ಅಂದು ಭಾರತದ ಘನತೆಯನ್ನು ಕಾಪಾಡಿದ್ದು ಒಬ್ಬ ಸಾಮಾನ್ಯ ಮಹಿಳೆ!
ರಾಷ್ಟ್ರಪ್ರೇಮಿಗಳ ನೆತ್ತರನ್ನು ಬಿಸಿಮಾಡುವ ಓರ್ವ ಸಾಮಾನ್ಯ ಮಹಿಳೆಯ ಸಾಹಸದ ಕಥೆಯನ್ನು ಇಂದು ನಿಮ್ಮೆದುರು ತೆರೆದು ಇಡುತ್ತಿದ್ದೇನೆ. ಅದು ಖಂಡಿತವಾಗಿ ಭಾರತದ ಘನತೆಯನ್ನು ಕಾಪಾಡಿದ ಘಟನೆ ಆಗಿತ್ತು. ಆ ದಿನ ಆಕೆ ಏನಾದರೂ ಮೈ ಮರೆತಿದ್ದರೆ….?
ಭಾರತದ ಪ್ರತಿಷ್ಠೆ ಮಣ್ಣುಪಾಲು ಆಗುತ್ತಿತ್ತು ಖಂಡಿತ.
ಅಂದು 2001 ಡಿಸೆಂಬರ್ 13!
ಆ ಕರಾಳ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಬುಡವನ್ನು ಭಯೋತ್ಪಾದಕರು ಅಲ್ಲಾಡಿಸಲು ಪ್ರಯತ್ನಪಟ್ಟ ದಿನವದು! ಅಂದು ದೆಹಲಿಯ ಭವ್ಯವಾದ ಪಾರ್ಲಿಮೆಂಟ್ ಭವನದ ಮೇಲೆ ಬಾಂಬ್ ದಾಳಿಯನ್ನು ನಡೆಸಲು ಯತ್ನಿಸಿದ ಭಯೋತ್ಪಾದಕರ ಸಂಚು ವಿಫಲವಾಗಿತ್ತು! ಅದನ್ನು ಎದುರಿಸಿ ನಿಂತವರು ಒಬ್ಬ ಸಾಮಾನ್ಯ CRPF ಕಾನ್ಸಟೇಬಲ್! ಆಕೆಯೇ ನಮ್ಮ ಇಂದಿನ ಕಥಾನಾಯಕಿ ಕಮಲೇಶ್ ಕುಮಾರಿ!
ಓವರ್ ಟು ದೆಹಲಿ
ಅಂದು ಬೆಳಿಗ್ಗೆ 11-40ರ ಹೊತ್ತು. ಪಾರ್ಲಿಮೆಂಟ್ ಭವನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳ ಅಧಿವೇಶನಗಳು ಜೊತೆಯಾಗಿ ನಡೆಯುತ್ತಿದ್ದವು. ಮೊದಲ ಅಧಿವೇಶನವು ಮುಗಿದು ಎರಡನೆಯ ಅಧಿವೇಶನಕ್ಕೆ ಸಿದ್ಧತೆ ನಡೆಯುತ್ತಿತ್ತು. ಕೇಂದ್ರ ಗೃಹ ಮಂತ್ರಿ ಅಡ್ವಾಣಿ, ಜಸ್ವಂತ್ ಸಿಂಗ್ ಜೊತೆಗೆ ಹತ್ತಾರು ಕೇಂದ್ರ ಮಂತ್ರಿಗಳು, ನೂರು ಲೋಕಸಭಾ ಸದಸ್ಯರು, ಸ್ಪೀಕರ್ ಪಾರ್ಲಿಮೆಂಟ್ ಭವನದ ಒಳಗಿದ್ದರು. ಅವರ್ಯಾರಿಗೂ ಮುಂದೆ ನಡೆಯಲಿರುವ ಭಯೋತ್ಪಾದನೆಯ ಧಾಳಿಯ ಸಣ್ಣ ಸೂಚನೆ ಕೂಡ ಇರಲಿಲ್ಲ. ಪೋಲಿಸ್ ಸಮವಸ್ತ್ರದಲ್ಲಿದ್ದ
ಕಾನ್ಸಟೇಬಲ್ ಕಮಲೇಶ್ ಕುಮಾರಿ ಅವರು ಪಾರ್ಲಿಮೆಂಟಿನ ಹೊರಗಿನ ಕಬ್ಬಿಣದ ಮೊದಲ ಗೇಟಲ್ಲಿ ಕಾವಲಿದ್ದರು. ಅದು ಪಾರ್ಲಿಮೆಂಟ್ ಒಳಗೆ ಅತೀ ಪ್ರಾಮುಖ್ಯ ವ್ಯಕ್ತಿಗಳು ( VIP) ಪ್ರವೇಶ ಮಾಡುವ ಗೇಟಾಗಿತ್ತು!
ಆಕೆಯ ಕೈಯ್ಯಲ್ಲಿ ಯಾವ ವೆಪನ್ ಇರಲಿಲ್ಲ!
ಕಾನ್‌ಸ್ಟೆಬಲ್‌ಗಳ ಕೈಗೆ ಸಾಮಾನ್ಯ ಸಂದರ್ಭಗಳಲ್ಲಿ ವೆಪನ್ಸ್ ಕೊಡುತ್ತಿರಲಿಲ್ಲ. ಹಾಗೆ ಅವರ ಕೈಯ್ಯಲ್ಲಿ ವಯರ್ಲೆಸ್ ಸೆಟ್ ಮಾತ್ರ ಇತ್ತು. ಅವರು ರಸ್ತೆಯ ಕಡೆಗೆ ದೃಷ್ಟಿ ನೆಟ್ಟು ಪ್ರತಿಮೆಯಂತೆ ನಿಂತಿದ್ದರು.
ಆ ಬಿಳಿಯ ಬಣ್ಣದ ಅಂಬಾಸೆಡರ್ ಕಾರು….
ಆಗ ವಿಜಯಚೌಕದ ಕಡೆಯಿಂದ ಒಂದು ಬಿಳಿ ಬಣ್ಣದ ಅಂಬಾಸೆಡರ್ ಕಾರು ಅವರಿದ್ದ ಗೇಟಿನ ಕಡೆಗೆ ಬರತೊಡಗಿತು. ಅದರ ಮೇಲೆ ಕೆಂಪು ದೀಪ ಇತ್ತು. ಎದುರು ಭಾಗದಲ್ಲಿ ಪಾರ್ಲಿಮೆಂಟ್ ಮತ್ತು ಗೃಹ ಮಂತ್ರಾಲಯದ ಸ್ಟಿಕರಗಳು ಇದ್ದವು. ಯಾರಿಗೂ ಸಂಶಯ ಬರಲು ಸಾಧ್ಯವೇ ಇರಲಿಲ್ಲ. ಆದರೆ ಗೇಟಿನ ಬಳಿಗೆ ಬಂದಾಗ ಕಾರು ನಿಧಾನವಾಗದೆ ವೇಗವನ್ನು ಹೆಚ್ಚಿಸಿಕೊಂಡಿತು. ಕಮಲೇಶ್ ಹದ್ದಿನ ಕಣ್ಣಿಗೆ ಕಾರಲ್ಲಿ ಯಾರೋ ಸಂಶಯಾಸ್ಪದ ವ್ಯಕ್ತಿಗಳು ಇರುವುದು ಗಮನಕ್ಕೆ ಬಂದಿದೆ. ಅವರು ತಕ್ಷಣ ಅಲರ್ಟ್ ಆಗಿದ್ದಾರೆ. ವಾಕಿ ಟಾಕೀ ಮೂಲಕ ಎಲ್ಲರಿಗೂ ಸೂಚನೆ ರವಾನೆ ಮಾಡಿದ್ದಾರೆ. ಗೇಟಿನ ಬಳಿ ಓಡಿ ಬಂದು ಗೇಟು ಸೀಲ್ ಮಾಡಿದ್ದಾರೆ. ಜೋರಾಗಿ ಕಿರುಚಿ ಎಲ್ಲರನ್ನೂ ಜಾಗೃತ ಮಾಡಿದ್ದಾರೆ. ತನ್ನಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಸುಖ್ವಿಂದರ್ ಸಿಂಘ್ ಎಂಬ ಸೈನಿಕನಿಗೆ ಸೂಚನೆ ಕೊಟ್ಟಿದ್ದಾರೆ. ಇದೆಲ್ಲವೂ ಕಣ್ಣು ರೆಪ್ಪೆ ಮುಚ್ಚುವಷ್ಟರಲ್ಲಿ ನಡೆದು ಹೋಗಿದೆ!
ಆ ಕಾರಿನಲ್ಲಿ ಐದು ಆತ್ಮಾಹುತಿ ದಳದ ಉಗ್ರರು ಇದ್ದರು!
ಆ ಕಾರಿನಲ್ಲಿದ್ದ ಐದು ಜನ ಭಯೋತ್ಪಾದಕರು ಪೂರ್ತಿ ಸನ್ನದ್ಧರಾಗಿ ಬಂದಿದ್ದರು. ಅವರ ಬಳಿ AK 47, ಗ್ರೆನೇಡ್ಗಳು, ಗ್ರೆನೇಡ್ ಲಾಂಚರ್ಸ್ ಎಲ್ಲವೂ ಇದ್ದವು! ಅದೊಂದು ಆತ್ಮಾಹುತಿ ಬಾಂಬ್ ಧಾಳಿಯ ಸಂಚು ಆಗಿತ್ತು. ಈ ಉಗ್ರ ಬಾಂಬರಗಳಿಗೆ ಎದೆಗೊಟ್ಟು ಕಮಲೇಶ್ ಕುಮಾರಿ ಎಂಬ ಸಾಮಾನ್ಯ ಕಾನ್ಸಟೇಬಲ್ ಬಂಡೆಯಂತೆ ನಿಂತಿದ್ದರು!
ಹುತಾತ್ಮರಾದರು ಕಮಲೇಶ್
ಸಿಟ್ಟಾದ ಭಯೋತ್ಪಾದಕರು ಕಂಡ ಕಂಡಲ್ಲಿ ಗುಂಡು ಸಿಡಿಸಿದರು. ತಮ್ಮ ಸಂಚನ್ನು ಭಗ್ನ ಮಾಡಿದ ಕಮಲೇಶ್ ಕುಮಾರಿ ಕಡೆಗೆ ಅವರ ಸಿಟ್ಟು ತಿರುಗಿತು. ಅವರ ಹೊಟ್ಟೆಯಲ್ಲಿ 11 ಗುಂಡು ತೂರಿ ಬಿಟ್ಟರು. ಅವರು ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡರು. ಅಷ್ಟು ಹೊತ್ತಿಗೆ ಅಲರ್ಟ್ ಆಗಿದ್ದ ಪಾರ್ಲಿಮೆಂಟ್ ಭವನದ ರಕ್ಷಣಾ ಪಡೆಯವರು ಧಾವಿಸಿಬಂದು ಆ ಕಾರಿನಲ್ಲಿದ್ದ ಭಯೋತ್ಪಾದಕರನ್ನೆಲ್ಲ ಕೊಂದು ಹಾಕಿದರು. ಅಂದು ಗುಂಡಿನ ಚಕಮಕಿ ಮತ್ತು ಗ್ರೆನೇಡ್ ದಾಳಿಯಲ್ಲಿ ಒಟ್ಟು 9 ರಕ್ಷಣಾ ಪಡೆಯ ಅಧಿಕಾರಿಗಳು ಹುತಾತ್ಮರಾದರು. ಅಂದು ಸಾಮಾನ್ಯ ಕಾನ್ಸಟೇಬಲ್ ಆಗಿದ್ದ ಕಮಲೇಶ್ ಕುಮಾರಿ ಅವರು ತೋರಿದ್ದ ಪ್ರಸಂಗಾವಧಾನತೆಯು ಭಾರತದ ಘನತೆಯನ್ನು ಕಾಪಾಡಿತು. ಇಲ್ಲವಾದರೆ ಏನೆಲ್ಲ ಆಗುತ್ತಿತ್ತು ಎನ್ನುವುದನ್ನು ಊಹೆ ಮಾಡುವುದು ನಮಗೆ ಕಷ್ಟ! ಏಕೆಂದರೆ ಅಂದು ಸದನದಲ್ಲಿ ನೂರಕ್ಕಿಂತ ಹೆಚ್ಚು ಸಂಸದರು ಇದ್ದರು ಮತ್ತು ಹತ್ತಕಿಂತ ಹೆಚ್ಚು ಪ್ರಭಾವೀ ಮಂತ್ರಿಗಳು ಇದ್ದರು. ಕಮಲೇಶ್ ಕುಮಾರಿ ಅರ್ಧ ಕ್ಷಣ ನಿರ್ಲಕ್ಷ ಮಾಡಿದ್ದರೂ ಅಂದು ಭಾರತದ ಪ್ರತಿಷ್ಠೆಯ ಸಂಕೇತವಾಗಿದ್ದ ಪಾರ್ಲಿಮೆಂಟ್ ಭವನ ಸ್ಫೋಟವಾಗುವ ಸಾಧ್ಯತೆ ಇತ್ತು!
ಅಮರ್ ರಹೇ ಕಮಲೇಶ್ ಕುಮಾರಿ
ಮುಂದೆ ಅವರಿಗೆ ಇಡೀ ಭಾರತವು ಕಣ್ಣೀರು ಸುರಿಸಿತು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಂಬನಿಯನ್ನು ಮಿಡಿದರು. ಭಾರತ ಸರಕಾರವು ಆಕೆಯ ಸಾಹಸ, ಧೈರ್ಯವನ್ನು ಪರಿಗಣಿಸಿ ಶಾಂತಿ ಕಾಲದ ಪರಮೋಚ್ಚ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಅವರನ್ನು ಗೌರವಿಸಿತು. ಅದೇ ಘಟನೆಯಲ್ಲಿ ಮರಣ ಹೊಂದಿದ ಇತರ ಎಂಟು ರಕ್ಷಣಾ ಪಡೆಯ ಜವಾನರಿಗೆ ಕೂಡ ವಿವಿಧ ಶೌರ್ಯ ಪ್ರಶಸ್ತಿ ನೀಡಿ ದೇಶವು ಗೌರವ ಸಲ್ಲಿಸಿತು.
ಆದರೆ ಮುಂದೆ ಏನಾಯ್ತು?
ಮುಂದೆ ಪಾರ್ಲಿಮೆಂಟ್ ಬ್ಲಾಸ್ಟ್ ಯೋಜನೆಯ ಸಂಚನ್ನು ರೂಪಿಸಿದ್ದ ಭಯೋತ್ಪಾದಕನಾದ ಮೊಹಮ್ಮದ್ ಆಪ್ಜಲನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ತಳ್ಳಿದರು. ಮುಂದೆ ಸುಪ್ರೀಂ ಕೋರ್ಟು ವಿಚಾರಣೆಯನ್ನು ಮುಗಿಸಿ ಆತನನ್ನು ನಿರ್ದಾಕ್ಷಿಣ್ಯವಾಗಿ ಗಲ್ಲುಶಿಕ್ಷೆಗೆ ಗುರಿಮಾಡಿತು. ಆದರೆ ಅಫ್ಜಲನ ಕುಟುಂಬವು ರಾಷ್ಟ್ರಪತಿಯವರಿಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿತು. ದುರಂತ ಏನೆಂದರೆ ಹಲವು ವರ್ಷಗಳ ಕಾಲ ಆ ಅರ್ಜಿಯು ಇತ್ಯರ್ಥ ಆಗಲೇ ಇಲ್ಲ! ಆಗ ಕಮಲೇಶ್ ಕುಟುಂಬದವರು ತಮ್ಮ ತೀವ್ರ ಅಸಮಾಧಾನವನ್ನು ಬಹಿರಂಗವಾಗಿಯೇ ತೋಡಿಕೊಂಡರು, ಮಾತ್ರವಲ್ಲ ತಮಗೆ ನೀಡಿದ ಅಶೋಕ ಚಕ್ರ ಪ್ರಶಸ್ತಿಯನ್ನು 2006ರಲ್ಲಿ ಸರಕಾರಕ್ಕೆ ಹಿಂದೆ ಕೊಟ್ಟರು! ಇತರ ಎಂಟು ಯೋಧರ ಕುಟುಂಬದವರೂ ತಮ್ಮ
ಶೌರ್ಯ ಪ್ರಶಸ್ತಿಗಳನ್ನು ವಾಪಸು ಮಾಡಿದರು! ಅದು ನಿಜವಾದ ಸ್ವಾಭಿಮಾನದ ನಡೆ ಆಗಿತ್ತು.
ಮುಂದೆ ರಾಷ್ಟ್ರಪತಿಯಾಗಿ ಆಯ್ಕೆ ಆದ ಪ್ರಣಬ್ ಮುಖರ್ಜಿಯವರು 2013ರಲ್ಲಿ ಆ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದರು. ಪರಿಣಾಮವಾಗಿ ಅಫ್ಜಲನನ್ನು ಕೂಡಲೇ ಗಲ್ಲಿಗೇರಿಸಲಾಯಿತು. ಆಗ ಒಂಬತ್ತು ಕುಟುಂಬಗಳು ಕೂಡ ತುಂಬು ಹೆಮ್ಮೆಯಿಂದ ತಮ್ಮ ಶೌರ್ಯ ಪ್ರಶಸ್ತಿಗಳನ್ನು ಮತ್ತೆ ಸ್ವೀಕಾರ ಮಾಡಿದರು!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಇವರ ಬದುಕು ಒಂದು ಥ್ರಿಲ್ಲರ್ ಸಿನೆಮಾಗಿಂತ ರೋಚಕ ಆಗಿದೆ!
ಭರತ ವಾಕ್ಯ
ಕೇವಲ CRPF ಕಾನಸ್ಟೇಬಲ್ ಆಗಿದ್ದ ಕಮಲೇಶ್ ಕುಮಾರಿ ಅವರ ದಿಟ್ಟತನ, ಧೈರ್ಯ, ಅಸಾಮಾನ್ಯ ಪ್ರಸಂಗಾವಧಾನತೆ ಮತ್ತು ರಾಷ್ಟ್ರಪ್ರೇಮದ ಯಶೋಗಾಥೆಯು ಶಾಲೆಯ ಮಕ್ಕಳ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆಯಬೇಕು. ಅದರಿಂದ ಸಾವಿರಾರು ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಬೇಕು.
ಕಮಲೇಶ್ ಕುಮಾರಿ ಅವರು ನಿಜವಾಗಿ ಭಾರತದ ಹೆಮ್ಮೆ ಎಂದು ನನಗೆ ಅನ್ನಿಸುತ್ತದೆ.
ಜೈ ಹಿಂದ್!