ಇತ್ತೀಚೆಗೆ ಬೆಂಗಳೂರಿಗೆ ಒಂದು ತರಬೇತಿಗೆ ಹೋಗಿದ್ದೆ. ಬೆಳಗ್ಗೆ ಸಮಯಕ್ಕೆ ಸರಿಯಾಗಿ ವೆನ್ಯೂ ತಲುಪಬೇಕು ಎಂಬ ಕಾರಣಕ್ಕೆ ಒಂದು ಕ್ಯಾಬ್ ಬುಕ್ ಮಾಡಿದೆ. ಕೆಲವೇ ನಿಮಿಷಗಳ ಒಳಗೆ ಕ್ಯಾಬ್ ನನ್ನ ಮುಂದೆ ನಿಂತಿತು. ಡ್ರೈವರ್ ಮೊದಲು ನನಗೆ ವಿಷ್ ಮಾಡಿ ನಂತರ ಬಾಗಿಲು ತೆಗೆದ. ನಾನು ಒಳಗೆ ಕೂತೆ.
ಕ್ಯಾಬ್ ಡ್ರೈವರ್‌ಗೆ ಸರಿಯಾದ ಅಡ್ರೆಸ್ ಹೇಳಿ ಇಯರ್ ಫೋನ್ ಹಾಕಿಕೊಂಡು ಸಂಗೀತ ಕೇಳಲು ಆರಂಭ ಮಾಡಿದೆ. ನನಗೆ ಮನಸನ್ನು ನಿಯಂತ್ರಣ ಮಾಡಲು ಮತ್ತು ಏಕಾಗ್ರತೆ ಹೆಚ್ಚಿಸಲು ಮ್ಯೂಸಿಕ್ ಸಹಾಯ ಮಾಡುತ್ತದೆ. ಅವನು ಮೀಟರ್ ಹಾಕಿ ಕ್ಯಾಬ್ ಸ್ಟಾರ್ಟ್ ಮಾಡಿದ.
ಒಂದೆರಡು ನಿಮಿಷಗಳಲ್ಲಿ ಆ ಯುವ ಡ್ರೈವರ್ ನನ್ನನ್ನು ನಿಧಾನವಾಗಿ ಮಾತಿಗೆಳೆದ. ಇಂಗ್ಲಿಷ್ ಭಾಷೆಯಲ್ಲಿ ತನ್ನ ಪರಿಚಯ ಮಾಡಿಕೊಂಡ. ನನ್ನ ಪರಿಚಯ ಕೇಳಿ ತಿಳಿದುಕೊಂಡ. ನಾನು ಇಯರ್ ಫೋನ್ ತೆಗೆದು ಅವನ ಮಾತು ಕೇಳಲು ಆರಂಭ ಮಾಡಿದೆ.
ಯಾಕೆಂದರೆ ಅವನ ಇಂಗ್ಲಿಷ್ ಭಾಷೆಯ ಸಂವಹನ ಅದ್ಭುತ ಇತ್ತು! ಅಸ್ಖಲಿತವಾದ ಮಾತು. ಒಂದೇ ಒಂದು ವ್ಯಾಕರಣ ದೋಷ ಇಲ್ಲದ ಸುಲಲಿತ ಇಂಗ್ಲಿಷ್ ಅದು. ಅವನು ಅರಳು ಹುರಿದಂತೆ ಕೊರೊನಾ ಸಮಸ್ಯೆ, ರಾಜಕೀಯ, ಇತಿಹಾಸ, ಅಯೋಧ್ಯೆಯ ರಾಮಮಂದಿರ, ಸ್ವಾತಂತ್ರ್ಯ ಉತ್ಸವ… ಹೀಗೆ ಎಲ್ಲ ವಿಷಯಗಳನ್ನೂ ಮಾತಾಡುತ್ತ ಹೋದ. ಎದುರಿನ ಕನ್ನಡಿಯಲ್ಲಿ ಅವನು ನನ್ನ ಮುಖದ ಭಾವನೆಗಳನ್ನು ಓದುತ್ತಿದ್ದ ಎಂದು ನನಗೆ ಅನ್ನಿಸಿತು.
ಅವನನ್ನು ನಾನು ಸರಿಯಾಗಿ ಗಮನಿಸಿದಾಗ ಆತ ಬಹಳ ನೀಟ್ ಆದ ಯೂನಿಫಾರ್ಮ್ ಧರಿಸಿಕೊಂಡಿದ್ದ. ಗಡ್ಡ ಟ್ರಿಮ್ ಮಾಡಿಕೊಂಡಿದ್ದ. ತಲೆಗೂದಲು ಚಂದ ಕ್ರಾಪ್ ಮಾಡಿದ್ದ. ತುಂಬಾ ಶಿಸ್ತಿನ ಮನುಷ್ಯ ಅಂತ ಅನ್ನಿಸಿತು. ಆತ್ಮವಿಶ್ವಾಸದ ನಗು ಅವನ ಕಣ್ಣಲ್ಲಿ ಚಿಮ್ಮುತ್ತಿತ್ತು. ಆತನ ಇಂಗ್ಲಿಷ್ ಅಂತೂ ಅದ್ಭುತವೇ ಆಗಿತ್ತು.
ನಾನು ಯಾರಿಗಾದರೂ ಹಿಂಜರಿಕೆಯಿಂದ ಕೇಳುವ ಪ್ರಶ್ನೆ ಅವನಿಗೂ ಕೇಳಿದೆ – ಎಷ್ಟು ಓದಿದ್ದೀರಿ?
ಅವನ ಉತ್ತರ ನನಗೆ ಸಿಡಿಲು ಬಡಿದ ಹಾಗೆ ಇತ್ತು – ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ.ಆಗಿದೆ ಸರ್. 83% ಮಾರ್ಕ್ಸ್ ಇದೆ!
ನನಗೆ ಶಾಕ್‌ನಿಂದ ಹೊರಬರಲು ತುಂಬಾ ಹೊತ್ತು ತಗುಲಿತು. ನಾನು ಮತ್ತೆ ಕೇಳಿದೆ – ಮತ್ತೆ ಯಾಕೆ ಜಾಬ್ ಪ್ರಯತ್ನ ಮಾಡಲಿಲ್ಲ? ಲೆಕ್ಚರರ್ ಹುದ್ದೆ ಸಿಗುತ್ತಿತ್ತು ಅಲ್ಲವೇ? ಅಂದೆ.
ಅವನು ನಗುತ್ತ ಹೇಳಿದ – “ಒಂದು ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್ ಜಾಬ್ ಸಿಕ್ಕಿತು ಸರ್. ಇಡೀ ತಿಂಗಳು ದುಡಿಸಿ 15,000 ರೂಪಾಯಿ ಸಂಬಳ ಕೊಟ್ಟರು. ಅದು ನನ್ನ ಡಿಗ್ರಿಗೆ ಮತ್ತು ಮಾರ್ಕಗೆ ಅಪಮಾನ ಎಂದು ಅನ್ನಿಸ್ತು! ಜಾಬ್ ರಿಸೈನ್ ಮಾಡಿ ಹೊರಬಂದೆ. ಮತ್ತೆ ಎಲ್ಲಿಯೂ ಜಾಬ್ ಪ್ರಯತ್ನವೇ ಮಾಡಲಿಲ್ಲ”
“ಸ್ವಲ್ಪ ಸಾಲ ಮಾಡಿ ಒಂದು ಕ್ಯಾಬ್ ತೆಗೆದುಕೊಂಡೆ ಸರ್. ನಾನೇ ಓಡಿಸುವ ಕಾರಣ ಖರ್ಚು ಕಡಿಮೆ ಆಯಿತು. ಕೊರೊನಾ ಸಮಯದಲ್ಲಿ ಸ್ವಲ್ಪ ತೊಂದರೆ ಆಯ್ತು. ಆದರೆ ಈಗ ತಿಂಗಳಿಗೆ 40-45 ಸಾವಿರ ರೂ.ದುಡಿಯುತ್ತಿದ್ದೇನೆ ಸರ್. ಇಂಗ್ಲಿಷ್ ಚೆನ್ನಾಗಿ ಮಾತಾಡುವ ಕಾರಣ ವಿದೇಶದ ಪ್ರವಾಸಿಗರು ಹೆಚ್ಚು ಬರುತ್ತಿದ್ದಾರೆ. ಈಗ ಪೂರ್ತಿ ಸಾಲ ತೀರಿದೆ ಸರ್. ನನ್ನ ಕುಟುಂಬ ಈಗ ಫುಲ್ ಖುಷಿಯಲ್ಲಿದೆ. ಈ ತಿಂಗಳು ಇನ್ನೊಂದು ಕ್ಯಾಬ್ ಬುಕ್ ಮಾಡಿದ್ದೇನೆ ಸರ್. ನನ್ನ ಹಾಗೆ ಇನ್ನೊಬ್ಬ ಯುವಕನಿಗೆ ಡ್ರೈವಿಂಗ್ ಜಾಬ್ ಕೊಡುವ ಆಸೆ ಇದೆ!”
ಅವನು ಮಾತಾಡುತ್ತ ಹೋದ. ಅವನ ಕಣ್ಣಲ್ಲಿ ಗೆದ್ದ ಖುಷಿ ನನಗೆ ಕಂಡಿತು. ನಾನು ಆತನ ಮಾತು ಕೇಳುತ್ತಾ ಕಿಟಕಿಯಿಂದ ಹೊರಗೆ ನೋಡುತ್ತಾ ಕೂತೆ. ನನಗೆ ಕೆಲವರ ಮುಖಗಳು ಕಣ್ಣ ಮುಂದೆ ಬಂದವು.
ಸ್ನಾತಕೋತ್ತರ ಕಾನೂನು ಪದವಿ ಚಿನ್ನದ ಪದಕದೊಂದಿಗೆ ಪಡೆದು ಉಗ್ರಗಾಮಿ ಸಂಘಟನೆ ಕಟ್ಟಿದ ಪಂಜಾಬಿನ ಭಿಂದ್ರನ್‌ವಾಲೆ ನನ್ನ ಕಣ್ಣ ಮುಂದೆ ಬಂದ!
ಎಂಜಿನಿಯರಿಂಗ್ ಪದವಿಯ ಜೊತೆ MBA ಸ್ನಾತಕೋತ್ತರ ಪದವಿ ಪಡೆದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸಿಕ್ಕಿ ಬಿದ್ದ ಯುವಕ ಆದಿತ್ಯ ರಾವ್ ನೆನಪಾದ.
ಡಿಗ್ರಿ ಮಾಡಿ ಸರಿಯಾದ ಜಾಬ್ ದೊರೆತಿಲ್ಲ ಎಂಬ ಕಾರಣಕ್ಕೆ ಮೊನ್ನೆ ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ಹುಡುಗ… ಇಂತವರೆಲ್ಲ ಕಣ್ಣ ಮುಂದೆ ಬಂದರು.
ಇದನ್ನೂ ಓದಿ | ರಾಜ ಮಾರ್ಗ| ಪ್ರೀತಿಯ ಹೆಂಡತಿಯ ಮುನಿಸು ಗೂಗಲ್ ಮ್ಯಾಪ್ ಹುಟ್ಟಿಗೆ ಕಾರಣ ಆಯ್ತು!