Site icon Vistara News

ರಾಜಮಾರ್ಗ ಅಂಕಣ: ಭಾರತೀಯ ಸೇನೆಯ ಬಗ್ಗೆ ಎದೆ ಉಬ್ಬಿಸಿ ನಡೆಯಲು ಇನ್ನೊಂದು ಕಾರಣ

Rajamarga Column On Kargil Vijay Divas

Rajamarga Column: A Big Reason For Feel Proud About Indian Army

ಜುಲೈ 26 -ಇಂದು ಕಾರ್ಗಿಲ್ ವಿಜಯ ದಿವಸ್!

‘ಅಮ್ಮ,ನಾನು ಕಾರ್ಗಿಲ್ ಯುದ್ಧವನ್ನು ಎದುರಿಸಲು ಹೋಗುತ್ತಿದ್ದೇನೆ. ನನ್ನನ್ನು ಆಶೀರ್ವಾದ ಮಾಡಿ ಕಳುಹಿಸಿಕೊಡಿ. ನನಗೋಸ್ಕರ ಎಂದಿಗೂ ಕಣ್ಣೀರು ಸುರಿಸಬೇಡಿ. ನಾನು ಯುದ್ಧಭೂಮಿಯಲ್ಲಿ ಗೆದ್ದು ತ್ರಿವರ್ಣ ಧ್ವಜ ನೆಟ್ಟು ಬರುತ್ತೇನೆ! ಇಲ್ಲವಾದರೆ ತ್ರಿವರ್ಣ ಧ್ವಜವನ್ನು ಹೊದ್ದು ಬರುತ್ತೇನೆ ‘ ಎಂದು ಯುದ್ಧಕ್ಕೆ ಹೊರಟವನು ಭಾರತದ ಹೆಮ್ಮೆಯ ಸೈನಿಕ ಕ್ಯಾಪ್ಟನ್ ವಿಕ್ರಂ ಬಾತ್ರಾ!

ಆತನು ಕೊಟ್ಟ ಭರವಸೆಯಂತೆ ಟೈಗರ್ ಹಿಲ್ ಗೆದ್ದು ಭಾರತೀಯ ಸೇನೆಯು ಅದರ ತುತ್ತ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಸಂಭ್ರಮಿಸಿತು. ಆದರೆ ಕ್ಯಾಪ್ಟನ್ ವಿಕ್ರಮ ಬಾತ್ರಾ ತ್ರಿವರ್ಣ ಧ್ವಜವನ್ನು ಹೊದ್ದು ಮನೆಯ ಅಂಗಳಕ್ಕೆ ಹೆಣವಾಗಿ ಬಂದಿದ್ದ!

ಕಾರ್ಗಿಲ್ ಯುದ್ಧವು ಭಾರತ ಎದುರಿಸಿದ ಅತ್ಯಂತ ಭಯಾನಕ ಯುದ್ಧ, ಯಾಕೆ?

1999 ಮೇ ತಿಂಗಳ ಮೂರರಂದು ಆರಂಭವಾಗಿ ಜುಲೈ 24ರವರೆಗೆ ಎರಡೂವರೆ ತಿಂಗಳ ಕಾಲ ಯುದ್ಧವು ನಡೆಯಿತು. ಎರಡೂ ಕಡೆಗಳಲ್ಲಿ ಅಪಾರವಾದ ಸಾವು, ನೋವುಗಳು ಉಂಟಾದವು. ಹುತಾತ್ಮರಾದ ಭಾರತೀಯ ಸೈನಿಕರ ಸಂಖ್ಯೆಯೇ 527!

ಭಾರತವು ಈ ಯುದ್ಧವನ್ನು ಅಧಿಕಾರಯುತವಾಗಿ ಗೆದ್ದಿತ್ತು. ಪಾಕಿಸ್ಥಾನದ ಸಮಯ ಸಾಧಕತನವು ಇಡೀ ವಿಶ್ವ ಸಮುದಾಯದ ಮುಂದೆ ಬಯಲಾಗಿತ್ತು! ಈ ಇಡೀ ಷಡ್ಯಂತ್ರದ ಸೂತ್ರಧಾರ ಪಾಕ್ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರ್ರಫ್. ಆತನ ನೆರವಿಗೆ ನಿಂತವನು ಲೆ. ಜ. ಮೊಹಮದ್ ಅಜೀಜ್. ಅವರಿಬ್ಬರು ಸೇರಿ ಎಷ್ಟರ ಮಟ್ಟಿಗೆ ರಹಸ್ಯ ಕಾಪಾಡಿದ್ದರು ಎಂದರೆ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೇ ಇದರ ಬಗ್ಗೆ ಮಾಹಿತಿ ಇರಲಿಲ್ಲ!

ಲೈನ್ ಆಫ್ ಕಂಟ್ರೋಲ್ ನುಸುಳಿ ಬಂದಿತ್ತು ಪಾಕಿಸ್ತಾನ ಸೇನೆ!

1998ರ ಹೊತ್ತಿಗೆ ಭಾರತ ಮತ್ತು ಪಾಕ್ ಎರಡೂ ರಾಷ್ಟ್ರಗಳು ಅಣು ಪರೀಕ್ಷೆಗಳನ್ನು ಮಾಡಿದ್ದವು. ಇದರಿಂದ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಅವಿಶ್ವಾಸದ ವಾತಾವರಣ ಹರಡಿತ್ತು. ಆಗ ಎರಡೂ ರಾಷ್ಟ್ರಗಳು ಲಾಹೋರ್ ಒಪ್ಪಂದವನ್ನು ಮಾಡಿಕೊಂಡು ಪರಸ್ಪರ ಮಾತುಕತೆಯ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದವು. ಭಾರತವು ಇದನ್ನು ನಂಬಿ ಕೂತಿತು. ಆದರೆ ಗುಳ್ಳೆ ನರಿ ಪರ್ವೇಜ್ ಮುಷರ್ರಫ್ ಮೀಸೆಯ ಅಡಿಯಲ್ಲಿ ನಗುತ್ತಿದ್ದ! ಪಾಕಿಸ್ಥಾನ ಹೊಂಚು ಹಾಕಿ ಕಾಯುತ್ತಿತ್ತು.

1998ರ ವರ್ಷಾಂತ್ಯದಲ್ಲಿ ಪಾಕ್ ಸೇನೆಯು ಕಾಶ್ಮೀರದ ಹೋರಾಟಗಾರರ ಸೋಗಿನಲ್ಲಿ ಲೈನ್ ಆಫ್ ಕಂಟ್ರೋಲ್ ಉದ್ದಕ್ಕೂ ಬಂದು ಬೀಡು ಬಿಟ್ಟಿತ್ತು. ಬಂಕರ್ ನಿರ್ಮಾಣ ಆಗಿತ್ತು. ಶಸ್ತ್ರಾಸ್ತ್ರಗಳ ಸರಬರಾಜು ಆರಂಭ ಆಗಿತ್ತು. ಆದರೆ ಇದ್ಯಾವುದರ ಸೂಚನೆಯೂ ಇಲ್ಲದೆ ಭಾರತವು ಲಾಹೋರ್ ಒಪ್ಪಂದವನ್ನು ನಂಬಿ ತಣ್ಣಗೆ ಕೂತಿತ್ತು!

ಆ ಕುರಿಗಾಹಿ ಹುಡುಗರು ಗಮನಿಸದೇ ಹೋಗಿದ್ದರೆ….!

ಗಡಿಯ ಉದ್ದಕ್ಕೂ ಪಾಕ್ ಸೇನೆಯ ಚಟುವಟಿಕೆ ಆರಂಭ ಆಗಿದೆ ಎಂದು ಮೊದಲು ಗಮನಿಸಿದವರು ಅಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ಕುರಿಗಾಹಿ ಹುಡುಗರು! ಅವರು ತಕ್ಷಣ ಭಾರತೀಯ ಸೇನೆಗೆ ಮಾಹಿತಿ ಕೊಟ್ಟರು! ಅವರೇನಾದರೂ ಮೈ ಮರೆತಿದ್ದರೆ..? ಇದು ನಿಜಕ್ಕೂ ಬೆಚ್ಚಿ ಬೀಳಿಸುವ ಸಂಗತಿ.

ತಕ್ಷಣ ನಮ್ಮ ಸೇನೆಯು ಅಲರ್ಟ್ ಆಯಿತು. ದೇಶದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡೀಸ್ ಅವರು ತಡ ಮಾಡದೆ ಯುದ್ಧಕ್ಕೆ ಅನುಮತಿ ನೀಡಿದರು.

‘ಆಪರೇಶನ್ ವಿಜಯ್’ ಘೋಷಣೆ

‘ಆಪರೇಶನ್ ವಿಜಯ್ ‘ ಎಂಬ ಘೋಷಣೆಯ ಯುದ್ಧಕ್ಕೆ ಭಾರತದ ಬ್ಯುಗಲುಗಳು ಮೊಳಗಿದವು. ಮೇ ಮೂರರಂದು 20,000ರಷ್ಟು ಭಾರತೀಯ ಸೈನಿಕರು ಯುದ್ಧಕ್ಕೆ ಸಿದ್ಧರಾದರು. ರಜೆಯ ಮೇಲೆ ಹೋಗಿದ್ದ ಸೈನಿಕರು ಮತ್ತೆ ಸೇನೆಗೆ ಮರಳಿದರು. ಪಾಕ್ ಮತ್ತೆ 5,000 ಸೈನಿಕರನ್ನು ಕರೆತಂದಿತು.

ಮಿಗ್ ವಿಮಾನಗಳು, ಮಿರಾಜ್ ಯುದ್ಧ ವಿಮಾನಗಳು ಆಗಸದಲ್ಲಿ ಹಾರಾಡಿ ಬಾಂಬುಗಳನ್ನು, ಶೆಲ್ ಗಳನ್ನು ಸಿಡಿಸಿದವು. ರಾಕೆಟ್ ಮತ್ತು ಕ್ಷಿಪಣಿಗಳು ಎರಡೂ ಕಡೆಯಿಂದ ಹಾರಿದವು.

ಎರಡೂವರೆ ತಿಂಗಳ ನಂತರ ಯುದ್ಧವು ನಿಂತಿತು, ಭಾರತವು ಗೆದ್ದಿತು!

ಪ್ರಧಾನಿ ವಾಜಪೇಯಿ ಅವರು ಸೇನಾ ಕಂಟ್ರೋಲ್ ರೂಂನಲ್ಲಿ ಕುಳಿತು ಯುದ್ಧವನ್ನು ಮಾನಿಟರ್ ಮಾಡಿದರು. ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡೀಸ್ ಅವರು ಸಿಯಾಚಿನ್ ಯುದ್ಧಭೂಮಿಯ ವರೆಗೆ ಬಂದು ಸೈನಿಕರ ನೈತಿಕ ಬಲವನ್ನು ವೃದ್ದಿಸಿದರು. ಭಾರತೀಯ ಸೈನಿಕರು ವೀರಾವೇಶದಿಂದ ಹೋರಾಡಿದರು. ಮೈನಸ್ 15-20 ಡಿಗ್ರೀ ಶೆಲ್ಸಿಯಸ್ ಶೀತವಿರುವ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಸೈನಿಕರ ರಕ್ತದಿಂದ ತೊಯ್ದಿತು. ಎಲ್ಲೂ ತಲೆ ಎತ್ತಲು ಅವಕಾಶ ಇಲ್ಲದೆ ಪಾಕ್ ಸೇನೆಯು ಸೋತು ತಾನು ಆಕ್ರಮಿಸಿಕೊಂಡ ಭೂಮಿಯಿಂದ ಹಿಮ್ಮೆಟ್ಟಿತು. ಆಗಸ್ಟ್ 24ರಂದು ಭಾರತವು ಟೈಗರ್ ಹಿಲನ ತುತ್ತತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಈ ಯುದ್ಧವನ್ನು ಗೆದ್ದು ಬೀಗಿತು! ದೇಶವಾಸಿಗಳ ಹೆಮ್ಮೆಗೂ ಕಾರಣವಾಯಿತು. ಅದರ ನೆನಪಿಗಾಗಿ ಪ್ರತೀ ವರ್ಷವೂ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತ ಆಚರಿಸಿಕೊಂಡು ಬಂದಿದೆ. ಇದು ಆ ಯುದ್ಧದಲ್ಲಿ ಮಡಿದ 527 ಭಾರತೀಯ ಸೈನಿಕರಿಗೆ ನಾವು ಸಲ್ಲಿಸುವ ಶ್ರದ್ಧಾಂಜಲಿ ಆಗಿದೆ. ಅದರಲ್ಲಿ ಸಾಕಷ್ಟು ಕರ್ನಾಟಕದ ಸೈನಿಕರೂ ಇದ್ದರು ಅನ್ನುವುದು ಕನ್ನಡಿಗರ ಹೆಮ್ಮೆ!

ನಮ್ಮ ಕಾರ್ಗಿಲ್ ಹೀರೊಗಳ ಯಶೋಗಾಥೆಗಳು

ಮಡಿದ 527 ಭಾರತೀಯ ಸೈನಿಕರಲ್ಲಿ ಕಾರ್ಗಿಲ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಐದು ಜನರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿಯನ್ನು ನೀಡಿ ಭಾರತವು ಗೌರವಿಸಿತು. ಅವರೆಂದರೆ ಕ್ಯಾಪ್ಟನ್ ವಿಕ್ರಂ ಬಾತ್ರಾ, ನಯಿಬ್ ಸುಬೇದಾರ್, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಸಂಜಯ ಕುಮಾರ್ ಮತ್ತು ಗ್ರೇನೆಡಿಯರ್ ಯೋಗೇಂದ್ರ ಸಿಂಘ್ ಯಾದವ್. ಇವರನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ಮೇಜರ್ ವಿವೇಕ್ ಗುಪ್ತ, ರೈಫಲ್ ಮ್ಯಾನ್ ಸಂಜಯ್ ಕುಮಾರ್, ಲೇ. ಬಲ್ವಾನ್ ಸಿಂಗ್, ಮೇಜರ್ ರಾಜೇಶ್ ಸಿಂಘ್ ಅಧಿಕಾರಿ….ಮೊದಲಾದವರ ಹೋರಾಟವೂ ನಿರ್ಣಾಯಕವೇ ಆಗಿದೆ.

Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ!

ಪಾಕಿಸ್ಥಾನ ಎಂಬ ಸಂಚುಕೋರ ರಾಷ್ಟ್ರಕ್ಕೆ ಮರೆಯಲಾಗದ ಪಾಠವನ್ನು ಕಲಿಸಿದ, ಭಾರತದ ಸೇನೆಯ ಬಗ್ಗೆ ನಮ್ಮ ಅಭಿಮಾನವನ್ನು ನೂರ್ಮಡಿ ಮಾಡಿದ ಈ ದಿನವನ್ನು ನಾವು ಆಚರಣೆ ಮಾಡದಿದ್ದರೆ ಹೇಗೆ?

ಜೈ ಹಿಂದ್.

Exit mobile version