Site icon Vistara News

ರಾಜ ಮಾರ್ಗ ಅಂಕಣ : ರಾಕೆಟ್ರಿ ಎಂಬ ಅದ್ಭುತಕ್ಕೆ ರಾಷ್ಟ್ರಪ್ರಶಸ್ತಿ; ನಾವ್ಯಾಕೆ ಈ ಸಿನಿಮಾ ನೋಡಬೇಕು ಅಂದರೆ…?

Rocketry film

ರಾಕೆಟ್ರಿ – ನಂಬಿ ನಾರಾಯಣನ್ ಎಫೆಕ್ಟ್ (Rocketry – The Nambi Effect) ಎಂಬ ಅದ್ಭುತ ಸಿನೆಮಾಕ್ಕೆ ಈ ವರ್ಷ ರಾಷ್ಟ್ರಪ್ರಶಸ್ತಿಯು (69th National film awards) ದೊರೆತಿದೆ. ಇದು ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ರಾಷ್ಟ್ರಪ್ರೇಮದ ಸಿನಿಮಾ! ಒಬ್ಬ ಮಹಾನ್ ಬಾಹ್ಯಾಕಾಶ ವಿಜ್ಞಾನಿಯ (Space Scientist) ನಿಜ ಜೀವನದ ಹೋರಾಟದ ಕತೆ ಹೊಂದಿರುವ ಈ ಸಿನಿಮಾ ಕಳೆದ ವರ್ಷ ಜುಲೈ ತಿಂಗಳಲ್ಲಿ ದೇಶದಾದ್ಯಂತ ಬಿಡುಗಡೆ ಆಗಿದ್ದು ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಖ್ಯಾತ ತಮಿಳು ನಟ ಆರ್ ಮಾಧವನ್ (R Madhavan) ನಿರ್ಮಾಣ ಮಾಡಿ, ಕತೆ ಬರೆದು, ನಿರ್ದೇಶನ ಮಾಡಿರುವ ಈ ಹಿಂದೀ, ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಯ ಸಿನಿಮಾದಲ್ಲಿ ಅವರೇ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಯಾರು ಈ ನಂಬಿ ನಾರಾಯಣನ್?

ಅವರ ಕಥೆ ಕೇಳಿದರೆ ಖಂಡಿತ ನಮ್ಮ ರಕ್ತ ಬಿಸಿ ಆಗುತ್ತದೆ. ನಂಬಿ ನಾರಾಯಣನ್ (Space Scientist Nambi Narayanan) ತಮಿಳುನಾಡಿನ ಒಬ್ಬ ಪ್ರಸಿದ್ದ ಸ್ಪೇಸ್ ಸೈಂಟಿಸ್ಟ್‌. ಅವರು 1941ರ ಡಿಸೆಂಬರ್ 12ರಂದು ಜನ್ಮ ಪಡೆದರು. ಮುಂದೆ ಭಾರತದ ಶ್ರೇಷ್ಟ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿ (ಇಸ್ರೋ) ಬಹುದೀರ್ಘ ಕಾಲದ ಸೇವೆಯನ್ನು ಸಲ್ಲಿಸಿದವರು. ವಿಕ್ರಮ್ ಸಾರಾಭಾಯಿ, ಅಬ್ದುಲ್ ಕಲಾಂ, ಕಸ್ತೂರಿರಂಗನ್ ಅವರಂತಹ ಶ್ರೇಷ್ಠ ವಿಜ್ಞಾನಿಗಳ ಜೊತೆ ಕೆಲಸ ಮಾಡಿದವರು.

Madhavan and Nambi Narayanan

ದಕ್ಷಿಣ ಭಾರತದ ಅತ್ಯಂತ ಬೃಹತ್ತಾದ ಉಪಗ್ರಹ ಮತ್ತು ರಾಕೆಟ್ ಉಡಾವಣೆ ಕೇಂದ್ರವಾದ THUMBAದಲ್ಲಿ ವಿಶೇಷ ತಾಂತ್ರಿಕ ಸಲಹೆಗಾರರಾಗಿ ಕ್ರಯೋಜೆನಿಕ್ ಎಂಜಿನ್‌ ವಿಭಾಗದಲ್ಲಿ ಅವರು ಕೆಲಸ ಮಾಡಿದವರು. 40 ಮಂದಿ ಯುವ ವಿಜ್ಞಾನಿಗಳ ತಂಡವನ್ನು ಮುನ್ನಡೆಸಿದವರು. ನಂಬಿ ಸರ್ ಅವರೇ ರೂಪಿಸಿದ VIKAS ಎಂಬ ಹೆಸರಿನ ರಾಕೆಟ್ ಇಂಜಿನ್ ಸಾರ್ವತ್ರಿಕ ಮನ್ನಣೆಯನ್ನು ಪಡೆದಿತ್ತು. ರಾಕೆಟ್ ಉಡಾವಣೆಯಲ್ಲಿ ಅವರಿಗೆ ಇದ್ದ ಪ್ರೌಢಿಮೆಗೆ ಸ್ವತಃ ವಿಕ್ರಂ ಸಾರಾಭಾಯಿ ಬೆರಗಾಗಿದ್ದರು.

ಅಂತಹ ನಂಬಿ ನಾರಾಯಣನ್ ಸಂಚಿಗೆ ಬಲಿಯಾದರು!

ಅಂತಹ ಮಹಾನ್ ವಿಜ್ಞಾನಿ ನಿಜವಾಗಿಯೂ ದೇಶದ ಆಸ್ತಿ ಎಂದು ಸರಕಾರ ಗೌರವಿಸಬೇಕಿತ್ತು. ಆದರೆ ಆಗಿನ ಕೇರಳ ಸರಕಾರ ಮತ್ತು ಕೇಂದ್ರ ಸರಕಾರ ರೂಪಿಸಿದ ಷಡ್ಯಂತ್ರಕ್ಕೆ ಅವರು ಬಲಿ ಆದರು. 1994 ನವೆಂಬರ್ ತಿಂಗಳಲ್ಲಿ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಿ ಕೇರಳ ಸರಕಾರ ಅವರನ್ನು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ಅಟ್ಟಿತು!

ಅವರು ಭಾರತದ ರಾಕೆಟ್ ಇಂಜಿನಿನ ಚಿತ್ರಗಳನ್ನು ಇಬ್ಬರು ಮಾಲ್ಡೀವ್ ಮಹಿಳೆಯರ ಮೂಲಕ ನಮ್ಮ ಶತ್ರುದೇಶವಾದ ಪಾಕಿಸ್ತಾನಕ್ಕೆ ಮಾರಾಟ ಮಾಡಿದ್ದಾರೆ ಎಂಬುದು ಆರೋಪ. ಮಹಾನ್ ರಾಷ್ಟ್ರಪ್ರೇಮಿ ಆಗಿದ್ದ ನಂಬಿ ನಾರಾಯಣ್ ಸರ್ ಅವರು ಈ ಆರೋಪವನ್ನು ನಿರಾಕರಣೆ ಮಾಡಿ ಅದು ತನ್ನ ಸಾವಿಗೆ ಸಮ ಎಂದು ಹೇಳಿದರು.

ಸಿಬಿಐ ವಿಚಾರಣೆ ಎಂಬ ಕಪಟ ನಾಟಕ!

ಕೇರಳ ಸರಕಾರ ಅವರನ್ನು ವಿಚಾರಣೆಯ ನೆಪದಲ್ಲಿ ಜೈಲಿಗೆ ತಳ್ಳಿತು. 50 ದಿನ ಸಿಬಿಐ ಅವರನ್ನು ಮಾನಸಿಕವಾಗಿ ಮತ್ತು ದೈಹಿಕ ಹಿಂಸೆ ನೀಡಿ ಆರೋಪವನ್ನು ಒಪ್ಪಿಕೊಳ್ಳಲು ಒತ್ತಡ ಹಾಕಿತು. ಈ ದೇಶದ ಒಬ್ಬರು ಮಹಾನ್ ವಿಜ್ಞಾನಿ ತಾನು ಮಾಡದ ತಪ್ಪಿಗೆ ಪೊಲೀಸ್ ಲಾಠಿ ಏಟನ್ನು ತಿನ್ನಬೇಕಾದದ್ದು ಇತಿಹಾಸದ ಒಂದು ಕರಾಳವಾದ ಘಟನೆ. ಅದಕ್ಕಿಂತಲೂ ದಾರುಣ ಆದದ್ದು ಅವರ ಮೇಲೆ ಹೊರಿಸಿದ ದೇಶದ್ರೋಹದ ಆರೋಪ!

ಸಿಬಿಐ ಜಿದ್ದಿಗೆ ಬಿದ್ದವರಂತೆ ಅವರಿಗೆ ಹಿಂಸೆ ಕೊಟ್ಟಿತ್ತು. ಆಗ ಇಸ್ರೋ ಸಂಸ್ಥೆಯು ಕೂಡ ಅವರ ಸಹಾಯಕ್ಕೆ ಬರಲಿಲ್ಲ ಎನ್ನುವುದು ದುರಂತ! ಎರಡು ಸರಕಾರಗಳು ಅವರನ್ನು ಫುಟ್ ಬಾಲನ್ನು ಒದ್ದಂತೆ ಆಟ ಆಡಿಸಿದವು.

1996- ರಾಷ್ಟ್ರೀಯ ಮಾನವ ಹಕ್ಕು ಆಯೋಗ ಛೀಮಾರಿ!

ಈ ಮಧ್ಯೆ 1996ರಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆದಂತೆ ಕೇಂದ್ರ ಮಾನವ ಹಕ್ಕು ಆಯೋಗ ಮಧ್ಯೆ ಪ್ರವೇಶ ಮಾಡಿತು. ಎರಡೂ ಸರಕಾರಗಳಿಗೆ ಆಯೋಗವು ಛೀಮಾರಿ ಹಾಕಿ ವಿಜ್ಞಾನಿಯನ್ನು ತಕ್ಷಣ ಬಿಡುಗಡೆ ಮಾಡಲು ಆದೇಶ ನೀಡಿತು! ಅವರ ಮೇಲೆ ನಿರಾಧಾರವಾದ ಆರೋಪವನ್ನು ಹೊರಿಸಿ ಅವರ ಕೆರಿಯರ್ ಪೂರ್ತಿ ನಾಶ ಮಾಡಿದ್ದಕ್ಕೆ ಮತ್ತು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟದ್ದಕ್ಕೆ ಕೇರಳದ ಸರಕಾರವು ಅವರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿ ಕ್ಷಮೆ ಯಾಚನೆ ಮಾಡಬೇಕು ಎಂದು ಆದೇಶವನ್ನು ನೀಡಿತು. ಕೇರಳ ಹೈಕೋರ್ಟ್ ಪುನಃ ಆದೇಶ ಹೊರಡಿಸಿ ಹತ್ತು ಲಕ್ಷ ಪರಿಹಾರವನ್ನು ನೀಡಲು ಕೇರಳ ಸರಕಾರವನ್ನು ತಾಕೀತು ಮಾಡಿತು. ಆದರೆ ಕೇರಳ ಸರಕಾರ ಹತ್ತಾರು ನೆಪಗಳನ್ನು ಮುಂದಿಟ್ಟು ಕ್ಷಮೆ ಕೇಳಲೇ ಇಲ್ಲ ಮತ್ತು ಪರಿಹಾರ ಧನವನ್ನು ಕೂಡ ನೀಡಲಿಲ್ಲ. ತನ್ನ ಮೇಲೆ ಹೇರಿದ್ದ ಸುಳ್ಳು ಆರೋಪದ ಕಹಿಯನ್ನು ಜೀರ್ಣಿಸಲು ಆಗದೆ ನಂಬಿ ನಾರಾಯಣ ಸರ್ ಅವರು ಕೊರಗಿ 2001ರಲ್ಲಿ ನಿವೃತ್ತಿ ಆದರು.

27 ವರ್ಷಗಳ ನಂತರ ಅವರಿಗೆ ನ್ಯಾಯ ಸಿಕ್ಕಿತು!

ನಿವೃತ್ತಿ ಆಗಿ 18 ವರ್ಷಗಳ ನಂತರ ನಂಬಿ ಸರ್ ಅವರಿಗೆ ಈಗಿನ ಕೇಂದ್ರ ಸರಕಾರವು ಗೌರವಿಸಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ. ಮುಚ್ಚಿ ಹೋಗಿದ್ದ ಫೈಲನ್ನು ಮತ್ತೆ ತೆರೆದು ಸಿಬಿಐ ತನಿಖೆಗೆ ಒಳಪಡಿಸಿ ಅವರು ಪೂರ್ತಿಯಾಗಿ ನಿರಪರಾಧಿ ಎಂದು ತೀರ್ಪು ದೊರೆತಿದೆ. ಅಂತೂ 27 ವರ್ಷಗಳ ಸುದೀರ್ಘ ಕಾನೂನು ಸಮರವು ಮುಗಿದು ಒಬ್ಬ ಮಹಾನ್ ವಿಜ್ಞಾನಿಗೆ ಸಿಗಲೆ ಬೇಕಾಗಿದ್ದ ನ್ಯಾಯವು ಸಿಕ್ಕಿತು ಅನ್ನುವುದೇ ಖುಷಿಯ ವಿಚಾರ!

ರಾಕೆಟ್ರಿ – ದ ನಂಬಿ ಎಫೆಕ್ಟ್ ಎಪಿಕ್ ಸಿನಿಮಾ! ನಾವೇಕೆ ಅದನ್ನು ನೋಡಬೇಕು?

ಅದೇ ಮಹಾನ್ ವಿಜ್ಞಾನಿಯು ಮಾಡಿದ ಹೋರಾಟ, ಅವರಿಗೆ ಎರಡು ಸರಕಾರಗಳು ಮಾಡಿದ ಅನ್ಯಾಯಗಳು, ಕೊನೆಗೆ ಅವರಿಗೆ ನ್ಯಾಯವು ದೊರೆತು ಅಪವಾದದ ಗ್ರಹಣ ಮೋಕ್ಷವಾದ ಕತೆಯನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ರೂಪಿಸಲಾಗಿದೆ. ಈ ಸಿನೆಮಾ ಅನೇಕ ಅಪ್ರಿಯ ಸತ್ಯಗಳನ್ನು ನಿಮ್ಮ ಮುಂದೆ ಇರಿಸುತ್ತದೆ. ಆಗಿನ ಸರಕಾರಗಳು ಯಾಕೆ ಅವರ ಮೇಲೆ ಷಡ್ಯಂತ್ರ ರೂಪಿಸಿದವು? ಎಂಬುದನ್ನು ತಿಳಿಯಲು ನೀವು ಆ ಸಿನಿಮಾ ನೋಡಬೇಕು. ನಮ್ಮಲ್ಲಿ ಒಂದಿಷ್ಟಾದರೂ ರಾಷ್ಟ್ರಪ್ರೇಮ, ಸ್ವಾಭಿಮಾನಿಗಳು ಉಳಿದಿವೆ ಎಂದಾದರೆ ನಮ್ಮ ರಕ್ತವು ಕುದಿಯುವುದು ಖಂಡಿತ!

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಜೈಹೋ ಇಸ್ರೋ; 4 ವರ್ಷದ ಹಿಂದೆ ಸುರಿದ ಕಣ್ಣೀರಿಗೆ ಈಗ ಸಿಕ್ಕಿದೆ ನಿಜವಾದ ಸಾಂತ್ವನ!

ಅದು ಪೂರ್ತಿ ಮಾಧವನ್ ಫಿಲ್ಮ್!

ಶ್ರೇಷ್ಠ ನಟ ಆರ್ ಮಾಧವನ್ ಈ ಸಿನಿಮಾದ ಕತೆ ಬರೆದು ನಿರ್ದೇಶನ ಮಾಡಿ ನಿರ್ಮಾಣ ಕೂಡ ಮಾಡಿದ್ದಾರೆ. ಅವರೇ ಇಲ್ಲಿ ನಂಬಿ ನಾರಾಯಣ್ ಸರ್ ಆಗಿದ್ದಾರೆ. ಸ್ವತಃ ನಂಬಿ ಸರ್ ಈ ಸಿನಿಮಾ ನೋಡಿ ಕಣ್ಣೀರು ಸುರಿಸಿದ್ದಾರೆ! ನಂಬಿ ಸರ್ ಜೊತೆಗೆ ಬರುವ ವಿಕ್ರಂ ಸಾರಾಭಾಯಿ, ಅಬ್ದುಲ್ ಕಲಾಂ, ಕಸ್ತೂರಿ ರಂಗನ್ ಮೊದಲಾದ ವಿಜ್ಞಾನಿಗಳು ನಮಗೆ ಈ ಸಿನಿಮಾದಲ್ಲಿ ಸ್ಮರಣೀಯವಾದ ಅನುಭವ ನೀಡುತ್ತಾರೆ.

ಸಂಕಷ್ಟದ ಸಮಯದಲ್ಲಿ ಅವರ ಕುಟುಂಬವು ಅವರನ್ನು ಹೇಗೆ ಸಪೋರ್ಟ್ ಮಾಡಿತು ಎಂದು ತಿಳಿಯಲು ನೀವು ಈ ಸಿನಿಮಾ ನೋಡಬೇಕು. ಅದಕ್ಕಿಂತ ಹೆಚ್ಚಾಗಿ ಒಬ್ಬ ಶ್ರೇಷ್ಠ ವಿಜ್ಞಾನಿಯು ತಾನು ಮಾಡದೆ ಇದ್ದ ತಪ್ಪಿಗೆ ದೈಹಿಕವಾಗಿ ಏಟು ತಿನ್ನುವ ಮತ್ತು ಹಿಂಸೆಗೆ ಒಳಗಾಗುವ ದೃಶ್ಯಗಳು, ನಮಗೆ ಕಣ್ಣೀರು ತರಿಸುತ್ತವೆ. ರಕ್ತವನ್ನು ಬಿಸಿ ಮಾಡುತ್ತವೆ. ಆರ್ ಮಾಧವನ್ ಈ ಸಿನಿಮಾಕ್ಕಾಗಿ ತನ್ನ ಜೀವನದ ಐದು ಅಮೂಲ್ಯ ವರ್ಷಗಳನ್ನು ಮೀಸಲು ಇಟ್ಟದ್ದು ಸಾರ್ಥಕವೇ ಆಗಿದೆ. ಅಂತಹ ರಾಕೆಟ್ರಿ ಸಿನೆಮಾಕ್ಕೆ ನಿನ್ನೆ 2022ರ ಅತ್ಯುತ್ತಮ ಸಿನೆಮಾ ರಾಷ್ಟ್ರಪ್ರಶಸ್ತಿಯು ಘೋಷಣೆ ಆಗಿದೆ. ಅಭಿನಂದನೆ ಮಾಧವನ್ ಮತ್ತು ಅವರ ತಂಡಕ್ಕೆ.

Exit mobile version