1)OUR CHARACTER
ವಿವೇಕಾನಂದರು ಅಮೆರಿಕಕ್ಕೆ ಹೋಗಿದ್ದಾಗ ಅವರ ಡ್ರೆಸ್ ಕೋಡ್ ಬಗ್ಗೆ ತುಂಬಾ ಟೀಕೆಗಳನ್ನು ಎದುರಿಸಬೇಕಾಯಿತು. ಆಗ ಅವರು ಹೇಳಿದ ಮಾತು – ನಿಮ್ಮ ದೇಶಗಳನ್ನು ಜನರು ಡ್ರೆಸ್ ಕೋಡಿನಿಂದ ಗುರುತಿಸುತ್ತಾರೆ. ನಮ್ಮ ದೇಶವನ್ನು ಜನರು ಗುರುತಿಸುವುದು CHARACTER ಮೂಲಕ! ಅವರ ಮಾತು ನೂರಕ್ಕೆ ನೂರರಷ್ಟು ನಿಜವಾಗಿತ್ತು. ಅದೇ ಭಾರತದ ಅನನ್ಯತೆ. ಅದೇ ಭಾರತದ ವಿಶಿಷ್ಟತೆ. ಭಾರತದ ಕೋರ್ ಮೌಲ್ಯಗಳು ಇಡೀ ಜಗತ್ತನ್ನು ಬೆಳಗಿದ ನಿದರ್ಶನಗಳು ನೂರಾರು ಇವೆ.
2) OUR CULTURAL HERITAGE
ಭಾರತದ ಸಾಂಸ್ಕೃತಿಕ ಪರಂಪರೆ ತುಂಬಾ ವಿಸ್ತಾರವಾದದ್ದು ಮತ್ತು ಅಗಾಧವಾದದ್ದು! ನಮ್ಮ ಪೂರ್ವಜರು ಈ ಪರಂಪರೆಯನ್ನು ತುಂಬಾ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ನಮ್ಮ ಸಂಸ್ಕೃತಿ ಎಂದಿಗೂ ಸ್ಥಾಯಿ ಆದದ್ದೇ ಇಲ್ಲ. ಅದು ನಿರಂತರವಾಗಿ ಹರಿಯುತ್ತಲೇ ಬಂದಿದೆ. ಒಂದು ತಲೆಮಾರು ತನಗೆ ದೊರೆತ ಸಂಸ್ಕೃತಿಯ ಸೆಲೆಗಳನ್ನು ತನ್ನ ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡದೆ ವಿರಮಿಸಿದ್ದು ಇಲ್ಲವೇ ಇಲ್ಲ!
3)OUR ETHICAL VALUES
ನಮ್ಮ ದೇಶದ ಪುರಾಣಗಳು, ಉಪನಿಷತ್ತುಗಳು ನಿಂತಿರುವುದೇ ನೈತಿಕ ಮೌಲ್ಯಗಳ ಮೇಲೆ! ನಮ್ಮ ನೈತಿಕ ಮೌಲ್ಯಗಳು ನಿಂತಿರುವುದು ವಿಧಿ (To be done) ಮತ್ತು ನಿಷೇಧ (Not to be done) ಎಂಬ ಎರಡು ಬಲಿಷ್ಠ ಕಂಬಗಳ ಮೇಲೆ ಎಂದರೆ ಹೆಚ್ಚು ಸರಿ.
ವಿಧಿ ಎಂದರೆ ಮಾಡಬೇಕಾದದ್ದು. ನಿಷೇಧ ಎಂದರೆ ಮಾಡಲೇ ಬಾರದಾದದ್ದು. ನಮ್ಮ ಹಿರಿಯರು ಧನ ಸಂಪಾದನೆಗೂ ವಿಧಿ ಮತ್ತು ನಿಷೇಧಗಳನ್ನು ಹೇರಿದರು. ಅನ್ಯಾಯದ ಮಾರ್ಗದಲ್ಲಿ ಸಂಪಾದನೆ ಮಾಡಿರುವ ದುಡ್ಡು ಅದು ವರ್ಜ್ಯ ಎಂದು ನಮ್ಮ ಉಪನಿಷತ್ತುಗಳು ಹೇಳಿವೆ ಮತ್ತು ನಮ್ಮ ಹಿರಿಯರು ಅದನ್ನು ತಮ್ಮ ಜೀವನದಲ್ಲಿ ನೂರಕ್ಕೆ ನೂರರಷ್ಟು ಅನುಷ್ಟಾನ ಮಾಡಿದರು.
4) OUR RITUALS
ನಮ್ಮ ಧಾರ್ಮಿಕ ವಿಧಿಗಳು ಮತ್ತು ಅವುಗಳ ಹಿಂದೆ ಇರುವ ವಿಶಾಲವಾದ ದೃಷ್ಟಿಕೋನಗಳು ಹೆಚ್ಚು ವೈಜ್ಞಾನಿಕ ಆಗಿವೆ. ನಮ್ಮ ಷೋಡಶ (16) ಸಂಸ್ಕಾರಗಳ ಹಿಂದೆ ಇರುವ ಮಂತ್ರಗಳು ಮತ್ತು ಆಶಯಗಳು ಗೊಡ್ಡು ಸಂಪ್ರದಾಯಗಳು ಅಲ್ಲ.
ಅಂಧ ಶ್ರದ್ಧೆಗಳು ಅಲ್ಲ. ನಮ್ಮ ಹಿರಿಯರಿಗೆ ನಾವು ಮಾಡುವ ಶ್ರಾದ್ಧ ಕರ್ಮಗಳು ಜಾಗತಿಕ ಮನ್ನಣೆ ಪಡೆದಿವೆ. ನಮ್ಮ ಭಾರತೀಯ ಧರ್ಮದ ಅನುಷ್ಠಾನಗಳು, ಪೂಜೆಗಳು, ಪುನಸ್ಕಾರಗಳು, ನಮ್ಮ ಹಬ್ಬಗಳು, ನಮ್ಮ ಆಚರಣೆಗಳು, ನಮ್ಮ ಉತ್ಸವಗಳು, ನಮ್ಮ ಮಂತ್ರಗಳು ಎಲ್ಲವೂ ವೈಜ್ಞಾನಿಕ ಆಗಿವೆ. ಗಾಯತ್ರೀ ಮಂತ್ರವು ಜಗತ್ತಿನ ಅತ್ಯಂತ ಶಕ್ತಿಶಾಲಿ ಮಂತ್ರ ಎಂದು ವಿಜ್ಞಾನವು ಒಪ್ಪಿಕೊಂಡಿದೆ.
5) OUR AESTHETIC VALUES
ನಮ್ಮ ಸೌಂದರ್ಯ ಪ್ರಜ್ಞೆಯು ಜಾಗತಿಕ ಮನ್ನಣೆ ಪಡೆದಿದೆ. ನಮ್ಮ ದೇವಾಲಯಗಳು, ನಮ್ಮ ನೃತ್ಯ ಪ್ರಕಾರಗಳು, ನಮ್ಮ ಸಂಗೀತದ ಸ್ವರಗಳು, ನಮ್ಮ ಸಂಗೀತದ ರಾಗಗಳು, ಜಾನಪದ ಪ್ರಪಂಚ, ನಮ್ಮ ವಸ್ತ್ರವಿನ್ಯಾಸಗಳು, ನಮ್ಮ ಹಸೆ, ರಂಗೋಲಿ, ನಾಟಕ ಕಲೆ ಇವುಗಳನ್ನು ಅಧ್ಯಯನ ಮಾಡುತ್ತಾ ಹೋದಂತೆ ನೀವು ಭಾರತವನ್ನು ಹೆಚ್ಚು ಹೆಚ್ಚು ಪ್ರೀತಿ ಮಾಡುತ್ತೀರಿ. ನಮ್ಮ ಪ್ರತಿಯೊಂದು ಕಲೆಯೂ ಸಮಮಿತಿ, ಲಯ, ಗತಿ, ವರ್ಣ ವಿನ್ಯಾಸ, ಮಾಧುರ್ಯ ಇವುಗಳನ್ನು ಹೊಂದಿವೆ. ಇವೆಲ್ಲವೂ ಭಾರತೀಯ ಸೌಂದರ್ಯ ಪ್ರಜ್ಞೆಯ ಶ್ರೇಷ್ಟವಾದ ಮಾನದಂಡಗಳು.
6) OUR RELATIONS
ನಮ್ಮ ಕೌಟುಂಬಿಕ ವ್ಯವಸ್ಥೆ, ನಮ್ಮ ಗುರು ಶಿಷ್ಯ ಸಂಬಂಧ, ವೈವಾಹಿಕ ಸಂಬಂಧಗಳು ಇವುಗಳನ್ನು ನೀವು ಗಮನಿಸುತ್ತ ಹೋದಂತೆ ನಾವು ಬೇರೆಲ್ಲ ದೇಶಗಳಿಗಿಂತ ಎತ್ತರದಲ್ಲಿ ನಿಲ್ಲುತ್ತೇವೆ. ಬೇರೆಲ್ಲ ದೇಶಗಳಲ್ಲಿ ವಿವಾಹ ಅನ್ನುವುದು ಒಂದು ಒಪ್ಪಂದ ಮಾತ್ರ ಆಗಿರುತ್ತದೆ. ಆದರೆ ನಮ್ಮ ಭಾರತದಲ್ಲಿ ಅದೊಂದು ಭಾವನಾತ್ಮಕ ಸಂಬಂಧ ಆಗಿರುತ್ತದೆ! ತಾಯಿ ತನ್ನ ಮಗುವಿಗೆ ಜನ್ಮ ಕೊಟ್ಟಾಗ ಕರುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಆಗ ತಾಯಿ ಮತ್ತು ಮಗುವಿನ ಸಾವಯವ ಸಂಬಂಧ ಕಡಿದು ಹೋಗುತ್ತದೆ. ಆದರೆ ಭಾವನಾತ್ಮಕ ಸಂಬಂಧವು ಕೊನೆಯವರೆಗೆ ಉಳಿಯುತ್ತದೆ. ಭಾರತೀಯರು ತಮ್ಮ ಭಾವನೆಗಳಲ್ಲಿ ಹೆಚ್ಚು EXPRESSIVE ಆಗಿರುತ್ತಾರೆ ಅನ್ನೋದು ನಮಗೆ ವಿದೇಶಿಯರು ಕೊಟ್ಟ ಪ್ರಶಸ್ತಿ ಪತ್ರ!
7) OUR SCHOLASTIC THIRST
‘ನಹೀ ಜ್ಞಾನೇನ ಸದೃಶಂ’ ಎಂದು ಗಾಢವಾಗಿ ನಂಬಿದ ಮತ್ತು ಅದನ್ನು ಘಂಟಾಘೋಷವಾಗಿ ಸಾರಿದ ಜಗತ್ತಿನ ಒಂದೇ ಒಂದು ರಾಷ್ಟ್ರ ಅದು ಭಾರತ! ಇದರಲ್ಲಿ ಸಂಶಯವೇ ಇಲ್ಲ. ಜಗತ್ತಿನ ಅತ್ಯಂತ ಪುರಾತನವಾದ ವಿಶ್ವವಿದ್ಯಾಲಯಗಳು ಇದ್ದದ್ದು ಭಾರತದಲ್ಲಿ! ಸಾವಿರಾರು ತಾಳೆ ಗರಿಯ ಗ್ರಂಥಗಳನ್ನು ಭಕ್ತಿಯಾರ್ ಖಿಲ್ಜಿ ಎಂಬ ಒಬ್ಬ ವಿದೇಶೀ ಆಕ್ರಮಣಕಾರನು ಬೆಂಕಿ ಕೊಟ್ಟು ಸುಟ್ಟು ಹಾಕಿದಾಗ ತಮ್ಮ ನೆನಪಿನ ಶಕ್ತಿಯನ್ನು ಉಪಯೋಗ ಮಾಡಿಕೊಂಡು ಅಷ್ಟೂ ತಾಳೆ ಗರಿಯ ಗ್ರಂಥಗಳನ್ನು ಮರುಸೃಷ್ಟಿ ಮಾಡಿದ ದೇಶ ನಮ್ಮದು! ಬರೆಯಲು ಯಾವ ಸೌಲಭ್ಯ ಇಲ್ಲದ ಹೊತ್ತಿನಲ್ಲಿ ಕೂಡ ಶ್ರವಣ ವಿಧಾನದ (ಆಲಿಸುವ ಮೂಲಕ) ನಮ್ಮ ವೇದಗಳು ಶತಮಾನಗಳ ಕಾಲ ಹರಿದು ಬಂದವು ಅಂದರೆ ಭಾರತ ತುಂಬಾ ಗ್ರೇಟ್ ಆಗಿರಬೇಕು.
ಭಾ ಅಂದರೆ ಜ್ಞಾನ, ರತ ಅಂದರೆ ಮುಳುಗಿದ ಹೀಗೆ ಭಾರತ ಅಂದರೆ ಜ್ಞಾನದಲ್ಲಿ ಮುಳುಗಿದ ರಾಷ್ಟ್ರ ಎಂಬ ಅರ್ಥದಲ್ಲಿ ಭಾರತವು ಜ್ಞಾನದಲ್ಲಿ ವಿಶ್ವಗುರು ಆಗಿದೆ!
8) UNIVERSAL BROTHERHOOD
‘ವಸುದೈವ ಕುಟುಂಬಕಂ’ ಎಂಬ ಆರ್ಷೇಯ ವಾಕ್ಯದ ಪಂಚಾಂಗದ ಮೇಲೆ ಭಾರತದ ನಂಬಿಕೆಗಳು ಜೀವಂತವಾಗಿವೆ. ಜಗತ್ತಿನ ಹಲವಾರು ರಾಷ್ಟ್ರಗಳು ವಿಪತ್ತುಗಳನ್ನು ಎದುರಿಸಿದಾಗ, ಸಂತ್ರಸ್ತವಾದಾಗ ಭಾರತವು ಶತಮಾನಗಳಿಂದ ಅವುಗಳ ನೆರವಿಗೆ ಹೋಗಿದೆ. ಈಗಲೂ ಹೋಗುತ್ತಿದೆ. ಭಾರತದ ಮೇಲೆ ಸಾವಿರಾರು ವಿದೇಶೀ ಆಕ್ರಮಣಗಳು ಆಗಿವೆ. ಆದರೆ ಭಾರತವು ತಾನಾಗಿ ಹೋಗಿ ಕಾಲು ಕೆದರಿ ಜಗಳ ಮಾಡಿದ್ದು ಇಲ್ಲವೇ ಇಲ್ಲ! ವಿದೇಶದ ಪ್ರಮುಖವಾದ ಯಾತ್ರಿಕರು, ಸಂತರು, ಕಲಾವಿದರು, ವಿದ್ವಾಂಸರು ಭಾರತಕ್ಕೆ ಬಂದಾಗ ನಾವು ಅವರನ್ನು ತೆರೆದ ತೋಳುಗಳಿಂದ ಸ್ವಾಗತಿಸಿದ್ದೇವೆ ಮತ್ತು ಗೌರವಿಸಿದ್ದೇವೆ. ಇದಕ್ಕೆ ಸಾವಿರಾರು ಉದಾಹರಣೆಗಳು ನಮಗೆ ದೊರೆಯುತ್ತವೆ.
9) OUR TRUTHFULNESS
‘ಸತ್ಯಮೇವ ಜಯತೇ’ ಎಂಬ ಮಂಡೂಕ ಉಪನಿಷತ್ತಿನ ವಾಕ್ಯವನ್ನು ನಮ್ಮ ರಾಷ್ಟ್ರದ ಧ್ಯೇಯವಾಕ್ಯವಾಗಿ ಹೊಂದಿರುವ ರಾಷ್ಟ್ರ ನಮ್ಮದು! ಅದೇ ಉಪನಿಷತ್ತಿನ ಮುಂದಿನ ವಾಕ್ಯ ಹೇಳುತ್ತದೆ – ನಾನೃತಂ!
ಅಂದರೆ ಸತ್ಯವೇ ಗೆಲ್ಲುತ್ತದೆ, ಸುಳ್ಳು ಅಲ್ಲವೇ ಅಲ್ಲ ಎಂದು! ‘ಸತ್ಯವೇ ನಮ್ಮ ತಾಯಿ ತಂದೆ’ ಎಂದು ನುಡಿದ, ನುಡಿದಂತೆ ನಡೆದ ಪುಣ್ಯಕೋಟಿಯ ನಾಡು ಇದು. ಸತ್ಯನಿಷ್ಠೆಯಲ್ಲಿ ಪುಟವಿಟ್ಟ ಚಿನ್ನದಂತೆ ಎದ್ದುಬಂದ ಸತ್ಯ ಹರಿಶ್ಚಂದ್ರನ ಕಥೆಯನ್ನು ಗೌರವಿಸುತ್ತಾ ಬೆಳೆದಿರುವ ಪರಂಪರೆ ನಮ್ಮದು. ಸತ್ಯವನ್ನು ಒಂದು ಆಯುಧವಾಗಿ ಉಪಯೋಗ ಮಾಡಿ ಸ್ವಾತಂತ್ರ್ಯ ಹೋರಾಟವನ್ನು ಕಟ್ಟಿದವರು ಮಹಾತ್ಮ ಗಾಂಧೀಜಿ. ಅದರಿಂದಾಗಿ ಭಾರತದ ಅಸ್ಮಿತೆಗಳನ್ನು ಹುಡುಕುತ್ತಾ ಹೊರಟಾಗ ಈ ಸತ್ಯವು ಭಾರತದ ಆತ್ಮವಾಗಿದೆ ಎಂದು ನನಗೆ ಅರಿವಾಗಿದೆ.
10) OUR CREATIVE ARTS
ನಮ್ಮ ಸೃಜನಶೀಲ ಚಿಂತನೆಗಳು ಸಹಸ್ರಮಾನದಿಂದ ಜಗತ್ತನ್ನು ಬೆರಗು ಮಾಡುತ್ತಾ ಬಂದಿವೆ. ಭಾರತೀಯರ ಲಲಿತಕಲೆಗಳನ್ನು ಬೇರೆ ಯಾವ ದೇಶವೂ ಕಾಪಿ ಮಾಡಲು ಸಾಧ್ಯ ಆಗಲಿಲ್ಲ! ನಮ್ಮ ಚಿತ್ರಕಲಾವಿದ ರಾಜಾ ರವಿವರ್ಮ, ನಮ್ಮ ಸಂಗೀತ ಕಲಾವಿದರಾದ ಎಂ ಎಸ್ ಸುಬ್ಬುಲಕ್ಷ್ಮಿ, ನಮ್ಮ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್ ಮೊದಲಾದವರು ಇಂದು ವಿಶ್ವಮಾನ್ಯತೆ ಪಡೆಯಲು ಈ ಅನನ್ಯತೆಯೇ ಕಾರಣ ಆಗಿದೆ. ನಮ್ಮ ‘ಪಂಚತಂತ್ರ’ ಎಂಬ ಪ್ರಾಣಿಪಕ್ಷಿಗಳ ಕತೆಗಳು ಜಗತ್ತಿನ ಆರುವತ್ತಕ್ಕೂ ಹೆಚ್ಚು ರಾಷ್ಟ್ರಗಳ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆದಿವೆ ಎಂದರೆ ಅದು ಭಾರತದ ಸೃಜನಶೀಲ ಚಿಂತನೆಗಳ ವಿಜಯ ಎಂದೇ ನಾನು ಭಾವಿಸುತ್ತೇನೆ!
ಹೀಗೆ ಹುಡುಕುತ್ತಾ ಹೊರಟರೆ ಭಾರತವನ್ನು ಪ್ರೀತಿಸಲು ನೂರಾರು ಕಾರಣಗಳು ದೊರೆಯುತ್ತವೆ. ಹಮಾರಾ ಭಾರತ್ ಮಹಾನ್ ಎಂದು ನೀವು ಒಪ್ಪುತ್ತೀರಲ್ಲಾ?
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಐಕಾನ್‌ಗಳು ಎರಡೆರಡು ಬಾರಿ ಹುಟ್ಟುತ್ತಾರೆ! ಆಶ್ಚರ್ಯ ಆಯ್ತಾ? ಇದನ್ನು ಓದಿ!