ಯಾವುದೋ ಕಾರಣಕ್ಕೆ ವಿಶೇಷ ಅಗತ್ಯವುಳ್ಳ ಮಕ್ಕಳಾಗಿ ಹುಟ್ಟಿದ ಲಕ್ಷಾಂತರ ಮಕ್ಕಳಿದ್ದಾರೆ! ಇನ್ನೂ ಕೆಲವರು ಬಾಲ್ಯದಲ್ಲಿ ಅಥವಾ ಮುಂದೆ ಯಾವುದಾದರೂ ಮಾರಕವಾದ ಕಾಯಿಲೆಗೆ ಅಥವಾ ಅಪಘಾತಕ್ಕೆ ತುತ್ತಾಗಿ ವಿಶೇಷ ಚೇತನರಾಗಿ ಬಳಲುವ ಮಂದಿ ಇದ್ದಾರೆ! ಕೆಲವರು ಆ ನೋವುಗಳನ್ನು ಒಳಗಿಟ್ಟುಕೊಂಡು ಜೀವನಪೂರ್ತಿ ಕಣ್ಣೀರು ಸುರಿಸುತ್ತ ಬದುಕಿದರೆ, ಇನ್ನೂ ಕೆಲವರು ತಮ್ಮ ಇಚ್ಛಾಶಕ್ತಿಯಿಂದ ಎಲ್ಲವನ್ನೂ ಗೆದ್ದು ಜಗತ್ತನ್ನೇ ಮೆಟ್ಟಿ ನಿಲ್ಲುತ್ತಾರೆ. ಇಂದಿನ ದಿನ ಜಗತ್ತಿನಾದ್ಯಂತ ಇರುವ ಅಂತಹ ಹತ್ತು ವಿಶ್ವವಿಜೇತರ ಯಶೋಗಾಥೆಗಳು ಇದೋ ನಿಮಗಾಗಿ!
೧) ಸ್ಟೀಫನ್ ಹಾಕಿಂಗ್( 1942-2018)
ಇವರು ಬ್ರಿಟನ್ನಿನಲ್ಲಿ ಜನಿಸಿದ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು. ಇವರಿಗೆ ಅತೀ ಸಣ್ಣ ಪ್ರಾಯದಲ್ಲಿ Amyotrophic Lateral Scherosis ( ALS) ಎಂಬ ವಿಚಿತ್ರವಾದ ಕಾಯಿಲೆಯು ಅಮರಿತು! ಅಂದರೆ ದೇಹದ ಒಂದೊಂದೇ ಭಾಗ ಸಾಯುತ್ತ ಹೋಗುವ ಕಾಯಿಲೆ. ತನ್ನ ಜೀವನದ ದೀರ್ಘ ಅವಧಿಯನ್ನು ವೀಲ್ ಚೇರ್ ಮೇಲೆ ಕಳೆದ ಹಾಕಿಂಗ್ ಬಾಹ್ಯಾಕಾಶದ ಬ್ಲಾಕ್ ಹೋಲ್ಸ್ ( Black Holes) ಮೇಲಿನ ಸಂಶೋಧನೆಗೆ ಪ್ರಸಿದ್ಧರಾದರು. ಆ ಕಾಯಿಲೆಯ ಪ್ರಖರತೆಯಿಂದ ಜೀವನವಿಡೀ ನರಳಿದ ಹಾಕಿಂಗ್ ಕೊನೆಗೆ ತನ್ನ ಮಾತಾಡುವ ಸಾಮರ್ಥ್ಯವನ್ನು ಕೂಡ ಕಳೆದುಕೊಂಡರು. ಆದರೆ ಆತನ ಸಂಶೋಧನೆಗಳು ಮತ್ತು ಬರೆದ ಪುಸ್ತಕಗಳು ಯಾವ ಕಾಲಕ್ಕೂ ಮಾತನಾಡುತ್ತಲೇ ಇರುತ್ತವೆ.
೨) ಹೆಲೆನ್ ಕೆಲ್ಲರ್ ( 1880-1968)
ಅಮೆರಿಕನ್ ಆಗಿದ್ದ ಹೆಲೆನ್ ಕೆಲ್ಲರ್ ತನ್ನ ಕಿವುಡುತನ ಮತ್ತು ಕುರುಡುತನಗಳನ್ನು ಮೆಟ್ಟಿ ನಿಂತರು. ಈ ದೈಹಿಕ ನ್ಯೂನತೆ ಹೊಂದಿದ್ದ ಜಗತ್ತಿನ ಮೊತ್ತಮೊದಲ ಪದವೀಧರೆ ಆಗಿ ಆಕೆ ಸಾಧನೆ ಮಾಡುತ್ತಾರೆ. ಶಿಕ್ಷಣರಂಗದ ಆಕೆಯ ಸಾಧನೆಗಳನ್ನು ಪ್ರಪಂಚವು ಮುಕ್ತಕಂಠದಿಂದ ಶ್ಲಾಘನೆ ಮಾಡಿತ್ತು.
೩) ಫ್ರಾಂಕ್ಲಿನ್ ರೂಸ್ವೆಲ್ಟ್ ( 1882-1945)
ಎರಡು ಕಾಲುಗಳ ಶಕ್ತಿಯನ್ನು ಪೋಲಿಯೊ ಕಾರಣಕ್ಕೆ ಕಳೆದುಕೊಂಡ ರೂಸ್ವೆಲ್ಟ್ 1935-45ರ ದೀರ್ಘ ಅವಧಿಗೆ ಅಮೆರಿಕಾದ ಅಧ್ಯಕ್ಷ ಆಗಿ ಆಧುನಿಕ ಅಮೆರಿಕಾದ ನಿರ್ಮಾಪಕರಲ್ಲಿ ಒಬ್ಬರು ಎಂದು ಕರೆಸಿಕೊಂಡಿದ್ದಾರೆ.
೪) ಕ್ರಿಸ್ಟೋಫರ್ ರೀವ್ ( 1952- 2004)
ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದ ಈತ ಕುತ್ತಿಗೆಯ ಕೆಳಗಿನ ಭಾಗ ಪೂರ್ತಿಯಾಗಿ ಪಾರಾಲೈಸ್ ಆದರು. ಆದರೆ ಬಾಲಿವುಡಿನ ಪ್ರಸಿದ್ಧ ನಟರಾಗಿ ಅವರು ಅತ್ಯುತ್ತಮ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಜನರು ಅವರನ್ನು ಈಗಲೂ ‘ಸೂಪರ್ ಮ್ಯಾನ್’ ಸರಣಿಯ ಸಿನೆಮಾಗಳ ಅಭಿನಯಕ್ಕಾಗಿ ನೆನಪಿಟ್ಟುಕೊಂಡಿದ್ದಾರೆ.
೫) ನಿಕ್ ವುಜಿಸಿಕ್ (ಆಸ್ಟ್ರೇಲಿಯ)
1982ರಲ್ಲಿ ಜನ್ಮತಾಳಿದ ನಿಕ್ ಎರಡು ಕೈ, ಎರಡು ಕಾಲು ಇಲ್ಲದ ವಿಶೇಷ ದೇಹದ ಮಾಲೀಕ! ಇಂದಿಗೂ ಸ್ವಾವಲಂಬಿ ಆಗಿ ಬದುಕುತ್ತಿದ್ದಾನೆ. ಆತನ ಪ್ರೇರಣಾತ್ಮಕ ಮಾತುಗಳು ನೂರಾರು ಬಾರಿ ನನ್ನ ತರಬೇತಿಯ ಕಾರ್ಯಕ್ರಮದ ಭಾಗ ಆಗಿವೆ. Attitude is Attitude ಆತನ ಭಾರೀ ಫೇಮಸ್ ವಿಡಿಯೊ. ಒಮ್ಮೆ ನೋಡಿ ಬನ್ನಿ.
೬) ಎಸ್ತರ್ ವರ್ಗೀರ್ ( ಹಾಲೆಂಡ್)
ಬಾಲ್ಯದಿಂದ ಪಾರಾಲಿಸಿಸ್ ಆಗಿರುವ ಈಕೆಯು ಇಡೀ ಜೀವನವನ್ನು ವೀಲ್ ಚೇರ್ ಮೇಲೆ ಕಳೆಯಬೇಕಾದ ಅನಿವಾರ್ಯತೆ ಹೊಂದಿದ್ದಾರೆ. ಆದರೆ ಸಾಧನೆಗೆ ಮಿತಿಯೇ ಇಲ್ಲ. ಜಗತ್ತಿನ ನಂಬರ್ ಒನ್ ‘ವೀಲ್ ಚೇರ್ ಟೆನಿಸ್ ಆಟಗಾರ್ತಿ’ ಆಗಿರುವ ಈಕೆ ಈವರೆಗೆ 470 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದಾರೆ! ಆಕೆ 23 ವರ್ಷಗಳಲ್ಲಿ ಒಂದೇ ಒಂದು ಪಂದ್ಯವನ್ನು ಸೋತ ಉದಾಹರಣೆ ಇಲ್ಲ. ಏಳು ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ ಕೂಡ ಗೆದ್ದಿದ್ದಾರೆ. ಇಂತವರ ಸಾಧನೆ ಗಮನಿಸಿದಾಗ ಆಕಾಶವೇ ಮಿತಿ ಎಂದು ನನಗೆ ಅನ್ನಿಸುತ್ತದೆ.
೭) ಜಾನ್ ನಾಶ್ ( 1928-2015)
Acute Paranoid Schizophrenia ( APS) ಎಂಬ ವಿಚಿತ್ರ ಕಾಯಿಲೆಯಿಂದ ಜೀವನಪೂರ್ತಿ ಬಳಲಿದ ಜಾನ್
ನಾಶ್ ಗಣಿತದ ಮೇರುಪ್ರತಿಭೆ ಎಂದು ಕರೆಸಿಕೊಳ್ಳುತ್ತಾರೆ. ಅರ್ಥಶಾಸ್ತ್ರದಲ್ಲಿ 1994ರ ನೊಬೆಲ್ ಪ್ರಶಸ್ತಿ ಕೂಡ ಆತ ಗೆದ್ದಿದ್ದಾರೆ. ಆತನ ಬದುಕಿನ ಹೋರಾಟಗಳ ಬಗ್ಗೆ A Beautiful Mind ಎಂಬ ಒಂದು ಹಾಲಿವುಡ್ ಸಿನೆಮಾ ಕೂಡ ಬಂದಿದೆ.
೮) ಫ್ರೀಡಾ ಕಹ್ಲೋ (1907- 1954)
ಪಾರ್ಕಿನ್ಸನ್ ಕಾಯಿಲೆಯಿಂದ ಜೀವನವಿಡೀ ನರಳಿದ ಈ ಮಹಾನ್ ಚಿತ್ರಕಲಾವಿದೆ ತಮ್ಮ ಜೀವನದ ಬಹುದೀರ್ಘ ಅವಧಿಯನ್ನು ಹಾಸಿಗೆಯ ಮೇಲೆ ಕಳೆದರು. ಮುಂದೆ ರಸ್ತೆಯ ಅಪಘಾತದಲ್ಲಿ ಆಕೆ ಇನ್ನಷ್ಟು ಜರ್ಜರಿತ ಆದರು. ಆದರೆ ಕೊನೆಯವರೆಗೆ ಪೈಂಟಿಂಗ್ ಸಾಧನೆ ನಿಲ್ಲಿಸಲಿಲ್ಲ. ಆಕೆಯ ಪೈಂಟಿಂಗ್ಗಳು ದಾಖಲೆ ಬೆಲೆಗೆ ಮಾರಾಟ ಆಗಿವೆ. ಆಕೆ ಮೆಕ್ಸಿಕೋ ದೇಶದವರು.
೯) ಮೊಹಮ್ಮದ್ ಅಲಿ ( ಅಮೆರಿಕಾ)
ವಿಶ್ವ ಬಾಕ್ಸಿಂಗ್ ಚಾಂಪಿಯನ್ ಕೂಡ ಆಗಿದ್ದ ಮೊಹಮ್ಮದ್ ಅಲಿ ದೀರ್ಘ ಕಾಲ್ ಬಾಕ್ಸಿಂಗ್ ಸಾಮ್ರಾಟ ಆಗಿ ಮಿಂಚಿದವರು. ಆದರೆ ಡಿಸಲೆಕ್ಸಿಯಾ ಎಂಬ ವಿಚಿತ್ರ ಕಾಯಿಲೆಯ ಜೊತೆಗೆ ಕೂಡ ಆತ ಹೋರಾಟ ಮಾಡಬೇಕಾಯಿತು. ಆತನ ಅಂತ್ಯವು ಅತ್ಯಂತ ದಾರುಣ ಆಗಿತ್ತು. ಆದರೆ, ಇದ್ಯಾವುದೂ ಅವರ ಇಚ್ಛಾಶಕ್ತಿಯ ಬೇರುಗಳನ್ನು ಅಲುಗಾಡಿಸಲು ಸಾಧ್ಯವೇ ಆಗಲಿಲ್ಲ. ಅವರ ಒಂದೊಂದು ಪಂಚ್ಗಳು ಕೂಡಾ ಹತಾಶೆಗೆ, ಸೋಲಿಗೆ ಹೊಡೆತ ಮರ್ಮಾಘಾತಗಳೇ ಆಗಿದ್ದವು.
೧೦) ಲೂಯಿಸ್ ಬ್ರೈಲ್ ( ಫ್ರಾನ್ಸ್)
ಕುರುಡನಾಗಿದ್ದ ಆತ ಜಗತ್ತಿನ ಮಹಾ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಂಡರು. ಕುರುಡರು ಓದಲು, ಬರೆಯಲು ಸಹಾಯ ಮಾಡುವ ಬ್ರೈಲ್ ಲಿಪಿಯನ್ನು ಆತ ಸಂಶೋಧನೆ ಮಾಡಿ ಕುರುಡರಿಗೆ ಮಹದುಪಕಾರ ಮಾಡಿದ್ದಾರೆ.
ಈ ವಿಶೇಷ ಚೇತನ ಸಾಧಕರಿಗೆ ಒಂದು ದೊಡ್ಡ ಸಲಾಂ ಹೇಳುತ್ತ ಅವರನ್ನು ಅಭಿನಂದಿಸೋಣ. ಅವರ ಸಾಧನೆಯು ನಮಗೆಲ್ಲ ಪ್ರೇರಣೆ ನೀಡಲಿ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ |ತುತ್ತು ಅನ್ನಕ್ಕಿದೆ ಕೋಟಿ ಮೌಲ್ಯ: ಅರಿತು ಬಳಸೋಣ, ಅದನ್ನು ಎಸೆಯದೆ ಹಂಚಿ ತಿನ್ನೋಣ