ನಾನು ಬಾಲ್ಯದಲ್ಲಿ ತುಂಬಾ ಕೇಳಿದ ಎರಡು ಭಜನೆಗಳು ಓಂಕಾರ ಪ್ರಧಾನ, ಮತ್ತು ಕೇಶವಾ ಮಾಧವ. ಅದನ್ನು ಲತಾ ಮಂಗೇಶ್ಕರ್ ಹಾಡಿದ್ದು ಎಂದು ಬಹಳ ಜನ ಬೆಟ್ ಕಟ್ಟುತ್ತಾ ಇದ್ದರು.ಆ ಧ್ವನಿಯಲ್ಲಿ ಲತಾಜಿ ಅವರ ಛಾಯೆಯು ಎದ್ದು ಕಾಣುತ್ತಿತ್ತು. ಆದರೆ ಅದನ್ನು ಹಾಡಿದ್ದು ಸ್ವರವಾರಿಧಿ ಸುಮನ್ ಕಲ್ಯಾಣಪೂರ್. ಅವರದ್ದು ದೈವಿಕವಾದ ಸ್ವರ ಸಂಪತ್ತು. ಗಂಧರ್ವ ಲೋಕದ ಧ್ವನಿ! Blessed Voice.
ಆಕೆ ಮೂಲತಃ ಉಡುಪಿ ಜಿಲ್ಲೆಯ ಹೆಮ್ಮಾಡಿಯವರು
ಅವರ ಪೂರ್ವಜರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿ ಎಂಬ ಪುಟ್ಟ ಊರಿಗೆ ಸೇರಿದವರು. ಅವರ ಶಾಲೆಯ ದಾಖಲೆಯಲ್ಲಿ ಸುಮನ್ ಹೆಮ್ಮಾಡಿ ಆಗಿದ್ದವರು ಮದುವೆಯ ನಂತರ ಸುಮನ್ ಕಲ್ಯಾಣಪೂರ್ ಆದರು. ಅವರದ್ದು ಸಾರಸ್ವತ ಕುಟುಂಬ. ಅವರ ತಂದೆ ಶಂಕರ ರಾವ್ ಅವರು ಡಾಕ್ಕಾದಲ್ಲಿ ಬ್ಯಾಂಕ್ ಉದ್ಯೋಗದಲ್ಲಿದ್ದರು. ಆ ಕಾಲದಲ್ಲಿ ಆ ನಗರವು ಭಾರತದಲ್ಲಿತ್ತು. ಸುಮನ್ ಹುಟ್ಟಿದ್ದು 1937 ಜನವರಿ 28ರಂದು. ಅವರ ತಂದೆಗೆ ಐದು ಹೆಣ್ಮಕ್ಕಳು. ಅದರಲ್ಲಿ ಸುಮನ್ ಹಿರಿಯರು. ಮಗಳಿಗೆ ಆರು ವರ್ಷ ಇರುವಾಗ ಅವರ ಹೆತ್ತವರು ಮುಂಬೈಗೆ ಬಂದರು. ಮಗಳಿಗೆ ಸಂಗೀತ ಮತ್ತು ಚಿತ್ರಕಲೆ ಎರಡರಲ್ಲೂ ಸಮಾನ ಆಸಕ್ತಿ ಇತ್ತು. ಬಾಲ್ಯದಲ್ಲಿ ಲತಾ ಅವರ ಹಾಡುಗಳನ್ನು ಹೆಚ್ಚು ಕೇಳಿದ ಕಾರಣ ಅವರ ಧ್ವನಿಯಲ್ಲಿ ಲತಾ ಪ್ರಭಾವ ಉಳಿದು ಹೋಯಿತು. ಅದು ಮುಂದೆ ಅವರಿಗೆ ವರ ಮತ್ತು ಶಾಪ ಎರಡೂ ಆಯಿತು!
ಲತಾ ಪ್ರಭಾವ ಅವರ ಧ್ವನಿಯಲ್ಲಿ ಉಳಿದು ಹೋಯಿತು
ಕೆಲವೊಮ್ಮೆ ನಮ್ಮಲ್ಲಿ ಅದ್ಭುತ ಪ್ರತಿಭೆ ಇದ್ದರೂ ಅದೃಷ್ಟ ಸರಿ ಇಲ್ಲದೆ ಹೋದಾಗ ನಮಗೆ ಸಿಗಬೇಕಾದ ಮನ್ನಣೆಗಳು ಸಿಗದೆ ಹೋಗಬಹುದು. ಸುಮನ್ ಜೀವನದಲ್ಲಿ ಕೂಡ ಹಾಗೇ ಆಯಿತು!
ಮನೆಯಲ್ಲಿ ಎಲ್ಲರೂ ಸಂಗೀತ ಪ್ರೇಮಿಗಳು. ಆದರೆ ವೇದಿಕೆಯ ಮೇಲೆ ಹಾಡಲು ಅವಕಾಶವೇ ಇರಲಿಲ್ಲ! ಅವರದು ಸಾಂಪ್ರದಾಯಕ ಕುಟುಂಬ.
ಹಾಗೆ ಗಣೇಶ ಮಂಡಲಗಳಲ್ಲಿ ಭಯದಿಂದ ಹಾಡಬೇಕಾಗುತ್ತಿತ್ತು. ಕೇಶವ್ ರಾವ್ ಭೋಲೆ ಎಂಬ ಗುರುವಿನಲ್ಲಿ ಸಂಗೀತ ಅಭ್ಯಾಸ ನಡೆಯುತ್ತಿತ್ತು. ಮೊದಲ ಬಾರಿ ಶುಕ್ರಾಚಿ ಚಾಂದನಿ ಎಂಬ ಮರಾಠಿ ಸಿನಿಮಾದಲ್ಲಿ ಹಾಡಲು ಅವಕಾಶ ಬಂದಾಗ ಮನೆಯಲ್ಲಿ ಸಣ್ಣ ಭೂಕಂಪವೇ ನಡೆಯಿತು. ಕೊನೆಗೆ ಹಠ ಮಾಡಿ, ಉಪವಾಸ ಕೂತ ನಂತರ ಅಪ್ಪ ಹೂಂ ಅಂದರು. ಹಾಡು ರೆಕಾರ್ಡ್ ಆಯ್ತು. ಆದರೆ ದುರದೃಷ್ಟ ನೋಡಿ, ಸಿನೆಮಾ ಬಿಡುಗಡೆ ಆದಾಗ ಆ ಹಾಡು ಕಟ್ ಆಗಿತ್ತು! ಮುಂದೆ ಮಂಗೂ ಎಂಬ ಮರಾಠಿ ಸಿನಿಮಾದಲ್ಲಿ ಮತ್ತೆ ಮೂರು ಹಾಡು ರೆಕಾರ್ಡ್ ಆಯ್ತು. ಚಿತ್ರ ಬಿಡುಗಡೆ ಆದಾಗ ಎರಡು ಹಾಡು ಕಟ್! ಈ ರೀತಿ ದುರದೃಷ್ಟ ಸುಮನ್ ಅವರಿಗೆ ತುಂಬಾ ಸಲ ಕಾಡಿತ್ತು. ಆದರೆ ಅವರು ಧೈರ್ಯ ಕೆಡಲಿಲ್ಲ. ಹಾಡುವುದನ್ನು ಬಿಡಲಿಲ್ಲ.
ದೈವದತ್ತವಾಗಿ ಬಂದ ಜೇನ್ ದನಿ
ಆದರೆ ಅವರಿಗೆ ದೈವದತ್ತವಾಗಿ ಬಂದ ಜೇನಿನ ಧ್ವನಿ, ಮೂರು ಸ್ಥಾಯಿಗಳಲ್ಲಿ ಆರಾಮವಾಗಿ ಸಂಚರಿಸುವ ಸ್ವರ ವೈವಿಧ್ಯ, ಶಾಸ್ತ್ರೀಯ ಸಂಗೀತದ ಗಟ್ಟಿ ಚೌಕಟ್ಟು ಇವೆಲ್ಲವೂ ಅವರನ್ನು ಮುಂದೆ ಸ್ವರವಾರಿಧಿಯನ್ನಾಗಿ ಮಾಡಿತು.
1954-1988ರ ಅವಧಿಯಲ್ಲಿ ಬಾಲಿವುಡ್ ಮತ್ತು ಮರಾಠಿ ಸಿನೆಮಾಗಳು ಅವರ ಮಾಧುರ್ಯಪೂರ್ಣ ಹಾಡುಗಳಿಂದ ಮಿಂದೆದ್ದವು!
ಹಾಡಿದ್ದು ಕಡಿಮೆ ಆದರೂ ಎಲ್ಲವೂ ಹಿಟ್
ಹಾಡಿದ ಹಾಡುಗಳು ತುಂಬಾ ಹೆಚ್ಚಲ್ಲ. ಆದರೆ ಎಲ್ಲವೂ ಗೋಲ್ಡನ್ ಹಿಟ್. ಅವರ ಧ್ವನಿಯನ್ನು ದೂರದಿಂದ ಕೇಳಿದಾಗ ಅದು ಲತಾ ಹಾಡಿದ್ದು ಎಂದು ಖಂಡಿತ ನಮಗೆ ಅನ್ನಿಸುತ್ತದೆ. ಈ ಪ್ರಭಾವವು ಅವರಿಗೆ ಮೂರು ರೀತಿಯಿಂದ ಲಾಭ ಕೊಟ್ಟಿತು.ಲತಾ ಬಿಝಿ ಇದ್ದಾಗ ಅಥವಾ ಅವರ ಫೀಸ್ ಜಾಸ್ತಿ ಅಂತ ಅನ್ನಿಸಿದಾಗ ಸಂಗೀತ ನಿರ್ದೇಶಕರು ಆ ಹಾಡುಗಳನ್ನು ಸುಮನ್ ಕೈಯ್ಯಲ್ಲಿ ಹಾಡಿಸಿದರು. ಅವರನ್ನು ‘ ಬಡವರ ಲತಾ’ ಎಂದು ಕರೆಯಲಾಯಿತು. ಇನ್ನೊಮ್ಮೆ ಮೊಹಮ್ಮದ್ ರಫಿ ಮತ್ತು ಲತಾ ನಡುವೆ ರಾಯಲ್ಟಿಯ ಸಮರ ಸ್ಫೋಟವಾಗಿ ಮಾತುಕತೆ ನಿಂತು ಹೋಗಿತ್ತು. ಆಗ ರಫಿ ಸುಮಾರು 170 ಡುಯೆಟ್ಗಳನ್ನು ಸುಮನ್ ಜೊತೆಗೆ ಹಾಡಿದರು. ಅವೆಲ್ಲವೂ ಹಿಟ್ ಆದದ್ದು ಹಿಂದಿ ಸಿನೆಮಾರಂಗದ ಅದೃಷ್ಟ. ಆದರೆ ಲತಾ ಮತ್ತು ಸುಮನ್ ಸಂಬಂಧ ಯಾವತ್ತೂ ಸುಮಧುರವಾಗಿ ಇತ್ತು. ಅವರಿಬ್ಬರು ಎರಡು ಡುಯಟ್ ಕೂಡ ಹಾಡಿದ್ದಾರೆ. ಲತಾ ಬಗ್ಗೆ ಸುಮನ್ ಅವರಿಗೆ ಇದ್ದ ಗೌರವ ಎಂದಿಗೂ ಕಡಿಮೆ ಆಗಲಿಲ್ಲ.
ಲತಾ ಸ್ವರ ಭೋರ್ಗರೆವ ಗಂಗಾ ನದಿ ಆದರೆ ಸುಮನ್ ಅವರದ್ದು ನಿಧಾನವಾಗಿ ಹರಿಯುವ ಯಮುನೆ. ಭಾವ ತೀವ್ರತೆ ಕಡಮೆ. ಆದರೆ ಮಾಧುರ್ಯದಲ್ಲಿ ಯಾರೂ ಕಡಿಮೆ ಅಲ್ಲ.
ಸುಮನ್ ಕನ್ನಡದಲ್ಲಿಯೂ ಹಾಡಿದ್ದಾರೆ
ಸುಮನ್ ಕನ್ನಡ ಸೇರಿದಂತೆ 10 ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲಿ ಹಾಡಿದ್ದು ‘ ಕಲಾವತಿ ‘ ಸಿನೆಮಾದ ಸಿನೆಮಾದ ‘ ಒಡನಾಡಿ ಬೇಕೆಂದು’ ಹಾಡು ಈಗ ಲಭ್ಯವಿದೆ.
ಮುಂಬೈಯ ಯಶಸ್ವಿ ಉದ್ಯಮಿ ರಮಾನಂದ್ ಕಲ್ಯಾಣಪೂರ್ ಅವರನ್ನು ಮದುವೆ ಆದ ನಂತರ ಸುಮನ್ ಅವರಿಗೆ ಪತಿಯ ಪೂರ್ಣ ಬೆಂಬಲ ಸಿಕ್ಕಿತು. ಆಕೆ ತುಂಬಾ ನಾಚಿಕೆ ಸ್ವಭಾವದವರು. ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಇದ್ದವರು. ಆಕೆಯ ಟಿವಿ ಸಂದರ್ಶನಕ್ಕೆ ತಾನು 45 ವರ್ಷಗಳ ಕಾಲ ಕಾಯಬೇಕಾಯಿತು ಎಂದು ಖ್ಯಾತ ನಿರೂಪಕ ಅಮೀನ್ ಸಾಯಾನಿ ಹೇಳಿದ್ದಾರೆ!
ಒಮ್ಮೆ HMV ಕಂಪೆನಿಯವರು 50 ಹಾಡುಗಳ ನಾಲ್ಕು ಕ್ಯಾಸೆಟ್ ಬಿಡುಗಡೆ ಮಾಡಿದ್ದರು. ಅದರಲ್ಲಿ ಸುಮನ್ ಅವರ ಏಳು ಹಾಡು ಇದ್ದವು. ಬೇರೆಲ್ಲ ಗಾಯಕರ ಫೋಟೋ ಹಾಕಿದ್ದರೂ ಸುಮನ್ ಫೋಟೋ ಇರಲಿಲ್ಲ. ಆಗಲೂ ಒಂದು ಶಬ್ದ ಕೂಡ ಮಾತಾಡದೆ ಸಿಟ್ಟಾದ ತನ್ನ ಗಂಡನಿಗೆ ‘ ಚೋಡ್ ದೀಜಿಯೆ’ ಅಂದಿದ್ದರು!
ಇನ್ನೊಂದು ಘಟನೆ ನಾನು ಹೇಳಬೇಕು.1980ರ ದಶಕದಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಸುಮನ್ ಅವರ ‘ನಾನಾ ಕರತೆ ಪ್ಯಾರ್ ತುಮ್ಹಿ ಸೇ ಕರ್ ಬೈಟೆ ‘ ಎಂಬ ಸೂಪರ್ ಹಿಟ್ ಹಾಡು ಪ್ರಸಾರವಾಗುತ್ತಿತ್ತು. ನಿರೂಪಕರು ತಪ್ಪಿ ಅದನ್ನು ಹಾಡಿದವರು ರಫಿ ಮತ್ತು ಲತಾ ಅಂದುಬಿಟ್ಟರು. ತಕ್ಷಣ 20 ವರ್ಷದ ಒಬ್ಬಳು ಹುಡುಗಿ ಪ್ರಸಾರ ಭಾರತಿಗೆ ಕಾಲ್ ಮಾಡಿ ಬೈದದ್ದೇ ಬೈದದ್ದು. ಆ ಹುಡುಗಿ ಬೇರೆ ಯಾರೂ ಅಲ್ಲ, ಸುಮನ್ ಮಗಳು ಚಾರೂಲ್!
ಸುಮನ್ ಹಾಡಿದ ಅನರ್ಘ್ಯ ಹಾಡುಗಳು
ಸುಮನ್ ಹಾಡಿದ ಸಾವಿರ ಸಾವಿರ ಹಾಡುಗಳಲ್ಲಿ ಎಲ್ಲವೂ ಉತ್ತಮವಾದ ಹಾಡುಗಳೇ. ಆದರೆ ನನಗೆ ಇಷ್ಟವಾದ ಕೆಲವು ಹಾಡುಗಳನ್ನು ಪಟ್ಟಿ ಮಾಡಿದ್ದೇನೆ.
1) ನಾ ತುಮ್ ಹಮೆ ಜಾನೋ ( ಬಾತ್ ಏಕ್ ರಾತ್ ಕಿ).
2) ದಿಲ್ ಏಕ್ ಮಂದಿರ್ ( ಶೀರ್ಷಿಕೆ ಗೀತೆ)
3) ಯೂನ್ ಹಿ ದಿಲ್ ನೆ ಚಾಹ ಥಾ ( ದಿಲ್ ತೋ ಹೈ)
4) ತುಮ್ನೆ ಪುಕಾರಾ ( ರಾಜಕುಮಾರ್)
5) ನಾ ನಾ ಕರ್ತೆ( ಜಬ್ ಜಬ್ ಫೂಲ್ ಖಿಲೆ)
6) ಆಜ್ ಕಲ್ ತೆರಿ ಮೇರಿ ( ಬ್ರಹ್ಮಚಾರಿ)
7) ಯೆ ಸಮಾ (ಸರ್ಫರೋಷ್)
ಇದನ್ನೂ ಓದಿ: ರಾಜಮಾರ್ಗ ಅಂಕಣ: ಆತ್ಮಾಹುತಿ ದಾಳಿಗೆ ಎದೆಕೊಟ್ಟು ಆಕೆ ಬಂಡೆಯಂತೆ ನಿಂತಿದ್ದರು!
ಸುಮನ್ ಅವರಿಗೆ ದೊರೆತಿವೆ ದೊಡ್ಡ ಪ್ರಶಸ್ತಿಗಳು
ಹಿಂದೀ ಸಿನೆಮಾದಲ್ಲಿ ಹಿನ್ನೆಲೆ ಗಾಯಕಿಗೆ ನೀಡುವ ‘ ಸುರ್ ಸಿಂಗಾರ ಸಂಸದ್’ ಪ್ರಶಸ್ತಿಯನ್ನು ಮೂರು ಬಾರಿ ಪಡೆದ ಏಕೈಕ ಗಾಯಕಿ ಅವರು. ಅವರಿಗೆ ತಾನ್ ಸೇನ್ ಪ್ರಶಸ್ತಿ ಕೂಡ ದೊರೆತಿದೆ. ಮಹಾರಾಷ್ಟ್ರ ಸರಕಾರವು ನೀಡುವ ‘ ಲತಾ ಮಂಗೇಷ್ಕರ್ ಪ್ರಶಸ್ತಿ’ ದೊರೆತಾಗ ಅದನ್ನು ಸ್ವೀಕರಿಸಿ ಅದು ಭಾರತರತ್ನ ಪ್ರಶಸ್ತಿಗೆ ಸಮ ಎಂದು ಅವರು ಹೇಳಿದ್ದರು.
ತಾನೇ ಬಿಡಿಸಿದ ಪೈಂಟಿಂಗ್ಸ್ ನಡುವೆ ತಾನೇ ಹಾಡಿದ ಹಾಡುಗಳನ್ನು ಗುನುಗುತ್ತ ಸ್ವರ ವಾರಿಧಿ ಇಂದು ಮುಂಬೈಯ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಈಗ 86 ವರ್ಷ.
ಅಂದ ಹಾಗೆ ಅವರಿಗೆ ಈ ವರ್ಷ ಜನವರಿ 26ರಂದು ಭಾರತ ಸರಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಶುಭಂ ಭೂಯಾತ್.