Site icon Vistara News

ರಾಜ ಮಾರ್ಗ ಅಂಕಣ | ನಮ್ಮ ಮಕ್ಕಳು ಎಂತಹ ಪುಸ್ತಕಗಳನ್ನು ಓದಬೇಕು? ಇಲ್ಲಿದೆ ಮಹತ್ವದ ಟಿಪ್ಸ್‌ ಭಾಗ-1

ಯಾವ ಪುಸ್ತಕ ಓದಬೇಕು?

ಯಾವುದನ್ನು ಓದಬೇಕು ಮತ್ತು ಹೇಗೆ ಓದಬೇಕು?
ಮಕ್ಕಳ ಕೈಗೆ ಮೊಬೈಲ್ ಬಂದ ನಂತರ ಮಕ್ಕಳು ಪುಸ್ತಕ ಓದುವುದು ಕಡಿಮೆ ಆಗಿದೆ ಎನ್ನುವ ಮಾತು ಬಹಳ ಮಂದಿ ಹೇಳುತ್ತಿದ್ದಾರೆ. ಅದು ಪೂರ್ತಿ ಸತ್ಯ ಅಲ್ಲ ಎಂದು ನಾನು ಹೇಳುತ್ತೇನೆ. ಇಂದು ಮೊಬೈಲ್ ಮೂಲಕ ಬರೆಯುವ ಮತ್ತು ಓದುವವರ ಸಂಖ್ಯೆಯು ಇಂದು ತುಂಬಾ ಹೆಚ್ಚಿದೆ. ತಮಗೆ ಇಷ್ಟವಾದ ಪುಸ್ತಕದ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಓದುವವರ ಸಂಖ್ಯೆ ಕೂಡ ತುಂಬಾ ಹೆಚ್ಚಿದೆ. ಆದರೆ ಪುಸ್ತಕ ಓದುವ ಖುಷಿ ಮತ್ತು ಅನುಭವ ನಿಮಗೆ ಮೊಬೈಲ್ ಓದಿನಲ್ಲಿ ಸಿಗುವುದಿಲ್ಲ ಅನ್ನುವುದು ನೂರಕ್ಕೆ ನೂರು ನಿಜ!

ನಾವು ಯಾಕೆ ಓದಬೇಕು?
ಇತ್ತೀಚೆಗೆ ಪಾಠಪುಸ್ತಕ ಬಿಟ್ಟು ಬೇರೆ ಯಾವುದೇ ಪುಸ್ತಕವನ್ನು ಓದದ ಮಕ್ಕಳು ಇದ್ದಾರೆ. ಒಂದು ಪುಸ್ತಕ ಅಂದರೆ ಅದು ಲೇಖಕನ ಆತ್ಮ! ಒಬ್ಬ ಲೇಖಕನ ಸಮಗ್ರ ಅಭಿವ್ಯಕ್ತಿ! ಒಬ್ಬ ಲೇಖಕನ ಯೋಚನೆಗಳ ಕಣಜ! ಜ್ಞಾನದ ಬೆಳಕು! ನಮ್ಮ ವಿಕಸನದ ಅನನ್ಯ ಕೊಡುಗೆ! ಅಕ್ಷರ ಜ್ಞಾನದ ದಾರಿದೀಪ! ಮೌನ ಕ್ರಾಂತಿಯ ಹರಿಕಾರ! ಇನ್ನೂ ಏನೇನೋ…!

ಒಂದೊಂದು ಪುಸ್ತಕವು ಮಹಾಪುರುಷರ ಜೀವನದಲ್ಲಿ ಮಹಾ ತಿರುವು ತಂದುಕೊಟ್ಟ ಉದಾಹರಣೆಗಳೂ ಇವೆ.
ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಜಾನ್ ರಸ್ಕಿನ್ ಅವರ UNTO THE LAST ಪುಸ್ತಕ, ಲಿಯೋ ಟಾಲ್‌ಸ್ಟಾಯ್ ಅವರ WAR and PEACE ಪುಸ್ತಕಗಳನ್ನು ಉಲ್ಲೇಖಿಸಬಹುದು. ಹೀಗೆ ಜಗತ್ತಿನ ದಿಗ್ಗಜ ವ್ಯಕ್ತಿಗಳು ಒಂದಲ್ಲ ಒಂದು ಪುಸ್ತಕಗಳಿಂದ, ಒಂದಲ್ಲ ಒಂದು ಲೇಖಕರಿಂದ ಪ್ರಭಾವಿತ ಆದ ನೂರಾರು ಉದಾಹರಣೆಗಳು ನನ್ನ ಹತ್ತಿರ ಇವೆ. ಒಂದೊಂದು ಪುಸ್ತಕದ ಓದುವಿಕೆಯು ನಮ್ಮನ್ನು ಅನಂತ ವಿಕಾಸದ ಕಡೆಗೆ ಕೈಹಿಡಿದು ಕರೆದುಕೊಂಡು ಹೋಗುತ್ತವೆ. ನಾವು ಒಂದೊಂದು ಪುಸ್ತಕವನ್ನು ಓದುವಾಗ ನಮಗೆ ಸಿಗುವ ಅನುಭೂತಿಗೆ ಬೆಲೆಯನ್ನು ಕಟ್ಟಲು ಸಾಧ್ಯವೇ ಇಲ್ಲ. ಪುಸ್ತಕದ ಓದು ನಮಗೆ ಕಟ್ಟಿಕೊಡುವ ಜ್ಞಾನವು ನಮ್ಮ ಭವಿಷ್ಯವನ್ನು ಗಟ್ಟಿ ಮಾಡುತ್ತ ಹೋಗುತ್ತದೆ.

ಸಣ್ಣ ಮಕ್ಕಳು ಯಾವ ರೀತಿಯ ಪುಸ್ತಕ ಓದಬೇಕು?
ಅವರವರ ಗ್ರಹಿಕೆಯ ಮಟ್ಟಕ್ಕೆ ಪೂರಕವಾದ, ಆಸಕ್ತಿಗೆ ಅನುಗುಣವಾದ ಪುಸ್ತಕವನ್ನು ಓದಿದರೆ ಮಾತ್ರ ಆ ಓದು ನಮಗೆ ಆನಂದವನ್ನು ಕೊಡುತ್ತದೆ. ಸಣ್ಣ ಮಕ್ಕಳು ಓದುವಿಕೆಯನ್ನು ಆರಂಭ ಮಾಡುವಾಗ ಅವರ ಕಲ್ಪನೆಯನ್ನು ವಿಕಾಸ ಮಾಡುವ ಪುಸ್ತಕಗಳು ಬೇಕು. ಮಕ್ಕಳಿಗೆ ಅರ್ಥವಾಗುವ ಸರಳವಾದ ಭಾಷೆ ಮತ್ತು ನಿರೂಪಣೆ ಇರಬೇಕು. ಪುಸ್ತಕದ ಗಾತ್ರವು ಕಿರಿದಾಗಬೇಕು. ಪುಸ್ತಕದಲ್ಲಿ ಬಣ್ಣ ಬಣ್ಣದ ಚಿತ್ರಗಳು ತುಂಬಿದ್ದರೆ ಮಕ್ಕಳ ಓದು ಅದ್ಭುತ ಆಗುತ್ತದೆ.

ಪ್ರಾಣಿ ಪಕ್ಷಿಗಳ ಕತೆಗಳು ಸೂಕ್ತ!
ಸಣ್ಣ ಮಕ್ಕಳಿಗೆ ಪ್ರಾಣಿ, ಪಕ್ಷಿಗಳ ಕತೆಗಳು ಹೆಚ್ಚು ಇಷ್ಟವಾಗುತ್ತವೆ. ಅದರಲ್ಲಿ ಕೂಡ ಕಲ್ಪನೆಯನ್ನು ಮೀರಿದ ಉತ್ಪ್ರೇಕ್ಷೆಯೂ ಇರಬೇಕು. ಅಂದರೆ ಎಲ್ಲರ ಪ್ರಾಣಿಗಳು ಮಾತಾಡಬೇಕು. ಬುದ್ಧಿವಂತ ನರಿ, ಬಾಯಾರಿದ ಕಾಗೆ, ಕುಣಿದಾಡುವ ನವಿಲು, ಇಂಪಾಗಿ ಹಾಡುವ ಕೋಗಿಲೆ, ಕಾಡಿನ ರಾಜನಾದ ಹುಲಿ, ಗರ್ಜಿಸುವ ಸಿಂಹ, ಮುಗ್ಧವಾದ ಮೊಲ, ಚೈತನ್ಯದ ಚಿಲುಮೆ ಆದ ಜಿಂಕೆ, ದೈತ್ಯ ಗಾತ್ರದ ಆನೆ.. ಮೊದಲಾದ ಪಾತ್ರಗಳು ಮಗುವಿನ ಕಲ್ಪನಾ ಲೋಕದಲ್ಲಿ ಅಳಿಸಲಾಗದ ಪ್ರಭಾವವನ್ನು ಉಂಟುಮಾಡುತ್ತವೆ.

ವಿಷ್ಣು ಶರ್ಮ ಅವರು ಬರೆದ ಪಂಚತಂತ್ರದ ಕತೆಗಳು, ಕುತೂಹಲ ಕೆರಳಿಸುವ ವಿಕ್ರಮ ಬೇತಾಳನ ಕತೆಗಳು, ಕಥಾ ಸರಿತ್ಸಾಗರ, ಸುಭಾಷಿತದ ಕತೆಗಳು, ತೆನಾಲಿ ರಾಮಕೃಷ್ಣನ ಕತೆ, ಅಕ್ಬರ್ ಬೀರಬಲ್ಲರ ಕತೆಗಳು, ಬುದ್ಧನ ಜಾತಕದ ಕತೆಗಳು..…ಇವೆಲ್ಲವೂ ಸಣ್ಣ ಮಕ್ಕಳ ಬಾಲ್ಯವನ್ನು ಶ್ರೀಮಂತ ಮಾಡುತ್ತವೆ. ಆ ಓದಿಗೆ ಪೂರಕವಾದ ಚಂದಮಾಮ, ಬಾಲಮಿತ್ರ, ಗೊಂಬೆಮನೆ, ಚಂಪಕ ಮೊದಲಾದ ವಾರ ಮತ್ತು ಮಾಸಪತ್ರಿಕೆಗಳು ಈಗ ನಮ್ಮ ಮಕ್ಕಳಿಗೆ ಲಭ್ಯ ಇಲ್ಲ ಅನ್ನುವ ದುಃಖ ನನಗೆ ಇದೆ.

ಪಂಚತಂತ್ರದ ಕಥೆಗಳು ಹುಟ್ಟಿದ್ದು ಹೇಗೆ?
ಸಾವಿರಾರು ವರ್ಷಗಳ ಹಿಂದೆ ಒಬ್ಬ ಅರಸನಿಗೆ ಮೂರು ಜನ ದಡ್ಡ ಮಕ್ಕಳು ಹುಟ್ಟಿದ್ದರು. ಅದರಿಂದಾಗಿ ಅರಸನಿಗೆ ತುಂಬಾ ಆತಂಕ ಉಂಟಾಯಿತು. ದಡ್ಡ ಮಕ್ಕಳನ್ನು ಮುಂದೆ ತನ್ನ ಉತ್ತರಾಧಿಕಾರಿ ಮಾಡುವುದು ಹೇಗೆ? ಎಂಬ ಆತಂಕ ಅರಸನದ್ದು! ಆಗ ಅರಸ ಒಂದು ಬಹಿರಂಗ ಸವಾಲನ್ನು ಹಾಕಿ ಡಂಗುರ ಸಾರುತ್ತಾನೆ. ತನ್ನ ದಡ್ಡ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡಿದರೆ ಅರ್ಧ ರಾಜ್ಯವನ್ನು ಕೊಡುವೆ ಅನ್ನುವುದು ಆ ಸವಾಲು!

ಆ ಸವಾಲನ್ನು ಮೊದಲು ಸ್ವೀಕಾರ ಮಾಡಿದವನು ವಿಷ್ಣು ಶರ್ಮ ಎಂಬ ವಿದ್ವಾಂಸ. ಆತನು ಅರಸನ ಅನುಮತಿ ಪಡೆದು ಅವನ ಮಕ್ಕಳನ್ನು ತನ್ನ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾನೆ. ಆ ಆಶ್ರಮವು ದಟ್ಟ ಕಾಡಿನಲ್ಲಿ ಇತ್ತು. ಆಶ್ರಮದ ಎದುರು ಒಂದು ಆಲದ ಮರ. ಅದರ ಬುಡದಲ್ಲಿ ಒಂದು ಕಟ್ಟೆ.

ವಿಷ್ಣು ಶರ್ಮನು ಅರಸನ ಮಕ್ಕಳನ್ನು ಆ ಕಟ್ಟೆಯ ಮೇಲೆ ಕೂರಿಸಿ ಅವರಿಗೆ ದಿನಕ್ಕೊಂದು ಪ್ರಾಣಿ ಪಕ್ಷಿಗಳ ಕತೆಯನ್ನು ಹೇಳುತ್ತ ಹೋಗುತ್ತಾನೆ. ಬಾಯಾರಿದ ಕಾಗೆ, ಮೋಸ ಮಾಡುವ ನರಿ, ಉಪವಾಸ ಮಾಡುವ ಮಂಗ, ಸಿಂಹ ಮತ್ತು ಇಲಿಯ ಕತೆ, ವೃದ್ಧ ಬ್ರಾಹ್ಮಣನ ಕತೆ.. ಇವೆಲ್ಲವೂ ವಿಷ್ಣುಶರ್ಮ ಸೃಷ್ಟಿಸಿದ ಕತೆಗಳೇ ಆಗಿವೆ. ಕತೆಯು ಪೂರ್ತಿ ಆದ ನಂತರ ಆ ಕತೆಯ ನೀತಿಯನ್ನು ಅರಸನ ಮಕ್ಕಳ ಮೂಲಕ ಹೇಳಿಸುತ್ತ ಆ ಮಕ್ಕಳು ಕೊನೆಗೆ ಬುದ್ಧಿವಂತ ಆದರು ಅನ್ನುವುದು ಆ ಕತೆಗಳ ಶಕ್ತಿ!
ಪಂಚ ತಂತ್ರದಲ್ಲಿ ಆ ರೀತಿಯ ಸಾವಿರಾರು ಕತೆಗಳು ಇವೆ. ಪಂಚತಂತ್ರವು ಜಗತ್ತಿನ ಹತ್ತಾರು ಭಾಷೆಗಳಿಗೆ ಅನುವಾದ ಆಗಿದೆ ಅನ್ನುವುದು ಹೆಗ್ಗಳಿಕೆ.

ಅದೇ ರೀತಿಯಲ್ಲಿ ವಿದೇಶದ ಕತೆಗಳನ್ನು ಪರಿಗಣಿಸಿದಾಗ ಈಸೋಪನ ಕತೆಗಳು ಒಂದು ಅದ್ಭುತವಾದ ಸೃಷ್ಟಿ. ಅದರಲ್ಲಿ ಕೂಡ ಹೆಚ್ಚು ಬರುವುದು ಪ್ರಾಣಿ ಪ್ರಪಂಚದ ಕತೆಗಳೇ! ಆದರೆ ಈ ಕತೆಗಳ ಕೊನೆಯಲ್ಲಿ ನೀತಿ ಅಥವಾ ಮಾರಲ್ ಎಂದು ಪ್ರತ್ಯೇಕವಾಗಿ ಈಸೋಪನು ಹೇಳಲು ಹೋಗುವುದಿಲ್ಲ. ಯಾಕೆಂದರೆ ಮಕ್ಕಳಿಗೆ ಮಾರಲ್ ಹೇಳುವ ಅಗತ್ಯ ಇಲ್ಲ. ಅವರಿಗೆ ಮಾರಲ್ ಗ್ರಹಿಸುವ ಶಕ್ತಿ ಇದೆ ಎಂದು ಈಸೋಪ ಹೇಳುತ್ತಾನೆ. ಅದೇ ರೀತಿ ಸಿಂದಬಾದನ ಯಾತ್ರೆಗಳು, ಅರೇಬಿಯನ್ ನೈಟ್ಸ್, ಸೈಕ್ಲೋಪ್ ಮತ್ತು ಯುಲಿಸಿಸ್ ಕತೆಗಳು, ಹರ್ಕ್ಯುಲಿಸ್ ಕತೆಗಳು, ಪಿಗ್ಮಿ ಮತ್ತು
ಲಿಲಿ ಪುಟ್ ಕತೆಗಳು… ಇವು ಕೂಡ ಮಕ್ಕಳಿಗಾಗಿ ಬರೆದ ಅದ್ಭುತವಾದ ರಮ್ಯ ಕತೆಗಳು.

ಹುಚ್ಚು ಹಿಡಿಸುವ ‘ಭಾರತ ಭಾರತಿ’ ಪುಸ್ತಕಗಳು!
ನಾನು ಬಾಲ್ಯದಲ್ಲಿ ಹೆಚ್ಚು ಓದಿದ್ದು ರಾಷ್ಟ್ರೋತ್ಥಾನ ಪರಿಷತ್ ಪ್ರಕಟಿಸಿರುವ ಸಣ್ಣ ಸಣ್ಣ ಗಾತ್ರದ ‘ಭಾರತ ಭಾರತಿ’ ಪುಸ್ತಕಗಳು! ಮಕ್ಕಳ ಓದಿನ ವೇಗದಲ್ಲಿ ಒಂದೆರಡು ಘಂಟೆಯಲ್ಲಿ ಓದಿ ಮುಗಿಸುವ ಪುಸ್ತಕಗಳು ಅವು. ಅದರಲ್ಲಿ ಮಹಾಪುರುಷರ ಬದುಕಿನ ಕತೆಗಳು, ಸ್ಫೂರ್ತಿ ತುಂಬುವ ಘಟನೆಗಳು, ಅವರ ಬದುಕಿನ ಮೌಲ್ಯಗಳು ಅಡಕವಾಗಿರುತ್ತವೆ. ಅವುಗಳನ್ನು ಓದುವಾಗ ಮಕ್ಕಳು ಪಡೆಯುವ ಖುಷಿಯು ಅದ್ಭುತವಾದದ್ದು. ಓದುತ್ತ ಹೋದಹಾಗೆ ಮಹಾಪುರುಷರ ಬದುಕಿನ ಮೌಲ್ಯಗಳು ನಿಧಾನವಾಗಿ ಮಕ್ಕಳ ಒಳಗೆ ಇಳಿದುಬಿಡುತ್ತವೆ.

ಪ್ರೈಮರಿ ಶಾಲೆಯ ಟೀಚರ್ ಆದ ನನ್ನ ಅಮ್ಮ ನನಗೆ ಇಂತಹ ನೂರಾರು ಪುಸ್ತಕಗಳನ್ನು ಕೊಟ್ಟು ಬಾಲ್ಯದಲ್ಲಿ ಓದಿಸಿದ್ದು ನನ್ನ ಭಾವಕೋಶವನ್ನು ಶ್ರೀಮಂತ ಮಾಡಿದ್ದವು.

ಆ ಪುಸ್ತಕಗಳನ್ನು ಹೇಗೆ ಓದಬೇಕು?
ಅಂತಹ ಪುಸ್ತಕಗಳನ್ನು ಓದಲು ಇದೇ ಹೊತ್ತು ಎಂದು ನಿಗದಿ ಮಾಡುವುದು ಕಷ್ಟ. ಆದರೂ ಬೆಳಗಿನ ಹೊತ್ತು ಅಥವಾ ಸಂಜೆ ಹೊತ್ತು ಪುಸ್ತಕಗಳ ಓದಿಗೆ ಪ್ರಶಸ್ತ. ಸಣ್ಣ ಪುಸ್ತಕಗಳು ಆದ್ದರಿಂದ ಒಂದು ಓದಿನಲ್ಲಿ ಮುಗಿದು ಹೋಗುತ್ತವೆ. ಗಟ್ಟಿಯಾಗಿ ಓದುವುದಕ್ಕಿಂತ ಮೌನವಾಗಿ ಓದುವುದು ಹೆಚ್ಚು ಪ್ರಯೋಜನಕಾರಿ. ಓದುತ್ತ ಹೋದಂತೆ ಮುಖ್ಯವಾದ ಅಂಶಗಳನ್ನು ಒಂದು ಪುಸ್ತಕದಲ್ಲಿ ಬರೆಯುವ ಅಭ್ಯಾಸವನ್ನು ಹೆತ್ತವರು ಮಕ್ಕಳಿಗೆ ಮಾಡಿಸಿದರೆ ಇನ್ನೂ ಅದ್ಭುತ!

ಅದೇ ಕತೆಗಳನ್ನು ಹೆತ್ತವರು, ಶಿಕ್ಷಕರು ಅಥವಾ ಅಜ್ಜ, ಅಜ್ಜಿಯರು ಮೆದುವಾದ ಧ್ವನಿಯಲ್ಲಿ ಮಕ್ಕಳ ಮುಂದೆ ಓದಿ ಹೇಳಿದರೆ ಅದರ ಇಂಪ್ಯಾಕ್ಟ್ ನೂರು ಪಟ್ಟು ಹೆಚ್ಚಾಗುತ್ತದೆ. ಸ್ವಲ್ಪ ಧ್ವನಿಯ ಏರಿಳಿತ, ಸಹಜ ಮುಖದ ಭಾವನೆಗಳ ಮೂಲಕ ಕತೆಗಳನ್ನು ಹೇಳಿದರೆ ಅದರ ಸ್ವಾರಸ್ಯವು ಇನ್ನೂ ಹೆಚ್ಚುತ್ತದೆ. ಅದನ್ನು ವಿಡಿಯೊ ಮೂಲಕ ನೋಡಿದರೆ ಮಕ್ಕಳ ಮೇಲೆ ಇನ್ನೂ ಹೆಚ್ಚು ಪರಿಣಾಮ ಆಗುತ್ತದೆ.
(ಮುಂದುವರಿಯುತ್ತದೆ)

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನಿಮ್ಮೊಳಗೇ ಇದ್ದಾನೆ ಒಬ್ಬ ಗೆಳೆಯ: ಅವನ ಮಾತು ಕೇಳಿದರೆ ನಿಮಗೆ ಎಂದೂ ಸೋಲೇ ಇಲ್ಲ!

Exit mobile version