Site icon Vistara News

ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

reading rajamarga column

ರಾಜಮಾರ್ಗ ಅಂಕಣ: ಏಪ್ರಿಲ್ 23 – ಇಂದು ವಿಶ್ವ ಪುಸ್ತಕ ದಿನ (World book day). ಓದುವ (Reading) ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಇಂದು ಖ್ಯಾತ ನಾಟಕಕಾರ ಶೇಕ್ಸ್‌ಪಿಯರ್ (Shakespeare) ಹುಟ್ಟಿದ ದಿನ ಕೂಡ. ಹಾಗೆಯೇ ಆತ ಮೃತಪಟ್ಟ ದಿನ ಕೂಡ ಇದೇ ಏಪ್ರಿಲ್ 23!

ಓದುವ ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ?

ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ. ಹಾಗೆಯೇ ಅವರು ರಷ್ಯನ್ ಲೇಖನ ಲಿಯೋ ಟಾಲ್ಸ್ಟಾಯ್ ಅವರ ಪುಸ್ತಕಗಳನ್ನು ಓದಿ ಪ್ರಭಾವಿತರಾದರು.

ಭಗತ್ ಸಿಂಗ್ ಅವರು ಲೆನಿನ್ ಬರೆದ ‘ಸ್ಟೇಟ್ ಆಂಡ್ ರಿವೊಲ್ಯುಶನ್’ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆದೆ ಎಂದು ಹೇಳಿದ್ದಾರೆ. ಹೀಗೆ ಮಹಾಪುರುಷರು ಒಂದಲ್ಲ ಒಂದು ಪುಸ್ತಕಗಳಿಂದ ಪ್ರಭಾವಿತರಾದವರು .ಯಾವುದೇ ವ್ಯಕ್ತಿಯ ಬದುಕಿನ ಗತಿಯಲ್ಲಿ ಪ್ರಮುಖವಾದ ತಿರುವನ್ನು ತರುವ ಶಕ್ತಿಯು ಪುಸ್ತಕಗಳಿಗೆ ಇವೆ ಎಂದು ನೂರಾರು ಬಾರಿ ಸಾಬೀತು ಆಗಿದೆ.

ನನ್ನ ಬಾಲ್ಯದ ವಿಳಾಸ ಹೀಗೆ ಇತ್ತು – c/o ಲೈಬ್ರೆರಿ!

ನನಗೆ ಬಾಲ್ಯದಿಂದಲೂ ಓದುವ ಅನಿವಾರ್ಯ ವ್ಯಸನವನ್ನು ಅಂಟಿಸಿದವರು ನನ್ನ ಕನ್ನಡ ಶಾಲೆಯ ಅಧ್ಯಾಪಕರು. ಅವರು ತರಗತಿಯಲ್ಲಿ ಪಾಠವನ್ನು ಮಾಡುವಾಗ ಒಂದಲ್ಲ ಒಂದು ಪುಸ್ತಕದ ರೆಫರೆನ್ಸ್ ಕೊಡುತ್ತಿದ್ದರು. ಮತ್ತು ಸ್ಟಾಫ್ ರೂಮಿಗೆ ನಾವು ಹೋದಾಗ ಅದೇ ಪುಸ್ತಕವು ಅವರ ಟೇಬಲ್ ಮೇಲೆ ಸಿಂಗಾರಗೊಂಡು ಕೂತಿರುತಿತ್ತು. ನಾವು ಕೈಗೆ ಎತ್ತಿಕೊಂಡರೆ ‘ ಓದಿ ಹಿಂದೆ ಕೊಡು ಪುಟ್ಟ ‘ಎಂಬ ಮಾತು ತುಂಬ ಖುಷಿ ಕೊಡುತ್ತಿತ್ತು. ಹಾಗೆ ನಮ್ಮ ಕನ್ನಡ ಶಾಲೆಯ ಅಧ್ಯಾಪಕರಿಂದ ಆರಂಭವಾದ ನನ್ನ ಓದಿನ ವ್ಯಸನ ಇಂದಿನವರೆಗೂ ಮುಂದುವರೆದಿದೆ! ಈವರೆಗೆ ಸಾವಿರಾರು ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ ಎನ್ನುವುದು ಅಭಿಮಾನದ ಮಾತು. ಈ ಓದು ನನ್ನ ಭಾಷೆ ಮತ್ತು ಚಿಂತನೆಯನ್ನು ಶ್ರೀಮಂತವಾಗಿ ಮಾಡಿತು.

ನನ್ನ ಬಾಲ್ಯ ಮತ್ತು ಯೌವ್ವನದ ಎಲ್ಲ ರಜೆಗಳು, ಸಂಜೆಗಳು ಕಳೆದದ್ದು ಕಾರ್ಕಳದ ವಿಸ್ತಾರವಾದ ಗ್ರಂಥಾಲಯದಲ್ಲಿ. ಹಾಗೆ ನನ್ನ ಗೆಳೆಯರು ನನ್ನನ್ನು C/O ಲೈಬ್ರೆರಿ ಎಂದು ತಮಾಷೆ ಮಾಡುತ್ತಿದ್ದರು.

ವಯಸ್ಸಿಗೆ ಸರಿಯಾದ ಪುಸ್ತಕಗಳ ಆಯ್ಕೆ

ನಮ್ಮ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬಾಲ್ಯದಲ್ಲಿ ಮೂಡಿಸುವುದು ಹೆತ್ತವರ ಮತ್ತು ಶಿಕ್ಷಕರ ಹೊಣೆ. ನಮ್ಮ ಕೈಯ್ಯಲ್ಲಿ ಪುಸ್ತಕಗಳು ಇದ್ದರೆ ಮಕ್ಕಳಿಗೆ ಓದು ಓದು ಎಂದು ಹೇಳುವ ಅಗತ್ಯ ಬೀಳುವುದಿಲ್ಲ. ಆದರೆ ಮಕ್ಕಳ ವಯಸ್ಸಿಗೆ ಅನುಗುಣವಾದ ಪುಸ್ತಕಗಳನ್ನು ನೀಡಿ ಓದಿಸುವುದು ಅಗತ್ಯ. ಅದರ ಬಗ್ಗೆ ಒಂದಿಷ್ಟು ಸೂತ್ರಗಳು ಇಲ್ಲಿವೆ.

ಬಾಲ್ಯದ 5-8 ವರ್ಷ – ಕಲ್ಪನಾ ಲೋಕ

ಈ ವಯಸ್ಸು ಮಕ್ಕಳಲ್ಲಿ ರಚನಾತ್ಮಕ ಯೋಚನೆಗಳು ಮತ್ತು ಕಲ್ಪನೆಗಳು ಮೂಡುವ ಅವಧಿ. ಆ ವಯಸ್ಸಿನ ಮಕ್ಕಳಿಗೆ ಕಾಲ್ಪನಿಕವಾದ ಪ್ರಾಣಿ, ಪಕ್ಷಿಗಳ ಕಥೆ ಹೊಂದಿರುವ ಚಿತ್ರ ಪುಸ್ತಕಗಳು ( ಕಾಮಿಕ್ಸ್) ಹೆಚ್ಚು ಉಪಯುಕ್ತ. ಪಂಚತಂತ್ರದ ಕಥೆಗಳು, ಕಾಕೋಲುಕೀಯ, ಈಸೋಪನ ಕಥೆಗಳು ಈ ವಯಸ್ಸಿನ ಮಕ್ಕಳಿಗೆ ಸೂಕ್ತ. ರಾಷ್ಟ್ರೋತ್ಥಾನ ಪರಿಷತ್ ಹೊರತಂದಿರುವ ‘ಭಾರತ ಭಾರತೀ ‘ ಸರಣಿಯ ಸಾವಿರಾರು ಕಿರು ಪುಸ್ತಕಗಳು ಈ ವಯಸ್ಸಿನ ಮಕ್ಕಳಿಗೆ ಓದಲು ಚಂದ.

ಬಾಲ್ಯದ 9-12 ವರ್ಷ – ಕುತೂಹಲದ ಪರ್ವಕಾಲ

ಈ ವಯಸ್ಸಿನ ವಿದ್ಯಾರ್ಥಿಗಳು ಸೃಜನಶೀಲವಾಗಿ ಯೋಚನೆ ಮಾಡುತ್ತಾರೆ ಮತ್ತು ನೈತಿಕ ಮೌಲ್ಯಗಳನ್ನು ನಿಧಾನವಾಗಿ ಜೀರ್ಣ ಮಾಡಿಕೊಳ್ಳುತ್ತಾರೆ. ಅವರಿಗೆ ವಿಜ್ಞಾನಿಗಳ ಕಥೆಗಳು, ಸಿಂದಬಾದನ ಸಾಹಸದ ಕಥೆಗಳು, ರಾಮಾಯಣ, ಮಹಾಭಾರತದ ಕಿರು ಪುಸ್ತಕಗಳು ಹೆಚ್ಚು ಇಷ್ಟವಾಗುತ್ತವೆ. ಆ ಪುಸ್ತಕಗಳಲ್ಲಿ ಹೆಚ್ಚು ಚಿತ್ರಗಳು ಇದ್ದರೆ ಮಕ್ಕಳು ಖುಷಿಪಟ್ಟು ಓದುತ್ತಾರೆ.

ಹದಿಹರೆಯದ 12-15 ವರ್ಷ – ಸಣ್ಣ ಸಣ್ಣ ಕನಸು ಮೊಳೆಯುವ ವಯಸ್ಸು

ಸಣ್ಣ ಕತೆಗಳು ಹೆಚ್ಚು ಇಷ್ಟ ಆಗುವ ವಯಸ್ಸದು. ಸ್ಫೂರ್ತಿ ನೀಡುವ ವಿಕಸನದ ಲೇಖನಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಎಡಿಸನ್ ತನ್ನ ಬಾಲ್ಯದ ಸಮಸ್ಯೆಗಳನ್ನು ಹೇಗೆ ಗೆದ್ದನು? ಅಬ್ರಹಾಂ ಲಿಂಕನ್ ಕಡುಬಡತನವನ್ನು ಮೆಟ್ಟಿ ಅಮೇರಿಕಾದ ಅಧ್ಯಕ್ಷ ಆದದ್ದು ಹೇಗೆ? ಮೊದಲಾದ ಸ್ಫೂರ್ತಿ ಆಧಾರಿತ ಕಥೆಗಳನ್ನು ಆ ವಯಸ್ಸಿನ ವಿದ್ಯಾರ್ಥಿಗಳು ಖುಶಿ ಪಟ್ಟು ಓದುತ್ತಾರೆ. ಹಾಗೆಯೇ ರಾಷ್ಟ್ರ ಪ್ರೇಮದ ಪುಸ್ತಕಗಳನ್ನು ಓದಲು ಆರಂಭ ಮಾಡಬೇಕಾದ ವಯಸ್ಸು ಇದು. ನಾನು ಒಂಬತ್ತನೇ ತರಗತಿಯಲ್ಲಿ ಓದಿದ ಬಾಬು ಕೃಷ್ಣಮೂರ್ತಿ ಅವರ ‘ ಅಜೇಯ ‘ ಪುಸ್ತಕವು ನನ್ನ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತ್ತು. ಅದು ಖ್ಯಾತ ಕ್ರಾಂತಿಕಾರಿ ಚಂದ್ರಶೇಖರ್ ಆಝಾದ್ ಅವರ ಬದುಕಿನ ಪುಸ್ತಕ ಆಗಿದೆ.

15-18 ವಯಸ್ಸು – ಹುಚ್ಚು ಖೋಡಿ ಮನಸ್ಸು

ಈ ವಯಸ್ಸಿನ ವಿದ್ಯಾರ್ಥಿಗಳು ಸ್ವಲ್ಪ ಕುತೂಹಲ ಮತ್ತು ಹೆಚ್ಚು ಉಡಾಫೆ ಹೊಂದಿರುತ್ತಾರೆ. ಈ ವಯಸ್ಸಿನವರಿಗೆ ಹೆಚ್ಚು ಆಪ್ತವಾಗುವುದು ವಿಕಸನದ ಸ್ಫೂರ್ತಿ ನೀಡುವ ಲೇಖನಗಳೇ ಆಗಿವೆ. ಸಾಹಸ, ಪ್ರವಾಸ, ಸಂಶೋಧನೆ, ಸ್ವಲ್ಪ ರೋಮಾನ್ಸ್ ಇರುವ ಕತೆಗಳನ್ನು ಹೊಂದಿರುವ ಪುಸ್ತಕಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕತೆಗಳು, ಪೂರ್ಣಚಂದ್ರ ತೇಜಸ್ವಿ ಅವರ ರಂಜನೆ ಕಡಿಮೆ ಇರುವ ಕಥೆಗಳ ಪುಸ್ತಕಗಳನ್ನು ಅವರಿಗೆ ಕೊಟ್ಟು ನೋಡಿ. ಡುಂಡಿರಾಜರ ಹನಿಗವನಗಳು ಈ ವಯಸ್ಸಿನ ಓದುಗರಿಗೆ ತುಂಬ ಇಷ್ಟ ಆಗುತ್ತವೆ.

20-24 ವಯಸ್ಸು – ಯೌವ್ವನದ ಕಚಗುಳಿ

ಕಾಲೇಜು ಹಂತದ ವಿದ್ಯಾರ್ಥಿಗಳು ಭ್ರಮೆಯಿಂದ ಹೊರಬಂದು ವಾಸ್ತವದ ನೆಲೆಗಟ್ಟಿನ ಚಿಂತನೆಗಳನ್ನು ಹೊಂದಿರುತ್ತಾರೆ. ಕುವೆಂಪು, ಕಾರಂತ, ಭೈರಪ್ಪ, ರವೀ ಬೆಳಗೆರೆ…….ಮೊದಲಾದವರ ಗಂಭೀರ ಚಿಂತನೆ ಹೊಂದಿರುವ ಮತ್ತು ವಾಸ್ತವದ ನೆಲೆಗಟ್ಟಿನ ಕಾದಂಬರಿಗಳನ್ನು ಈ ವಯಸ್ಸಿನಲ್ಲಿ ಓದಲು ಆರಂಭ ಮಾಡಬೇಕು. ಹಾಗೆಯೇ ಆತ್ಮಚರಿತ್ರೆಯ ಪುಸ್ತಕಗಳನ್ನು ಓದಲು ಆರಂಭಿಸಬೇಕಾದ ವಯಸ್ಸು ಇದು. ಅಬ್ದುಲ್ ಕಲಾಂ ಅವರ ಅಗ್ನಿಯ ರೆಕ್ಕೆಗಳು ಮತ್ತು ಪ್ರಜ್ವಲಿಸುವ ಮನಸುಗಳು ಇವೆರಡು ಪುಸ್ತಕಗಳನ್ನು ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಕೊಟ್ಟರೆ ಅವರು ತುಂಬಾ ಖುಷಿ ಪಡುತ್ತಾರೆ. ಷಡಕ್ಷರಿ ಅವರ ‘ ಕ್ಷಣ ಹೊತ್ತು ಆಣಿ ಮುತ್ತು ‘ ಅಂಕಣಗಳು ಮತ್ತು ಪ್ರತಾಪ ಸಿಂಹ ಅವರ ‘ಬೆತ್ತಲೆ ಜಗತ್ತು ‘ ಅಂಕಣಗಳು ಹೆಚ್ಚು ಖುಷಿ ಕೊಡುವ ವಯಸ್ಸು ಅದು.

25-28 ವಯಸ್ಸು – ಬದುಕಿನ ಸೌಂದರ್ಯದ ವಸಂತ ಕಾಲ

ಮನಸ್ಸು ಮಾಗಿ ಪ್ರಬುದ್ಧತೆಯು ಮೂಡುವ ಈ ವಯಸ್ಸಲ್ಲಿ ಬದುಕಿನ ಸೌಂದರ್ಯದ ಅನುಭೂತಿ ಮೂಡಿಸುವ ತ್ರಿವೇಣಿ, ಸಾಯಿಸುತೆ, ಅನಕೃ, ದೇವುಡು, ತರಾಸು, ನಾ ಡಿಸೋಜಾ ಅವರ ಕಾದಂಬರಿಗಳು ಹೆಚ್ಚು ಆಪ್ತವಾಗುತ್ತವೆ. ಭಾವಗೀತೆಗಳ ಓದು ಖುಷಿ ಕೊಡುತ್ತದೆ. ಸೋತವರ ಕಥೆಗಳು ಹೆಚ್ಚು ಆಪ್ತವಾಗುತ್ತವೆ. ಕಾದಂಬರಿಯ ಓದು ಹೆಚ್ಚು ತಾಳ್ಮೆಯನ್ನು ಬೇಡುತ್ತದೆ. ಆದರೂ ಒಮ್ಮೆ ಅವರು ಓದುವ ಅಭಿರುಚಿ ರೂಢಿಸಿಕೊಂಡರೆ ಅವರು ಅಂತಹ ಪುಸ್ತಕಗಳನ್ನು ಪ್ರೀತಿ ಮಾಡಲು ತೊಡಗುತ್ತಾರೆ.

ಭರತ ವಾಕ್ಯ

ನನ್ನಂತಹ ಭಾಷಣಕಾರ ಮತ್ತು ತರಬೇತಿದಾರನನ್ನು ಜೀವಂತ ಆಗಿಡುವುದೇ ಪುಸ್ತಕಗಳು ಮತ್ತು ಪುಸ್ತಕಗಳು! ಸಾಮಾಜಿಕ ಜಾಲತಾಣಗಳ ಕಾರಣಕ್ಕೆ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಪೂರ್ತಿ ನಿಜವಲ್ಲ.

ವಿಶ್ವ ಪುಸ್ತಕ ದಿನವಾದ ಇಂದು ನೀವು ನಿಮ್ಮ ಮಕ್ಕಳಲ್ಲಿ ಓದುವ ಸಂಕಲ್ಪ ಹುಟ್ಟಿಸಿದಿರಿ ಅಂತಾದರೆ ಅದು ಸಾರ್ಥಕ ಹೆಜ್ಜೆ ಆಗುತ್ತದೆ. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Exit mobile version