ʼಗುಡ್ಡೆದ ಭೂತ’ದ ಮೂಲಕ ವಿಶ್ವ ಖ್ಯಾತಿ ಪಡೆದ ಸುವರ್ಣರು ಇನ್ನಿಲ್ಲ
ರಾಜಮಾರ್ಗ ಅಂಕಣ: ಕರಾವಳಿ ಮತ್ತು ಮುಂಬಯಿಯಲ್ಲಿ ರಂಗಭೂಮಿ, ಸಿನೆಮಾ, ಸಾಹಿತ್ಯ ಎಲ್ಲವನ್ನೂ ಬೆಸೆಯಲು ಕಾರಣವಾಗಿದ್ದ ಸದಾನಂದ ಸುವರ್ಣರು ನಮ್ಮನ್ನು ಅಗಲಿದ್ದಾರೆ. ಅವರಿಗೆ 93 ವರ್ಷ ಪ್ರಾಯವಾಗಿತ್ತು. ತನ್ನ ಇಳಿವಯಸ್ಸಿನಲ್ಲಿಯೂ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿದ್ದ ಒಂದು ಮೇರು ವ್ಯಕ್ತಿತ್ವವು ಇಂದು ನೇಪಥ್ಯಕ್ಕೆ ಸರಿದದ್ದು ತುಳು ಮತ್ತು ಕನ್ನಡ ರಂಗಭೂಮಿಗೆ ಆಗಿರುವ ದೊಡ್ಡ ನಷ್ಟ ಎಂದೇ ಹೇಳಬಹುದು.
ಬಾಲ್ಯದಲ್ಲಿ ಮೂಲ್ಕಿಯಿಂದ ಮುಂಬೈಗೆ
1931ರ ಡಿಸೆಂಬರ್ 24ರಂದು ದಕ್ಷಿಣಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದ ಸದಾನಂದ ಸುವರ್ಣರ ತಂದೆ ಬ್ಯಾಂಕ್ ಉದ್ಯೋಗಿ ಆಗಿದ್ದರು. ಮುಲ್ಕಿ ಬೋರ್ಡ್ ಶಾಲೆಯಲ್ಲಿ ಐದನೇ ತರಗತಿಯವರೆಗೆ ಓದಿ ಮುಂಬಯಿಗೆ ಬಂದಿಳಿದಾಗ ಅವರಿಗೆ ಕೇವಲ 10 ವರ್ಷ ಪ್ರಾಯ. ಆಗಲೇ ನಾಟಕಗಳ ಸೆಳೆತ ಆರಂಭ ಆಗಿತ್ತು. ಅಲ್ಲಿ ಮೊಗವೀರ ರಾತ್ರಿ ಶಾಲೆಯಲ್ಲಿ ಓದುತ್ತಾ ಹಗಲು ಹೊತ್ತು ನಾಟಕ ಶಿಕ್ಷಣ ಪಡೆದರು. ಅತ್ಯಂತ ಶ್ರೀಮಂತವಾದ ಮರಾಠಿ, ಇಂಗ್ಲೀಷ್ ಮತ್ತು ಗುಜರಾತಿ ರಂಗಭೂಮಿಗಳ ಆಳವಾದ ಅಧ್ಯಯನ ನಡೆಸಿ ಕನ್ನಡ ರಂಗಭೂಮಿ ಯಾಕೆ ಆ ಎತ್ತರಕ್ಕೆ ಬೆಳೆದಿಲ್ಲ? ಎಂದು ಯೋಚನೆ ಮಾಡಿದರು.
ತನ್ನ ಓರಗೆಯ ಹಲವು ಯುವ ಕಲಾವಿದರನ್ನು ಸೇರಿಸಿಕೊಂಡು ‘ಕುರುಡು ಸಂಗೀತ ‘ಎಂಬ ನಾಟಕವನ್ನು ಬರೆದು ನಿರ್ದೇಶನ ಮಾಡಿದರು. ಅದು ಅವರಿಗೆ ಅಪಾರ ಜನಪ್ರಿಯತೆ ತಂದು ಕೊಟ್ಟಿತು. ಅದರ ಜೊತೆಗೆ ರಂಗಭೂಮಿಯ ಡಿಪ್ಲೊಮಾ ಕೂಡ ಪಡೆದರು.
ಸಾಲು ಸಾಲು ನಾಟಕಗಳು
ಮುಂದೆ ಸುವರ್ಣರು ತನ್ನ ಯೌವ್ವನದ ವರ್ಷಗಳನ್ನು ರಂಗಭೂಮಿಯ ಸೇವೆಗೆ ಮುಡಿಪಾಗಿಟ್ಟರು. ಹತ್ತಾರು ಕನ್ನಡ ಮತ್ತು ತುಳು ನಾಟಕಗಳನ್ನು ಬರೆದರು. ಅವರೇ ನಿರ್ದೇಶನ ಮಾಡಿ ಅಭಿನಯ ಕೂಡ ಮಾಡಿದರು. ಈಡಿಪಸ್, ಕುಬಿ ಮತ್ತು ಈಯಾಲ, ಕದಡಿದ ನೀರು, ಧರ್ಮ ಶಸ್ತ್ರ, ಯಾರು ನನ್ನವರು, ಸತ್ಯಂ ವಧ ಧರ್ಮಮ್ ಚರ ಇವುಗಳಲ್ಲಿ ಹೆಚ್ಚಿನವು ಪ್ರಯೋಗಾತ್ಮಕ ನಾಟಕಗಳು. ಇದು ಯುನಿವರ್ಸಿಟಿ, ಬಾಳೆ ಬಂಗಾರ, ಗೊಂದೋಳು ನಾಟಕಗಳು ಮುಂಬಯಿ ಮಹಾನಗರದಲ್ಲಿ ಭಾರೀ ದೊಡ್ಡ ಅಲೆಯನ್ನೇ ಉಂಟುಮಾಡಿದವು. ಗೊಂದೋಳು ಎಲ್ಲ ಕಡೆಗಳಲ್ಲಿಯೂ ಗೆಲ್ಲುತ್ತಾ ಹೋಯಿತು. ಅದಕ್ಕೆ ಅವರು ಬಳಕೆ ಮಾಡಿದ ಜಾನಪದ ಸಂಗೀತ ಮತ್ತು ಜಾನಪದ ಪರಿಕರಗಳು ಅನನ್ಯವಾಗಿ ಇದ್ದವು. ಸುವರ್ಣರು ಹತ್ತಾರು ಕಾದಂಬರಿ ಮತ್ತು ಕಥೆಗಳನ್ನು ಬರೆದರು.
‘ಗೋರೆಗಾಂವ್ ಕರ್ನಾಟಕ ಸಂಘ’ ಮತ್ತು ಮುಂಬಯಿಯ ಎಲ್ಲ ಕನ್ನಡ ಪರ ಸಂಘಟನೆಗಳು ಅವರ ಎಲ್ಲ ಪ್ರಯೋಗಗಳಿಗೆ ವೇದಿಕೆಯನ್ನು ಒದಗಿಸಿದವು. ಮುಂಬಯಿ ನಗರದಲ್ಲಿ ಸಂಸ್ಕೃತಿಯನ್ನು ಪ್ರೀತಿಸುವ ಮಂದಿಗೆ ಸುವರ್ಣರು ಅತ್ಯಂತ ಆಪ್ತರಾದರು. ಅವರ ನಾಟಕಗಳು ಅವರಿಗೆ ಸಾವಿರಾರು ಅಭಿಮಾನಿಗಳನ್ನು ತಂದು ಕೊಟ್ಟವು.
ಸುವರ್ಣರ ಮಾಸ್ಟರ್ ಪೀಸ್ ಸಿನೆಮಾ – ಘಟಶ್ರಾದ್ಧ
ಅನಂತಮೂರ್ತಿಯವರ ಮೇರು ಕತೆ ‘ಘಟಶ್ರಾದ್ಧ’ವನ್ನು ಅವರು ತಮ್ಮ ಸ್ನೇಹಿತ ಗಿರೀಶ್ ಕಾಸರವಳ್ಳಿಯು ಜೊತೆಗೆ ಸೇರಿ ತೆರೆಗೆ ತಂದರು. ಅದು ಕಾಸರವಳ್ಳಿ ಅವರು ನಿರ್ದೇಶನ ಮಾಡಿದ ಮೊದಲ ಸಿನೆಮಾ ಆಗಿತ್ತು. ಆ ಸಿನೆಮಾ ರಾಷ್ಟ್ರಪ್ರಶಸ್ತಿ ಸಹಿತ 18 ಪ್ರಶಸ್ತಿಗಳನ್ನು ಗೆದ್ದಿತು. ಅದು ಇಂದಿಗೂ ಭಾರತದ ಟಾಪ್ 100 ಸಿನೆಮಾಗಳಲ್ಲಿ ಸ್ಥಾನ ಪಡೆದಿದೆ. ಅದು ಸುವರ್ಣರ ಬಹಳ ದೊಡ್ಡ ಕೊಡುಗೆ ಎಂದು ನನ್ನ ಭಾವನೆ. ಎಂಬತ್ತರ ದಶಕದಲ್ಲಿ ಸುವರ್ಣರು ತುಳು ಸಂಸ್ಕೃತಿಯ ಮೇಲಿನ ಪ್ರೀತಿಯಿಂದ ‘ಗುಡ್ಡೆದ ಭೂತ ‘ ಧಾರಾವಾಹಿಯನ್ನು ಸಾದರ ಪಡಿಸಿದರು. ಅದು ದೂರದರ್ಶನದಲ್ಲಿ ದೀರ್ಘ ಕಾಲ ಪ್ರಸಾರ ಆಯಿತು. ಕರಾವಳಿಯಲ್ಲಿ ಎಲೆಯ ಮರೆಯ ಕಾಯಿಯಂತೆ ಇದ್ದ ಪ್ರಕಾಶ್ ರೈ ಎಂಬ ನಟವನ್ನು ಮಹಾಸ್ಟಾರ್ ಮಾಡಿದ ಧಾರಾವಾಹಿ ಅದು. ಈಗಲೂ ಡೆನ್ನಾನ ಡೆನ್ನಾನ ಹಾಡು ಕಿವಿಯಲ್ಲಿ ಅನುರಣನ ಮಾಡುವ ಧಾರಾವಾಹಿ ಅದು. ಅದರ ಮೂಲಕ ಸದಾನಂದ ಸುವರ್ಣರು ಜಾಗತಿಕ ಮನ್ನಣೆ ಪಡೆದರು.
ಮತ್ತೆ ಕರಾವಳಿಯ ಮತ್ತು ಕಾರಂತರ ಸೆಳೆತ
ಹುಟ್ಟೂರು ಕರಾವಳಿಗೆ ಮತ್ತೆ ಹಿಂದಿರುಗಿ ಬಂದು ಅಧ್ಯಯನದಲ್ಲಿ ಮುಳುಗಿಬಿಟ್ಟರು. ಆ ಹೊತ್ತಿಗೆ ಕಾರಂತರ ಸಾಹಿತ್ಯ ಮತ್ತು ಪ್ರಯೋಗಗಳು ಅವರನ್ನು ತೀವ್ರವಾಗಿ ಸೆಳೆದವು. ಹಲವು ಕಂತುಗಳ ‘ಕಾರಂತ ದರ್ಶನ’ ಸಾಕ್ಷ್ಯ ಚಿತ್ರವನ್ನು ಸೊಗಸಾಗಿ ನಿರ್ದೇಶನ ಮಾಡಿದರು. ಅದರ ಬಗ್ಗೆ ದೂರದರ್ಶನವು ನಿರ್ಲಕ್ಷ್ಯ ಮಾಡಿದಾಗ ಸಿಡಿದು ನಿಂತು ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಪತ್ರ ಬರೆದರು.ಕಾರಂತರ ಹಲವು ಯಕ್ಷಗಾನ ಬ್ಯಾಲೆ ಮತ್ತು ರೂಪಕಗಳು ಸದಾನಂದ ಸುವರ್ಣರ ಮೂಲಕ ಮುಂಬೈಯಲ್ಲಿ ಪ್ರದರ್ಶನ ಕಂಡವು. ಕಾರಂತ ಉತ್ಸವ ಭಾರೀ ಜನಪ್ರಿಯ ಆಯಿತು.
ಈ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಪ್ರತಿಷ್ಠಿತವಾದ ‘ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ ಕೂಡ ದೊರೆಯಿತು. ಆ ಸಂದರ್ಭ ಅವರನ್ನು ಒಮ್ಮೆ ಕೋಟದಲ್ಲಿ ಭೇಟಿಯಾಗಿ ಸ್ಫೂರ್ತಿ ಪಡೆದಿದ್ದೆ. ಇತ್ತೀಚೆಗೆ ‘ಕೋರ್ಟ್ ಮಾರ್ಷಲ್ ‘ ಎಂಬ ಪ್ರಯೋಗಾತ್ಮಕ ನಾಟಕವನ್ನು ಅವರು ನಿರೂಪಣೆ ಮಾಡಿದ್ದರು.
ಸದಾನಂದ ಸುವರ್ಣ ಪ್ರತಿಷ್ಠಾನದ ಮೂಲಕ ಅವರು ಮತ್ತು ಅವರ ಅಭಿಮಾನಿಗಳು ಮುಂಬೈಯಲ್ಲಿ ಮಾಡಿದ ನೂರಾರು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳು ತುಂಬಾನೇ ಜನಪ್ರಿಯ ಆಗಿದ್ದವು. ತನ್ನ ಜೀವನದ ಅಷ್ಟೂ ವರ್ಷಗಳನ್ನು ರಂಗಭೂಮಿ ಎಂಬ ದೊಡ್ಡ ಆಯಾಮಕ್ಕೆ ಮುಡಿಪಾಗಿಟ್ಟ ಸದಾನಂದ ಸುವರ್ಣರು ನೇಪಥ್ಯಕ್ಕೆ ಸರಿದಿದ್ದಾರೆ.
ಅವರಿಗೆ ನಮ್ಮ ಶ್ರದ್ಧಾಂಜಲಿ.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಈ ಚಿತ್ರಾಕ್ಷರಗಳಿಗೆ ಇಂದು 25 ವರ್ಷ ತುಂಬಿತು!