Site icon Vistara News

ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ

george fernandes and konkan railway

Rajamarga Column: george fernandes and konkan railway

1989ರ ಇಸವಿಯಲ್ಲಿ ಪ್ರಧಾನಿ ವಿ ಪಿ ಸಿಂಘ್ ಅವರ ಕ್ಯಾಬಿನೆಟಲ್ಲಿ ರೈಲ್ವೇ ಮಂತ್ರಿ ಆಗಿ ಪ್ರತಿಜ್ಞೆ ಸ್ವೀಕರಿಸಿದ ತಕ್ಷಣ ಜಾರ್ಜ್ ಫರ್ನಾಂಡಿಸ್ ತಕ್ಷಣ ರೈಲ್ವೇ ಅಧಿಕಾರಿಗಳ ಸಭೆಯನ್ನು ಕರೆದಿದ್ದರು.

ಜಾರ್ಜ್ ಫರ್ನಾಂಡಿಸ್ ಅಂದು ಹೇಳಿದ್ದು ಎರಡೇ ಮಾತು – ನನ್ನ ಮನಸಿನಲ್ಲಿ ಎರಡು ಯೋಜನೆಗಳು ಇವೆ. ಒಂದು ಬಿಹಾರದಲ್ಲಿ ಚಿಟ್ಟೌನಿ, ಮತ್ತೊಂದು ಕರ್ನಾಟಕದಲ್ಲಿ ಕೊಂಕಣ ರೈಲ್ವೆ. ಮುಂದಿನ ಬಜೆಟ್ಟಿನಲ್ಲಿ ಅವುಗಳಿಗೆ ನಾನು ಹಣವನ್ನು ಮೀಸಲು ಇಡುತ್ತೇನೆ. ಅವೆರಡೂ ಪೂರ್ತಿ ಆಗಬೇಕು.

ಆಗ ಪತ್ರಕರ್ತರು ಅವೆರಡು ಯೋಜನೆಗಳು ಮಾತ್ರ ಯಾಕೆ? ಎಂದು ಕೇಳಿದ್ದರು. ಅದಕ್ಕೆ ಜಾರ್ಜ್ ಹೇಳಿದ್ದು – ಒಂದು ನನಗೆ ವೋಟನ್ನು ಹಾಕಿ ಗೆಲ್ಲಿಸಿದ ರಾಜ್ಯ ಬಿಹಾರ್. ಇನ್ನೊಂದು ನನ್ನ ಜನ್ಮ ಕೊಟ್ಟ ರಾಜ್ಯ ಕರ್ನಾಟಕ! ಎರಡು ರಾಜ್ಯದ ಋಣವನ್ನು ಮರೆಯಲು ಸಾಧ್ಯವೇ?

ಜಾರ್ಜ್ ಅವರಿಗೆ ಮುಂದೆ ತಾನು ಏನು ಮಾಡಬೇಕು ಅನ್ನುವುದು ಸ್ಪಷ್ಟ ಆಗಿತ್ತು!

ನಾನು ಇವತ್ತು ಕೊಂಕಣ ರೈಲ್ವೆ ಎಂಬ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದ ಬಗ್ಗೆ ತುಂಬಾ ವಿಸ್ತಾರ ಆಗಿ ಬರೆಯಬೇಕು. ಏಕೆಂದರೆ ಜಾರ್ಜ್ ಇಲ್ಲವಾದ್ರೆ ಅದು ಇವತ್ತಿಗೂ ಪೂರ್ತಿ ಆಗುತ್ತಿರಲಿಲ್ಲ!

70ರ ದಶಕದಲ್ಲಿ ಕರಾವಳಿ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಮುಂಬೈಗೆ ಹೋಗಿ ಉದ್ಯಮ, ವ್ಯವಹಾರ ಆರಂಭ ಮಾಡಿದ್ದ ತುಳುವರಿಗೆ ಮುಂಬೈಗೆ ಹೋಗಲು ಆಗ 48 ಗಂಟೆ ಅವಧಿ ಬೇಕಾಗಿತ್ತು! ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಭಸವಾಗಿ ಹರಿಯುತ್ತಿದ್ದ ದೊಡ್ಡ ದೊಡ್ಡ ನದಿಗಳಿಗೆ ಆಗ ಸೇತುವೆಗಳು ಆಗಿರಲಿಲ್ಲ. ತುಳುವರು ರಸ್ತೆ ಮಾರ್ಗದಲ್ಲಿ ಚಿಕ್ಕಮಗಳೂರು ತನಕ (ಕಡೂರು)ಹೋಗಿ ಅಲ್ಲಿಂದ ಟ್ರೈನನ್ನು ಏರಿಕೊಂಡು ಮುಂಬಯಿ ತಲುಪುವಾಗ ಎರಡು ದಿನ ಮತ್ತು ಎರಡು ರಾತ್ರಿಗಳು ಕಳೆದು ಹೋಗುತ್ತಿದ್ದವು! ಬೇರೆ ಯಾವ ಮಾರ್ಗವು ಕೂಡ ಆಗ ಇರಲಿಲ್ಲ. ವಿಮಾನ ಸಂಚಾರ ಕೂಡ ಇರಲಿಲ್ಲ.

ಜಾರ್ಜ್ ತಾವು ಭರವಸೆ ಕೊಟ್ಟ ಹಾಗೆ ರೈಲ್ವೆ ಬಜ್ಜೇಟಲ್ಲಿ ಕೊಂಕಣ್ ರೈಲ್ವೆಗೆ ಮಂಜೂರಾತಿ ಪಡೆದರು. ಒಂದಿಷ್ಟು ದುಡ್ಡು ಕೂಡ ಪಡೆದರು. ಆದರೆ ಅದು ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬ ಹಾಗೆ ಇತ್ತು. ಆದರೆ ಜಾರ್ಜ್ ಹಿಡಿದ ಹಠ ಬಿಡುವ ಜಾಯಮಾನದವರೆ ಅಲ್ಲವಲ್ಲ!

ಮುಂದೆ ಒಂದೆರಡು ತಿಂಗಳ ಒಳಗೆ ಕೊಂಕಣ ರೈಲ್ವೆ ಕಂಪೆನಿಯು ಉದ್ಘಾಟನೆ ಆಯಿತು(1990 ಜುಲೈ 19). ಕೆಲವೇ ತಿಂಗಳ ಹಿಂದೆ ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತಿ ಆಗಿದ್ದ ಚೀಫ್ ಇಂಜಿನಿಯರ್ ಈ. ಶ್ರೀಧರನ್ ಅವರನ್ನು ಆ ಕಂಪೆನಿಯ ಮುಖ್ಯಸ್ಥರಾಗಿ ಆಗಮಿಸಲು ಜಾರ್ಜ್ ವಿನಂತಿ ಮಾಡಿದರು. ಶ್ರೀಧರನ್ ಒಪ್ಪಿದರು. ಅವರಿಗೆ ಜಾರ್ಜ್ ಹೇಳಿದ್ದು ಒಂದೇ ಮಾತು – ಸರ್, ನೀವು ಕೆಲಸ ಮಾಡ್ತಾ ಹೋಗಿ. ಕೆಲಸ ನಿಲ್ಲಬಾರದು. ದುಡ್ಡು ನಾನು ಹೊಂದಿಸುವೆ!

ಮುಂದೆ ಶಿಲಾನ್ಯಾಸದ ಕಾರ್ಯಕ್ರಮ ನಡೆದಾಗ ರೈಲ್ವೆ ಮಂತ್ರಿ ಜಾರ್ಜ್ ಹೇಳಿದ್ದು – ಮುಂದೆ ನಾನು ರೈಲ್ವೆ ಮಂತ್ರಿ ಆಗಿರುತ್ತೇನೋ ಇಲ್ಲವೋ ಗೊತ್ತಿಲ್ಲ. ಎಂಟು ವರ್ಷಗಳ ಒಳಗೆ ಈ ಯೋಜನೆಯು ಪೂರ್ತಿ ಆಗುತ್ತದೆ. ಅದಕ್ಕೆ ಬೇಕಾದ ದುಡ್ಡು ನನ್ನ ಹೊಣೆ!

ಜಾರ್ಜ್ ಫರ್ನಾಂಡಿಸ್ ನುಡಿದ ಹಾಗೆ ನಡೆದರು. ಸರಕಾರದ ದುಡ್ಡು ಸಾಲದೆ ಹೋದಾಗ ಪಬ್ಲಿಕ್ ಇಷ್ಯು ಮೂಲಕ ಫಂಡ್ಸ್ ಒಟ್ಟು ಮಾಡಿದರು. ಆ ಯೋಜನೆಯ ಫಲಾನುಭವಿಗಳ ಸಭೆ ಕರೆದು ಭಿಕ್ಷಾಪಾತ್ರೆ ಹಿಡಿದರು. ಜನರು ಹಿಂದೆ ಮುಂದೆ ನೋಡದೆ ಜಾರ್ಜ್ ಮೇಲೆ ಭರವಸೆ ಇಟ್ಟರು. ಜಾರ್ಜ್ ಅವರ ಕನ್ವಿನ್ಸಿಂಗ್ ಪವರ್ ಅದ್ಭುತ ಆಗಿತ್ತು. ಅವರ ಕೊಂಕಣಿ, ತುಳು, ಹಿಂದೀ, ಇಂಗ್ಲಿಷ್, ಮರಾಠಿ ಭಾಷೆಯ ಮಾತುಗಳು ಜನರಲ್ಲಿ ಭಾರೀ ಭರವಸೆ ಮೂಡಿಸಿದವು.

ಇನ್ನು ಶ್ರೀಧರನ್ ಸಾಮರ್ಥ್ಯದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ! ಆತ ಮಹಾ ಕಾಯಕ ರಾಕ್ಷಸ! ತುಂಬಾ ಸ್ಟ್ರಾಂಗ್ ಆಗಿದ್ದ ಯುವ ಇಂಜಿನಿಯರಗಳ ತಂಡ ಕಟ್ಟಿಕೊಂಡ ಅವರು ಮುಂದಿನ ಎಂಟು ವರ್ಷ ಮಾಡಿದ್ದೆಲ್ಲವೂ ಅದ್ಭುತ! ಎಲ್ಲವೂ ಮಹೋನ್ನತ!

ಅತ್ಯಂತ ದುರ್ಗಮವಾದ ಪರ್ವತ ಶ್ರೇಣಿ! ಜಾರುವ ಬಂಡೆಗಳು! ಒಂದು ಮಳೆಗೆ ಜಾರಿ ಕುಸಿದು ಹೋಗುವ ಶೇಡಿ ಮಣ್ಣಿನ ನೆಲ! ಬೆಟ್ಟಗಳನ್ನು ಅಗೆದು ಮೈಲು ದೂರದ ಸುರಂಗಗಳನ್ನು ಕೊರೆಯುವ ಸವಾಲು! ಅದು ಇಡೀ ಭಾರತದ ರೈಲ್ವೆ ಇತಿಹಾಸದ ಅತ್ಯಂತ ಸಾಹಸದ ಮತ್ತು ಸವಾಲಿನ ಪ್ರಾಜೆಕ್ಟ್ ಆಗಿತ್ತು!

ಮೂರು ರಾಜ್ಯಗಳ ಹೃದಯದ ಮೂಲಕ ಹಾದು ಹೋಗುವ 760 ಕಿಲೋಮೀಟರ್ ರೈಲ್ವೆ ಹಳಿಗಳು! 2000 ಸೇತುವೆಗಳು! 179 ದೊಡ್ಡ ಸೇತುವೆಗಳು! 92 ಸುರಂಗಗಳು! ಅದರಲ್ಲಿ ಕೆಲವು ಮೈಲುಗಟ್ಟಲೆ ಉದ್ದ ಇವೆ! 59 ವೈಭವದ ನಿಲ್ದಾಣಗಳು! ಆಗಾಗ ಗುಡ್ಡದ ಕುಸಿತದ ಹಿನ್ನೆಲೆಯಲ್ಲಿ ಕೆಲಸ ಕಷ್ಟ ಆಯ್ತು. ಆದರೆ ಶ್ರೀಧರನ್ ಕೆಲಸವನ್ನು ನಿಲ್ಲಲು ಬಿಡಲಿಲ್ಲ! ಜಾರ್ಜ್ ಅವರನ್ನು ಬೆನ್ನು ಬಿಡಬೇಕಲ್ಲ!

ಜಾರ್ಜ್ ಭರವಸೆ ಕೊಟ್ಟ ಹಾಗೆ ಎಂಟು ವರ್ಷಗಳ ಒಳಗೆ ಈ ಪ್ರಾಜೆಕ್ಟ್ ಪೂರ್ತಿ ಆಯಿತು. 1998 ಜನವರಿ 26ರಂದು ಅಂದಿನ ಪ್ರಧಾನಿ ವಾಜಪೇಯಿ ಅವರು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೊಂಕಣ ರೈಲ್ವೆಯ ಮಾರ್ಗವನ್ನು ಉದ್ಘಾಟನೆ ಮಾಡಿದರು. ಆಗ ಕೇಂದ್ರದ ರಕ್ಷಣಾ ಮಂತ್ರಿ ಆಗಿದ್ದ ಜಾರ್ಜ್ ಫರ್ನಾಂಡಿಸ್ ಅಂದು ವೇದಿಕೆಯಲ್ಲಿ ಇದ್ದು ಆನಂದ ಭಾಷ್ಪ ಸುರಿಸಿದರು! ತನ್ನ ತಂದೆ ಮರಣ ಹೊಂದಿದಾಗ ಕೂಡ ಕಣ್ಣೀರು ಹಾಕದೆ ಇದ್ದ ಉಕ್ಕಿನ ಮನುಷ್ಯ ಜಾರ್ಜ್ ಫರ್ನಾಂಡಿಸ್ ಅಂದು ಅಕ್ಷರಶಃ ಪುಟ್ಟ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು! ಅಂದು ಮಂಗಳೂರು ಮುಂಬೈ ನಡುವೆ ಮೊದಲ ಟ್ರೈನ್ ಓಡಿತ್ತು!

ಅದುವರೆಗೆ ಮಂಗಳೂರು ಮುಂಬೈ ನಡುವಿನ ಪ್ರಯಾಣಕ್ಕೆ 48 ಗಂಟೆ ತೆಗೆದುಕೊಳ್ಳುತ್ತಿದ್ದ ತುಳುವರು ಕೇವಲ 15 ಗಂಟೆಯಲ್ಲಿ ಮುಂಬೈ ತಲುಪಿದ್ದರು! ಈಗ ಇನ್ನೂ ಕಡಿಮೆ ಸಮಯ ಸಾಕಾಗುತ್ತದೆ. ದೂರ 1200 ಕಿಲೋಮೀಟರನಿಂದ 760 ಕಿಲೋಮೀಟರಗೆ ಇಳಿದಿತ್ತು. ಅತ್ಯಂತ ಆಕರ್ಷಕವಾದ 59 ಸ್ಟೇಷನ್‌ಗಳು ಕೂಡ ಮುಗಿದು ಬಿಟ್ಟಿದ್ದವು. ತುಳುವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಶ್ರೀಧರನ್ ಈ ಪ್ರಾಜೆಕ್ಟ್ ಪೂರ್ತಿ ಮಾಡಿ ಇನ್ನೊಂದು ಪ್ರಾಜೆಕ್ಟ್ ಹಿಂದೆ ಹೋದರು. ಅವರೆಲ್ಲಿ ವಿಶ್ರಾಂತಿ ಪಡೆಯುತ್ತಾರೆ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇವರೇ, ಹೀಗೇಕೆ ಮಾಡಿದೆ ಎಂದು ನಾನು ಕೇಳುವುದಿಲ್ಲ ಎಂದಿದ್ದರು ಟೆನ್ನಿಸ್ ಆಟಗಾರ ಆರ್ಥರ್ ಆಶ್!

ಇಂದು( ಜೂನ್ 3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ. ಬದುಕಿದ್ದರೆ ಅವರಿಗೆ ಇಂದು 93 ವರ್ಷ ಆಗಿರುತ್ತಿತ್ತು! ಅವರಿಂದು ಬದುಕಿಲ್ಲ. ಆದರೆ ಪ್ರತೀ ದಿನವೂ ರೈಲಿನಲ್ಲಿ ಪ್ರಯಾಣ ಮಾಡುವ ಜನರ ಹೃದಯದಲ್ಲಿ ಅವರು ಜೀವಂತ ಇರುತ್ತಾರೆ.

ಉಡುಪಿ ಇಂದ್ರಾಳಿ ಜಂಕ್ಷನನಿಂದ ರೈಲ್ವೆ ನಿಲ್ದಾಣದ ತನಕ ಹೋಗುವ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಅವರ ಹೆಸರು ಇಡಲಾಗಿದೆ. ಆದರೆ ಆ ನಾಮಫಲಕ ಎಲ್ಲೋ ಮರೆಯಾಗಿದೆ! ಅವರ ಬಗ್ಗೆ ನಿರ್ಲಕ್ಷ್ಯ ಸಲ್ಲದು.

Exit mobile version