Site icon Vistara News

ರಾಜಮಾರ್ಗ ಅಂಕಣ: ವಿಶ್ವ ಪರಿಸರ ದಿನ; ಗಮನಿಸಿ, ಇವುಗಳು ಬೆಚ್ಚಿ ಬೀಳಿಸುವ ಅಂಶಗಳು!

Rajamarga Ankana

Rajamarga Column: Today Is Environment Day, What Should we know

ಈಗ ಎಚ್ಚರ ಆಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!

ಜಗತ್ತಿನ ಮೊದಲ ಹತ್ತು ಅತೀ ಪರಿಸರ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಭಾರತದ ಏಳು ನಗರಗಳು ಇವೆ!

ರಾಜಧಾನಿ ದೆಹಲಿಯು ವಾಸಿಸಲು ಯೋಗ್ಯವಲ್ಲದ ನಗರ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಣೆ ಮಾಡಿದೆ!

ಭಾರತದ ಹತ್ತು ಮಂದಿಯಲ್ಲಿ ಕನಿಷ್ಠ ನಾಲ್ಕು ಮಂದಿಗೆ ಉಸಿರಾಟದ ತೀವ್ರ ಸಮಸ್ಯೆ ಇದೆ!

ಪರಿಸರ ಹಾನಿಯ ಕಾರಣದಿಂದ ಮನುಷ್ಯನ ಒಟ್ಟಾಯುಷ್ಯ ಎರಡೂವರೆ ವರ್ಷ ಕಡಿಮೆ ಆಗುತ್ತಾ ಇದೆ!

ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿ ಭಾರತದಲ್ಲಿ ವರ್ಷಕ್ಕೆ ಕನಿಷ್ಟ ಎಂದರೂ ಎರಡೂವರೆ ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ!

ಈ ಅಂಶಗಳು ಖಂಡಿತವಾಗಿ ನಮ್ಮನ್ನು ಬೆಚ್ಚಿ ಬೇಳಿಸುತ್ತವೆ!

ಇದಕ್ಕೆ ಕಾರಣಗಳು ಏನು?

ಹಸಿರು ಮರಗಳ ನಾಶ ಒಂದು ಪ್ರಮುಖ ಕಾರಣ ಆಗಿದೆ. ಆದರೆ ಅದಕ್ಕಿಂತ ಪ್ರಮುಖವಾದ ಕಾರಣ ಎಂದರೆ ನಾವು ಅತಿಯಾಗಿ ಬಳಸುವ ಫಾಸಿಲ್ ಇಂಧನಗಳು. ಕಲ್ಲಿದ್ದಲ್ಲು, ಮೀಥೆನ್, ಪೆಟ್ರೋಲ್, ಡೀಸೆಲ್ ಇವುಗಳು ಪ್ರಮುಖವಾದ ಫಾಸಿಲ್ ಇಂಧನಗಳು.

ಫಾಸಿಲ್ ಇಂಧನಗಳ ಮೇಲೆ ಹೆಚ್ಚು ಅವಲಂಬನೆ!

ಜಗತ್ತಿನ ಒಟ್ಟು ಶಕ್ತಿ ಪೂರೈಕೆಯಲ್ಲಿ ಫಾಸಿಲ್ ಇಂಧನಗಳ ಬಳಕೆ 65% ಇದೆ. ಅದರಲ್ಲಿ ಕಲ್ಲಿದ್ದಲ್ಲು ಬಳಕೆಯೇ 36% ಇದೆ. ನೈಸರ್ಗಿಕ ಅನಿಲಗಳಿಂದ 23%, ಪೆಟ್ರೋಲ್ ಮತ್ತು ಡೀಸೆಲಗಳಿಂದ 3% ಇಂಧನ ಪೂರೈಕೆಯು ಆಗುತ್ತಿದೆ. ಇವೆಲ್ಲವೂ ಅಪಾಯಕಾರಿಗಳೇ ಆಗಿವೆ. ಅದರಲ್ಲಿ ಕೂಡ ಕಲ್ಲಿದ್ದಲ್ಲು ಉರಿಸುವುದರಿಂದ ಹಾನಿ ಹೆಚ್ಚು. ಅದರಲ್ಲಿ ಕೂಡ ಹೆಚ್ಚು ಕಾರ್ಬನ್ ಅಂಶ ಇರುವ ಆಂತ್ರಾಸೈಟ್ ಎಂಬ ಕಲ್ಲಿದ್ದಲು ಉರಿಸುವುದರಿಂದ ಪರಿಸರಕ್ಕೆ ಹಾನಿ ಅತೀ ಹೆಚ್ಚು!

ಭಾರತದ ಉಷ್ಣ ವಿದ್ಯುತ್ ಸ್ಥಾವರಗಳು ಉರಿಸುತ್ತಿರುವುದು ಅದೇ ಅಂತ್ರಾಸೈಟ್ ಕಲ್ಲಿದ್ದಲ್ಲನ್ನು! ಅದಕ್ಕೆ ಅವರು ಕೊಡುವ ಕಾರಣ ಖರ್ಚು ಉಳಿಸಲು ಎಂದು. ಶುದ್ಧ ಪರಿಸರವು ಅವರ್ಯಾರ ಕಾಳಜಿಯೂ ಅಲ್ಲ!

ವಾತಾವರಣಕ್ಕೆ ಸೇರುತ್ತಿವೆ ಅಗಾಧವಾದ ಶಾಖ ವರ್ಧಕ ಅನಿಲಗಳು!
ಮನುಷ್ಯರ ಚಟುವಟಿಕೆಗಳಿಂದ ವರ್ಷಕ್ಕೆ 51 ಶತ ಕೋಟಿ ಟನಗಳಷ್ಟು ಶಾಖವರ್ಧಕ ಅನಿಲಗಳು ವಾತಾವರಣವನ್ನು ಸೇರುತ್ತವೆ! ಅದರಲ್ಲಿಯೂ ಕಾರ್ಬನ್ ಡೈಆಕ್ಸೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಹೆಚ್ಚು. ಮತ್ತೆ ಭೂಮಿ ಬಾಯಾರದೆ ಇರುತ್ತದೆಯೇ?

ಅಪಾಯಕಾರಿ ಕಾರ್ಬನ್ ಮಾನಾಕ್ಸೈಡ್!

ಇದರಿಂದ ವರ್ಷದಿಂದ ವರ್ಷಕ್ಕೆ ವಾತಾವರಣದ ಉಷ್ಣತೆ ಹೆಚ್ಚುತ್ತಿರುವುದು ನಿಮ್ಮ ಗಮನಕ್ಕೆ ಖಂಡಿತವಾಗಿಯು ಬಂದಿರುತ್ತದೆ. ಕಾರ್ಬನ್ ಡೈಆಕ್ಸೈಡ್ (CO 2) ಅನಿಲಕ್ಕಿಂತ ಕಾರ್ಬನ್ ಮಾನಾಕ್ಸೈಡ್ (CO) ಅನಿಲವು ಅಧಿಕ ಅಪಾಯಕಾರಿ! ಏಕೆಂದರೆ ಅದು ಕಾರ್ಬನನ ಅಪೂರ್ಣ ದಹನದ ಉತ್ಪನ್ನ. ನಮ್ಮಲ್ಲಿ ಉಸಿರು ಕಟ್ಟುವ ಅನುಭವ ಉಂಟುಮಾಡುವ ಪ್ರಮುಖವಾದ ಅನಿಲವೇ ಕಾರ್ಬನ್ ಮಾನಾಕ್ಸೈಡ್! ಪೆಟ್ರೋಲ್ ಮತ್ತು ಡೀಸೆಲ್ ಬಳಸುವ ವಾಹನಗಳಿಂದ ಹೊರಬರುವ ತ್ಯಾಜ್ಯ ರಾಶಿಯಲ್ಲಿ ಅತ್ಯಂತ ಅಪಾಯಕಾರಿ ಆದದ್ದು ಕಾರ್ಬನ್ ಮಾನಾಕ್ಸೈಡ್!

ಮಹಾ ನಗರಗಳಲ್ಲಿ ವಾಹನಗಳ ಹೊಗೆ ಅಪಾಯಕಾರಿ!

ಮುಂಬೈ, ಕೊಲ್ಕತ್ತ, ಬೆಂಗಳೂರು ಮೊದಲಾದ ಮಹಾ ನಗರಗಳಲ್ಲಿ ಮನೆಯ ಒಳಗೆ ಕೆಲಸವನ್ನು ಮಾಡುವ ಗೃಹಿಣಿಯರು ಒಂದು ದಿನಕ್ಕೆ ಒಂದು ಪ್ಯಾಕೆಟ್ ಸಿಗರೇಟ್ ಸೇದಿದಷ್ಟು ಕಾರ್ಬನ್ ಕಂಟೆಂಟನ್ನು ತಮ್ಮ ಶ್ವಾಸಕೋಶಕ್ಕೆ ಸೇರಿಸಲು ಮುಖ್ಯ ಕಾರಣ ವಾಹನಗಳು!

ಕೋರೋನ ಬಂದು ಹೋದ ನಂತರ ಜನರು ಸೋಷಿಯಲ್ ಡಿಸ್ಟೆನ್ಸ್ ಕಾರಣಕ್ಕೆ ಹೆಚ್ಚು ಬೈಕ್, ಮೊಪೆಡಗಳ ಖರೀದಿ ಮಾಡುತ್ತಿದ್ದಾರೆ. ಅವರ ಆರೋಗ್ಯದ ಕಾಳಜಿ ನಿಜಕ್ಕೂ ಪ್ರಶಂಸನೀಯ. ಆದರೆ ಪರಿಸರದ ಹಾನಿ? ಅದರ ಬಗ್ಗೆ ಯಾರೂ ಯೋಚನೆ ಮಾಡಿದ ಹಾಗೆ ಇಲ್ಲ!

ಎಲ್ಲಾದಕ್ಕೂ ಫಾಸಿಲ್ ಇಂಧನಗಳೇ ಬೇಕು!

ಜಗತ್ತಿನ 90% ಕೆಲಸಗಳು ಇಂದು ನಡೆಯುತ್ತಿರುವುದು ಫಾಸಿಲ್ ಇಂಧನಗಳ ಪೂರೈಕೆಯಿಂದಲೆ! ಇಂದಿಗೂ ಕಾರು, ಬೈಕ್, ಬಸ್ಸು, ರೈಲು, ಹಡಗು, ವಿಮಾನಗಳ ಸಂಚಾರಕ್ಕೆ ಫಾಸಿಲ್ ಇಂಧನಗಳೇ ಬೇಕು. ಕಟ್ಟಡಗಳ ನಿರ್ಮಾಣ, ಸಿಮೆಂಟ್ ಕಾರ್ಖಾನೆ, ರಸಗೊಬ್ಬರ ತಯಾರಿ, ಬಟ್ಟೆಯ ಕಾರ್ಖಾನೆ, ರಸ್ತೆ ನಿರ್ಮಾಣ, ಬೋರವೆಲ್ ಕೊರೆಯಲು, ಕ್ರೇನ್ ಬಳಸಲು, ನೀರು ಮೇಲೆತ್ತಲು, ಉಕ್ಕಿನ ಕಾರ್ಖಾನೆ… ಹೀಗೆ ಪ್ರತೀಯೊಂದು ಕೆಲಸಕ್ಕೂ ನಾವು ಇಂದು ಬಳಕೆ ಮಾಡುವುದು ಫಾಸಿಲ್ ಇಂಧನಗಳನ್ನೇ!

ಗ್ಲೋಬಲ್ ವಾರ್ಮಿಂಗ್ ಎಚ್ಚರಿಕೆಯ ಗಂಟೆ!

ಗ್ಲೋಬಲ್ ವಾರ್ಮಿಂಗ್ ಬಗ್ಗೆ ಮೊದಲೇ ಎಚ್ಚರಿಕೆಯ ಗಂಟೆ ಬಡಿದ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಮುಂದುವರೆದ ಮತ್ತು ಪ್ರಗತಿಶೀಲ ರಾಷ್ಟ್ರಗಳನ್ನು ಒಂದೆಡೆ ಸೇರಿಸಿ ಒಂದು ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿವೆ. ಎಲ್ಲಾ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಿದೆ.

ಏನಿದೆ ಆ ಒಪ್ಪಂದದಲ್ಲಿ?

ಫಾಸಿಲ್ ಇಂಧನಗಳ ಬಳಕೆ ಕಡಿಮೆ ಮಾಡಿ ಪರ್ಯಾಯ ಇಂಧನಗಳ ಬಳಕೆ ಜಾಸ್ತಿ ಮಾಡುವುದು ಆ ಒಪ್ಪಂದದ ಪ್ರಮುಖ ಅಂಶ. ಅಂದರೆ ಸೌರ ಶಕ್ತಿ, ಗಾಳಿ ಶಕ್ತಿ, ಭೂಗರ್ಭ ಉಷ್ಣ ಶಕ್ತಿ, ಸಮುದ್ರದ ಅಲೆಗಳ ಶಕ್ತಿ, ಜೈವಿಕ ಶಕ್ತಿಗಳ ಬಳಕೆಯನ್ನು ಹೆಚ್ಚು ಮಾಡುವುದು!

ಹೆಚ್ಚಿನ ರಾಷ್ಟ್ರಗಳು ಈ ಉದ್ದೇಶಕ್ಕೆ ತುಂಬಾ ಧನವನ್ನು ವಿನಿಯೋಗ ಮಾಡಿ ಕಾಲನಿರ್ಧಾರಿತ ಗುರಿಗಳನ್ನು ಇಟ್ಟುಕೊಂಡಿವೆ.

ಉದಾಹರಣೆಗೆ ಚೀನಾ ಸರಕಾರ 2060ರ ಒಳಗೆ ತನ್ನ ದೇಶವನ್ನು ಸಂಪೂರ್ಣ ಸೋಲಾರ್ ಮಾಡಲು ಹೊರಟಿದೆ. ಅದಕ್ಕಾಗಿ ಬೃಹತ್ ಸೌರ ವಿದ್ಯುತ್ ಘಟಕಗಳ ಸ್ಥಾಪನೆ ಮಾಡಲು ಹೊರಟಿದೆ.

ಅಮೆರಿಕ ಇನ್ನು ಹತ್ತು ವರ್ಷಗಳ ಅವಧಿಯಲ್ಲಿ ತನ್ನ 50% ಕಾರುಗಳು ಬ್ಯಾಟರಿಯಿಂದ ಓಡಲಿವೆ ಎಂದು ಯೋಜನೆ ಹಾಕಿದೆ!

ಭಾರತದಲ್ಲಿ ಈಗಾಗಲೇ ಇಲೆಕ್ಟ್ರಿಕ್ ಬೈಕಗಳು ಮಾರುಕಟ್ಟೆಗೆ ಬಂದಿವೆ. ಸರಕಾರವೇ ಅದನ್ನು ಪ್ರಮೋಟ್ ಮಾಡುತ್ತಿದೆ. ಆದರೂ ಅದನ್ನು ಖರೀದಿ ಮಾಡುವವರ ಸಂಖ್ಯೆ ತುಂಬಾ ಕಡಿಮೆ. ಕೇಳಿದರೆ ರೇಟ್ ಜಾಸ್ತಿ ಆಯಿತು ಅನ್ನುತ್ತಾರೆ! ನಮ್ಮಲ್ಲಿ ಪರಿಸರದ ಬಗ್ಗೆ ಜಾಗೃತಿ ಕಡಿಮೆ. ನಾವು ಅಲ್ಪ ಕಾಲದ ಲಾಭಗಳನ್ನು ಲೆಕ್ಕ ಹಾಕುತ್ತೇವೆ ಹೊರತು ದೀರ್ಘ ಕಾಲದ ಆಶಯಗಳನ್ನು ಯೋಚನೆ ಮಾಡುವುದೇ ಇಲ್ಲ!

30 ವರ್ಷಗಳ ಗುರಿ ನಿಗದಿ!

ಭಾರತ ಸರಕಾರ ಮುಂದಿನ 30 ವರ್ಷಗಳ ಒಳಗೆ ಫಾಸಿಲ್ ಇಂಧನಗಳ ಬಳಕೆಯನ್ನು ಸೊನ್ನೆಗೆ ತರುವ ಮಾತಾಡುತ್ತಿದೆ. ನಮಗೆ ಇದು ಸಾದ್ಯ ಎಂದು ಅನಿಸುತ್ತಿದೆಯೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿದೆ!

Exit mobile version