Site icon Vistara News

ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿದೆ!

Rajamarga Column

Rajamarga Column

ಮನೆಯೊಳಗೆ ಆಕೆಯನ್ನು ಎಲ್ಲರೂ ಅತ್ತಿಗೆ, ಮಾಮಿ, ಅಕ್ಕ ಎಂದೆಲ್ಲ ಕರೆಯುತ್ತಾರೆ. ಆಕೆಯ ಮಕ್ಕಳು ಅಮ್ಮ ಎಂದು ಕರೆಯುತ್ತಾರೆ. ಮೊಮ್ಮಕ್ಕಳು ಅಜ್ಜಿ ಎನ್ನುತ್ತಾರೆ. ಮೊಮ್ಮಕ್ಕಳ ಗೆಳೆಯರು ಮನೆಗೆ ಬಂದರೆ ಅವರೂ ಕೂಡ ಅಜ್ಜಿ ಎನ್ನುತ್ತಾರೆ. ಹೊರಗಿಂದ ಯಾರು ಬಂದರೂ ಆಕೆಯನ್ನು ಆಂಟಿ ಎಂದೇ ಕರೆಯುತ್ತಾರೆ. ಕೈ ಹಿಡಿದ ಗಂಡ ಆಕೆಯನ್ನು ‘ಓ ಇವಳೇ’ ಎಂದು ಕರೆಯುತ್ತಾನೆ. ಮನೆಯ ಹೊರಗೆ ಬಂದರೆ ಅಲ್ಲಿ ಕೂಡ ಆಕೆಯು ಇಂತವನ ಹೆಂಡತಿ ಎಂದೇ ರಿಜಿಸ್ಟರ್ ಆಗಿದ್ದಾಳೆ. ಅವಳಿಗೆ ತನ್ನ ಸ್ವಂತ ಹೆಸರೇ ಮರೆತು ಹೋಗಿದೆ! ಅವಳಿಗೆ ಸ್ವಂತ ಐಡೆಂಟಿಟಿ ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿವೆ.

ಆಕೆಯ ಬಾಲ್ಯವೂ ಹಾಗೇ ಇತ್ತು!

ಆಕೆ ಮೊದಲ ಬಾರಿಗೆ ಕಣ್ಣು ತೆರೆದು ಈ ಜಗತ್ತಿಗೆ ಬಂದಾಗ ಕೇಳಿದ ಮೊದಲ ಉದ್ಗಾರ – ಛೇ! ಈ ಬಾರಿಯೂ ಹೆಣ್ಣು! ಆಗ ಅದು ಅವಳಿಗೆ ಅರ್ಥ ಆಗದ ವಯಸ್ಸು.

ಅವಳನ್ನು ತೊಟ್ಟಿಲಲ್ಲಿ ಮಲಗಿಸಿ ಆಕೆಯ ಕಿವಿಯಲ್ಲಿ ಯಾವುದೋ ಒಂದು ಹೆಸರನ್ನು ಹೆತ್ತವರು ಉಸಿರಿದ್ದರು. ಅದೂ ಅವಳಿಗೆ ನೆನಪಿಲ್ಲ. ಮನೆಯವರು ಅಪ್ಪ, ಅಮ್ಮ ಎಲ್ಲರೂ ಆಕೆಯನ್ನು ಪೂರ್ತಿ ಹೆಸರಿನಿಂದ ಕರೆದದ್ದು ಇಲ್ಲವೇ ಇಲ್ಲ. ಅಮ್ಮಿ, ಅಮ್ಮು, ಪುಟ್ಟಿ, ಚಿನ್ನು ಹೀಗೆ ತರಹೇವಾರಿ ಹೆಸರುಗಳು. ಮನೆಯಲ್ಲಿ ತುಂಬಾ ಹೆಣ್ಣು ಮಕ್ಕಳಿದ್ದ ಕಾರಣ ಆಕೆಗೇ ಕೆಲವು ಬಾರಿ ಗೊಂದಲ ಆದದ್ದು ಇದೆ.

ಶಾಲೆಯಲ್ಲಿಯೂ ಆಕೆಗೆ ಐಡೆಂಟಿಟಿ ಇರಲಿಲ್ಲ!

ಶಾಲೆಗೆ ಸೇರಿಸುವಾಗ ಯಾವುದೋ ಒಂದು ಹೆಸರು ಇಟ್ಟಿದ್ದರು. ಆದರೆ ಆ ಹೆಸರು ಶಾಲೆಯಲ್ಲಿ ಬಳಕೆ ಆದದ್ದು ಕಡಿಮೆ. ಹಾಜರಿ ಕರೆಯುವಾಗ ಟೀಚರ್ ನಂಬರ್ ಕರೆಯುತ್ತಿದ್ದರು. ಪೇಪರ್ ಕೊಡುವಾಗಲೂ ನಂಬರ್. ಅಸೆಂಬ್ಲಿಯಲ್ಲಿಯೂ ನಂಬರ್. ಅಲ್ಲಿ ಕೂಡ ಟೀಚರ್ ಇಂತವರ ಮಗಳು, ಇಂತವರ ತಂಗಿ ಎಂದು ಪರಿಚಯ ಮಾಡುತ್ತಿದ್ದರು. ಸ್ಪರ್ಧೆಗೆ ಹೆಸರು ಕೊಟ್ಟಾಗಲೂ ನಂಬರ್ ಕರೆಯುತ್ತಿದ್ದರು. ಆಕೆಯು ಅವಳ ಅಣ್ಣನಷ್ಟು, ಅಕ್ಕನಷ್ಟು ಪ್ರತಿಭಾವಂತೆ ಆಗಿರಲಿಲ್ಲ. ಮಾರ್ಕ್ಸ್ ಕಡಿಮೆ ಬಂದಾಗ ಶಿಕ್ಷಕರು ‘ ನಿನಗೆ ಅಣ್ಣನಷ್ಟು ಯಾಕೆ ಮಾರ್ಕ್ ಬಂದಿಲ್ಲ? ಅಕ್ಕನ ಹಾಗೆ ಯಾಕೆ ಮಾರ್ಕ್ ಬರೋದಿಲ್ಲ?’ ಎಂದು ಕೇಳಿದಾಗ ಆಕೆಗೆ ಸಿಟ್ಟು ಬರುತ್ತಿತ್ತು. ‘ನಾನು ನಾನೇ ‘ ಎಂದು ಕಿರುಚಿ ಹೇಳಬೇಕು ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಆದರೆ ಆಗುತ್ತಲೇ ಇರಲಿಲ್ಲ. ಆಗಲೇ ಆಕೆಯು ಐಡೆಂಟಿಟಿ ಕಳೆದುಕೊಂಡಾಗಿತ್ತು.

ಮುಂದೆ ಹೈಸ್ಕೂಲಗೆ ಬಂದಾಗಲೂ ಐಡೆಂಟಿಟಿ ಇರಲಿಲ್ಲ!

ಹೈಸ್ಕೂಲ್ ವಿದ್ಯಾಬ್ಯಾಸಕ್ಕೆ ಬಂದಾಗ ಇನ್ನೂ ಕೆಲವು ಕಿರುಕುಳ ಆರಂಭ ಆದವು. ಮೂರು ದಿನ ಹೊರಗೆ ಕೂರಲೇಬೇಕು ಎಂದು ಅಮ್ಮ ಅಪ್ಪಣೆ ಕೊಡಿಸಿದರು. ಆಗ ಶಾಲೆಗೆ ಬಂದಾಗಲೂ ಆಕೆ ಮೈಯನ್ನು ಮುದ್ದೆ ಮಾಡಿ ಕುಳಿತುಕೊಳ್ಳುತ್ತಿದ್ದಳು. ಆಗೆಲ್ಲ ಕೀಳರಿಮೆ ಹೆಚ್ಚಾಯಿತು. ಭಯ ಹೆಚ್ಚಾಯಿತು. ಮಾರ್ಕ್ ಮತ್ತೂ ಕಡಿಮೆ ಆಯಿತು.

ಒಮ್ಮೆ ಒಬ್ಬ ಓರಗೆಯ ಹುಡುಗ ಟಿಫಿನ್ ಬಾಕ್ಸನಲ್ಲಿ ಒಂದು ಲವ್ ಲೆಟರ್ ಇಟ್ಟು ಪ್ರೀತಿ ಮಾಡುತ್ತಿಯಾ? ಎಂದು ಬರೆದಿದ್ದ. ಆಗ ಇನ್ನೂ ಭಯ ಹೆಚ್ಚಾಯಿತು. ಮದುವೆ ಆಗ್ತೀಯಾ ಎಂದು ಕೇಳಿದಾಗ ಅವನು ‘ಅದೆಲ್ಲ ಬೇಡ, ಪ್ರೀತಿ ಮಾತ್ರ ಮಾಡೋಣ’ ಅಂದನು. ಆಕೆಗೆ ಅದೆಲ್ಲ ಅರ್ಥ ಆಗಲಿಲ್ಲ. ಮನೆಗೆ ಬಂದಾಗ ಅಮ್ಮ ಪ್ರತೀ ದಿನ ಆಕೆಯ ಶಾಲೆಯ ಬ್ಯಾಗ್ ಚೆಕ್ ಮಾಡುತ್ತಾ ಇದ್ದರು. ಪ್ರತಿಭಟಿಸಬೇಕು ಅನ್ನಿಸಿದರೂ ಆಕೆಗೆ ಧ್ವನಿಯೇ ಬರಲಿಲ್ಲ.

ಆಕೆಯ ತಿಂಗಳ ಆ ಡೇಟ್ ಆಕೆಗೆ ಮರೆತು ಹೋದರೂ ಅಮ್ಮನಿಗೆ ನೆನಪು ಇರುತ್ತಿತ್ತು. ಆಕೆಯ ತಂಗಿ, ತಮ್ಮ ಕೂಡ ಆಕೆಯ ಮೇಲೆ ಡಾಮಿನೇಟ್ ಮಾಡ್ತಾ ಇದ್ದರು. ಆಕೆಗೆ ಸ್ವಾಭಿಮಾನ ಎಂಬ ಶಬ್ದದ ಅರ್ಥವೇ ಮರೆತುಹೋಗಿತ್ತು.

ಕಡಿಮೆ ಮಾರ್ಕ್ ಬಂದ ಕಾರಣ ಆಕೆಯು ಕಾಲೇಜು ಮೆಟ್ಟಲು ಹತ್ತಲಿಲ್ಲ. ‘ಗಂಡನ ಮನೆಗೆ ಹೋದ ನಂತರ ಅಡುಗೆ ಮಾಡಬೇಕಲ್ಲ’ ಎಂದು ಅಮ್ಮ ಅದನ್ನೇ ಚಂದ ಮಾಡಿ ಕಲಿಸಿದರು. ಮನೆಯ ನಾಲ್ಕು ಕೋಣೆಗಳ ನಡುವೆ ಆಕೆಯ ಧ್ವನಿ ಮತ್ತು ಐಡೆಂಟಿಟಿಗಳು ಉಸಿರುಗಟ್ಟುತ್ತಿದ್ದವು.

ಮದುವೆಯ ನಂತರ…

ಮದುವೆಯ ನಂತರ ಆಕೆಗೆ ಇನ್ನೂ ಕೆಲವು ಐಡೆಂಟಿಟಿಗಳು ಸೇರಿದವು. ಇಂತವನ ಹೆಂಡತಿ, ಇಂತವನ ಅತ್ತಿಗೆ, ಇಂತವರ ಸೊಸೆ, ಇಂತವರ ತಾಯಿ, ಇಂತವರ ನಾದಿನಿ… ಹೀಗೆ! ಅಲ್ಲಿಯೂ ಯಾರೂ ಆಕೆಯ ಹೆಸರು ಹಿಡಿದು ಕರೆಯಲಿಲ್ಲ. ಸಂಪ್ರದಾಯಸ್ಥರ ಮನೆ ಎಂಬ ನೆಪದಲ್ಲಿ ತಿಂಗಳ ಮೂರು ದಿನ ಹೊರಗೆ ಕುಳಿತುಕೊಳ್ಳುವುದು ತಪ್ಪಲಿಲ್ಲ. ಚಂದ ಅಡುಗೆ ಮಾಡ್ತೀ ಎಂಬ ಪ್ರಶಸ್ತಿ ಕೊಟ್ಟು ಆಕೆಯನ್ನು ಅಡುಗೆ ಮನೆಯ ಮಹಾರಾಣಿ ಮಾಡಿಬಿಟ್ಟರು. ಅನ್ನಪೂರ್ಣೆ ಎಂಬ ಬಿರುದು ಆಕೆಗೆ ಮುಳ್ಳಿನ ಕಿರೀಟ ಆಗಿ ಬಿಟ್ಟಿತು. ಇಡೀ ದಿನ ಊಟ, ತಿಂಡಿ, ಪಾತ್ರೆ, ಬಟ್ಟೆ, ಒಂದೆರಡು ನೆಂಟರು, ಹಬ್ಬಗಳು, ಮದುವೆ, ಮುಂಜಿ, ಗೃಹ ಪ್ರವೇಶ ಇಷ್ಟರಲ್ಲಿ ಆಕೆಯ ದಿನಚರಿಯು ಮುಗಿದು ಹೋಗುತ್ತಿತ್ತು. ಒಂದೆರಡು ಧಾರಾವಾಹಿಗಳು ಸ್ವಲ್ಪ ರಿಲೀಫ್ ಕೊಡುತ್ತಿದ್ದವು. ಆಗೆಲ್ಲ ನನ್ನ ಬದುಕು ಧಾರಾವಾಹಿಗಳ ಕಥೆಯ ಹಾಗೆ ಇಲ್ಲವಲ್ಲ ಎಂಬ ದುಃಖವೂ ಆಕೆಗೆ ಆಗುತ್ತಿತ್ತು.

ಈಗಲೂ ಆಕೆಗೆ ಐಡೆಂಟಿಟಿ ಇಲ್ಲ!

ಮೊಮ್ಮಕ್ಕಳು ಅಜ್ಜಿ ಅಂತ ಕರೆದು ತಿಂಡಿಗಾಗಿ ಓಡಿ ಬರುತ್ತಾರೆ. ಈ ಪಾಠ ಹೇಳಿಕೊಡು, ಈ ಪಾಠ ಹೇಳಿಕೊಡು ಎಂದು ದುಂಬಾಲು ಬೀಳುತ್ತಾರೆ. ಆಗ ಆಕೆಗೆ ಅರ್ಥ ಆಗದೆ ಹೋದಾಗ ‘ ಏನಜ್ಜಿ? ನಿನಗೆ ಏನೂ ಗೊತ್ತಿಲ್ಲ. ಹೋಗಜ್ಜಿ’ ಎಂದು ಅಣಕಿಸಿದಾಗ ನೋವಾಗುತ್ತದೆ. ನೆರೆಹೊರೆಯವರ ಜೊತೆಗೆ ಮಾತಿಗೆ ನಿಂತರೆ ಸಿನೆಮಾ, ಗಾಸಿಪ್, ಫ್ಯಾಷನ್ ಎಂದೆಲ್ಲ ಮಾತಾಡುತ್ತಾರೆ. ಆಗೆಲ್ಲ ಆಕೆಯ ಅಜ್ಞಾನವು ಆಕೆಯನ್ನು ಅಣಕಿಸುತ್ತದೆ. ಆಕೆ ಈಗ ಮನೆಯಿಂದ ಹೊರಗೆ ಹೋಗೋದನ್ನು ಬಿಟ್ಟಿದ್ದಾರೆ. ತವರು ಮನೆಗೆ ಹೋಗದೆ ಎಷ್ಟೋ ವರ್ಷಗಳು ಕಳೆದಿವೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ

ಆಕೆಯ ಗಂಡ ವಿ ಆರ್ ಎಸ್ ತೆಗೆದುಕೊಂಡು ಮನೆಯಲ್ಲಿಯೇ ಇದ್ದಾರೆ. ಪ್ರತೀ ಅರ್ಧ ಘಂಟೆಗೆ ಒಮ್ಮೆ ‘ ಓ ಇವಳೇ, ಟೀ ಮಾಡಿ ಕೊಡು’ ಎಂದು ಕರೆಯುತ್ತಲೆ ಇರುತ್ತಾರೆ. ಮಗ, ಸೊಸೆ ಸಂಜೆ ಆಫೀಸ್ ಮುಗಿಸಿ ಬಂದು ಲ್ಯಾಪ್ ಟಾಪ್ ಕುಟ್ಟುತ್ತಾ ಕೂರುತ್ತಾರೆ. ಮೊಮ್ಮಕ್ಕಳು ಹೊಮ್ ವರ್ಕ್, ಪ್ರಾಜೆಕ್ಟ್, ವಿಡಿಯೋ ಗೇಮ್ ಎಂದು ಮುಳುಗಿರುತ್ತಾರೆ.

ಆಕೆ ಇವತ್ತಿನ ಊಟ, ತಿಂಡಿಯ ಮೆನು ಮುಗಿಯಿತು, ನಾಳೆ ಎಂತ ಮಾಡುವುದು ಎಂದು ಲೆಕ್ಕ ಹಾಕುತ್ತ ತಡರಾತ್ರಿ ಹಾಸಿಗೆಗೆ ಒರಗುತ್ತಾರೆ.

ಆಗಲೂ ಆಕೆಗೆ ಕಾಡುವ ಪ್ರಶ್ನೆ – ನಾನು ಯಾರು?

Exit mobile version