Site icon Vistara News

ರಾಜಮಾರ್ಗ ಅಂಕಣ: ಬೇಂದ್ರೆ ಎಂಬ ಶಬ್ದ ಗಾರುಡಿಗ

da ra bendre

ಸ್ವಾಭಿಮಾನಿ ಕವಿ ಸಾರ್ಥಕವಾಗಿ ಬದುಕಿದ ರೀತಿ

ರಾಜಮಾರ್ಗ ಅಂಕಣ: ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ತಮ್ಮ ಅಂಬಿಕಾತನಯ ದತ್ತ ಎಂಬ ಕಾವ್ಯನಾಮದಿಂದ ಬರೆದ ಅಷ್ಟೂ ಸಾಲುಗಳು ಅವರಿಗೆ ಭಾರೀ ದೊಡ್ಡ ಕೀರ್ತಿಯನ್ನು ತಂದಿತ್ತವು. ಮರಾಠಿ ಮತ್ತು ಕನ್ನಡದ ಭಾಷೆಯಲ್ಲಿ ಅವರು ಮಾಡಿದ ಕಾವ್ಯ ಪ್ರಯೋಗಗಳು ಅದ್ಭುತವೇ ಆಗಿವೆ. ಸಾಹಿತ್ಯದ ವೇದಿಕೆಗಳಲ್ಲಿ “ನಾನು ಯಾವ ವಿಷಯದಲ್ಲಿ ಮಾತಾಡಲಿ?” ಎಂದು ಕೇಳಿ ನಂತರ ಅವರು ಅದೇ ವಿಷಯದಲ್ಲಿ ಮಾತಾಡುತ್ತಿದ್ದರು.

ಕಾವ್ಯ ನಿರೂಪಣೆಯಲ್ಲಿ ಅವರಿಗೆ ಅವರೇ ಸಮ.

ಅವರು ಬರೆದ ಅಷ್ಟೂ ಭಾವಗೀತೆಗಳು ಶಕ್ತಿಶಾಲಿ ಬೆಳಕಿನ ಬೀಜಗಳು. ಅವುಗಳನ್ನು ಅವರೇ ಸಾಹಿತ್ಯದ ವೇದಿಕೆಗಳಲ್ಲಿ ಓದಿ ಹೇಳುವಾಗ ಅವರ ನಿರೂಪಣಾ ಕೌಶಲಕ್ಕೆ ಸಭೆ ಬೆರಗಾಗಿತ್ತಿತ್ತು. ಅವರ ಈ ಭಾವಗೀತೆಗಳ ಸಾಲುಗಳನ್ನು ಅವರ ಶೈಲಿಯಲ್ಲಿ ಕೇಳುತ್ತಾ ಹೋದಂತೆ ಜನರು ಮೈಮರೆಯುತ್ತಿದ್ದರು.

1) ಹಕ್ಕಿ ಹಾರುತಿದೆ ನೋಡಿದಿರಾ

2) ಇಳಿದು ಬಾ ತಾಯಿ ಇಳಿದು ಬಾ

3) ಭೃಂಗದ ಬೆನ್ನೇರಿ ಬಂತು

4) ಯುಗಾಯುಗಾದಿ ಕಳೆದರೂ

5) ನೀ ಹೀಂಗ ನೋಡಬ್ಯಾಡ ನನ್ನ

6) ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದ.

7) ಬಂಗಾರದಲೆಯ ಮೇಲೆ.

8) ಮುಗಿಲ ಮಾರಿಗೆ ರಾಗರತಿಯಾ.

9) ಅಂತರಂಗದಾ ಮೃದಂಗ.

10) ಇನ್ನೂ ಯಾಕ ಬರಲಿಲ್ಲಾಂವ ಹುಬ್ಬಳ್ಳಿಯಾಂವ.

11) ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ.

ಮೊದಲಾದ ಹಾಡುಗಳನ್ನು ಅವರೇ ವೇದಿಕೆಯಲ್ಲಿ ಹಾಡುವಾಗ ಅವರ ಇಡೀ ದೇಹವು ಸ್ಪಂದಿಸುತ್ತಿದ್ದ ರೀತಿ, ಅವರ ಸ್ವರ ವೈವಿಧ್ಯ, ಅವರ ನಾದ ಸಾಮರ್ಥ್ಯ, ಅವರ ಮುಖದ ಭಾವನೆಗಳು, ಅವರ ಕೂದಲು ಗಾಳಿಗೆ ಹಾರುವ ರೀತಿ….ಇವುಗಳು ಅನುಪಮ ಆಗಿದ್ದವು. ಆ ಶಕ್ತಿ ಪಡೆದ ಕನ್ನಡದ ಅಪರೂಪದ ವರ ಕವಿ ಎಂದರೆ ಬೇಂದ್ರೆ ಮತ್ತು ಬೇಂದ್ರೆ ಮಾತ್ರ.

ತೀವ್ರ ಬಡತನದಲ್ಲಿಯೂ ಸ್ವಾಭಿಮಾನದ ಪರಾಕಾಷ್ಠೆ

ವರಕವಿಗೆ ದೈವದತ್ತವಾಗಿ ಬಂದದ್ದು ಬಡತನ ಮತ್ತು ದಾರಿದ್ರ್ಯ ಮಾತ್ರ. ಮೇಷ್ಟ್ರು ಆಗಿ ನಿವೃತ್ತಿ ಆದ ಅವರಿಗೆ ಬಹುಕಾಲ ನಿವೃತ್ತಿ ವೇತನ ಬರುತ್ತಿರಲಿಲ್ಲ. ಮಕ್ಕಳಿಗೂ ಉದ್ಯೋಗ ದೊರೆತಿರಲಿಲ್ಲ. ಆಗಾಗ ಅನಾರೋಗ್ಯ ಬೇರೆ ಕಾಡುತ್ತಿತ್ತು. ಆಗ ಅವರು ವೇದಿಕೆಯಲ್ಲಿ ‘ನಾನು ಬಡವಿ ಆತ ಬಡವ, ಒಲವೇ ನಮ್ಮ ಬದುಕು’ ಎಂದು ಹಾಡಿ ಜನರನ್ನು ನಗಿಸುತ್ತಿದ್ದರು. ಅವರ ನಗುವಿನ ಹಿಂದೆ ಇರುವ ನೋವು ಯಾರಿಗೂ ಅರ್ಥ ಆಗುತ್ತಿರಲಿಲ್ಲ. ಬೇಂದ್ರೆಯವರಿಗೂ ತನ್ನ ಕಷ್ಟಗಳನ್ನು ಹೇಳಿಕೊಳ್ಳುವುದು ಇಷ್ಟ ಆಗುತ್ತಿರಲಿಲ್ಲ. ಅವರು ತನ್ನ ಬಡತನದ ಬಗ್ಗೆ ಯಾರಲ್ಲಿಯೂ ಹೇಳಿಕೊಂಡವರು ಅಲ್ಲ. ಕೋಟು ಹಾಕದೆ ಮನೆಯಿಂದ ಹೊರಟಿದ್ದು ಕೂಡ ಇಲ್ಲ!

bendre and kuvempu

ಸರಕಾರ ನೀಡಿದ ಮಾಸಾಶನ ನಿರಾಕರಿಸಿದ್ದರು ಬೇಂದ್ರೆ.

ರಾಜ್ಯ ಸರಕಾರ ಅವರಿಗೆ 1966ರಲ್ಲಿ 250 ರೂಪಾಯಿಗಳ ಮಾಸಾಶನ ಘೋಷಣೆ ಮಾಡಿತ್ತು. ಬೇಂದ್ರೆ “ನಾನು ಅರ್ಜಿ ಹಾಕಿಲ್ಲ. ನನಗೇಕೆ ಮಾಸಾಶನ? ನೀವು ನನ್ನ ಬಾಯಿ ಮುಚ್ಚಿಸಲು ಮಾಸಾಶನ ಕೊಡುತ್ತಾ ಇದ್ದೀರಿ. ನನಗದು ಬೇಡವೇ ಬೇಡ” ಎಂದು ಸರಕಾರಕ್ಕೆ ಪತ್ರ ಬರೆದರು. ಅವರ ಆರ್ಥಿಕ ಪರಿಸ್ಥಿತಿಯು ತುಂಬಾ ಬಿಗಡಾಯಿಸುತ್ತಿತ್ತು. ಇದನ್ನು ತಿಳಿದ ಕವಿ ಡಾಕ್ಟರ್ ವಿ ಕೃ ಗೋಕಾಕ್ ಅವರು ಬೇಂದ್ರೆಯವರ ನಿವಾಸಕ್ಕೆ ಬಂದು ಅವರ ಮನಸನ್ನು ಒಲಿಸಿದ ನಂತರ ಒಪ್ಪಿಗೆ ಪತ್ರ ಬರೆದು ಗೋಕಾಕರ ಕೈಯ್ಯಲ್ಲಿ ಇಟ್ಟರು. ಗೋಕಾಕರು “ಬೇಂದ್ರೆಯವರೇ. ನಿಮಗೆ ದುಡ್ಡಿನ ತುರ್ತು ಇದೆ. ಮತ್ತೆ ಯಾಕೆ ಮಾಸಾಶನವನ್ನು ಬೇಡಾ ಅಂತೀರಿ?” ಎಂದಾಗ ಬೇಂದ್ರೆಯವರು ಕಣ್ಣೀರು ಸುರಿಸಿ ಗೋಕಾಕರನ್ನು ಅಪ್ಪಿ ಹಿಡಿದು ಬೀಳ್ಕೊಟ್ಟರು.

ಸ್ವಾಭಿಮಾನಕ್ಕೆ ಧಕ್ಕೆ ಬರುವ ಯಾವ ಸಂಗತಿಯನ್ನೂ ಬೇಂದ್ರೆಯವರು ಆಚರಣೆ ಮಾಡಿದ ಉದಾಹರಣೆ ಸಿಗುವುದಿಲ್ಲ.

ಮಗನ ಕೈಯ್ಯಲ್ಲಿ ಪತ್ರ ಬರೆಸಿಕೊಂಡರು ಮಹಾ ಕವಿ

1981 ಅಕ್ಟೋಬರ್ ತಿಂಗಳಲ್ಲಿ ಆರೋಗ್ಯ ತುಂಬಾನೇ ಕೆಟ್ಟು ಬೇಂದ್ರೆಯವರು ಮುಂಬಯಿಯ ಹರಿಕಿಶನ್ ದಾಸ್ ಆಸ್ಪತ್ರೆಗೆ ಸೇರಿದ್ದರು. ಆಗಲೂ ಮಗ ವಾಮನ ಬೇಂದ್ರೆಯನ್ನು ಕರೆದು “ನಾನು ಇಲ್ಲಿರುವುದನ್ನು ಯಾರಿಗೂ ಹೇಳಬೇಡ. ನನ್ನನ್ನು ತುಂಬ ಜನ ನೋಡಲು ಬರುವುದು, ನನ್ನ ಸಹಾಯಕ್ಕೆ ಬರುವುದು ನನಗೆ ಬೇಕಿಲ್ಲ” ಎಂದಿದ್ದರು. ಅವರು ಮಗನನ್ನು ಹತ್ತಿರ ಕೂರಿಸಿಕೊಂಡು “ವಾಮನ, ನಾನಿನ್ನು ತೆರಳುವ ಕಾಲ ಬಂದಿದೆ. ನೀನು, ಮನೆಯವರು ಯಾರೂ ಅಳುವುದು ಬೇಡ. ನಾನು ಹೇಳಿದಂತೆ ಖಾಲಿ ಕಾಗದದಲ್ಲಿ ಬರೆದು ಸಹಿ ಹಾಕಿಕೊಡು” ಎಂದರು. ಮಗ ಒಪ್ಪಿ ಬರೆದು ಸಹಿ ಹಾಕಿ ಕೊಟ್ಟ ನಂತರವೇ ಅವರ ಪ್ರಾಣಪಕ್ಷಿ ಹೊರಟು ಹೋಯಿತು.

ಆ ಪತ್ರದಲ್ಲಿ ಏನಿತ್ತು?

ನಾನು ಸತ್ತ ನಂತರ ನನ್ನ ಹೆಸರಲ್ಲಿ ಯಾರಿಗೂ ಹಣ ಸಂಗ್ರಹ ಮಾಡಲು ಬಿಡಬೇಡ. ನೀನು ಯಾರಿಂದಲೂ ಧನಸಹಾಯ ಪಡೆಯಬೇಡ. ನನ್ನ ಮಾಸಾಶನ ಮತ್ತು ನಿನ್ನ ದುಡ್ಡಿನಿಂದ ನಮ್ಮ ಮನೆಯಲ್ಲಿ ನಿತ್ಯ ಸಾಹಿತ್ಯದ ಕಾರ್ಯ ನಡೆಯುವಂತೆ ನೋಡಿಕೊ!

ಇದು ಅವರ ಕೊನೆಯ ಮಾತು ಆಗಿತ್ತು. ಅಂತಹ ಸ್ವಾಭಿಮಾನಿ ಕವಿ 85 ವರ್ಷ ತೀವ್ರವಾದ ಬಡತನದಲ್ಲಿ ಬದುಕಿ ಕನ್ನಡವನ್ನು ಶ್ರೀಮಂತಗೊಳಿಸಿದರು ಅನ್ನುವಾಗ ಯಾವ ಕನ್ನಡಿಗನ ಎದೆ ಉಬ್ಬುವುದಿಲ್ಲ ಹೇಳಿ?

‘ನಾಕು ತಂತಿ’ಗೆ ಜ್ಞಾನಪೀಠ ಪ್ರಶಸ್ತಿ ದೊರಕಿ (1974) ಈ ವರ್ಷಕ್ಕೆ 50 ವರ್ಷ ತುಂಬುತ್ತಿದೆ. ಆ ನೆಪದಲ್ಲಿ ಆದರೂ ಅವರನ್ನು ದೊಡ್ಡದಾಗಿ ಸ್ಮರಿಸುವ ಕೆಲಸವನ್ನು ಸಾಹಿತ್ಯಿಕ ಸಂಸ್ಥೆಗಳು ಮಾಡಬೇಕು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪ್ರತಿಭೆಗಳು ಹಾವುಗಳ ಹಾಗೆ, ಯಾವುದೋ ಹುತ್ತದಲ್ಲಿ ಅಡಗಿರುತ್ತವೆ!

Exit mobile version