ರಾಬರ್ಟ್ ಬ್ರೌನಿಂಗ್ ಮತ್ತು ಎಲಿಜೆಬೆತ್ ಬ್ಯಾರೆಟ್ ಪರಸ್ಪರ ಭೇಟಿ ಆಗದೆ ವರ್ಷಾನುಗಟ್ಟಲೆ ಪ್ರೀತಿ ಮಾಡಿದರು!
:: ರಾಜೇಂದ್ರ ಭಟ್ ಕೆ.
ರಾಜಮಾರ್ಗ ಅಂಕಣ: ಪ್ರೀತಿಗೆ ಕಣ್ಣಿಲ್ಲ (Love is blind) ಅಂತಾರೆ. ಆದರೆ ಇಟಲಿಯಲ್ಲಿ (Italy) ಇರುವ ಅವರ ಸಮಾಧಿಯ ಮೇಲೆ ʼಪ್ರೀತಿ ಕುರುಡಲ್ಲ’ ಎಂದು ಬರೆದಿರುವುದು ಯಾಕೆ? ಇದೆಲ್ಲವೂ ಅರ್ಥ ಆಗಬೇಕಾದರೆ ಈ ಪ್ರೀತಿಯ ಪರಾಕಾಷ್ಠೆಯ ಕಥೆಯನ್ನು ಒಮ್ಮೆ ಫೀಲ್ ಮಾಡಿಕೊಂಡು ಓದಿ.
ಅದು ಲಂಡನ್ ನಗರ. ಆಕೆ ಎಲಿಜೆಬೆತ್ ಬ್ಯಾರೇಟ್ (Elizabeth Barrett). ಆ ಕಾಲಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕವಯಿತ್ರಿ. ವಯಸ್ಸು 39ರ ಆಸುಪಾಸು. ಅವಿವಾಹಿತೆ. ಆಕೆಯ ತಂದೆ ಅತ್ಯಂತ ಶ್ರೀಮಂತ ಜಮೀನುದಾರರು. ಅಪ್ಪ ಅಮ್ಮನ 12 ಮಕ್ಕಳಲ್ಲಿ ಆಕೆಯೂ ಒಬ್ಬರು. ಅಪ್ಪನ ಪ್ರೀತಿಯ ಮಗಳು.
ಹದಿಹರೆಯದಿಂದಲೂ ಆಕೆಗೆ ತೀವ್ರ ಅನಾರೋಗ್ಯ ಮತ್ತು ದೇಹವೆಲ್ಲ ನೋವು. ಉಸಿರಾಟದ ತೊಂದರೆ. ಮನೆಯಿಂದಾಚೆ ಹೋಗಲು ಸಾಧ್ಯವೇ ಆಗದ ಸ್ಥಿತಿ. ಆಕೆ ಅಂತರ್ಮುಖಿ. ತನ್ನ ಸ್ಟಡಿ ರೂಮಿನಲ್ಲಿ ಕುಳಿತು ಓದುವುದು ಮತ್ತು ಬರೆಯುವುದು ಬಿಟ್ಟರೆ ಆಕೆಗೆ ಬೇರೆ ಪ್ರಪಂಚವೇ ಇರಲಿಲ್ಲ!
ಆತನು ರಾಬರ್ಟ್ ಬ್ರೌನಿಂಗ್
ಅವನೂ ಲಂಡನ್ ನಗರದವನು. ವಯಸ್ಸು 32. ಆತ ಕೂಡ ಕವಿ ಮತ್ತು ನಾಟಕಕಾರ. ಆತ ಆಕೆಯನ್ನು ಎಂದಿಗೂ ಭೇಟಿ ಮಾಡಿರಲೇ ಇಲ್ಲ. ಆಕೆಯ ಬಗ್ಗೆ ಆತನಿಗೆ ಏನೂ ಗೊತ್ತಿಲ್ಲ. ಆದರೆ ಆಕೆಯ ಕವಿತೆಗಳ ಆರಾಧಕ. ಒಂದು ದಿನ ಧೈರ್ಯ ಮಾಡಿ ಅವಳ ವಿಳಾಸವನ್ನು ಪಡೆದುಕೊಂಡು ‘ನಾನು ನಿಮ್ಮ ಕವಿತೆಗಳನ್ನು ಪ್ರೀತಿ ಮಾಡುತ್ತೇನೆ ‘ಎಂದು ಧೈರ್ಯವಾಗಿ ಪತ್ರ ಬರೆದನು. ಆಶ್ಚರ್ಯ ಪಟ್ಟ ಎಲಿಜೆಬೆತ್ ಧನ್ಯವಾದಗಳು ಎಂದು ಎರಡು ಸಾಲಿನ ಪತ್ರ ಬರೆದಳು. ಯಾರೋ ಒಬ್ಬ ಅಭಿಮಾನಿ ಎಂದು ಆಕೆ ಭಾವಿಸಿದ್ದಳು. ಆದರೆ ರಾಬರ್ಟ್ (Robert Browning) ಬಿಡಬೇಕಲ್ಲ. ಮರುದಿನವೇ ಇನ್ನೊಂದು ಪತ್ರ ಬರೆದು ಪೋಸ್ಟ್ ಮಾಡಿದನು.
ಹೀಗೆ ಮುಂದಿನ 20 ತಿಂಗಳ ಕಾಲ ಅವರಿಬ್ಬರೂ 600 ಪತ್ರಗಳನ್ನು ವಿನಿಮಯ ಮಾಡಿಕೊಂಡರು! ಒಬ್ಬರನ್ನೊಬ್ಬರು ಅಭಿನಂದಿಸಿ ಕೊಂಡರು. ಕವಿತೆಗಳ ಬಗ್ಗೆ ವಿಸ್ತಾರವಾಗಿ ಮಾತಾಡಿದರು. ಎಲ್ಲಿಯೂ ಪ್ರೀತಿಯನ್ನು ಪ್ರಪೋಸ್ ಮಾಡಲಿಲ್ಲ! ಅಥವಾ ಫೋನ್ ಮಾಡಿ ಮಾತನಾಡಲೇ ಇಲ್ಲ!
ಆ ಪತ್ರಗಳ ಪ್ರಭಾವದಿಂದ ಎಲಿಜೆಬೆತ್ ಆರೋಗ್ಯ ಸುಧಾರಣೆ ಆಯ್ತು!
ದೀರ್ಘ ಅವಧಿಗೆ ಅದೃಶ್ಯ ಅಭಿಮಾನಿಯ ಪ್ರೀತಿಪೂರ್ವಕ ಪತ್ರಗಳನ್ನು ಓದುತ್ತಾ, ಅವುಗಳಿಗೆ ಉತ್ತರ ಬರೆಯುತ್ತ ಎಲಿಜೆಬೆತ್ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಆಯ್ತು! ಆಕೆ ಅಫೀಮ್ ಮತ್ತು ಮಾರ್ಫಿನ್ ಡ್ರಗ್ಸ್ ಸೇವನೆಯಿಂದ ನಿಧಾನವಾಗಿ ಹೊರಬಂದಳು. ಒಂದು ದಿನ ಧೈರ್ಯವಾಗಿ ಆತನಿಗೆ ಪತ್ರ ಬರೆದಳು – ನನ್ನಲ್ಲಿ ತುಂಬಾ ಆರೋಗ್ಯ ಸುಧಾರಣೆ ಆಗಿದೆ. ನಾನು ಈಗ ಆರು ವರ್ಷಗಳ ಕತ್ತಲೆಯ ಕೋಣೆಯಿಂದ ಹೊರಬರಬೇಕು ಎಂದು ಆಸೆ ಪಡುತ್ತಾ ಇದ್ದೇನೆ. ನಿನ್ನನ್ನೊಮ್ಮೆ ಭೇಟಿ ಆಗಿ ಥ್ಯಾಂಕ್ಸ್ ಹೇಳಬೇಕು ಅನ್ನಿಸ್ತಿದೆ. ಸಿಗ್ತಿಯಾ?
ಆತ ಒಪ್ಪಿದನು. ಅವರಿಬ್ಬರೂ ಮೊದಲ ಬಾರಿಗೆ ಭೇಟಿ ಆದರು. ʼನಾನು ನಿಮ್ಮನ್ನು ಮದುವೆ ಆಗುತ್ತೇನೆ. ನಿಮ್ಮ ಒಪ್ಪಿಗೆ ಇದೆಯಾ? ‘ಎಂದು ಆಗ ರಾಬರ್ಟ್ ನೇರವಾಗಿ ಕೇಳಿದನು. ಅದನ್ನವಳು ನಿರೀಕ್ಷೆ ಮಾಡಿರಲಿಲ್ಲ. ಈಗ ಎಲಿಜೆಬೆತ್ ಬೆವರಲು ಆರಂಭಿಸಿದಳು.
ಆಕೆಯ ಅಪ್ಪ ಪ್ರೇಮವಿವಾಹಕ್ಕೆ ವಿರೋಧ ಇದ್ದರು
ಆಕೆಯು ಬೆವರಲು ಕಾರಣ ಆಕೆಯ ಅಪ್ಪ ಹಾಕಿದ ನಿರ್ಬಂಧ. ಅವನ ಎರಡು ಮಕ್ಕಳು ಪ್ರೀತಿ ಮಾಡಿ ಓಡಿಹೋಗಿ ಮದುವೆ ಆಗಿದ್ದರು. ಆ ಸಿಟ್ಟಿನಲ್ಲಿ ಆತನು ಎಲಿಜಬೆತ್ ಮಗಳಿಗೆ ಪ್ರೀತಿ ಮಾಡಲೇ ಬಾರದು ಎಂಬ ನಿರ್ಬಂಧವನ್ನು ಹಾಕಿದ್ದನು. ಆಕೆಯ ಸಂದಿಗ್ದವು ರಾಬರ್ಟನಿಗೆ ಅರ್ಥ ಆಯಿತು. ಅವನು ಎಷ್ಟು ಧೈರ್ಯ ತುಂಬಿಸಿದರೂ ಅಪ್ಪನ ಎದುರು ಹೋಗಿ ನಿಂತು ಮಾತಾಡುವ ಧೈರ್ಯ ಅವಳಿಗೆ ಕೊನೆಗೂ ಬರಲಿಲ್ಲ. ಕೊನೆಗೆ 1845ರ ಸೆಪ್ಟೆಂಬರ್ 12ರಂದು ಅವರಿಬ್ಬರೂ ರಹಸ್ಯವಾಗಿ ಮದುವೆ ಆದರು.
ಆಸ್ತಿಯಲ್ಲಿ ಪಾಲು ಕೊಡುವುದಿಲ್ಲ ಎಂದ ಅಪ್ಪ
ಹೇಗೋ ಮದುವೆಯ ರಹಸ್ಯವು ಅಪ್ಪನಿಗೆ ಗೊತ್ತಾಯಿತು. ನಿಮಗೆ ಆಸ್ತಿಯಲ್ಲಿ ಒಂದು ಡಾಲರ್ ಕೂಡ ಕೊಡುವುದಿಲ್ಲ. ಎಲ್ಲಿ ಬೇಕಾದರೂ ಹೋಗಿ ಎಂದು ಗರ್ಜಿಸಿದನು. ಮದುಮಕ್ಕಳನ್ನು ಮನೆಯ ಹೊರಗೆ ನಿಲ್ಲಿಸಿ ದಢಾರ್ ಎಂದು ಬಾಗಿಲು ಹಾಕಿದನು.
ರಾಬರ್ಟ್ ಮತ್ತು ಎಲಿಜಬೆತ್ ಇಬ್ಬರೂ ಬೇಸರ ಮಾಡಿಕೊಳ್ಳಲಿಲ್ಲ. ಬರವಣಿಗೆಯ ಮೂಲಕ ಬದುಕುವ ಶಕ್ತಿ ಇಬ್ಬರಿಗೂ ಇತ್ತು. ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇತ್ತು. ಅವರಿಬ್ಬರೂ ಉಟ್ಟ ಬಟ್ಟೆಯಲ್ಲಿ ಲಂಡನ್ ನಗರವನ್ನು ಬಿಟ್ಟು ಪ್ರೀತಿಯ ಊರಾದ ಇಟಲಿಗೆ ಬಂದರು. ಪೀಸಾದ ವಾಲುವ ಗೋಪುರದ ಮುಂದೆ ನಿಂತು ದಂಪತಿಗಳು ಮೊಟ್ಟಮೊದಲ ಬಾರಿಗೆ ಕಿಸ್ ಮಾಡಿದರು. ಪ್ರೀತಿಯ ಉತ್ಕಟತೆಯನ್ನು ಫೀಲ್ ಮಾಡಿದರು. ಅಲ್ಲಿಯೇ ಮನೆ ಮಾಡಿ ಸಾಹಿತ್ಯದ ಕೆಲಸದಲ್ಲಿ ಮುಳುಗಿದರು.
ಅಲ್ಲಿ ರಾಬರ್ಟ್ ತನ್ನ ಅದ್ಭುತ ಕವಿತೆ ‘ಸಾನೆಟ್ಸ್ ಫ್ರಮ್ ಪೋರ್ಚುಗೀಸ್ ‘ ಬರೆದು ಹೆಂಡತಿಗೆ ಪ್ರೆಸೆಂಟ್ ಮಾಡುತ್ತಾನೆ. ಅದು ಲೋಕಪ್ರಸಿದ್ಧಿ ಪಡೆಯಿತು.
ಆಕೆಯು ಅಷ್ಟೇ ಪ್ರೀತಿಯಿಂದ ʼಪೊಯೆಮ್ಸ್ ಬಿಫೋರ್ ಕಾಂಗ್ರೆಸ್’ ಕವಿತೆಯನ್ನು ಬರೆದು ಅವನಿಗೆ ಅರ್ಪಿಸುತ್ತಾಳೆ. ಗಂಡನ ಪ್ರೀತಿಯಲ್ಲಿ ಮುಳುಗಿ ʼಆರೋರಾ’ ಎಂಬ ಪ್ರೇಮಗ್ರಂಥವನ್ನು ಬರೆದು ಪ್ರಕಟಣೆ ಮಾಡುತ್ತಾಳೆ. ಅವರ ಪ್ರೀತಿಯ ಪ್ರತೀಕವಾಗಿ ಅವರಿಗೆ ವೀಡ್ಮನ್ ಬ್ಯಾರೆಟ್ ಎಂಬ ಮಗನು ಹುಟ್ಟುತ್ತಾನೆ.
1861ರಲ್ಲಿ ರಾಬರ್ಟ್ ತನ್ನ ಮಹತ್ವಾಕಾಂಕ್ಷೆಯ ಕೃತಿ ʼಮೆನ್ ಅಂಡ್ ವಿಮೆನ್’ ಪೂರ್ತಿ ಮಾಡಿ ಪತ್ನಿಯ ಕೈಯ್ಯಲ್ಲಿ ಇಟ್ಟು ಬಿಡುಗಡೆ ಮಾಡುತ್ತಾನೆ. 15 ವರ್ಷಗಳ ಶ್ರೇಷ್ಟ ದಾಂಪತ್ಯದ ಅನುಪಮ ಪ್ರೀತಿಯನ್ನು ಆಸ್ವಾದಿಸಿದ ನಂತರ 1861ರ ಜೂನ್ 29ರಂದು ಎಲಿಜೆಬೆತ್ ತನ್ನ ಗಂಡನ ತೋಳುಗಳಲ್ಲೇ ಉಸಿರು ನಿಲ್ಲಿಸುತ್ತಾಳೆ. ಕೆಲವೇ ವರ್ಷಗಳಲ್ಲಿ ರಾಬರ್ಟ್ ಕೂಡ ನಿಧನ ಹೊಂದುತ್ತಾನೆ.
ಅವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು