ಬೀಚಿಯವರ ಸಂಪೂರ್ಣ ಹೆಸರು ರಾಯಸಂ ಭೀಮಸೇನ ರಾವ್. ಹುಟ್ಟಿದ್ದು ಅಂದಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸಂಪ್ರದಾಯಸ್ಥರ ಕುಟುಂಬದಲ್ಲಿ. ಹುಟ್ಟಿದ ಕೆಲವೇ ದಿನಗಳಲ್ಲಿ ಅಪ್ಪ ತೀರಿದರು. ಆಗ ಹಿರಿಯರು ‘ಅಪಶಕುನದ ಮಗು’ ಎಂದು ಭಾವಿಸಿ ಸತ್ತರೆ ಸಾಯಲಿ ಎಂದು ಭಾವಿಸಿ ಮೂರು ದಿನ ಹೊರಗೆ ಬಿಸಿಲಲ್ಲಿ ಮಲಗಿಸಿದರಂತೆ. ನಾನು ‘ಗಟ್ಟಿ ಪಿಂಡ’ ಆದ್ದರಿಂದ ಬದುಕಿದೆ ಎಂದವರು ಹೇಳುತ್ತಾರೆ! ಎಂಟನೇ ವಯಸ್ಸಿಗೆ ಅಮ್ಮ ಕೂಡ ತೀರಿ ಹೋದರು. ಆಗ ಸೋದರತ್ತೆ ಅವರನ್ನು ಕಷ್ಟಪಟ್ಟು ಸಾಕಿದ್ದನ್ನು ಅವರು ಕೊನೆಯವರೆಗೆ ಮರೆಯಲಿಲ್ಲ. SSLC ವರೆಗೆ ಮಾತ್ರ ಓದಿದ ಬೀಚಿ ಒಬ್ಬ ಜವಾನನಾಗಿ ಸರಕಾರಿ ನೌಕರರಿಗೆ ಸೇರುತ್ತಾರೆ. ಮುಂದೆ ಪೋಲಿಸ್ ಇಲಾಖೆಗೆ ಕಾನ್ಸಟೆಬಲ್ ಆಗಿ ಆಯ್ಕೆ ಆಗುತ್ತಾರೆ. ತನ್ನನ್ನು “ಕನಿಷ್ಟ ಬಿಲ್ಲೆ” ಎಂದು ತಮಾಶೆಗೆ ಕರೆದುಕೊಳ್ಳುತ್ತಾರೆ. ಅವರ ಜೀವನದ ಟರ್ನಿಂಗ್ ಪಾಯಿಂಟ್ ಬಗ್ಗೆ ನಾನು ಹೇಳಲೇಬೇಕು.
ಕನ್ನಡದ ದ್ವೇಷವು ಪ್ರೀತಿಯಾಗಿ ಬದಲಾಯಿತು.
ಬಳ್ಳಾರಿ ಜಿಲ್ಲೆಯು ಆಗ ಪೂರ್ತಿ ತೆಲುಗಿನ ಪ್ರಭಾವದಲ್ಲಿತ್ತು. ಬೀಚಿಗೂ ಕನ್ನಡದ ಬಗ್ಗೆ ತಾತ್ಸಾರದ ಭಾವನೆ ಇತ್ತು. ಏನಿದೆ ಅಂತಹದ್ದು ಕನ್ನಡದಲ್ಲಿ? ಅಂತ ಯಾವಾಗಲೂ ಹೇಳುತ್ತಿದ್ದರು. ಒಮ್ಮೆ ರೈಲಿನಲ್ಲಿ ಹೆಂಡತಿಯ ಜೊತೆಗೆ ದೂರ ಪ್ರಯಾಣ ಹೋಗುತ್ತಿದ್ದಾಗ “ಟೈಮ್ ಪಾಸ್ ಮಾಡಲು ಒಂದು ಪುಸ್ತಕ ತೆಗೆದುಕೊಂಡು ಬನ್ನಿ” ಅಂತ ಹೆಂಡತಿ ಹೇಳಿದಾಗ ರೈಲ್ವೆ ಪ್ಲಾಟ್ ಫಾರ್ಮನ ಪುಸ್ತಕದ ಅಂಗಡಿಗೆ ಹೋಗಿ ಯಾವುದಾದರೂ ಒಂದು ಕೊಡ್ರಿ ಅಂದಾಗ ಆ ಅಂಗಡಿಯವನು ಖ್ಯಾತ ಕಾದಂಬರಿಕಾರ ಅ.ನ.ಕೃ. ಅವರ ಎಪಿಕ್ ಕೃತಿ ‘ಸಂಧ್ಯಾ ರಾಗ’ ಕಾದಂಬರಿಯನ್ನು ಕೊಟ್ಟನು. ಅದನ್ನು ಓದುವುದು ಅಪಮಾನ ಎಂದು ಭಾವಿಸಿದರು ಬೀಚಿ. ಹೆಂಡತಿಯ ಕಣ್ಣಿಗೆ ಮಣ್ಣು ಹಾಕಲು ಇಂಗ್ಲಿಷ್ ಪತ್ರಿಕೆಯ ನಡುವೆ ಆ ಪುಸ್ತಕವನ್ನಿಟ್ಟು ಓದಲು ಆರಂಭಿಸಿದ್ದರು. ಆ ಪುಸ್ತಕ ಎಷ್ಟು ಪ್ರಭಾವ ಬೀರಿತು ಅಂದರೆ ಓದಿ ಮುಗಿಸಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು ಎಂದು ಬೀಚಿ ಹೇಳುತ್ತಾರೆ! ಮುಂದೆ ಅವರು ಕನ್ನಡದಲ್ಲೇ ಬರೆಯಲು ನಿರ್ಧಾರ ಮಾಡಿಯಾಗಿತ್ತು!
ಬೀಚಿ ಬರೆದದ್ದು ಎಲ್ಲವೂ ಹುಲುಸು ಬೆಳೆ
ಒಂದಕ್ಕಿಂತ ಒಂದು ಶ್ರೇಷ್ಠವಾದ 65 ಕನ್ನಡದ ಹಾಸ್ಯ ಕೃತಿಗಳನ್ನು ಬರೆದು ಬೀಚಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತವಾಗಿ ಮಾಡಿದರು. ಅದರಲ್ಲಿ ಹೆಚ್ಚಿನವುಗಳು ಕಾದಂಬರಿಗಳು, ನಾಟಕಗಳು, ಲೇಖನಮಾಲೆಗಳು ಮತ್ತು ಅಂಕಣ ಬರಹಗಳು. ಕೇವಲ ಹಾಸ್ಯಕ್ಕಾಗಿ ಬರೆಯದೆ ವಿಡಂಬನೆ, ವ್ಯಂಗ್ಯ, ಮೊನಚು, ಸಮಾಜವನ್ನು ತಿದ್ದುವ ದೃಷ್ಟಿಕೋನ, ಮೌಢ್ಯದ ವಿರುದ್ಧ ಸಾತ್ವಿಕ ಸಿಟ್ಟು ಹೀಗೆ ಎಲ್ಲವನ್ನೂ ಹದವಾಗಿ ಬೆರೆಸಿ ಸಾಹಿತ್ಯದ ಸೃಷ್ಠಿ ಮಾಡುತ್ತ ಹೋದರು. ಅವರ ಮೊದಲ ಕಾದಂಬರಿ ‘ದಾಸ ಕೂಟ’. ಅದು ಕನ್ನಡದ ಮೊದಲ ಪೂರ್ಣ ಹಾಸ್ಯದ ಕಾದಂಬರಿ ಎಂದು ಕೀರ್ತಿ ಪಡೆಯಿತು.
ಎಲ್ಲಿರುವೆ ತಂದೆ ಬಾರೋ, ಆರಿದ ಚಹಾ, ಆಗಿಷ್ಟು ಈಗಿಷ್ಟು ಅವರ ಶ್ರೇಷ್ಟವಾದ ಮತ್ತು ಜನಪ್ರಿಯ ಕಾದಂಬರಿಗಳು.
‘ನನ್ನ ಭಯಾಗ್ರಾಫಿ’ ಅವರ ಆತ್ಮಚರಿತ್ರೆಯ ಪುಸ್ತಕ. ಅದು ಕನ್ನಡದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಎಂದು ಮನ್ನಣೆ ಪಡೆದಿದೆ. ಬೀಚಿ ಸೃಷ್ಟಿಸಿದ ಒಂದು ಅದ್ಭುತ ಪಾತ್ರ ಅಂದ್ರೆ ಅದು ತಿಂಮ! ಅವನು ಜನಸಾಮಾನ್ಯರ ಪ್ರತಿನಿಧಿ ಎಂದು ಬೀಚಿಯವರು ಹೇಳುತ್ತಾರೆ. ಅವರ ಎಲ್ಲ ಕೃತಿಗಳಲ್ಲೂ ಆತ ಒಂದು ಪಾತ್ರವಾಗಿ ಇಣುಕಿ ನೋಡುತ್ತಾನೆ. ಕಚಗುಳಿ ಇಡುತ್ತಾನೆ.
‘ ಉತ್ತರ ಭೂಪ’ ಭಾರೀ ಫೇಮಸ್!
ಬೀಚಿ ಹತ್ತಾರು ವರ್ಷಗಳ ಕಾಲ ಸುಧಾ ವಾರಪತ್ರಿಕೆಯಲ್ಲಿ ಓದುಗರ ಪ್ರಶ್ನೆಗಳಿಗೆ ‘ಉತ್ತರ ಭೂಪ’ ಎಂಬ ಹೆಸರಿನಲ್ಲಿ ಉತ್ತರ ಕೊಡುತ್ತಿದ್ದರು. ಅದರಲ್ಲಿ ಆಯ್ದ ಪ್ರಶ್ನೋತ್ತರಗಳು ‘ ‘ಉತ್ತರ ಭೂಪ’ ಎಂಬ ಪುಸ್ತಕದಲ್ಲಿ ಉಲ್ಲೇಖಿತವಾಗಿವೆ. ಅದು ಕೂಡ ಅತೀ ಶ್ರೇಷ್ಟ ಪುಸ್ತಕ. ಅವರು ಎಂಟು ನಾಟಕಗಳನ್ನು ಕೂಡ ಬರೆದರು.ಅದರಲ್ಲಿ ರೇಡಿಯೋ ನಾಟಕಗಳು ಮತ್ತು ದೇವರ ಆತ್ಮಹತ್ಯೆ ತುಂಬಾ ಜನಪ್ರಿಯವಾದ ನಾಟಕಗಳು. ದೇವರ ಆತ್ಮಹತ್ಯೆ ನಾಟಕದಲ್ಲಿ ದೇವರ ಪಾತ್ರವನ್ನು ಬೀಚಿ ಅವರೇ ಮಾಡುತ್ತಿದ್ದರು. ಆ ಕಾಲಕ್ಕೆ ತುಂಬಾ ವಿವಾದಗಳನ್ನು ಸೃಷ್ಟಿಸಿದ್ದ ನಾಟಕ ಅದು. ಬೀಚಿ ಅದಕ್ಕಾಗಿ ಕೋರ್ಟ್ ವಿಚಾರಣೆ ಎದುರಿಸಬೇಕಾಯಿತು!
ಮೌಢ್ಯದ ವಿರುದ್ಧ ಬೀಚಿ
ಬೀಚಿ ಕೊನೆಯವರೆಗೂ ಮೌಢ್ಯವನ್ನು ಸಹಿಸಲೆ ಇಲ್ಲ. ಅವರ ದೊಡ್ಡ ಮಗನಿಗೆ ವಿವಾಹ ನಿಶ್ಚಯ ಆಗಿತ್ತು. ಅತೀ ಸಣ್ಣ ಪ್ರಾಯದಲ್ಲೇ ಅವನು ತೀರಿ ಹೋದಾಗ ಆ ಹುಡುಗಿಯ ಕಾಲ್ಗುಣ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬೀಚಿ ಅದನ್ನು ಲೆಕ್ಕಿಸದೆ ತನ್ನ ಎರಡನೇ ಮಗನಿಗೆ ಅದೇ ಹುಡುಗಿಯನ್ನು ಕೊಟ್ಟು ಮನೆ ತುಂಬಿಸಿದರು!
ಬೀಚಿ ಅವರ ಅದ್ಭುತವಾದ ಕೊಟೆಶನ್‌ಗಳು
ಬೀಚಿಯವರ ಸೂಕ್ತಿಗಳು (Quotations) ಬಹಳ ಅದ್ಭುತ ಪಂಚ್ ಲೈನಗಳು. ಅಂತಹ ಸಾವಿರಾರು ಸೂಕ್ತಿಗಳು ಬಹು ಜನಪ್ರಿಯವಾಗಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಆಯ್ದು ಇಲ್ಲಿ ದಾಖಲು ಮಾಡಿದ್ದೇನೆ.
1) ಮತಗಳನ್ನು ಮತ್ತು ಮಗಳನ್ನು ಅಯೋಗ್ಯರಿಗೆ ಕೊಡಬಾರದು.
2) ಸಾರಾಯಿ ನಿಷೇಧ ಕುಡಿಯದವರಿಗೆ ಮಾತ್ರ!
3) ಪ್ರತೀ ಒಬ್ಬ ಗಂಡಸಿಗೆ ಮನೆ ಮತ್ತು ಹೆಂಡತಿ ಇರಬೇಕು. ಸ್ವಂತದ್ದು ಆದಷ್ಟು ಒಳ್ಳೆಯದು!
4) ತಾಳಿ ಕದ್ದವನಿಗೆ ಕಠಿಣ ಶಿಕ್ಷೆ. ತಾಳಿ ಕಟ್ಟಿದವನಿಗೆ ಜೀವಾವಧಿ ಶಿಕ್ಷೆ!
5) ಮನೆಯಾಕೆಯು ಸೃಷ್ಟಿಸುವ ವಾತಾವರಣವೇ ಮನೆಯ ವಾತಾವರಣ!
6) ಒಂದೇ ಹಗ್ಗದಿಂದ ಇಬ್ಬರಿಗೆ ನೇಣು ಹಾಕಿಕೊಳ್ಳುವ ಜಾಣ್ಮೆಗೆ ಮದುವೆ ಎಂದು ಹೆಸರು!
7) ಅಕ್ಕಿ ಹೊಟ್ಟೆಗೆ ಬೀಳಲಿ ಅಥವಾ ಬಿಡಲಿ. ಮದುವೆಯ ದಿನ ತಲೆಗೆ, ಸತ್ತದಿನ ಬಾಯಿಗೆ ಬಿದ್ದೇ ಬೀಳುತ್ತದೆ!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಈ ಪಾಪ್ ಗಾಯಕಿಗೆ ಜಗತ್ತಿನಾದ್ಯಂತ ಎರಡು ಬಿಲಿಯನ್ ವೀಕ್ಷಕರು!
ಮುಂದೆ 1980ರಲ್ಲಿ ಬೀಚಿಯವರು ನಮ್ಮನ್ನು ಬಿಟ್ಟು ಹೋದರೂ ಅವರ ಮೌಲ್ವಿಕವಾದ ಕೃತಿಗಳ ಮೂಲಕ ಇನ್ನೂ ನಮ್ಮೊಳಗೆ ಜೀವಂತವಾಗಿದ್ದಾರೆ. ನಮ್ಮ ತುಟಿಗಳಲ್ಲಿ ಮುಗುಳ್ನಗುವನ್ನು ಮೂಡಿಸುತ್ತಿದ್ದಾರೆ.