Site icon Vistara News

ರಾಜಮಾರ್ಗ ಅಂಕಣ: ಈ ಪಾಪ್ ಗಾಯಕಿಗೆ ಜಗತ್ತಿನಾದ್ಯಂತ ಎರಡು ಬಿಲಿಯನ್ ವೀಕ್ಷಕರು!

Singer Neha Kakkar

Rajamarga Column: Youtube Sensation Neha Kakkar

ಆಧುನಿಕ ಸಂಗೀತವನ್ನು ಆಪೋಶನ ಮಾಡಿಕೊಂಡಿರುವ ಈ ಪಾಪ್ ಗಾಯಕಿ ಜಗತ್ತಿನ ಯಾವ ಸಂಗೀತದ ವೇದಿಕೆಯಲ್ಲಿ ಹಾಡಲು ನಿಂತರೂ ಸಾವಿರಾರು ಜನ ಕಿಕ್ಕಿರಿದು ಸೇರುತ್ತಾರೆ. ಆಕೆಯೊಂದಿಗೆ ಹಾಡುತ್ತಾರೆ, ಕುಣಿಯುತ್ತಾರೆ, ಫೀಲ್ ಮಾಡಿಕೊಳ್ಳುತ್ತಾರೆ. ಆಕೆಯ ಸೌಂದರ್ಯಕ್ಕೆ ಫಿದಾ ಆಗುತ್ತಾರೆ. ಇಡೀ ಸಭಾಂಗಣವು ಆಕೆಯ ಸಂಗೀತಕ್ಕೆ ಸಂವಾದಿ ಆಗುತ್ತದೆ.

ಹೌದು, ಆಕೆ ಇಂದಿನ ಬೇಬಿ ಡಾಲ್ ಗಾಯಕಿ ನೇಹಾ ಕಕ್ಕರ್.

ಆಕೆ ಪಂಜಾಬಿ ಕುಡಿ

ನೇಹಾ ಹುಟ್ಟಿದ್ದು ಉತ್ತರಪ್ರದೇಶದ ಹೃಷಿಕೇಶದ ಒಂದು ಪಂಜಾಬಿ ಕುಟುಂಬದಲ್ಲಿ. ಅವಳ ಅಕ್ಕ ಸೋನು ಕಕ್ಕರ್, ಅಣ್ಣ ಟೀನು ಕಕ್ಕರ್ ಎಲ್ಲರೂ ಸಂಗೀತದ ಅನನ್ಯ ಪ್ರತಿಭೆಗಳೇ ಆಗಿದ್ದವರು. ಅವರ ಪ್ರತಿಭೆಯ ಪೋಷಣೆಯು ಹೆತ್ತವರಿಗೆ ಕಷ್ಟವೇ ಆಯಿತು. ಅದಕ್ಕೆ ಅವಕಾಶವನ್ನು ಹುಡುಕಿಕೊಂಡು ಕಕ್ಕರ್ ಕುಟುಂಬವು ಮೊದಲು ದೆಹಲಿ, ಮತ್ತೆ ಮುಂಬೈಗೆ ಶಿಫ್ಟ್ ಆಯಿತು. ಈ ಮೂವರಲ್ಲಿ ಕಿರಿಯಳಾದ ನೇಹಾ ತನ್ನ ನಾಲ್ಕನೇ ವಯಸ್ಸಿನಲ್ಲಿ ವೇದಿಕೆಯ ಮೇಲೆ ಮೈಮರೆತು ಹಾಡುತ್ತಿದ್ದಳು.

ಇಂಡಿಯನ್ ಐಡಾಲ್ ಎಂಬ ಚಿನ್ನದ ಬಾಗಿಲು

ಸಂಗೀತದ ಅವಕಾಶವನ್ನು ಹುಡುಕಿ ಮುಂಬೈಗೆ ಬಂದ ನೇಹಾ ಮೊದಲು ಆರಿಸಿಕೊಂಡದ್ದು ಇಂಡಿಯನ್ ಐಡಾಲ್ ಎಂಬ ರಿಯಾಲಿಟಿ ಶೋ ವೇದಿಕೆಯನ್ನು. ಮೊದಲ ಪ್ರಯತ್ನದಲ್ಲಿ ರಿಜೆಕ್ಟ್ ಆದಾಗ ನೇಹಾ ಡೆಸ್ಪರೇಟ್ ಆಗದೆ ಮತ್ತೊಂದು ವರ್ಷ ಹಠ ಹಿಡಿದು ಪ್ರಯತ್ನ ಮಾಡಿದಳು. ಎರಡನೇ ಬಾರಿ ಆಕೆಗೆ ಐಡಲ್ ಪ್ರಶಸ್ತಿಯು ಒಲಿಯಿತು. ನೇಹಾ ಕಕ್ಕರ್ ಈ ಬಾರಿ ದೇಶದ ಸಂಗೀತ ಪ್ರೇಮಿಗಳ ಕಣ್ಮಣಿ ಆಗಿಬಿಟ್ಟಳು. ಮುಂದೆ ಆಕೆ ಪಾಪ್ ಸಂಗೀತದ ಅನಭಿಷಿಕ್ತ ರಾಣಿಯಾಗಿ ಮೆರೆದರು. ಸಿನೆಮಾದಲ್ಲಿಯೂ ಹಾಡಿದರು. ಒಂದೊಂದು ಪಾಪ್ ಹಾಡಿಗೂ ಜೀವ ತುಂಬಿದರು. ದೇಶದ ಮತ್ತು ದೇಶದ ಹೊರಗೆ ಕೂಡ ನೂರಾರು ಶೋಗಳಲ್ಲಿ ಆಧುನಿಕತೆ ಸಂಗೀತದ ಧಾರೆ ಹರಿಸಿದರು.

ಆಕೆಯ ಸಂಗೀತ ಶೋಗಳು ಭಾರೀ ಜನಪ್ರಿಯ

ಆಕೆಯು ಜೊಂಪೆ ಜೊಂಪೆ ಕೂದಲನ್ನು ಹಾರಿಸುತ್ತ, ನೃತ್ಯವನ್ನು ಮಾಡುತ್ತ ಹಾಡುತ್ತಿದ್ದರೆ ಯುವ ಪ್ರೇಕ್ಷಕರು ಸಮುದ್ರದ ಅಲೆಗಳನ್ನು ಉಂಟುಮಾಡುತ್ತಾರೆ. ಆಕೆಯ ಡ್ರೆಸ್ ಕೋಡ್, ಗ್ಲಾಮರಸ್ ಲುಕ್, ಶಿವರಿಂಗ್ ವಾಯ್ಸ್, ವೇದಿಕೆಯನ್ನು ಆವರಿಸುವ ನಡಿಗೆ, ಸಮ್ಮೋಹನ ಮಾಡುವ ನಗು, ಸ್ಥಾಯಿಯಿಂದ ಸ್ಥಾಯಿಗೆ ಜಿಗಿಯುವ ಅವಳ ರೇಂಜ್….ಎಲ್ಲವೂ ನೇಹಾ ಕಕ್ಕರ್ ಅವರ ಸಿಗ್ನೇಚರ್ ಸ್ಟೈಲ್ ಆಗಿವೆ. ಅವುಗಳು ನೇಹಾ ಅವರ ಪವರ್.

Rajamarga Column: Youtube Sensation Neha Kakkar

ನೇಹಾ ಹಾಡಿದ್ದೆಲ್ಲವೂ ಸೂಪರ್ ಹಿಟ್

ನೇಹಾ 2006ರಿಂದ ಇಂದಿನವರೆಗೆ ನೂರಾರು ಹಿಂದೀ, ಪಂಜಾಬಿ, ಕನ್ನಡ, ತೆಲುಗು ಹಾಡುಗಳನ್ನು ಹಾಡಿದ್ದಾರೆ. ಸಂಖ್ಯೆ ಕಡಿಮೆ ಆದರೂ ಆಕೆ ಹಾಡಿದೆಲ್ಲವೂ ಸೂಪರ್ ಹಿಟ್ ಆಗಿವೆ. ರಮಯ್ಯ ವಸ್ತಾವಯ್ಯ, ಫೀವರ್, ಬ್ಲೂ, ಮೀರಾ ಬಾಯಿ ನಾಟೌಟ್, ಇಸೀ ಲೈಫ್ ಮೇ, ಬೀಚ್ಚೂ, ಯಾರಿಯಾ.. ಮೊದಲಾದ ಸಿನೆಮಾಗಳಲ್ಲಿ ಅವರು ಹಾಡಿದ್ದಾರೆ. ಸುಖವಿಂದರ್ ಸಿಂಘ ಮತ್ತು ಅವರ ಜೋಡಿ ಸಖತ್ ಮೋಡಿ ಮಾಡಿದೆ. ಎ.ಆರ್ ರೆಹಮಾನ್, ಯೋ ಯೊ ಹನಿ ಸಿಂಘ್ ಅವರ ಜೊತೆಗೂ ಆಕೆ ಅದ್ಭುತ ಸಂಗೀತವನ್ನು ರೆಂಡರ್ ಮಾಡಿದ್ದಾರೆ. ಅವರು ಹಾಡಿದ ‘ ‘ಕಾಲಾ ಚಷ್ಮ’ ಹಾಡು ಭಾರತದ ಬೆಸ್ಟ್ ಪಾರ್ಟಿ ಸಾಂಗ್ ಎಂದೇ ಕೀರ್ತಿ ಪಡೆದಿದೆ. ಮದುವೆ ಹಾಡುಗಳು, ಐಟಂ ಸಾಂಗ್, ಪಾರ್ಟಿ ಹಾಡುಗಳು, ಪಾಪ್ ಹಾಡುಗಳು…ಇಂತಹ ಯಾವ ಹಾಡುಗಳಿಗೂ ಹೊಂದಿಕೊಳ್ಳುವ ದೈವದತ್ತವಾದ ವಾಯ್ಸ್ ಅವರಿಗೆ ಇದೆ. ಕನ್ನಡದಲ್ಲಿ ಸಂದೀಪ್ ಚೌಟ ಅವರು ಸಂಗೀತ ಕೊಟ್ಟ ತಮಸ್ಸು ಸಿನೆಮಾದಲ್ಲಿ ಅವರು ಹಾಡಿದ ಹಾಡು ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿತ್ತು. ಒಟ್ಟು ಐದು ಫಿಲ್ಮ್ ಫೇರ್ ಪ್ರಶಸ್ತಿ ಅವರು ಗೆದ್ದಿದ್ದಾರೆ.

Rajamarga Column: Youtube Sensation Neha Kakkar

ನೇಹಾ ಇದೀಗ ಯು ಟ್ಯೂಬ್ ಸೆನ್ಸೇಷನ್!

ಇಂತಹ ಮಹಾ ಗಾಯಕಿ ನೇಹಾ ಈಗ ಕೀರ್ತಿ ಪಡೆದಿರುವುದು ಯು ಟ್ಯೂಬ್ ವೇದಿಕೆಯಲ್ಲಿ. ಆಕೆಯ ಅಣ್ಣ ಸಂಗೀತ ನಿರ್ದೇಶನ ಮಾಡಿದ ಹತ್ತಾರು ಆಲ್ಬಮಗಳು ಇವತ್ತು ನೇಹಾ ಅವರನ್ನು ಯು ಟ್ಯೂಬ್ ವೇದಿಕೆಯ ಮಹಾರಾಣಿ ಮಾಡಿಬಿಟ್ಟಿವೆ. ಆಕೆಯ ಸನ್ನಿ ಸನ್ನಿ, ಸೆಕೆಂಡ್ ಹ್ಯಾಂಡ್ ಜವಾನಿ ಮ್ಯೂಸಿಕ್ ಆಲ್ಬಂಗಳು ಆಕೆಗೆ ಭಾರೀ ಜನಪ್ರಿಯತೆಯನ್ನು ತಂದು ಕೊಟ್ಟಿವೆ. ಆಕೆ ಇಂದು ‘ಯಂಗ್ ಮ್ಯೂಸಿಕ್ ಲವರ್ಸ್ ಹಾರ್ಟ್ ತ್ರಾಬ್’ ಆಗಿದ್ದಾರೆ. ಆಕೆಯ ಯು ಟ್ಯೂಬ್ ವೇದಿಕೆಗೆ ಜಗತ್ತಿನಾದ್ಯಂತ 14 ಮಿಲಿಯನ್ ಚಂದಾದಾರರು ಇದ್ದಾರೆ! ಆಕೆಯ ಹಾಡುಗಳು 2 ಬಿಲಿಯನ್ ವೀಕ್ಷಕರನ್ನು ತಲುಪಿವೆ! ಇದೊಂದು ಜಾಗತಿಕ ದಾಖಲೆ. ಭಾರತದ ಯಾವ ಗಾಯಕರೂ ಈ ದಾಖಲೆಯ ಹತ್ತಿರ ಕೂಡ ಬಂದಿಲ್ಲ! ಜನವರಿ 2021ರಲ್ಲಿ ಆಕೆ ಯು ಟ್ಯೂಬ್ ವೇದಿಕೆಯು 13.9 ಬಿಲಿಯನ್ views ಪಡೆದು ವಿಶ್ವದಾಖಲೆ ಮಾಡಿತು. ಅದರಲ್ಲಿ ಎಲ್ಲ ದೇಶಗಳ ವೀಕ್ಷಕರೂ ಇದ್ದಾರೆ ಎಂದರೆ ನಮಗೆ, ನಿಮಗೆ ನಂಬುವುದು ಕಷ್ಟ ಆಗಬಹುದು. ಆದರೆ ಅದು ನಿಜ. ಅವರಿಗೆ ಯು ಟ್ಯೂಬ್ ಡೈಮಂಡ್ ಅವಾರ್ಡ್ ದೊರೆತಿದೆ.

ತನ್ನ ಹಾಡುಗಳಿಗೆ ಅಕ್ಕ ಸೋನು ಕಕ್ಕರ್ ಮತ್ತು ಅಣ್ಣ ಟೀನು ಕಕ್ಕರ್ ಪ್ರೇರಣೆ ಎಂದು ಹೇಳುವ ನೇಹಾ ಕಕ್ಕರ್ ತಾನು ರೆಹಮಾನ್ ಮತ್ತು ಲತಾ ಮಂಗೇಷ್ಕರ್ ಅವರ ಅತೀ ದೊಡ್ಡ ಫ್ಯಾನ್ ಎಂದಿದ್ದಾರೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿಶ್ವ ಪರಿಸರ ದಿನ; ಗಮನಿಸಿ, ಇವುಗಳು ಬೆಚ್ಚಿ ಬೀಳಿಸುವ ಅಂಶಗಳು!

ನೇಹಾ ಕಕ್ಕರ್ ಅವರಿಗೆ ಆಧುನಿಕ ಸಂಗೀತದ ಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯ ಇದೆ ಎಂಬ ಭರತ ವಾಕ್ಯದ ಜೊತೆಗೆ ಇಂದವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರೋಣ.

Exit mobile version