Site icon Vistara News

ರಾಜಮಾರ್ಗ ಅಂಕಣ: ನೇಪಾಳ ಸರಕಾರದ ದುರಾಸೆಗೆ ಬಲಿ ಆಗುತ್ತಿದೆ ದೇವ ಶಿಖರ

Rajamarga Column On Mount Everest

Rajamarga Column: Mount Everest is falling prey to the greed of the Nepalese government

ಮೌಂಟ್ ಎವರೆಸ್ಟ್ ಶಿಖರದ ಮೇಲೆ ಮಾನವನ ಮೊದಲ ಹೆಜ್ಜೆ ಊರಿ 70 ವರ್ಷ ಪೂರ್ತಿ ಆಯ್ತು.

1953ರ ಮೇ 29ರ ಮಧ್ಯಾಹ್ನ 11.30ಕ್ಕೆ ತೆನ್ಸಿಂಗ್ ನೋರ್ಗೆ ಮತ್ತು ಎಡ್ಮಂಡ್ ಹಿಲರಿ ಜಗತ್ತಿನ ಅತೀ ಎತ್ತರದ ಪರ್ವತ ಶಿಖರದ ಮೇಲೆ ಹೆಜ್ಜೆ ಊರಿ ಇತಿಹಾಸ ನಿರ್ಮಾಣ ಮಾಡಿದ್ದರು. ಅವರು ಶಿಖರದ ಮೇಲೆ ಇದ್ದದ್ದು 15 ನಿಮಿಷ ಮಾತ್ರ. ಅಲ್ಲಿಂದ ಕೆಳಗೆ ಇಳಿದು ಬಂದ ನಂತರ ಅವರಿಬ್ಬರೂ ಜಾಗತಿಕ ಹೀರೋಗಳೇ ಆಗಿದ್ದರು.

1922ರಿಂದಲೂ ನಿರಂತರ ಪ್ರಯತ್ನಗಳು ನಡೆದಿದ್ದವು.

ಭಾರತವನ್ನು ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದ ಹೊತ್ತಿನಲ್ಲಿಯೂ ಮೌಂಟ್ ಎವರೆಸ್ಟ್ ಏರುವ ಹತ್ತಾರು ಪ್ರಯತ್ನಗಳು ನಡೆದಿದ್ದವು. 1922ರಲ್ಲಿ ‘ಬ್ರಿಟಿಷ್ ಮೌಂಟ್ ಎವರೆಸ್ಟ್ ಶಿಖರಾರೋಹಣ’ ಎಂಬ ದೊಡ್ಡ ಪ್ರಯತ್ನವು ನಡೆದಿತ್ತು. ಎರಡು ಬಾರಿ ಕೂಡ ಅದು ವಿಫಲವಾಯಿತು. ಮೂರನೇ ಬಾರಿ ಏಳು ಜನ ಪೋರ್ಟರಗಳು ಹಿಮಪಾತಕ್ಕೆ ಬಲಿಯಾದ ಕಾರಣ ಆ ಪ್ರಯತ್ನಗಳು ಮುಂದೆ ನಡೆಯಲೇ ಇಲ್ಲ. ಆದರೆ 31 ವರ್ಷಗಳ ನಂತರ ತೆನ್ಸಿಂಗ್ ಮತ್ತು ಹಿಲರಿ ಈ ಜಾಗತಿಕ ವಿಕ್ರಮ ಪೂರ್ತಿ ಮಾಡಿದ್ದರು.

The Death Zone ಎಂಬ ಕಣ್ಣು ತೆರೆಸುವ ಪುಸ್ತಕ!

ಆದರೆ ನಾನಿಂದು ಬರೆಯಲು ಹೊರಟದ್ದು ಆ ವಿಷಯವನ್ನಲ್ಲ. ಟ್ರಿನ್ ಡೆನಿಸ್ ಎಂಬ ಲೇಖಕಿಯು ಬರೆದ The Death Zone ( Murder on Mount Everest) ಎಂಬ ನಾವೆಲ್ ಓದಿ ಮುಗಿಸಿದ ಯಾವ ಪರಿಸರ ಪ್ರೇಮಿಯೂ ಮುಂದೆ ನಿದ್ದೆ ಮಾಡಲು ಸಾಧ್ಯವೇ ಇಲ್ಲ! ನೇಪಾಳ ಸರಕಾರದ ದುರಾಸೆಗೆ ಬಲಿಯಾಗುತ್ತಿರುವ ಈ ದೇವ ಶಿಖರದ ಬಗ್ಗೆ ಅವರು ಬರೆದ ಒಂದೊಂದು ಸಾಲೂ ನನ್ನನ್ನು ಬೆಚ್ಚಿ ಬೀಳಿಸಿದೆ! ಅದರ ಸಾರಾಂಶವು ಇದೀಗ ನಿಮ್ಮ ಮುಂದೆ.

1953ರಿಂದ ಇಂದಿನವರೆಗೂ ಸಾವಿರಾರು ಜನರು ಮೌಂಟ್ ಎವರೆಸ್ಟ್ ಏರಲು ಪ್ರಯತ್ನ ಪಡುತ್ತಲೆ ಇದ್ದಾರೆ. ಅದರಲ್ಲಿ 20-30% ಸಾಹಸಿಗಳು ಯಶಸ್ವೀ ಆಗಿದ್ದಾರೆ. ಯಾವಾಗ ಶಿಖರ ಏರುವುದನ್ನು ಒಂದು ಪ್ರತಿಷ್ಠೆಯಾಗಿ ಆರೋಹಿಗಳು ತೆಗೆದುಕೊಂಡರೋ ನೇಪಾಳ ಸರಕಾರವು ದುಡ್ಡು ಮಾಡುವ ದಂಧೆಗೆ ಇಳಿಯಿತು. ನೇಪಾಳ ಸರಕಾರಕ್ಕೆ ಈಗ ‘ಪರ್ವತಾರೋಹಣವೇ ವ್ಯಾಪಾರ ‘ ಆಗಿದೆ ಎಂದು ಲೇಖಕರು ಬರೆಯುತ್ತಾರೆ! ನೇಪಾಳ ವರ್ಷಕ್ಕೆ 300 ಮಿಲಿಯನ್ ಡಾಲರ್ ಆದಾಯವನ್ನು ಈ ಆರೋಹಣದ ಮೂಲಕ ಪಡೆಯುತ್ತಿದೆ ಎಂದರೆ ನಂಬದೇ ಇರಲು ಸಾಧ್ಯವೇ ಇಲ್ಲ! ಒಂದು ಅದ್ಭುತ ದೇವಶಿಖರವನ್ನು ಪಿಕ್ನಿಕ್ ಸ್ಪಾಟನ ಮಟ್ಟಕ್ಕೆ ಇಳಿಸಿದ ಅಪಕೀರ್ತಿಯು ನೇಪಾಳ ಸರಕಾರಕ್ಕೆ ಸಲ್ಲಬೇಕು!

ಮೌಂಟ್ ಎವರೆಸ್ಟ್ ಶಿಖರದ ಎತ್ತರ ಹತ್ತಿರ ಹತ್ತಿರ 8,850 ಮೀ.( 29, 035 ಅಡಿ). ಅದನ್ನು ಏರಲು ದೀರ್ಘ ಅವಧಿಯ ತರಬೇತು ಬೇಕು. ಆರೋಹಿಗಳಿಗೆ ಪೂರ್ಣ ಪ್ರಮಾಣದ ರಕ್ಷಣೆ ಕೊಡಬೇಕು. ತರಬೇತು ಪಡೆದ ಶೆರ್ಫಾಗಳು ಜೊತೆಗೆ ಇರಬೇಕು. ಅದಕ್ಕಾಗಿ ಆರೋಹಣದ ಪ್ರಯತ್ನ ಮಾಡುವವರು ಅಂದಾಜು 80 ಲಕ್ಷ ರೂಪಾಯಿ ದುಡ್ಡು ತೆಗೆದಿರಿಸಬೇಕು. ಅದರ ಬಹುದೊಡ್ಡ ಭಾಗವನ್ನು ನೇಪಾಳ ಸರಕಾರ ತನ್ನ ಬಳಿ ಇಟ್ಟು ಕೊಳ್ಳುತ್ತದೆ. ದುರಾಸೆಗೆ ಬಿದ್ದ ನೇಪಾಳ ಸರಕಾರವು ವರ್ಷಕ್ಕೆ ಸಾವಿರಾರು ಮಂದಿಯಿಂದ ದುಡ್ಡು ಪಡೆದು ಮೌಂಟ್ ಎವರೆಸ್ಟ್ ಏರಲು ಅನುಮತಿ ನೀಡುತ್ತದೆ. ತರಬೇತಿ, ರಕ್ಷಣೆ, ಮೂಲ ಸೌಲಭ್ಯ ಇತ್ಯಾದಿಗಳನ್ನು ಕಡೆಗಣಿಸುತ್ತಿದೆ. ಹೆಚ್ಚು ಹೆಚ್ಚು ಸಾಹಸಿಗಳು ಆರೋಹಣ ಮಾಡಲು ಪ್ರಚಾರ ಮಾಡುತ್ತಿದೆ.

ನೇಪಾಳದ ಪಸಂಗ್ ದಾವ ಮತ್ತು ಕೀಮಾ ರಾಟಿ ಎಂಬ ಸಾಹಸಿಗರು ಈಗಾಗಲೇ ಶಿಖರವನ್ನು ತಲಾ 26 ಬಾರಿ ಏರಿ ಬಂದಿದ್ದಾರೆ ಎಂದರೆ ಊಹೆ ಮಾಡಿಕೊಳ್ಳಿ. ಇದರಿಂದಾಗಿ ಶಿಖರದಲ್ಲಿ ‘ಟ್ರಾಫಿಕ್ ಜಾಮ್’ ಆಗ್ತಾ ಇದೆ ಮತ್ತು ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಎಪ್ಪತ್ತರ ದಶಕದಲ್ಲಿ ಸ್ವತಃ ತೆನ್ಸಿಂಗ್ ಅವರು ಮೌಂಟ್ ಎವರೆಸ್ಟ್ ಶಿಖರಕ್ಕೆ ವಿಶ್ರಾಂತಿ ಬೇಕು ಎಂದು ಕರೆ ನೀಡಿದ್ದರು. ಆದರೆ ಕಿವುಡ ನೇಪಾಳ ಸರಕಾರ ಅದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ ಅನ್ನುವುದು ದುರಂತ.

ಎವರೆಸ್ಟ್ ಶಿಖರದ ಮೇಲೆ ಡೆತ್ ಝೋನ್ ನಿರ್ಮಾಣ ಆಗಿದೆ

ಎವರೆಸ್ಟ್ ಶಿಖರದ ಮೇಲೆ 8000-8500 ಮೀಟರ್ ಎತ್ತರದ ವರೆಗಿನ ವಲಯವನ್ನು ‘ ಡೆತ್ ಝೋನ್’ ಎಂದು ಕರೆಯಲಾಗುತ್ತದೆ. ಅಲ್ಲಿ ಗಾಳಿಯ ಒತ್ತಡವು ತೀವ್ರ ಕುಸಿಯುತ್ತದೆ. ಅದರಿಂದಾಗಿ ಆಕ್ಸಿಜನ್ ಕೊರತೆ ಕಾಡುತ್ತದೆ. ಉಸಿರಾಟದ ತೊಂದರೆ, ವಾಂತಿ, ಶ್ವಾಸಕೋಶದಲ್ಲಿ ನೀರು, ತಲೆ ಸುತ್ತುವುದು, ಮನೋವಿಕಲತೆ ಉಂಟಾದಾಗ ಅದನ್ನು ಸರಿಯಾಗಿ ನಿರ್ವಹಣೆ ಮಾಡಲು ತರಬೇತು ಬೇಕು. ಅದು ಸುಲಭ ಅಲ್ಲ. ಹಿಮಪಾತ ಮತ್ತು ಹಿಮ ಮಳೆ ಸಂಭವಿಸಿದಾಗ ಅದರಿಂದ ರಕ್ಷಣೆ ಪಡೆಯಲು ಸಲಕರಣೆ ಬೇಕು. ಅದ್ಯಾವುದೂ ಇಲ್ಲದೆ ಹೋದರೆ ಅಪಘಾತ ಮತ್ತು ಸಾವು ಉಂಟಾಗುವುದು ಖಂಡಿತ. ಒಂದೊಮ್ಮೆ ಅಪಘಾತ ಉಂಟಾದರೆ ಅಲ್ಲಿಂದ ಅವರನ್ನು ಶಿಖರದ ಬುಡಕ್ಕೆ ಎತ್ತಿಕೊಂಡು ಬರಲು ಯಾವುದೇ ವ್ಯವಸ್ಥೆ ಇಲ್ಲವೇ ಇಲ್ಲ. ಮರಣ ಸಂಭವಿಸಿದರೆ ಅಲ್ಲಿಯೇ ಹೆಣವನ್ನು ಬಿಟ್ಟು ಬರದೆ ಬೇರೆ ದಾರಿಯೇ ಇಲ್ಲ. 2019ರ ಒಂದು ವರ್ಷದಲ್ಲಿ ಹೀಗೆ ದಾಖಲೆ ಸಂಖ್ಯೆಯ ಮರಣಗಳು ಉಂಟಾಗಿವೆ ಎಂದು ಪತ್ರಿಕಾ ವರದಿ ಹೇಳುತ್ತದೆ. ಆರೋಹಣ ಮಾಡಲು ಪ್ರಯತ್ನ ಪಟ್ಟ ನೂರು ಮಂದಿಯಲ್ಲಿ ಏಳು ಮಂದಿ ಕಣ್ಮರೆ ಆಗಿದ್ದಾರೆ ಅನ್ನುವುದಕ್ಕೆ ಆಧಾರ ಇದೆ. ಅಂದಿನಿಂದ ಇಂದಿವರೆಗೂ ಮೌಂಟ್ ಎವರೆಸ್ಟ್ ಮರಣ ಮೃದಂಗ ಬಾರಿಸುತ್ತಾ ಇದೆ! ಅಪಘಾತಗಳು, ಸಾವು ನೋವುಗಳು ಸಂಭವಿಸುತ್ತ ಇವೆ. ನೇಪಾಳ ಸರಕಾರ ಮಾತ್ರ ದುಡ್ಡು ಮಾಡುವ ದಂಧೆಯಲ್ಲಿ ತಲ್ಲೀನ ಆಗಿದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸ್ವರವಾರಿಧಿ ಎಂದು ಕೀರ್ತಿ ಪಡೆದ ಗಾಯಕಿ ಸುಮನ್ ಕಲ್ಯಾಣಪುರ

ಮಲಿನ ಆಗ್ತಾ ಇದ್ದಾಳೆ ಸಾಗರ ಮಾಲಾ!

ನೇಪಾಳಿ ಭಾಷೆಯಲ್ಲಿ ಎವರೆಸ್ಟ್ ಶಿಖರವನ್ನು ‘ಸಾಗರಮಾಲಾ’ ಎಂದು ಕರೆಯುತ್ತಾರೆ. ಹಿಂದೂಗಳಿಗೆ ಅದು ದೇವ ಶಿಖರ. ದೇವತೆಗಳು, ಋಷಿ ಮುನಿಗಳು ತಪಸ್ಸು ಮಾಡಿದ ತಪೋಭೂಮಿ. ಆದರೆ ಅದೀಗ ಪಿಕ್ನಿಕ್ ಸ್ಪಾಟ್ ಆಗಿ ಪರಿವರ್ತನೆ ಆದ ಕಾರಣ ಆರೋಹಿಗಳು ಶಿಖರದ ಮೇಲೆ ಖಾಲಿಯಾದ ಆಕ್ಸಿಜನ್ ಸಿಲಿಂಡರ್, ನೀರಿನ ಮತ್ತು ಮದ್ಯದ ಬಾಟಲುಗಳು, ಉಳಿಕೆಯಾದ ಆಹಾರದ ಪೊಟ್ಟಣಗಳು, ರಿಪೇರಿ ಆಗದ ಲೋಹದ ಸಲಕರಣೆಗಳು, ಚರ್ಮದ ಜಾಕೆಟ್ ಮತ್ತು ಹರಿದು ಹೋದ ಶೂಸ್… ಇವನ್ನೆಲ್ಲ ಅಲ್ಲೇ ಬಿಟ್ಟು ಬರುತ್ತಿದ್ದಾರೆ. ಹೀಗೆ ಶಿಖರದ ಮೇಲೆ ಉಂಟಾಗಿರುವ ಮಾನವ ನಿರ್ಮಿತ ತ್ಯಾಜ್ಯವೇ ಅಂದಾಜು ಐವತ್ತು ಟನ್ನಗಳಿಗಿಂತ ಹೆಚ್ಚು! ಅದು ಹಿಮ ಪ್ರದೇಶ ಆದ ಕಾರಣ ಮಣ್ಣಲ್ಲಿ ಕೊಳೆಯುವುದೂ ಇಲ್ಲ. ಪರಿಣಾಮ ಗಂಗಾ ನದಿಯನ್ನು ನಾವು ಮಾಲಿನ್ಯ ಮಾಡಿದಂತೆ ಎವರೆಸ್ಟ್ ಶಿಖರವನ್ನು ಕೂಡ ಮಾಲಿನ್ಯ ಮಾಡುವ ಪ್ರಯತ್ನಗಳು ಈಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ.

ಮೌಂಟ್ ಎವರೆಸ್ಟ್ ಶಿಖರಕ್ಕೆ ದೀರ್ಘ ವಿಶ್ರಾಂತಿಯು ಬೇಕು ಎನ್ನುವ ತೆನ್ಸಿಂಗ್ ಮಾತು ಈಗ ನಿಜವಾಗ್ತಾ ಇದೆ. ನೇಪಾಳದ ಸರಕಾರಕ್ಕೆ ಪಶುಪತಿ ನಾಥನೇ ಬುದ್ದಿ ಕೊಡಬೇಕು ಅಷ್ಟೇ! ನಮ್ಮ ದೇವ ಶಿಖರವನ್ನು ನಾವೆಲ್ಲರೂ ಸೇರಿ ರಕ್ಷಣೆ ಮಾಡಬೇಕು.

Exit mobile version