ಒಂದು ಕಾಲದಲ್ಲಿ ಚೆಸ್ ಅಂದರೆ ರಷ್ಯಾ ಎಂದೇ ಕೀರ್ತಿ ಇತ್ತು! ಆದರೆ ಯಾವಾಗ ವಿಶ್ವನಾಥನ್ ಆನಂದ್ ಅವರು ಚೆಸ್ ಕ್ರೀಡೆಯ ಅಂಗಳ ಪ್ರವೇಶ ಮಾಡಿದರೋ ಅಲ್ಲಿಗೆ ಎಲ್ಲವೂ ಬದಲಾಯಿತು. ವಿಶ್ವನಾಥನ್ ಆನಂದ್ ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಏರಿದರು! ಅವರಿಂದ ಸ್ಫೂರ್ತಿ ಪಡೆದು ಪೆಂಟಾಲ ಹರಿಕೃಷ್ಣ, ಕೊನೆರು ಹಂಪಿ ಮೊದಲಾದವರು ಈಗ ಜಾಗತಿಕ ಚೆಸ್ ರಂಗದಲ್ಲಿ ಮಿಂಚುತ್ತಿದ್ದಾರೆ.
ಅವರೆಲ್ಲರನ್ನೂ ಮೀರಿಸುವ ಒಂದು ದೈತ್ಯ ಪ್ರತಿಭೆಯು ಇಂದು ಚೆಸ್ ಕ್ರೀಡೆಯಲ್ಲಿ ಭಾರೀ ಸುದ್ದಿಯನ್ನೇ ಮಾಡುತ್ತಿದೆ. ಅವನೆ 17ರ ಹರೆಯದ ರಮೇಶ್ ಬಾಬು ಪ್ರಗ್ಯಾನಂದ! ಇದೀಗ ದೇಶದಾದ್ಯಂತ ಆತನದ್ದೇ ಸುದ್ದಿ. ದೇಶದ ಪ್ರಧಾನಿ ಮೋದಿ ಆತನಿಗೆ ಫೋನ್ ಮಾಡಿ ಶುಭಾಶಯ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಆತನಿಗೆ ಶಾಭಾಶ್ ಅಂದಿದ್ದಾರೆ. ಆತನ ಆರಾಧ್ಯ ದೇವರಾದ ವಿಶ್ವನಾಥನ್ ಆನಂದ್ ಆತನ ಸಾಧನೆಗೆ ಬೆನ್ನು ತಟ್ಟಿದ್ದಾರೆ. ಏನು ಅಂತಹ ಸಾಧನೆ ಅಂತೀರಾ?
ಹೌದು. ಇತ್ತೀಚೆಗೆ ನಡೆದ ಕ್ರಿಪ್ಟೋ ಕಪ್ ಜಾಗತಿಕ ಮಟ್ಟದ ಚೆಸ್ ಕೂಟದಲ್ಲಿ ಆತ ಸೋಲಿಸಿದ್ದು ಅಂತಿಂಥ ಆಟಗಾರನನ್ನು ಅಲ್ಲ. ಚೆಸ್ ವಿಶ್ವ ಚಾಂಪಿಯನ್ ಮಾಗ್ನಸ್ ಕಾರ್ಲೆಸನ್ ಅವನನ್ನು! ನಾರ್ವೆ ದೇಶದ ಈ ದೈತ್ಯ ಚೆಸ್ ಆಟಗಾರ ಮೂರು ವರ್ಷಗಳ ಅವಧಿಯಲ್ಲಿ ಯಾರಿಗೂ ಸೋತ ನಿದರ್ಶನ ಇರಲಿಲ್ಲ. ಈ ಬಾರಿ ಆತ ಸೋತದ್ದು ಭಾರತದ ಒಬ್ಬ ಬಾಲಪ್ರತಿಭೆಗೆ! ಸತತವಾಗಿ ಮೂರು ಬಾರಿ ವಿಶ್ವ ಚಾಂಪಿಯನ್ ಆಟಗಾರನನ್ನು ಹೆಡೆ ಮುರಿ ಕಟ್ಟಿದ ಕೀರ್ತಿಯು ನಮ್ಮ ಪ್ರಗ್ಯಾನಂದ ಅವನಿಗೆ ದೊರೆಯಿತು. ಜೊತೆಗೆ ಆ ಚೆಸ್ ಕೂಟದಲ್ಲಿ ರನ್ನರ್ ಆಪ್ ಪಟ್ಟ ಕೂಡ! ಇಡೀ ಚೆಸ್ ಜಗತ್ತು ಈಗ ಆತನ ಕಡೆಗೆ ಕೊರಳು ತಿರುಗಿಸಿ ನೋಡಲು ತೊಡಗಿದೆ.
ಇದೇನು ಆಕಸ್ಮಿಕ ಜಯ ಎಂದು ನೀವು ಭಾವಿಸುವ ಅಗತ್ಯವೇ ಇಲ್ಲ! ಏಕೆಂದರೆ ಆತನ ತಾಯಿ ಆರ್ ವೈಶಾಲಿ ಸ್ವತಃ ಓರ್ವ ಚೆಸ್ ಗ್ರಾನ್ ಮಾಸ್ಟರ್! ತಮಿಳುನಾಡಿನ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಪ್ರಗ್ಯಾನಂದ ಕಲಿಕೆಯಲ್ಲಿ ಭಾರೀ ಚುರುಕು! ಎರಡೂವರೆ ವರ್ಷ ಪ್ರಾಯದಲ್ಲಿ ಆತನ ಮುಂದೆ ಚೆಸ್ ಬೋರ್ಡ್ ತಂದಿಟ್ಟು ಆತನ ಜೊತೆಗೆ ಆಡುತ್ತಿದ್ದರು ಆತನ ತಾಯಿ. ಅವನಿಗೆ ಧೈರ್ಯ ತುಂಬಿಸಲು ಅಮ್ಮ ಆತನ ಜೊತೆ ಪದೇಪದೆ ಸೋಲುತ್ತಿದ್ದರು. ಬಾಲ್ಯದಿಂದ ಆತನ ಅಮ್ಮ ಹೇಳುತ್ತಿದ್ದ ವಾಕ್ಯ – ಮಗಾ, ನಿನ್ನ ಎದುರಾಳಿ ಯಾರು ಎಂದು ಯಾವಾಗಲೂ ತಲೆ ಕೆಡಿಸಬೇಡ. ನಿನ್ನ ಆಟ ನಿನ್ನದು!
ಈ ವಾಕ್ಯವೇ ವಿಶ್ವ ಚಾಂಪಿಯನ್ ಆಟಗಾರರನ್ನು ಸೋಲಿಸಲು ಮಗನಿಗೆ ಪ್ರೇರಣೆ ಆದದ್ದು! ಆತ ಅಂಡರ್ 8, ಅಂಡರ್ 10 ವಿಶ್ವ ಚಾಂಪಿಯನ್ ಕೂಟಗಳನ್ನು ಗೆಲ್ಲುತ್ತಾ ಹೋದ ಹಾಗೆ ಆತನ ಅಮ್ಮ ಸಂಭ್ರಮ ಪಡುತ್ತಿದ್ದರು. ಅದರಲ್ಲಿಯೂ ಆತ ಅಂಡರ್ 10 ಪ್ರಶಸ್ತಿ ಗೆಲ್ಲುವಾಗ ಆತನ ವಯಸ್ಸು ಕೇವಲ 7 ಆಗಿತ್ತು! ಇಡೀ ಕೂಟದಲ್ಲಿ ಆತನೇ ಕಿರಿಯ ಆಟಗಾರ!
10ನೆಯ ವಯಸ್ಸಿನಲ್ಲಿ ಆತ ಇಂಟರ್ ನ್ಯಾಷನಲ್ ಮಾಸ್ಟರ್ ಪದವಿ ಸಂಪಾದಿಸುತ್ತಾನೆ! ಚೆಸ್ಸಿನ ಮಹೋನ್ನತ ಪದವಿ ಆದ ಗ್ರಾನ್ ಮಾಸ್ಟರ್ ಕಿರೀಟ ಒಲಿಸಿಕೊಂಡಾಗ ಆತನ ವಯಸ್ಸು ಕೇವಲ 12! ಈಗ ಚೆಸ್ ಆಟದಲ್ಲಿ ಆತನ ವಿಶ್ವ ಮಟ್ಟದ ರಾಂಕಿಂಗ್ ಕೇವಲ 89! ಇವನ್ನೆಲ್ಲ ಗಮನಿಸಿದಾಗ ಆತ ಚೆಸ್ ಜಗತ್ತನ್ನು ಮುದೆ ಆಳುತ್ತಾನೆ ಎಂದು ಯಾರು ಬೇಕಾದರೂ ಭವಿಷ್ಯ ಹೇಳಬಹುದು.
ಇದುವರೆಗೆ ಆತ ಹತ್ತಕ್ಕೂ ಹೆಚ್ಚು ವಿಶ್ವಮಟ್ಟದ ಕೂಟಗಳನ್ನು ಗೆದ್ದಾಗಿದೆ! ಮಹೋನ್ನತ ಗ್ರಾನ್ ಮಾಸ್ಟರಗಳಾದ ಗೇಬ್ರಿಯಲ್ ಸರ್ಗಿಸ್ಸನ್, ಆಂಡಿ ಎಸೀಪೆಂಕೊ ಅವರನ್ನು ಸೋಲಿಸಿ ಆಗಿದೆ. ಕೋರೋನಾ ಸಮಯದಲ್ಲಿ ಕೂಡ ಆನಲೈನ್ ಚೆಸ್ ಕೂಟಗಳಲ್ಲಿ ಭಾಗವಹಿಸುತ್ತಾ ಬಂದಿರುವ ಪ್ರಗ್ಯಾನಂದ ಸೋತ ಉದಾಹರಣೆ ಬಹಳ ಕಡಿಮೆ. ರಾಪಿಡ್ ಚೆಸ್ ಆತನ ಆಪ್ತವಾದ ಕ್ಷೇತ್ರ ಎನ್ನುತ್ತಾನೆ!
ಚೆಸ್ ಆಟದಲ್ಲಿ ಭಾರತದ ಭರವಸೆಗಳು ಈ ರೀತಿಯಲ್ಲಿ ಅರಳುತ್ತಿರುವಾಗ ಯಾರಿಗೆ ಸಂತೋಷ ಆಗುವುದಿಲ್ಲ ಹೇಳಿ.
ಇದನ್ನೂ ಓದಿ| ರಾಜ ಮಾರ್ಗ ಅಂಕಣ |ನೀವು ಮಾಡುವ ಒಳ್ಳೆ ಕೆಲಸ ನಿಲ್ಲಿಸಬೇಡಿ, ಯಾರನ್ನೋ ಮೆಚ್ಚಿಸಲು ಏನೂ ಮಾಡಬೇಡಿ