ಜಗತ್ತಿನ ಮಹೋನ್ನತ ಸ್ವಿಮ್ಮರ್ ನೀರಿಗೆ ಇಳಿದರೆ ದಾಖಲೆ ಮತ್ತು ದಾಖಲೆಗಳೇ ನಿರ್ಮಾಣ ಆಗುತ್ತಿದ್ದವು!
ರಾಜಮಾರ್ಗ ಅಂಕಣ: ಒಲಿಂಪಿಕ್ಸ್ (Olympics) ವೇದಿಕೆಗಳಲ್ಲಿ ಒಂದೋ ಅಥವಾ ಎರಡೋ ಪದಕಗಳನ್ನು (medals) ಗೆಲ್ಲುವ ಕನಸು ಕಂಡವರು, ಅದನ್ನು ಸಾಧನೆ ಮಾಡಿದವರು ಲೆಜೆಂಡ್ ಅಂತ ಅನ್ನಿಸಿಕೊಳ್ಳುತ್ತಾರೆ. ಆದರೆ ಈ ಅಮೇರಿಕನ್ ಈಜುಗಾರ (Swimmer) ಒಟ್ಟು ನಾಲ್ಕು ಒಲಿಂಪಿಕ್ ಕೂಟಗಳಲ್ಲಿ ಭಾಗವಹಿಸಿ ಗೆದ್ದದ್ದು ಬರೋಬ್ಬರಿ 28 ಒಲಿಂಪಿಕ್ ಪದಕಗಳನ್ನು ಅಂದರೆ ನಂಬಲು ಸಾಧ್ಯವೇ ಇಲ್ಲ! ಅದರಲ್ಲಿ ಕೂಡ 23 ಹೊಳೆಯುವ ಚಿನ್ನದ ಪದಕಗಳು! ಆತನು ನೀರಿಗೆ ಇಳಿದರೆ ಸಾಕು ದಾಖಲೆಗಳು ಮತ್ತು ದಾಖಲೆಗಳು ಮಾತ್ರ ನಿರ್ಮಾಣ ಆಗುತ್ತಿದ್ದವು.
ಆತನು ಅಮೇರಿಕಾದ ಮಹೋನ್ನತ ಈಜುಗಾರ ಮೈಕೆಲ್ ಫೆಲ್ಪ್ಸ್ (Michel Phelps).
ಭಗವಂತನು ಆತನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿದ್ದ ಅನ್ನಿಸುತ್ತದೆ. ಆರು ಅಡಿ ನಾಲ್ಕು ಇಂಚು ಎತ್ತರ, ಮೀನಿನ ಹಾಗೆ ಬೆಂಡ್ ಆಗುವ ದೇಹ, ಭಾರೀ ಬಲಿಷ್ಟವಾದ ತೋಳುಗಳು, ನೀರನ್ನು ರಭಸವಾಗಿ ಹಿಂದೆ ತಳ್ಳಿ ಮುಂದೆ ಹೋಗುವ ದೋಣಿ ಆಕಾರದ ದೇಹ ಇದೆಲ್ಲವೂ ಆತನಿಗೆ ದೈವದತ್ತವಾಗಿ ಬಂದಿದ್ದವು. ಸತತವಾಗಿ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಆತ ಭಾಗವಹಿಸಿದ್ದು ಮಾತ್ರವಲ್ಲ ಪ್ರತೀ ಬಾರಿ ನೀರಿಗೆ ಇಳಿದಾಗ ಒಂದಲ್ಲ ಒಂದು ದಾಖಲೆ, ಒಂದಲ್ಲ ಒಂದು ಪದಕ ಗೆಲ್ಲದೆ ಆತ ಮೇಲೆ ಬಂದ ಉದಾಹರಣೆಯೇ ಇಲ್ಲ!
ಬಾಲ್ಟಿಮೋರ್‌ನ ಬುಲ್ಲೆಟ್!
1985ನೇ ಜೂನ್ 30ರಂದು ಅಮೇರಿಕಾದ ಬಾಲ್ಟಿಮೋರ್ ಎಂಬ ಪ್ರಾಂತ್ಯದಲ್ಲಿ ಹುಟ್ಟಿದ ಆತ ತನ್ನ ಒಂಬತ್ತನೇ ವಯಸ್ಸಿಗೆ ಅಪ್ಪ ಮತ್ತು ಅಮ್ಮನ ಪ್ರೀತಿಯಿಂದ ವಂಚಿತವಾದನು. ಅದಕ್ಕೆ ಕಾರಣ ಅವರ ವಿಚ್ಛೇದನ. ಅದರಿಂದಾಗಿ ಆತನಿಗೆ ಮಾನಸಿಕ ನೆಮ್ಮದಿ ಹೊರಟುಹೋಯಿತು. ಆತನಿಗೆ Attention Deficit Hyper active Disorder (ADHD) ಎಂಬ ಮಾನಸಿಕ ಸಮಸ್ಯೆಯು ಬಾಲ್ಯದಿಂದಲೂ ತೊಂದರೆ ಕೊಡುತ್ತಿತ್ತು. ರಾತ್ರಿ ನಿದ್ದೆ ಬಾರದೆ ಆತ ಒದ್ದಾಡುತ್ತಿದ್ದನು. ಈ ಸಮಸ್ಯೆಗಳಿಂದ ಹೊರಬರಲು ಆತ ಆರಿಸಿಕೊಂಡ ಮಾಧ್ಯಮ ಎಂದರೆ ಅದು ಸ್ವಿಮ್ಮಿಂಗ್ ಪೂಲ್! ತನ್ನ ಏಳನೇ ವಯಸ್ಸಿಗೆ ನೀರಿಗೆ ಇಳಿದ ಆತನಿಗೆ ಬಾಬ್ ಬೌಮಾನ್ ಎಂಬ ಕೋಚ್ ಸಿಕ್ಕಿದ ನಂತರ ಆತನ ಬದುಕಿನ ಗತಿಯೇ ಬದಲಾಯಿತು. ಆತ ದಿನದ ಹೆಚ್ಚು ಹೊತ್ತನ್ನು ನೀರಿನಲ್ಲಿಯೇ ಕಳೆಯಲು ತೊಡಗಿದನು.
ಆತನ ಕಣ್ಣ ಮುಂದೆ ಇಬ್ಬರು ಸ್ವಿಮ್ಮಿಂಗ್ ಲೆಜೆಂಡ್ಸ್ ಇದ್ದರು. ಒಬ್ಬರು ಒಂದೇ ಒಲಿಂಪಿಕ್ ಕೂಟದಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದ ಮಾರ್ಕ್ ಸ್ಪಿಟ್ಜ್ (1972). ಇನ್ನೊಬ್ಬರು ಆಸ್ಟ್ರೇಲಿಯಾದ ಸ್ವಿಮಿಂಗ್ ದೈತ್ಯ ಇಯಾನ್ ತೋರ್ಪ್. ಅವರಿಂದ ಸ್ಫೂರ್ತಿ ಪಡೆದ ಆತ ಮುಂದೆ ಮಾಡಿದ್ದು ಎಲ್ಲವೂ ವಿಶ್ವ ದಾಖಲೆಯ ಸಾಧನೆಗಳೇ ಆಗಿವೆ. ಜನರು ಆತನನ್ನು ಬಾಲ್ಟಿಮೋರದ ಬುಲೆಟ್ ಎಂದು ಪ್ರೀತಿಯಿಂದ ಕರೆದರು.
ಸತತ ನಾಲ್ಕು ಒಲಿಂಪಿಕ್ಸ್ – 28 ಪದಕಗಳು – ಅದರಲ್ಲಿ 23 ಚಿನ್ನದ ಪದಕಗಳು!
2004ರ ಅಥೆನ್ಸ್ ಒಲಿಂಪಿಕ್ಸ್ – ಒಟ್ಟು ಎಂಟು ಪದಕಗಳು.
2008 ಬೀಜಿಂಗ್ ಒಲಿಂಪಿಕ್ಸ್ – ಒಟ್ಟು ಎಂಟು ಚಿನ್ನದ ಪದಕಗಳು.
2012 ಲಂಡನ್ ಒಲಿಂಪಿಕ್ಸ್ – ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿಯ ಪದಕಗಳು.
2016 ರಿಯೋ ಒಲಿಂಪಿಕ್ಸ್ – ಐದು ಚಿನ್ನದ ಪದಕ ಮತ್ತು ಒಂದು ಬೆಳ್ಳಿ.
ಅಂದರೆ ಸತತ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿ ಒಟ್ಟು 28 ಪದಕಗಳನ್ನು ಬೇರೆ ಯಾರೂ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ! ಬಟರ್ ಫ್ಲೈ, ಮೆಡ್ಲಿ, ಫ್ರೀ ಸ್ಟೈಲ್, ಬ್ಯಾಕ್ ಸ್ಟ್ರೋಕ್ಸ್…ಹೀಗೆ ಪ್ರತೀಯೊಂದು ವಿಭಾಗಳಲ್ಲಿಯೂ ಮೈಕೆಲ್ ಒಂದರ ಮೇಲೊಂದು ಪದಕಗಳನ್ನು ಗೆಲ್ಲುತ್ತಾ ಹೋಗಿದ್ದಾನೆ! ಆ 16 ವರ್ಷಗಳ ಅವಧಿಯಲ್ಲಿ ಆತನಿಗೆ ಸ್ಪರ್ಧಿಗಳೇ ಇರಲಿಲ್ಲ ಎನ್ನಬಹುದು!
ಮೈಕೆಲ್ ಎಂಬ ಚಿನ್ನದ ಮೀನಿನ ಜಾಗತಿಕ ದಾಖಲೆಗಳು
೧) ಆತನು ತನ್ನ ಜೀವಮಾನದಲ್ಲಿ ಗೆದ್ದ ಒಟ್ಟು ಅಂತಾರಾಷ್ಟ್ರೀಯ ಪದಕಗಳ ಸಂಖ್ಯೆ ಬೆರಗು ಹುಟ್ಟಿಸುತ್ತದೆ. ಒಟ್ಟು 82 ಪದಕಗಳು. ಅದರಲ್ಲಿ 65 ಚಿನ್ನ, 14 ಬೆಳ್ಳಿ ಮತ್ತು 3 ಕಂಚು!
೨) ಒಟ್ಟು 20 ಗಿನ್ನೆಸ್ ದಾಖಲೆಗಳು ಆತನ ಹೆಸರಿನಲ್ಲಿ ಇವೆ!
೩) ಒಟ್ಟು 39 ವಿಶ್ವದಾಖಲೆಗಳು ಆತನ ಹೆಸರಿನಲ್ಲಿ ಇವೆ. ಅದರಲ್ಲಿ 29 ವೈಯಕ್ತಿಕ ಮತ್ತು 10 ರಿಲೇ ಸ್ಪರ್ಧೆಗಳದ್ದು!
೪) 2004ರಿಂದ 2018ರವರೆಗೆ ನಡೆದ ವಿಶ್ವ ಈಜು ಚಾಂಪಿಯನಶಿಪ್ ಸ್ಪರ್ಧೆಗಳಲ್ಲಿ ಆತ ಪದಕಗಳ ಗೊಂಚಲು ಗೆಲ್ಲದೆ ಹಿಂದೆ ಬಂದ ನಿದರ್ಶನವೇ ಇಲ್ಲ!
೫) ಒಟ್ಟು ಎಂಟು ಬಾರಿ ಅವನಿಗೆ ‘ವರ್ಲ್ಡ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೬) ಒಟ್ಟು 11 ಬಾರಿ ‘ಅಮೇರಿಕನ್ ಸ್ವಿಮ್ಮರ್ ಆಫ್ ದ ಇಯರ್’ ಪ್ರಶಸ್ತಿಗಳು ದೊರೆತಿವೆ!
೭) ಒಂದೇ ಒಲಿಂಪಿಕ್ ಕೂಟದಲ್ಲಿ ಆತ ಎಂಟು ಚಿನ್ನದ ಪದಕಗಳನ್ನು (2008 ಬೀಜಿಂಗ್) ಗೆದ್ದ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲವೇ ಇಲ್ಲ!
೮) ಆತನಿಗೆ ಜಾಗತಿಕ ಒಲಿಂಪಿಕ್ ಸಮಿತಿಯು ಜಗತ್ತಿನ ಅತ್ಯುತ್ತಮ ಸ್ವಿಮ್ಮರ್ ಪ್ರಶಸ್ತಿ ನೀಡಿ ಗೌರವಿಸಿದೆ!
೯) 100 ಮೀಟರ್ ಬಟರ್ ಫ್ಲೈ, 200 ಮೀಟರ್ ಬಟರ್ ಫ್ಲೈ, 200 ಮೀಟರ್ ಇಂಡಿವಿಜುವಲ್ ಮೆಡ್ಲಿ, 400 ಮೀಟರ್ ಇಂಡಿವಿಜುವಲ್ ಮೆಡ್ಲಿ ಈ ವಿಭಾಗದಲ್ಲಿ ಆತ ಮಾಡಿದ ಜಾಗತಿಕ ದಾಖಲೆಗಳನ್ನು ಮುಂದೆ ಕೂಡ ಯಾರೂ ಮುರಿಯುವ ಸಾಧ್ಯತೆ ಇಲ್ಲ ಎಂದು ಭಾವಿಸಲಾಗುತ್ತಿದೆ!
ಈ ಎಲ್ಲಾ ಸಾಧನೆಗಳಿಗೆ ಕಾರಣ ಆತನ ಈಜುವ ಪ್ಯಾಶನ್!
ಆತನ ಆತ್ಮಚರಿತ್ರೆಯ ಪುಸ್ತಕವನ್ನು ಒಮ್ಮೆ ತಿರುವಿ ಹಾಕಿದಾಗ ಆತನ ಸ್ವಿಮ್ಮಿಂಗ್ ಪ್ಯಾಶನ್ ಬಗ್ಗೆ ಹಲವು ಉದಾಹರಣೆಗಳು ದೊರೆಯುತ್ತವೆ.
ಒಮ್ಮೆ ಏನಾಯಿತೆಂದರೆ 2001 ಸೆಪ್ಟೆಂಬರ್ 11ರಂದು ಅಮೆರಿಕದ ಟ್ವಿನ್ ಟವರ್ ಮೇಲೆ ಭಯೋತ್ಪಾದಕ ಧಾಳಿ ನಡೆದು ಇಡೀ ಟವರ್ ಕುಸಿದು ಹೋದದ್ದು, ಇಡೀ ಅಮೇರಿಕಾ ನಲುಗಿ ಹೋದದ್ದು ನಮಗೆಲ್ಲ ಗೊತ್ತಿದೆ. ಸರಿಯಾಗಿ ಅದೇ ಹೊತ್ತಿಗೆ ಮೈಕೆಲ್ ಸ್ವಿಮ್ಮಿಂಗ್ ಪೂಲನಲ್ಲಿ ಈಜುತ್ತಾ ತನ್ನ ಕೋಚಗೆ ಕಾಲ್ ಮಾಡಿ ಕೇಳಿದ್ದನಂತೆ- ಸರ್, ಎಲ್ಲಿದ್ದೀರಿ? ನಾನು ಪೂಲಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದೇನೆ!
ಮೈಕೆಲ್ ಫೆಲ್ಫ್ಸ್ ಇಷ್ಟೊಂದು ವಿಶ್ವ ದಾಖಲೆಗಳನ್ನು ಕ್ರಿಯೇಟ್ ಮಾಡಿದ್ದು ಸುಮ್ಮನೆ ಅಲ್ಲ!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಕಾರ್ಗಿಲ್, ಇದು ಕೆಚ್ಚಿನ ಕಲಿಗಳ ಸಮರಗಾಥೆ