ಇವರ ಬದುಕು ಯಾವ ಥ್ರಿಲ್ಲರ್ ಸಿನೆಮಾದ ಕಥೆಗಿಂತ ಕಡಿಮೆ ಇಲ್ಲ ಅನ್ಸುತ್ತೆ! ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾದ ಈ ‘ಸಲ್ವಾರ್ ಕಮೀಜ್’ ಹುಡುಗಿಯು ಇಂದು ಬಾಲಿವುಡ್ ಸಿನೆಮಾರಂಗದಲ್ಲಿ ಲೀಡ್ ಸ್ಟಂಟ್ ಹುಡುಗಿಯಾಗಿ ಬೆಳೆದದ್ದು ನಿಜಕ್ಕೂ ಅದ್ಭುತವೇ ಸರಿ.
ಆಕೆ ಗೀತಾ ಟಂಡನ್ – ಬಾಲಿವುಡ್ ಸಿನೆಮಾ ರಂಗದ ಲೀಡ್ ಸ್ಟಂಟ್ ವುಮನ್.
ನಾವು ಸಿನೆಮಾ ನೋಡುವಾಗ ಹೀರೋ ಅಥವಾ ಹೀರೋಯಿನ್ ಎತ್ತರದ ಬಿಲ್ಡಿಂಗ್ ಮೇಲಿಂದ ಕೆಳಗೆ ಹಾರುವಾಗ, ಫೈಟ್ ಮಾಡುವಾಗ, ಗ್ಲಾಸು ಒಡೆದು ಹಾರುವಾಗ, ವೇಗವಾಗಿ ಬೈಕ್ ಅಥವಾ ಕಾರನ್ನು ಓಡಿಸುವಾಗ, ಬೆಂಕಿಯ ಕೆನ್ನಾಲಿಗೆಯ ಮೂಲಕ ಹಾರುವಾಗ ಶಿಳ್ಳೆ ಹೊಡೆದು ಖುಷಿಪಡುತ್ತೇವೆ. ಆದರೆ ತೆರೆಯ ಹಿಂದೆ ಆ ಸಾಹಸವನ್ನು ಮಾಡುವವರು ಬೇರೆ ಯಾರೋ ಆಗಿರುತ್ತಾರೆ. ಜೀವದ ಹಂಗು ತೊರೆದು ಅವರು ಈ ಸಾಹಸಗಳನ್ನು ಮಾಡುತ್ತಾರೆ. ಅವರನ್ನು ‘ಸ್ಟಂಟ್ ಮಾಸ್ಟರ್’ ಅನ್ನುತ್ತಾರೆ. ಇದೀಗ ಈ ಕ್ಷೇತ್ರದಲ್ಲಿ ಒಬ್ಬಳು ಮಹಿಳೆಯು ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಅವರೇ ಇಂದಿನ ಕಥಾ ನಾಯಕಿ ಗೀತಾ ಟಂಡನ್!
ಆಕೆಯ ಕಥೆಯನ್ನು ಆಕೆಯ ಬಾಯಿಂದ ಕೇಳುವುದೇ ಒಳ್ಳೆಯದು. ಓವರ್ ಟು ಗೀತಾ.
ನನಗೂ ಬ್ರಹ್ಮಾಂಡ ಕನಸುಗಳು ಇದ್ದವು
ನಾನು ಹುಟ್ಟಿದ್ದು ಮುಂಬೈಯ ಒಂದು ಸಾಮಾನ್ಯವಾದ ಕುಟುಂಬದಲ್ಲಿ. ನನಗೂ ದೊಡ್ಡ ದೊಡ್ಡ ಕನಸುಗಳು ಇದ್ದವು. ನನಗೆ ನಾಲ್ಕು ಜನ ಒಡಹುಟ್ಟಿದವರು. 7ನೆಯ ವರ್ಷಕ್ಕೆ ನನ್ನ ಅಮ್ಮ ತೀರಿದರು. 10ನೆಯ ವರ್ಷದಲ್ಲಿ ಅಪ್ಪ ಸತ್ತರು. ನನ್ನ ಚಿಕ್ಕಪ್ಪ ನನ್ನನ್ನು 10ನೇ ತರಗತಿಯವರೆಗೆ ಓದಿಸಿದರು. ನನಗೆ 14ನೆಯ ವರ್ಷಕ್ಕೆ ಬದುಕು ಅರ್ಥ ಆಗುವ ಮೊದಲೇ ಮದುವೆ ಆಗಿ ಹೋಯಿತು. ಅಲ್ಲಿಂದ ನನಗೆ ದಿನವೂ ನರಕ ದರ್ಶನವೆ ಆರಂಭ ಆಯಿತು.
ನನ್ನ ಗಂಡ ಅನ್ನಿಸಿಕೊಂಡವನು ಮಹಾಕುಡುಕ ಮತ್ತು ಲಂಪಟ. ಅತ್ತೆ ಮಹಾ ಕ್ರೂರಿ. ಕೈ ಹಿಡಿದ ಗಂಡ ದಿನವೂ ನನ್ನನ್ನು ಹೊಡೆದು, ಬಡಿದು ದೌರ್ಜನ್ಯ ಮಾಡಿ ‘ ನಾನು ಗಂಡಸು’ ಎಂದು ಪ್ರೂವ್ ಮಾಡುತ್ತಿದ್ದ. ಅತ್ತೆಯಂತು ಯಾವಾಗಲೂ ತನ್ನ ಮಗನಿಗೆ ಸಪೋರ್ಟ್ ಆಗಿ ನಿಂತು ಬಿಡುತ್ತಿದ್ದರು. “ಹೋಗು, ನಿನ್ನ ಹೆಂಡತಿಯ ಮೇಲೆ ಬಲಾತ್ಕಾರ ಮಾಡು” ಎಂದು ಹೇಳೋರು!
ನಾನು ಏನು ಮಾಡಬಹುದಿತ್ತು?
ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ದೂರು ಕೊಡಲು ಹೋಗಿದ್ದೆ.
ಪೊಲೀಸರು ” ಹೋಗಮ್ಮ ಹೋಗು. ಇದು ಗಂಡ ಹೆಂಡತಿ ಜಗಳ. ಇವತ್ತು ನೀವು ಹೊಡೆದಾಡುತ್ತೀರಿ. ನಾಳೆ ಒಂದಾಗುತ್ತೀರಿ. ಸದ್ಯಕ್ಕೆ ನಿನ್ನ ಅಕ್ಕನ ಮನೆಗೆ ಹೋಗು” ಅಂದಿದ್ದರು. ಅಕ್ಕನ ಮನೆಗೆ ಹೋದರೆ ತಿರಸ್ಕಾರದ ಭಾವನೆಯಿಂದ ಉಸಿರು ಕಟ್ಟಿತು. ಅಲ್ಲಿಂದ ಮತ್ತೆ ಗಂಡನ ಮನೆಗೆ ಬಂದಾಗ ಹಿಂಸೆ ಮತ್ತೂ ಹೆಚ್ಚಾಯಿತು. ನಾನು ಇಷ್ಟ ಪಡದೇ ಎರಡು ಮಕ್ಕಳು ಬಂದು ನನ್ನ ಮಡಿಲಲ್ಲಿ ಕೂತವು! ನಾನು ಬೇರೆ ಏನು ಮಾಡಲು ಸಾಧ್ಯವಿತ್ತು?
ನಾನು ಜೀವ ಉಳಿಸಿಕೊಳ್ಳಲು ಮನೆ ಬಿಟ್ಟು ಓಡಿದ್ದೆ!
ಒಂದು ದಿನ ನನ್ನ ಗಂಡ ಕುಡಿದು ಬಂದು ನನ್ನ ಜುಟ್ಟು ಹಿಡಿದು ಹೊಡೆಯಲು ತೊಡಗಿದ್ದ. ಆಗ ಪ್ರಾಣವನ್ನು ಉಳಿಸಲು ನನ್ನ ಎರಡು ಪುಟ್ಟ ಮಕ್ಕಳನ್ನು ಗಟ್ಟಿಯಾಗಿ ಹಿಡಿದು ಓಡಲು ತೊಡಗಿದೆ. ಬೀದಿಯಲ್ಲಿ ನಿಂತವರು ಎಲ್ಲರೂ ನನ್ನನ್ನು ನೋಡುವರೆಂದು ನನಗೆ ಗೊತ್ತಿತ್ತು. ಆದರೆ ನನಗೆ ನನ್ನ ಮಕ್ಕಳ ಪ್ರಾಣವನ್ನು ಉಳಿಸುವುದು ಮುಖ್ಯ ಆಗಿತ್ತು. ರಸ್ತೆ ಬದಿಯಲ್ಲಿ ಮಲಗಲು ಭಯ. ಕೊನೆಗೆ ಒಂದು ಗುರುದ್ವಾರದಲ್ಲಿ ಮಲಗುವ ವ್ಯವಸ್ಥೆ ಆಯಿತು. ಆಗ ನನಗೆ ಕೇವಲ 20 ವರ್ಷ!
ಒಬ್ಬ ಗೆಳತಿಯು ನನ್ನ ಸಹಾಯಕ್ಕೆ ಬಂದಳು. ” ಒಂದು ಕೆಲ್ಸ ಇದೆ ಗೀತಾ. ಮಾಡ್ತೀಯಾ? ” ಅಂದಳು.
“ನನ್ನ ಮಕ್ಕಳಿಗಾಗಿ ಯಾವ ಕೆಲಸವನ್ನು ಬೇಕಾದರೂ ಮಾಡುತ್ತೇನೆ” ಎಂದು ಚೀರಿ ಹೇಳಿದ್ದೆ. ಕೇವಲ ಎಸೆಸೆಲ್ಸಿ ಕಲಿತ ನನಗೆ ಯಾರು ಕೆಲಸ ಕೊಡುತ್ತಾರೆ? ಹಸಿವು, ಹತಾಶೆ ಎರಡೂ ಜೊತೆಗೆ ಸೇರಿ ನಾನು ದೊರೆತ ಯಾವ ಕೆಲಸವನ್ನು ಬೇಕಾದರೂ ಮಾಡಲು ಸಿದ್ಧ ಎಂದಿದ್ದೆ. ಸ್ವಾಭಿಮಾನದ ಬದುಕು ಕಟ್ಟುವುದು ನನಗೆ ಮುಖ್ಯವಾಗಿತ್ತು. ಆತ್ಮಹತ್ಯೆಯನ್ನು ಮಾಡುವ ಯೋಚನೆ ಬಂದಾಗಲೆಲ್ಲ ಮಕ್ಕಳ ಮುಖ ನೋಡುತ್ತಿದ್ದೆ. ಆಗ ಆತ್ಮಹತ್ಯೆಯ ಯೋಚನೆ ಮರೆತುಹೋಗ್ತಿತ್ತು.
ನಾನು ಆರಿಸಿಕೊಂಡದ್ದು ಸ್ಟಂಟ್ ಮಾಸ್ಟರ್ ವೃತ್ತಿ!
ಸಾವು ಬದುಕಿನ ಹೋರಾಟವನ್ನು ನಡೆಸುವ ವೃತ್ತಿಗೆ ನಾನು ಅನಿವಾರ್ಯವಾಗಿ ಬಂದಾಗಿತ್ತು. ಒಬ್ಬ ಸಾಮಾನ್ಯ ಹುಡುಗಿ ಆಗಿದ್ದ ನಾನು ಸ್ಟಂಟ್ ಹುಡುಗಿ ಆದ ಕತೆ ಅದು. ಧೈರ್ಯ ಮಾತ್ರ ನನಗೆ ಅಂದು ಬಂಡವಾಳ ಆಗಿತ್ತು. ನನ್ನಲ್ಲಿ ಫೈಟಿಂಗ್ ಸ್ಪಿರಿಟ್ ಇದೆ ಅಂತ ನನಗೆ ಗೊತ್ತಿತ್ತು. ಆದರೆ ನನಗೆ ಸ್ಟಂಟ್ ಮಾಡಲು ಯಾವುದೇ ವೃತ್ತಿಪರ ತರಬೇತಿ ಕೂಡ ಆಗಿರಲಿಲ್ಲ. ಮೊದಲು ಬೈಕ್,ಕಾರ್ ಅತ್ಯಂತ ವೇಗವಾಗಿ ಓಡಿಸುವುದನ್ನು ಕಲಿತೆ. ಮಾರ್ಷಿಯಲ್ ಆರ್ಟ್ ಕಲಿತೆ. ಫಿಸಿಕಲ್ ಫಿಟ್ನೆಸ್ ತಂತ್ರಗಳನ್ನು ಕಲಿತೆ. ಹಸಿವು ನನಗೆ ಎಲ್ಲವನ್ನೂ ಕಲಿಸಿತು. ಹಲವು ಸಿನೆಮಾ ಮಂದಿಯ ಪರಿಚಯ ಆಯಿತು. ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನನಗೆ ದೇವರಂತೆ ಅವಕಾಶಗಳನ್ನು ಕೊಟ್ಟರು. ನನ್ನ ಬದುಕಿನಲ್ಲಿ ನಾನು ತಿಂದ ಪೆಟ್ಟುಗಳು ನನ್ನನ್ನು ಗಟ್ಟಿ ಮಾಡಿದವು.
ಹೆಜ್ಜೆ ಹೆಜ್ಜೆಗೂ ಅಪಾಯ, ಪ್ರಾಣ ಭಯ
ನಾನೀಗ ನಿತ್ಯ ಮಾಡುತ್ತಿರುವುದು ತುಂಬಾ ಅಪಾಯದ ಕೆಲಸ! ಹಲವು ಬಾರಿ ನನಗೆ ಗಾಯ ಆಗಿದೆ. ಎಲುಬು ಮುರಿದಿದೆ. ಲಡಾಕ್ ಶೂಟಿಂಗ್ ಹೊತ್ತಿಗೆ ಬೆಂಕಿಯ ನಡುವಿಂದ ಹಾರುವಾಗ ನನ್ನ ಮುಖ, ಅರ್ಧ ದೇಹ ಸುಟ್ಟು ಹೋಗಿತ್ತು. ಆದರೆ ಬದುಕಿ ಬಂದೆ! ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ಪರಿಣಿತಾ ಚೋಪ್ರ, ಬಿಪಾಶಾ ಬಸು, ಐಶ್ವರ್ಯ ರೈ ಇವರಿಗೆಲ್ಲ ಸ್ಟಂಟ್ ಮಾಡಿದ್ದೇನೆ. ಚೆನ್ನೈ ಎಕ್ಸಪ್ರೆಸ್, ಸಿಂಗ್ ಸಾಬ್ ಗ್ರೇಟ್, ಹಸೀ ತೋ ಫಸೀ, ಲಮ್ಹಾ, ರಾಗಿಣಿ ಎಂಎಂಎಸ್……….. ಮೊದಲಾದ ಹಲವು ಸಿನೆಮಾಗಳಲ್ಲಿ ಫೈಟ್ ಕಂಪೋಸ್ ಮಾಡಿದ್ದೇನೆ. ಮೊದಲೆಲ್ಲ ಫೈಟ್ ಮಾಡುವಾಗ ಭಯ ಆಗುತಿತ್ತು. ಆದರೆ ಈಗ ನಾನೊಬ್ಬ ವೃತ್ತಿನಿರತ ಸ್ಟಂಟ್ ವುಮನ್!
ಕಲರ್ಸ್ ಟಿವಿ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಖತರೊಂ ಕಾ ಖಿಲಾಡಿ’ ಯಲ್ಲಿ ಭಾಗವಹಿಸಿ ನಾನು ಬಹುಮಾನ ಗೆದ್ದಿದ್ದೆ. ಆಗ ನನ್ನ ಫೈಟಿಂಗ್ ಸಾಮರ್ಥ್ಯವನ್ನು ಇಡೀ ದೇಶವೇ ನೋಡಿತು.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಗಣಿತ ಕಲಿಸಿದ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ!
ಇಂದು ನಾನೊಬ್ಬ ಸ್ವಾವಲಂಬಿ ಮಹಿಳೆ ಆಗಿದ್ದೇನೆ. ಮುಂಬೈಯಲ್ಲಿ ಸ್ವಂತ ಮನೆ ಇದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ನನಗೀಗ ನನ್ನದೇ ಆದ ಕನಸುಗಳಿವೆ.
ಭರತ ವಾಕ್ಯ
‘ಯಾವುದೇ ಹೆಣ್ಣು ಮಕ್ಕಳು ಜೀವನದಲ್ಲಿ ಸೋಲನ್ನು ಒಪ್ಪಿಕೊಳ್ಳಬೇಡಿ. ಕೊನೆಯ ಕ್ಷಣದವರೆಗೂ ಎದ್ದು ನಿಂತು ಹೋರಾಡಿ. ಆಗ ಮಾತ್ರ ನಿಮ್ಮ ಬದುಕಿನಲ್ಲಿ ಬಣ್ಣ ಬಣ್ಣದ ಕಾಮನಬಿಲ್ಲು ಮೂಡುವುದು’ ಎಂದು ಆಕೆ ಹೇಳುವಾಗ ಅವರ ಕಣ್ಣಲ್ಲಿ ಗೆದ್ದ ಖುಷಿ ಇತ್ತು!
ಅಂದ ಹಾಗೆ ಗೀತಾ ಅವರಿಗೆ ಈಗ 37 ವರ್ಷ!