು ಯಶಸ್ವಿ ಆದರು. ಮಧ್ಯವರ್ತಿಗಳ ಕಾಟವನ್ನು ತಪ್ಪಿಸಲು ಆನ್ಲೈನ್ ಮಾರುಕಟ್ಟೆಯನ್ನು ಹೆಚ್ಚು ಪ್ರಮೋಟ್ ಮಾಡಿದರು. ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಿ ‘ಹ್ಯಾಂಡ್ ಪೇಂಟೆಡ್ ಡಿಸೈನ್’ ಗಳು ಹೊಸ ರೂಪ ಪಡೆದವು. ಸಂತೃಪ್ತ ಗ್ರಾಹಕರೇ ಕಂಪೆನಿಯ ಆಸ್ತಿ ಎಂದು ಅವರಿಗೆ ಗೊತ್ತಿತ್ತು. ಈ ಸಹಜವಾದ ಬಣ್ಣಗಳ ಚಿತ್ತಾರದ ಬಟ್ಟೆಗಳು ಗ್ರಾಹಕರಿಗೆ ಇಷ್ಟವಾದವು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಜಿಮ್ನಾಸ್ಟಿಕ್ ಕ್ವೀನ್ ಸಿಮೋನ್ ಬೈಲ್ಸ್; ಕಳೆದ 10 ವರ್ಷದಲ್ಲಿ ಅವಳು ಸೋತಿದ್ದೇ ಇಲ್ಲ!
ಗಗನ್ ಮತ್ತು ನಿಧಿ ಜೈನ್ ಅವರ ಅಪಾರವಾದ ಪರಿಶ್ರಮದಿಂದ ಕೇವಲ ನಾಲ್ಕು ವರ್ಷಗಳ
ಅವಧಿಯಲ್ಲಿ ‘ರಂಗ್ ರೇಜ್’ ಜಾಗತಿಕ ಬ್ರಾಂಡ್ ಆಯಿತು! ಕಳೆದ ವರ್ಷ ಅವರು ಜೋಧ್ಪುರದಲ್ಲಿ ತಮ್ಮ ಇನ್ನೊಂದು ಶಾಖೆಯನ್ನು ತೆರೆದಿದ್ದಾರೆ. ಇನ್ನೂರು ಜನ ತರಬೇತಿ ಪಡೆದ ಕಲಾವಿದರು ಅವರ ಕಂಪೆನಿಯಲ್ಲಿ ಅಹರ್ನಿಶಿ ದುಡಿಯುತ್ತಿದ್ದಾರೆ. ಕಳೆದ ವರ್ಷ ಕಂಪನಿಯ ಟರ್ನ್ ಓವರ್ ಎರಡು ಕೋಟಿ ದಾಟಿದೆ! ಅವರು ಗೆದ್ದಿದ್ದಾರೆ.
ಪ್ರತೀ ಸಲವೂ ಅವಕಾಶಗಳನ್ನು ಹೊರಗಡೆ ಹುಡುಕುವ ಯುವಜನತೆಗೆ ಗಗನ್ ಮತ್ತು ನಿಧಿ ಜೈನ್ ದಂಪತಿಗಳ ಉದ್ಯಮಶೀಲ ಪ್ರತಿಭೆಯು ನಿಜಕ್ಕೂ ಮೇಲ್ಪಂಕ್ತಿ ಎಂಬುದು ನನ್ನ ಅಭಿಪ್ರಾಯ. ಅವರಿಗೆ ಶುಭವಾಗಲಿ.