ಹಿಂದವೀ ಸಾಮ್ರಾಜ್ಯ ಕಟ್ಟಿದ್ದ ಶಿವಾಜಿಗೆ ಇಬ್ಬರು ಗುರುಗಳು. ಒಬ್ಬರು ಸಮರ್ಥ ರಾಮದಾಸರು. ಇನ್ನೊಬ್ಬರು ಬಹು ಶ್ರೇಷ್ಠರಾದ ದಾದಾಜಿ ಕೊಂಡ ದೇವರು. ಇಬ್ಬರ ಮೇಲೂ ಶಿವಾಜಿಗೆ ಭಾರಿ ಭಕ್ತಿ ಮತ್ತು ಗೌರವ.
ಒಂದು ದಿನ ಸಂಜೆ ಹೊತ್ತಿಗೆ ದಾದಾಜಿಕೊಂಡ ದೇವರು ವಾಯು ವಿಹಾರಕ್ಕೆ ಹೊರಟರು. ತುಂಬಾ ಸುತ್ತಾಡಿ ಆಯಾಸ ಆಗಿತ್ತು. ಹಸಿವು ತೀವ್ರವಾಗಿತ್ತು. ಆಗ ಅಲ್ಲಿ ದೊಡ್ಡದಾದ ಮಾವಿನ ತೋಪು ಕಂಡು ಬಂದಿತು. ಮರಗಳ ತುಂಬಾ ರುಚಿ ರುಚಿಯಾದ ಹಣ್ಣುಗಳು.
ಹಸಿವು ತೀವ್ರವಾದಾಗ ವಿವೇಚನೆ ಹೊರಟು ಹೋಯಿತು. ಅದು ಯಾರ ತೋಟ ಎಂದು ಯೋಚನೆ ಮಾಡದೆ ಒಂದಷ್ಟು ಮಾವಿನ ಹಣ್ಣು ಕಿತ್ತು ತಿಂದರು. ಹಸಿವು ನೀಗಿತು.
ಆಗ ಅವರಿಗೆ ಯಾರೋ ಹೇಳಿದರು. ಅದು ಶಿವಾಜಿ ಮಹಾರಾಜರ ಮಾವಿನ ತೋಟ ಎಂದು. ಅವರಿಗೆ ಆಗ ಪಾಪ ಪ್ರಜ್ಞೆ ಕಾಡಲು ಆರಂಭವಾಯಿತು. ನಾನು ಅನುಮತಿ ಪಡೆಯದೆ ಒಡೆಯನ ತೋಟದ ಹಣ್ಣು ಕಿತ್ತು ತಿಂದೆ ಅನ್ನುವುದು ಅವರಿಗೆ ನೋವು ಕೊಟ್ಟಿತು. ರಾತ್ರಿ ನಿದ್ದೆ ಹೊರಟು ಹೋಯಿತು.
ಮರುದಿನ ಆಸ್ಥಾನಕ್ಕೆ ಬಂದವರೇ ಶಿವಾಜಿಯ ಮುಂದೆ ನಿಂತರು. ಶಿವಾಜಿ ನಮಸ್ಕಾರ ಮಾಡಿ ನಿಂತ. ಆಗ ಕೊಂಡದೇವರು, “ಮಹಾರಾಜ, ನಿಮ್ಮ ತೋಟದ ಮಾವಿನ ಹಣ್ಣು ನಿಮ್ಮ ಅನುಮತಿ ಪಡೆಯದೆ ಯಾರಾದರೂ ತಿಂದರೆ ಏನು ಶಿಕ್ಷೆ ಕೊಡುತ್ತೀರಿ?” ಅಂದರು.
ಶಿವಾಜಿ ತಮಾಷೆಯಾಗಿ “ಅವರ ಒಂದು ಕೈ ಕಡಿದು ಹಾಕುತ್ತೇನೆ!” ಅಂದ.
ಈಗ ಕೊಂಡದೇವರು ತನ್ನ ಬಲಗೈಯನ್ನು ಮುಂದೆ ಚಾಚಿ, “ಮಹಾರಾಜ, ನಾನು ನಿಮ್ಮ ತೋಟದ ಮಾವಿನ ಹಣ್ಣು ನಿಮ್ಮ ಅನುಮತಿ ಇಲ್ಲದೆ ತಿಂದಿದ್ದೇನೆ. ನನಗೆ ಅದೇ ಶಿಕ್ಷೆ ಕೊಡಿ!” ಅಂದರು.
ಶಿವಾಜಿಗೆ ಈಗ ಆಘಾತ ಆಯಿತು.
“ಗುರುಗಳೇ, ನನ್ನ ತೋಟದಲ್ಲಿ ನಿಮಗೆ ಅಧಿಕಾರ ಇದೆ. ನೀವು ನನ್ನ ಗುರುಗಳು. ನೀವು ಹಾಗೆ ಹೇಳಬಾರದು” ಎಂದು ಪರಿ ಪರಿಯಾಗಿ ಬೇಡಿಕೊಂಡ. ಆದರೆ ಗುರುಗಳು ಒಪ್ಪಲಿಲ್ಲ.
ಕೊನೆಗೂ ಗುರುಗಳು “ಶಿವಾಜಿ, ನೀವು ನನ್ನ ಬಲಗೈ ಕತ್ತರಿಸದಿದ್ದರೆ ಬೇಜಾರಿಲ್ಲ. ಆದರೆ ನಾನು ಅದಕ್ಕೆ ಶಿಕ್ಷೆ ಕೂಡಲೇಬೇಕು. ಇಂದಿನಿಂದ ನಾನು ಯಾವುದೇ ಕೆಲಸಕ್ಕೆ ನನ್ನ ಬಲಗೈ ಬಳಸುವುದಿಲ್ಲ!” ಎಂದು ಪ್ರತಿಜ್ಞೆ ಮಾಡಿದರು. ಮುಂದೆ ಅವರ ಜೀವನದ ಕೊನೆಯವರೆಗೆ ಅವರು ತನ್ನ ಬಲಗೈಯನ್ನು ಉಪಯೋಗ ಮಾಡಲೇ ಇಲ್ಲ!
ಇಂತಹ ಮಹಾಗುರುಗಳಿಂದ ಶಿಷ್ಯ ಶಿವಾಜಿ ಗ್ರೇಟ್ ಆದದ್ದು. ಅಲ್ಲವೇ?
ಇದನ್ನೂ ಓದಿ| ರಾಜ ಮಾರ್ಗ ಅಂಕಣ | ಜ್ಞಾನೇಶ್ವರ ಸಂತರು ನಾಯಿಯ ಹಿಂದೆ ಓಡಿದ್ದು ಯಾಕೆ?