Site icon Vistara News

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Exit mobile version