ನಾನು ಬರೆದ ಎಷ್ಟೋ ಕಥೆಗಳು ನನಗೇ ಕಣ್ಣೀರು ತರಿಸಿವೆ (ರಾಜ ಮಾರ್ಗ ಅಂಕಣ). ಅದರಲ್ಲಿ ನಾಡಿಯಾ ಮುರಾದ್ (Nadia Murad) ಕಥೆ ಕೂಡ ಒಂದು. ಆಕೆ ಇರಾಕ್ ದೇಶದ ಯಜೀದಿ ಜನಾಂಗದ (Yazidi Community) ಮಹಿಳೆ. ಆಕೆಯ ಜನಾಂಗದ ಹೆಚ್ಚಿನವರು ರೈತರು ಮತ್ತು ಶಾಂತಿಪ್ರಿಯರು. ಆದರೆ ಮಹಾ ಸ್ವಾಭಿಮಾನಿಗಳು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಬಿಟ್ಟು ಕೊಡುವವರೇ ಅಲ್ಲ.
ಆಕೆಯ ತಂದೆಗೆ ಒಟ್ಟು ಹನ್ನೊಂದು ಜನ ಮಕ್ಕಳು. ಅದರಲ್ಲಿ ನಾಡಿಯಾ ಎಲ್ಲರಿಗಿಂತ ಸಣ್ಣವಳು. ಆಕೆಯು ಹುಟ್ಟಿದ್ದು 10 ಮಾರ್ಚ್, 1993ರಂದು. ಆಕೆಯದ್ದು ಕೋಚೋ (Kocho in Iraq) ಎಂಬ ಹಳ್ಳಿ. ಆ ಹಳ್ಳಿಯಲ್ಲಿ ದೀರ್ಘಕಾಲದಿಂದ ಶಾಂತಿಯು ನೆಲೆಸಿತ್ತು. ಆಕೆ ಶಿಕ್ಷಣವನ್ನು ಪೂರ್ತಿ ಮಾಡಲು ಬಡತನ ಅಡ್ಡ ಬಂದಿತು. ನಾಡಿಯಾ ಪ್ರಾಯಕ್ಕೆ ಬಂದಾಗ ಒಂದು ಬ್ಯೂಟಿ ಪಾರ್ಲರ್ ಆರಂಭ ಮಾಡಬೇಕು ಎಂದು ಯೋಚನೆ ಮಾಡಿದ್ದರು. ಆದರೆ ವಿಧಿಯ ಕೈವಾಡ ಬೇರೆಯೇ ಆಗಿತ್ತು!
ಭಯೋತ್ಪಾದನೆಯ ವಶವಾಯಿತು ಆ ಹಳ್ಳಿ
ಒಂದು ದಿನ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಒಂದು ವಿಡಿಯೋ ನೋಡಿ ಆಕೆಯ ಗ್ರಾಮವು ಬೆಚ್ಚಿ ಬಿದ್ದಿತು. ಅದು ಬಂದೂಕುಧಾರಿ ದುಷ್ಕರ್ಮಿಗಳ ಸಂಘಟನೆ. ಕರುಣೆಯೇ ಇಲ್ಲದೆ ಸಾಲು ಸಾಲು ಕೊಲೆ ಮಾಡುವ ರಾಕ್ಷಸರು ಅವರು. ಬಂದೂಕು ಹಿಡಿದು ಇಡೀ ಇರಾಕಿನ ಗ್ರಾಮಗಳಲ್ಲಿ ರಕ್ತಪಾತ ಮಾಡುತ್ತಿದ್ದ ಕೊಲೆಗಡುಕ ಸಂಘಟನೆಯ ವಿಡಿಯೋ ಅದು.
ಯಾವ ಟಿವಿ ವಿಡಿಯೋ ನೋಡಿ ಕೋಚೋ ಗ್ರಾಮದ ಜನ ಬೆಚ್ಚಿ ಬಿದ್ದಿದ್ದರೋ ಆ ಘಟನೆಯು ಒಂದು ದಿನ ನಡೆದೇ ಹೋಯಿತು.
ಬಂದೂಕುಧಾರಿ ಸಂಘಟನೆಯ ಯುವಕರು ಕೋಚೋ ಗ್ರಾಮದ ಮೇಲೆ ಧಾಳಿ ಮಾಡಿ ಎಲ್ಲರನ್ನೂ ಬಂಧಿಸಿದರು ಮತ್ತು ಅವರನ್ನು ಒಂದು ದೊಡ್ಡ ಶಾಲೆಯ ಒಳಗೆ ಕೂಡಿಹಾಕಿದರು. ವೃದ್ಧರು, ಮಹಿಳೆಯರು, ಹುಡುಗರು, ಗಂಡಸರು ಇವರನ್ನು ಶಾಲೆಯ ಕಟ್ಟಡದ ಕೆಳ ಅಂತಸ್ತಿನಲ್ಲಿ ಕೂಡಿ ಹಾಕಿದರು. ಹೆಂಗಸರು ಮತ್ತು ಹುಡುಗಿಯರನ್ನು ಮೇಲಿನ ಅಂತಸ್ತಿನಲ್ಲಿ ಬಂಧಿಸಿದರು.
ಹೆಂಗಸರ ಮೇಲೆ ಸರಣಿ ಅತ್ಯಾಚಾರ ನಡೆದು ಹೋಯಿತು!
ಆ ಸಂಘಟನೆಯವರು ಕೋಚೋ ಗ್ರಾಮದ ಗಂಡಸರನ್ನು ಶೂಟ್ ಮಾಡಿ ಸಾಯಿಸಿದರು. ನಾಡಿಯಾ ಅವರ ಆರು ಅಣ್ಣಂದಿರು, ತಾಯಿ ಅವರ ಕಣ್ಣು ಮುಂದೆ ಕೊಲೆಯಾದರು. ಒಂದೇ ದಿನದಲ್ಲಿ 600 ಜನರ ಮಾರಣ ಹೋಮ ನಡೆದು ಹೋಯಿತು! 6700 ಹೆಂಗಸರು ಮತ್ತು ಮಕ್ಕಳನ್ನು ದುಷ್ಕರ್ಮಿಗಳು ಬಂಧಿಸಿ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು.
ನಾಡಿಯಾ ಮೇಲೆ ಮತ್ತು ಇತರ ಹುಡುಗಿಯರ ಮೇಲೆ ಸರಣಿ ಅತ್ಯಾಚಾರವು ನಡೆಯಿತು. ಅವರ ಅಸಹಾಯಕ ಕಣ್ಣೀರು ಇರಾಕಿನ ಬಿಸಿಯಾದ ಮರುಭೂಮಿಯ ಹೊಯಿಗೆಯಲ್ಲಿ ಆವಿಯಾಗಿ ಹೋಯಿತು.
ನಾಡಿಯಾ ಮತ್ತು ಇತರ ಹುಡುಗಿಯರನ್ನು ಮುಸಲ್ ಎಂಬ ನಗರದಲ್ಲಿ ಅವರು ಬಂಧಿಸಿಟ್ಟರು. ಅಲ್ಲಿ ನಾಡಿಯಾ ಹಲವು ಬಾರಿ ಮಾರಾಟ ಆದರು. ಸರಣಿ ಅತ್ಯಾಚಾರ ಅವ್ಯಾಹತವಾಗಿ ಮುಂದುವರೆಯಿತು. ಒಂದು ಕಡೆ ಅವರನ್ನು ಖರೀದಿ ಮಾಡಿದ ವ್ಯಕ್ತಿ ಬಾಗಿಲಿಗೆ ಬೀಗ ಹಾಕಲು ಮರೆತ ಕಾರಣ ನಾಡಿಯಾ ಅಲ್ಲಿಂದ ತಪ್ಪಿಸಿಕೊಂಡು ಬಿಟ್ಟಳು. ಕಾಲಿನ ಶಕ್ತಿ ಕುಸಿದುಹೋಗುವವರೆಗೆ ಓಡಿದಳು.
ನಿರಾಶ್ರಿತರ ಕ್ಯಾಂಪಿನಲ್ಲಿ ಆಕೆಯ ಅಸಹಾಯಕ ಬದುಕು
ನಾಡಿಯಾ ಮೈಲುಗಟ್ಟಲೆ ಓಡಿ ಬಂದು ತಲುಪಿದ್ದು ಕುದುರಿಸ್ಥಾನ ಎಂಬಲ್ಲಿ ಇದ್ದ ಒಂದು ನಿರಾಶ್ರಿತರ ಶಿಬಿರಕ್ಕೆ. ಅಲ್ಲಿ ಅವಳ ಹಾಗೆ ಸಾವಿರಾರು ಸಂತ್ರಸ್ತರಾದ ಜನರು ಇದ್ದರು ಮತ್ತು ಅದನ್ನು ಜರ್ಮನ್ ಸರಕಾರ ನಡೆಸುತ್ತಿತ್ತು. ನಾಡಿಯಾ ಅಲ್ಲಿದ್ದ ಅಧಿಕಾರಿಗಳ ಪರಿಚಯ ಮಾಡಿಕೊಂಡರು. ತನಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನಿರ್ಧಾರ ಆಕೆ ಆಗಲೇ ಮಾಡಿದ್ದರು.
ಆಕೆ ಹೊರಟದ್ದು ವಿಶ್ವಸಂಸ್ಥೆಯ ಬಾಗಿಲಿಗೆ
ಆಕೆಯು ನ್ಯಾಯವನ್ನು ಪಡೆಯಲು ಬಂದು ನಿಂತದ್ದು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ಮುಂದೆ! ಆಕೆಯ ಆಕ್ರೋಶದ ಬಿಸಿಗೆ ವಿಶ್ವ ಸಂಸ್ಥೆಯ ಅಧಿಕಾರಿಗಳು ನಡುಗಿ ಹೋದರು. ಮಾನವ ಕಳ್ಳ ಸಾಗಾಟದ ಬಗ್ಗೆ ಅದುವರೆಗೆ ಯಾರೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತಾಡಿರಲಿಲ್ಲ. ಅಧಿಕಾರಿಗಳು ಹಲವು ರೀತಿಯಿಂದ ಆಕೆಯನ್ನು ವಿಚಾರಣೆ ನಡೆಸಿದರು. ಒಂದಿಷ್ಟೂ ನಡುಗದೇ ನಾಡಿಯಾ ಮಾತಾಡುತ್ತಿದ್ದರೆ ಸಭೆ ಕಣ್ಣು ಕಣ್ಣು ಬಿಟ್ಟು ನೋಡುತ್ತಿತ್ತು. ಆಕೆಯ ಧೈರ್ಯ, ಆತ್ಮವಿಶ್ವಾಸ, ಕನ್ವಿನ್ಸಿಂಗ್ ಪವರ್ ಎಲ್ಲವೂ ಅದ್ಭುತವಾಗಿ ಇದ್ದವು.
ಆಕೆ ವಿಶ್ವಸಂಸ್ಥೆಯ ಸೌಹಾರ್ದತೆಯ ರಾಯಭಾರಿ ಆದರು
ವಿಶ್ವಸಂಸ್ಥೆಯು ಆಕೆಯನ್ನು ಮಾನವ ಸಾಗಾಟದ ಸಂತ್ರಸ್ತರಿಗೆ ಪರಿಹಾರ ಕೊಡುವ ‘ಸೌಹಾರ್ದತೆಯ ರಾಯಭಾರಿ’ ಆಗಿ ನೇಮಕ ಮಾಡಿತು. ಆಕೆ ಹಲವು ದೇಶ, ನಗರಗಳನ್ನು ಸುತ್ತಿ ಮಾನವ ಕಳ್ಳ ಸಾಗಾಟದ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಕೋಚೋ ಗ್ರಾಮದಲ್ಲಿ ನಡೆದ ನರಮೇಧ ಮತ್ತು ಸರಣಿ ಅತ್ಯಾಚಾರದ ಘಟನೆಗಳನ್ನು ಪ್ರತೀ ಭಾಷಣದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟರು. ಆಕೆಯ ನೇತೃತ್ವದಲ್ಲಿ ನಾಡಿಯಾ ಯೋಜನೆ (Nadiyad Initiative) ಎಂಬ ಸಂಸ್ಥೆಯು ಆರಂಭವಾಯಿತು. ಆ ಸಂಸ್ಥೆಯು ಮಾನವ ಕಳ್ಳ ಸಾಗಾಟದ ಸಂತ್ರಸ್ತರಿಗೆ ಕಾನೂನು ನೆರವು, ಸಾಂತ್ವನ ಮತ್ತು ಆರ್ಥಿಕ ನೆರವು ಈಗ ನೀಡುತ್ತಿದೆ.
ಮುಂದೆ ಆಕೆ ವಿಯೆಟ್ನಾಂ ದೇಶದ ಆರ್ಚ್ ಬಿಷಪ್ ಅವರನ್ನು ಭೇಟಿ ಮಾಡಿ ಇನ್ನೂ ದುಷ್ಕರ್ಮಿಗಳ ಹಿಡಿತದಲ್ಲಿ ಇದ್ದ ತನ್ನ ಯಜೀದಿ ಜನಾಂಗಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಆಕೆಯ ಆಗ್ರಹದ ಮೇರೆಗೆ ವಿಶ್ವ ಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ತನ್ನ 2379ನೇ ಠರಾವನ್ನು ಅಂಗೀಕಾರ ಮಾಡಿತು. ಯುದ್ಧದ ಅಪರಾಧಗಳು, ಮಾನವ ಕಳ್ಳ ಸಾಗಾಟ, ನರಮೇಧಗಳು ಜಗತ್ತಿನ ಎಲ್ಲೆ ನಡೆದರೂ ಅದನ್ನು ವಿಚಾರಣೆ ಮಾಡಿ ತನಿಖೆ ನಡೆಸಲು ಒಂದು ಸಮಿತಿ ರಚಿಸಬೇಕು ಎನ್ನುವುದೇ ಆ ಠರಾವಿನ ಸಾರಾಂಶ. ನಾಡಿಯಾ ಎಲ್ಲ ಕಡೆಯೂ ಗೆದ್ದರು.
ಯಜೀದಿ ಜನಾಂಗಕ್ಕೆ ಕೊನೆಗೂ ಪರಿಹಾರ ದೊರೆಯಿತು
ನಾಡಿಯಾ ಹೋರಾಟದ ಫಲವಾಗಿ ಇರಾಕ್ ಸರಕಾರವು ಯಜೀದಿ ಜನಾಂಗದ ಕ್ಷಮೆ ಕೇಳಿತು. ಮರಣ ಹೊಂದಿದವರಿಗೆ ಸರಕಾರವೇ ಸಮಾಧಿ ಕಟ್ಟಿತು. ಬದುಕಿ ಉಳಿದವರಿಗೆ ಇರಾಕ್ ಸರಕಾರ ಭೂಮಿ ಮತ್ತು ಉದ್ಯೋಗ ನೀಡಿ ಗೌರವಿಸಿತು. ಒಂದು ಸ್ವಾಭಿಮಾನಿ ಜನಾಂಗದ ನೋವಿಗೆ ಕೊನೆಗೂ ಉಪಶಮನ ದೊರೆಯಿತು. ಅದಕ್ಕೆ ಕಾರಣರಾದ ಮಹಿಳೆ ನಾಡಿಯಾ!
ನಾಡಿಯಾ ಹೋರಾಟಕ್ಕೆ ಎಟುಕಿತು ನೊಬೆಲ್ ಪ್ರಶಸ್ತಿ!
ನಾಲ್ಕು ವರ್ಷಗಳಿಗೂ ಅಧಿಕವಾದ ಆಕೆಯ ಹೋರಾಟಕ್ಕೆ 2018ರ ನೊಬೆಲ್ ಪ್ರಶಸ್ತಿಯು ಒಲಿಯಿತು. ಆ ಪ್ರಶಸ್ತಿ ಪಡೆದ ಮೊದಲ ಇರಾಕ್ ಪ್ರಜೆ ಮತ್ತು ಯಜೀದಿ ಮಹಿಳೆ ಆಕೆ ಎಂದರೆ ಖಂಡಿತ ಅದು ಅದ್ಭುತವೇ!
ನೊಬೆಲ್ ಪ್ರಶಸ್ತಿ ಪಡೆಯುವಾಗ ಆಕೆ ಹೇಳಿದ ಮಾತುಗಳು ತುಂಬಾ ಪ್ರೇರಣಾದಾಯಿ ಆಗಿವೆ.
‘ಯಜೀದಿ ಜನಾಂಗದ ತಾಳ್ಮೆ ಮತ್ತು ಶಕ್ತಿಯ ಬಗ್ಗೆ ನನಗೆ ಹೆಮ್ಮೆ ಇದೆ. ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ದ ಎಲ್ಲರೂ ಸೇರಿ ಹೋರಾಟ ಮಾಡೋಣ. 3000 ಯಜೀದಿ ಮಹಿಳೆಯರು ಮತ್ತು ಹುಡುಗಿಯರು ಇನ್ನೂ ಆ ದುಷ್ಕರ್ಮಿಗಳ ಹಿಡಿತದಲ್ಲಿ ಇದ್ದಾರೆ. ಅವರನ್ನೆಲ್ಲ ಅಲ್ಲಿಂದ ವಿಮೋಚನೆ ಮಾಡುವವರೆಗೆ ನನ್ನ ಹೋರಾಟವು ನಿಲ್ಲುವುದಿಲ್ಲ!’
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಇಂದು ನಾಗರ ಪಂಚಮಿ; ಹಾವಿಗೆ ಹಾಲೆರೆಯುವ ಜತೆಗೆ ತಿಳಿದುಕೊಳ್ಳಬೇಕಾದ 4 ಸಂಗತಿಗಳು
I want to be the last girl with the story of mine!
ಇದು ನನಗೆ ಇಷ್ಟವಾದ ಆಕೆಯ ಕೋಟ್. ಅವಳ ವಯಸ್ಸು ಈಗ ಕೇವಲ 30 ವರ್ಷ! ಆಕೆಯ ಬದುಕಿನ ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ON HER SHOULDERS ಮತ್ತು OTEJ ಎಂಬ ಎರಡು ಸಿನೆಮಾಗಳು ಬಂದು ಧೂಳ್ ಎಬ್ಬಿಸಿವೆ.
ಈಗ ಹೇಳಿ, ನಾಡಿಯಾ ಮುರಾದ್ ಅವರ ಬದುಕು ಮತ್ತು ಹೋರಾಟ ನಿಮಗೆ ಸ್ಫೂರ್ತಿ ನೀಡಿತಾ?