Site icon Vistara News

ರಾಜ ಮಾರ್ಗ ಅಂಕಣ : ಬುದ್ಧಿವಂತಿಕೆ ಒಂದೇ ನಿಮ್ಮ ಮಗುವಿನ ಆಸ್ತಿ ಅಲ್ಲ, ಅದಕ್ಕೆ ಬೇಕು ಈ ನಾಲ್ಕು Qಗಳು

Children

rajama marga-column-intelligence-is-not-only-the-key-your-child-requires-these-4qs

ನಿಮ್ಮ ಮಗುವಿನ ಸಾಮರ್ಥ್ಯಗಳನ್ನು ಕೇವಲ ಪರೀಕ್ಷೆಯ ಅಂಕಗಳ ಮೂಲಕ ಅಳತೆ ಮಾಡುವ ಕಾಲ ಒಂದಿತ್ತು! ಅಂಕಗಳ ಆಧಾರದ ಮೇಲೆ ಬುದ್ಧಿವಂತ, ದಡ್ಡ ಇತ್ಯಾದಿ ವರ್ಗೀಕರಣ ಆಗ್ತಿತ್ತು. ಆದರೆ, ಮುಂದೆ ಗುಣಾತ್ಮಕ ಶಿಕ್ಷಣದ ಕಾನ್ಸೆಪ್ಟ್ ಬೆಳೆಯುತ್ತ ಹೋದಂತೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಯು ಶಿಕ್ಷಣದ ಉದ್ದೇಶ ಅಂತ ಆಯ್ತು. ಅದರ ಆಧಾರದ ಮೇಲೆ ನಿಮ್ಮ ಮಗುವಿನ ಶಿಕ್ಷಣ ಪರಿಪೂರ್ಣ ಆಗಬೇಕು ಅಂತಾದರೆ ಈ ಕೆಳಗಿನ ನಾಲ್ಕು ಅಂಶಗಳು ಮುಖ್ಯ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅವುಗಳ ಪೂರ್ತಿ ವಿವರವು ಇಲ್ಲಿದೆ.

೧) ಬುದ್ಧಿಮತ್ತೆಯ ಸೂಚ್ಯಂಕ – IQ ( Inteligent Quotient)
ನಿಮ್ಮ ಮಗು ಎಷ್ಟು ಬುದ್ಧಿವಂತಿಕೆ ಹೊಂದಿದೆ ಎನ್ನುವುದನ್ನು ಅಳತೆ ಮಾಡಲು ಈಗ ಮಾಪನ ಮತ್ತು ಪರೀಕ್ಷೆಗಳು ಇವೆ. ಈಗ ಅದನ್ನು ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮಾಡ್ತಾ ಇಲ್ಲ .ಅದು ಮೆಮೋರಿಯ ಅಳತೆ ಕೂಡ ಅಲ್ಲ. ನಿಮ್ಮ ಮಗು ಎಷ್ಟು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತದೆ ಎಂಬುದರ ಮಾಪನ ಅದು.

ಉದಾಹರಣೆಗೆ ನಿಮ್ಮ ಮಗು ಫ್ಯೂಸ್ ತಂತಿಯ ಬಗ್ಗೆ ಸರಿಯಾಗಿ ಓದಿ, ಅದನ್ನು ಬಾಯಿಪಾಠ ಮಾಡಿ, ಪರೀಕ್ಷೆಗೆ ಬರೆದು ಮಾರ್ಕ್ಸ್ ತೆಗೆದುಕೊಳ್ಳುತ್ತದೆ. ಆದರೆ ತನ್ನದೇ ಮನೆಯಲ್ಲಿ ಫ್ಯೂಸ್ ವಯರ್ ಹೋದಾಗ ಅದು ಲೈನ್ ಮ್ಯಾನ್‌ಗೆ ಫೋನ್ ಮಾಡಿದರೆ ಅದು ಬುದ್ಧಿವಂತಿಕೆ ಅಲ್ಲ. ಅದೇ ಫ್ಯೂಸ್ ವಯರ್ ಹಾಕಿದರೆ ಅದು ಬುದ್ಧಿವಂತಿಕೆ! ಪುಸ್ತಕದ ಜ್ಞಾನವನ್ನು ಇವತ್ತು ಪ್ರಾಕ್ಟಿಕಲ್ ಜ್ಞಾನ ರೂಲ್ ಮಾಡುತ್ತಿದೆ. ಆದ್ದರಿಂದ ನಿಮ್ಮ ಮಗು ಹೆಚ್ಚು IQ ಪಡೆಯಬೇಕು ಅಂತಾದರೆ ಪ್ರಾಕ್ಟಿಕಲ್ ಜ್ಞಾನ ಪಡೆಯಬೇಕು.

೨) ಸಾಮಾಜಿಕ ಸೂಚ್ಯಂಕ – SQ (Social Quotient)
ಇದು ನಿಮ್ಮ ಮಗುವಿನ ಸಾಮರ್ಥ್ಯದ ಎರಡನೇ ಮಾನದಂಡ. ನಿಮ್ಮ ಮಗು ತನ್ನ ಓರಗೆಯ ಇತರ ಮಕ್ಕಳಿಂದ, ಶಿಕ್ಷಕರಿಂದ, ಬಂಧುಗಳಿಂದ, ನೆರೆಮನೆಯವರಿಂದ ಎಷ್ಟು ಸಹಜ ಪ್ರೀತಿ ಪಡೆಯುತ್ತಾ ಇದೆ ಎನ್ನುವುದೇ ಸಾಮಾಜಿಕ ಸೂಚ್ಯಂಕ.

ನಿಮ್ಮ ಮಗುವಿನ ತರಗತಿಯಲ್ಲಿ ಎಲ್ಲ ಮಕ್ಕಳ ಕೈಯಲ್ಲಿ ಪೇಪರ್ ಮತ್ತು ಪೆನ್ ಕೊಟ್ಟು ನೀವು ಹೆಚ್ಚು ಪ್ರೀತಿಸುವ ಐದು ಗೆಳೆಯರ ಹೆಸರು ಬರೆಯಿರಿ ಎಂದು ಹೇಳಿ. ಅವರು ಬರೆದಾದ ನಂತರ ಅವರೆಲ್ಲರ ಪೇಪರ್ ತೆಗೆದುಕೊಂಡು ಪರೀಕ್ಷೆ ಮಾಡಿದಾಗ ನಿಮ್ಮ ಮಗುವಿನ ಹೆಸರು ಅತೀ ಹೆಚ್ಚು ಬಾರಿ ರಿಪೀಟ್ ಆಗಿದೆ ಅಂತಾದರೆ ಅದರ SQ ತುಂಬಾ ಹೆಚ್ಚಿದೆ ಎಂದರ್ಥ! ಸಾಮಾಜಿಕ ಸೂಚ್ಯಂಕ ಅಂದರೆ ನಿಮ್ಮ ಮಗುವಿನ ಸ್ವೀಕಾರಾರ್ಹತೆ. ನಮ್ಮ ದೇಶದಲ್ಲಿ ಇಷ್ಟೊಂದು ಜನ ರಾಷ್ಟ್ರಪತಿ ಆಗಿ ಹೋದರೂ ನಮಗೆ ರಾಷ್ಟ್ರಪತಿ ಅಂದ ಕೂಡಲೇ ಯಾಕೆ ಅಬ್ದುಲ್ ಕಲಾಂ ನೆನಪಾಗ್ತಾರೆ. ಅದಕ್ಕೆ ಕಾರಣ ಅವರ SQ!

೩) ಭಾವನಾತ್ಮಕ ಸೂಚ್ಯಂಕ – EQ ( Emotional Quotient)
ಇದು ನಿಮ್ಮ ಮಗುವಿನ ಬೆಳವಣಿಗೆಯ ಮೂರನೇ ಸೂಚ್ಯಂಕ. ಅದು ಮಗುವಿನ ಸಹಜ ಭಾವನೆಗಳ ಸರಿಯಾದ ಸೂಚ್ಯಂಕ. ನಿಮ್ಮ ಮಗು ಬೇರೆಯವರನ್ನು ಎಷ್ಟು ಚೆನ್ನಾಗಿ ಪ್ರೀತಿ ಮಾಡುತ್ತದೆ ಅದು EQ! ಅದು ತನ್ನ ಗೆಳೆಯರ ಬಗ್ಗೆ, ಟೀಚರ್ ಬಗ್ಗೆ, ಓರಗೆಯವರ ಬಗ್ಗೆ ವ್ಯಕ್ತಪಡಿಸುವ ಸಹಜ ಭಾವನೆಗಳು ನಿಮ್ಮ ಮಗುವನ್ನು ಗೆಲ್ಲಿಸುತ್ತವೆ.

ಉದಾಹರಣೆಗೆ ಪುನೀತ್ ರಾಜಕುಮಾರ್ ಅವರು ತನ್ನ ಸಹನಟರ ಬಗ್ಗೆ, ನಟಿಯರ ಬಗ್ಗೆ, ಅನಾಥ ಮಕ್ಕಳ ಬಗ್ಗೆ, ವೃದ್ಧಾಶ್ರಮದ ವೃದ್ಧರ ಬಗ್ಗೆ ತೋರಿದ ಪ್ರೀತಿಗೆ ಕಾರಣ ಅವರ EQ! ಅದರಲ್ಲಿ ಶೋ ಇರಲಿಲ್ಲ. ಎಲ್ಲವೂ ಸಹಜ ಮತ್ತು ಸಹಜ. EQ ಸ್ಟ್ರಾಂಗ್ ಇರುವ ಮಗು ಮುಂದೆ ಸಮಾಜದಲ್ಲಿ ಅದ್ಭುತವಾಗಿ ಗೆಲ್ಲುತ್ತದೆ.

೪) ಅಧ್ಯಾತ್ಮದ ಸೂಚ್ಯಂಕ – SQ ( Spiritual Quotient)
ಏನ್ಸಾರ್, ಸಣ್ಣ ಮಕ್ಕಳಲ್ಲಿ ಆಧ್ಯಾತ್ಮಿಕ ಶಕ್ತಿ ಇದೆಯಾ ಎಂದು ನೀವು ಕೇಳಬಹುದು. ಖಂಡಿತ ಇದೆ! ಅದು ನಿಮ್ಮ ಮಗು ಪಡೆಯುತ್ತಿರುವ ಮೌಲ್ಯಗಳ ಪವರ್! ಮೌಲ್ಯಗಳು ಮಗುವಿಗೆ ಬೋಧನೆಯಿಂದ ಬರುವಂಥದ್ದು ಅಲ್ಲ. ಅವುಗಳು ಅನುಕರಣೆಯಿಂದ ಬರುವಂಥದ್ದು! ಮಗು ಭೇಟಿ ಮಾಡಿದ ವ್ಯಕ್ತಿಗಳು, ಅದರ ಶಿಕ್ಷಕರು, ಓದಿದ ಪುಸ್ತಕಗಳು, ಅದರ ಓರಗೆಯ ಗೆಳೆಯರಿಂದ ಮಕ್ಕಳು ಮೌಲ್ಯವನ್ನು ಪಡೆಯುತ್ತಾರೆ. ತನ್ನಲ್ಲಿ ಮೊದಲೇ ಅಂತರ್ಗತ ಆಗಿರುವ ಮೌಲ್ಯಗಳನ್ನು ಗಟ್ಟಿ ಮಾಡಿಕೊಳ್ಳುತ್ತದೆ.

ಮಗುವಿಗೆ ಸ್ಟ್ರಾಂಗ್ ಆದ ಮೌಲ್ಯ ಶಿಕ್ಷಣ ಬೇಕು. ಅದು ಒಳ್ಳೆಯ ಮೌಲ್ಯಯುತ ಆದ ಪುಸ್ತಕಗಳನ್ನು ಓದಬೇಕು. ಒಳ್ಳೆಯ ಪಾಸಿಟಿವ್ ಪರಿಸರ, ಮೌಲ್ಯಯುತವಾದ ನಾಟಕಗಳು, ಸಣ್ಣ ಕತೆಗಳು, ವಿಡಿಯೊಗಳು, ಭಾವಗೀತೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ಶಕ್ತಿ ಹೊಂದಿರುತ್ತವೆ. ಅದು ಹದಿನಾಲ್ಕು ವರ್ಷಗಳ ಒಳಗೆ ಆದರೆ ಒಳ್ಳೆಯದು.

ಸಾಲುಮರ ತಿಮ್ಮಕ್ಕನ ಪರಿಸರ ಪ್ರೇಮ, ಸೈನಿಕರ ದೇಶಭಕ್ತಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸರಳ ಜೀವನ, ವಿವೇಕಾನಂದರ ವಿಚಾರ ಧಾರೆಗಳು, ಅಬ್ದುಲ್ ಕಲಾಂ ಅವರ ವಿನಯವಂತಿಕೆ, ನೇತಾಜಿ ಸುಭಾಷ್ ಚಂದ್ರಬೋಸರ ಧೈರ್ಯ, ಥಾಮಸ್ ಆಲ್ವಾ ಎಡಿಸನ್‌ನ ಕುತೂಹಲ, ರಾಜಕುಮಾರ್ ಅವರ ಮುಗ್ಧತೆ ಇವುಗಳೆಲ್ಲವೂ ಮಕ್ಕಳಲ್ಲಿ ಆಧ್ಯಾತ್ಮ ಶಕ್ತಿಯನ್ನು ಹೆಚ್ಚಿಸುತ್ತವೆ.

ಈ ನಾಲ್ಕು Qಗಳು ನಿಮ್ಮ ಮಗುವನ್ನು ಪರಿಪೂರ್ಣ ಶಿಕ್ಷಣದ ಕಡೆಗೆ ಕರೆದುಕೊಂಡು ಹೋಗುತ್ತವೆ ಅನ್ನುವುದು ಭರತವಾಕ್ಯ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಶಿವಾಜಿಯ ಗುರು ದಾದಾಜಿ ಕೊಂಡದೇವರು ತನ್ನ ಬಲಗೈಗೆ ಶಿಕ್ಷೆ ಕೊಟ್ಟದ್ದು ಯಾಕೆ?

Exit mobile version