Site icon Vistara News

ರಾಜಮಾರ್ಗ ಅಂಕಣ: ಸ್ವಾತಂತ್ರ್ಯದ ಕನವರಿಕೆಯಲ್ಲಿ ಮಿಂದೆದ್ದ ಭಾರತ

Rajamarga

ಸ್ವಾತಂತ್ರ್ಯ ಎಂಬ ಹೆರಿಗೆ ನೋವನ್ನು ದಾಟಿ!

ರಾಜಮಾರ್ಗ ಅಂಕಣ: ಮೊಘಲ್ ದೊರೆ ಶಹಜಾಹನ್ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಈಸ್ಟ್ ಇಂಡಿಯಾ ಕಂಪನಿಗೆ ಸತಾರಾ ನಗರದಲ್ಲಿ ವಸಾಹತು ಮಾಡಲು ಅನುಮತಿ ನೀಡಿದ್ದೇ ಆರಂಭ. ಆ ಕಂಪೆನಿಯ ಹಿಂದೆ ಬಂದದ್ದು ಇಂಗ್ಲೆಂಡಿನ ಪ್ರಭುತ್ವ. ಅದರ ಬೆನ್ನಿಗೆ ಬಂದದ್ದು ಮತಾಂತರದ ಆಮಿಷಗಳು. ಕೊನೆಯದಾಗಿ ಬಂದದ್ದು ಭಾರತದ ಅನರ್ಘ್ಯ ಸಂಪತ್ತನ್ನು ಲೂಟಿ ಮಾಡುವ, ಭಾರತದ ಒಂದೊಂದೇ ಪ್ರದೇಶವನ್ನು ಆಪೋಶನ ಮಾಡುವ ಹುನ್ನಾರಗಳು. ಅದಕ್ಕೆ ಪೂರಕವಾದ ಇಂಗ್ಲಿಷರ ಕುಟಿಲ ನೀತಿಗಳು ಮತ್ತು ಷಡ್ಯಂತ್ರಗಳು! ಆಗೊಮ್ಮೆ ಕೂತು ನನ್ನ ಮನಸ್ಸು ಯೋಚಿಸುತ್ತದೆ, 1757ರ ಕದನದಲ್ಲಿ ಬ್ರಿಟಿಷರ 3000 ಸೈನಿಕರ ಒಂದು ಪುಟಗೋಸಿ ಸೇನೆಯನ್ನು ಬಂಗಾಲದ ನವಾಬನ ಸಿರಾಜುದ್ದೌಲನ 30,000 ಸೈನಿಕರ ಬಲಿಷ್ಠ ಸೇನೆ ಸೋಲಿಸಿದ್ದರೆ? ಹಾಗೇನಾದರೂ ಆಗಿದ್ದರೆ ಆಗಲೇ ಬ್ರಿಟಿಷ್ ಸಾಮ್ರಾಜ್ಯ ಭಾರತದಿಂದ ಗಂಟು ಮೂಟೆ ಕಟ್ಟಬೇಕಿತ್ತು. ಯಾಕೆ ಹಾಗಾಗಲಿಲ್ಲ ಎಂದರೆ ಭಾರತದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚು ಬಲಿಷ್ಠರಾಗಿದ್ದರು!

223 ವರ್ಷಗಳ ಸುದೀರ್ಘ ಸ್ವಾತಂತ್ರ್ಯದ ಹೋರಾಟ!

ನೂರಾರು ವಿದೇಶಿ ಆಕ್ರಮಣಕಾರರು ಭಾರತದ ಮೇಲೆ ದಂಡೆತ್ತಿಕೊಂಡು ಬಂದರು ಎಂದು ನಮಗೆ ಇತಿಹಾಸ ಪಠ್ಯಗಳು ಹೇಳುತ್ತಿದ್ದವು. ಆದರೆ ಯಾಕೆ ಬಂದರು ಎಂದು ನಮಗೆ ಅರ್ಥವಾದದ್ದು ನಾವು ಮುಂದೆ ಭಾರತದ ನೈಜ ಇತಿಹಾಸವನ್ನು ಓದಿದ ನಂತರವೇ! ಬ್ರಿಟಿಷರು ಭಾರತಕ್ಕೆ ಬರುವ ಮೊದಲು ನಮ್ಮ ದೇಶವು ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿತ್ತು. ಸಂಪತ್ತಿನಲ್ಲಿಯೂ ಮತ್ತು ಜ್ಞಾನದಲ್ಲಿಯೂ! ಅದೇ ಆಕರ್ಷಣೆ ಈ ಬ್ರಿಟಿಷರಿಗೆ ಕೂಡ. ಆಗ ಭಾರತದಲಿದ್ದ ಸಣ್ಣ ಸಣ್ಣ ರಾಜ್ಯಗಳ ನಡುವೆ ಒಮ್ಮತವಿರಲಿಲ್ಲ. ಸ್ವಾರ್ಥ ತುಂಬಿದ್ದ ಆ ರಾಜಮಹಾರಾಜರು ಏನಾದರೂ ಒಟ್ಟಾಗಿ ನಿಂತಿದ್ದರೆ ನಮಗೆ 100 ವರ್ಷಗಳ ಹಿಂದೆಯೇ ಸ್ವಾತಂತ್ರ್ಯವು ದೊರೆಯುತ್ತಿತ್ತು! ಆಗಲೂ ಭಾರತದ ಸ್ವಾತಂತ್ರ್ಯಕ್ಕೆ ಗೋಡೆಯಾಗಿ ನಿಂತವರು ಈ ಒಳಗಿನ ಶತ್ರುಗಳೇ! ಹಿಂದೂ ಮತ್ತು ಮುಸಲ್ಮಾನರು ಒಟ್ಟಾಗಿ ಸ್ವಾತಂತ್ರ್ಯಕ್ಕೆ ಹೋರಾಡುವುದನ್ನು ಬ್ರಿಟಿಷರು ಸಹಿಸಿಕೊಳ್ಳಲೇ ಇಲ್ಲ. ಈ ಒಡೆದು ಆಳುವ ನೀತಿಯಿಂದಾಗಿ ಭಾರತದ ಸ್ವಾತಂತ್ರ್ಯ ಹೋರಾಟವು ಬೇರೆ ರಾಷ್ಟ್ರಗಳ ಹೋರಾಟಕ್ಕಿಂತ ದೀರ್ಘ ಆಯಿತು.

ಸ್ವಾತಂತ್ರ್ಯದ ಕನವರಿಕೆಯಲ್ಲಿ ದೇಶ ಇಬ್ಭಾಗವಾಯಿತು!

ಜಗತ್ತಿನ ಯಾವ ರಾಷ್ಟ್ರವು ಕೂಡ ಸ್ವಾತಂತ್ರ್ಯವನ್ನು ಪಡೆದಾಗ ಎರಡಾಗಿ ಒಡೆದು ಹೋದ ನಿದರ್ಶನ ದೊರೆಯುವುದಿಲ್ಲ! ಆದರೆ ಆಗಸ್ಟ್ 14ರ ಮಧ್ಯರಾತ್ರಿ ಪ್ರಧಾನಿ ನೆಹರೂ ಯುನಿಯನ್ ಜ್ಯಾಕನ್ನು ಕೆಳಗೆ ಇಳಿಸಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೊದಲೇ ಭಾರತವು ಎರಡು ಭಾಗವಾಗಿ ಪಾಕಿಸ್ಥಾನದ ಉದಯ ಆಗಿತ್ತು! ಆ ಕ್ಷಣದಲ್ಲಿ ಬ್ರಿಟಿಷ್ ಪ್ರಭುತ್ವ ಮೀಸೆ ತಿರುವಿ ನಗುತ್ತಿತ್ತು. ಏಕೆಂದರೆ ಅಖಂಡ ಭಾರತವು ಮುಂದೆ ವಿಶ್ವದ ಬಲಿಷ್ಠ ಶಕ್ತಿಯಾಗಿ ಹೊಮ್ಮುವ ಕನಸಿಗೆ ಅಂದೇ ಅವರು ಕೊಳ್ಳಿಯಿಟ್ಟಾಗಿತ್ತು! ಭಾರತೀಯರ ಆ ಒಂದು ಸಂಭ್ರಮದ ಮೈಮರೆತವು ಪಾಕಿಸ್ತಾನದ ರೂಪದಲ್ಲಿ ಇಂದಿಗೂ ನಮಗೆ ಮಗ್ಗುಲ ಮುಳ್ಳಾಗಿ ನಿಂತದ್ದು ವಿಪರ್ಯಾಸ!

ರಾವಿ ನದಿಯನ್ನು ದಾಟಿ ರೈಲು ತುಂಬ ಭಾರತಕ್ಕೆ ಬಂದ ರಕ್ತಸಿಕ್ತ ಹೆಣಗಳು ಭಾರತದ ಸ್ವಾತಂತ್ರ್ಯದ ಕನವರಿಕೆಯಲ್ಲಿ ಮುಳುಗಿದ್ದ ಆಗಿನ ಕೆಲವು ನಾಯಕರಿಗೆ ದ್ರೋಹ ಎಂದು ಅನ್ನಿಸಲೇ ಇಲ್ಲ. ಭೀಷ್ಮ ಸಾಹನಿ ಬರೆದ ಹಿಂದೀ ಕಾದಂಬರಿ
‘ತಮಸ್ ‘ಇದನ್ನುಒಮ್ಮೆ ಓದಿದಾಗ ನಮ್ಮ ರಕ್ತ ಕುದಿಯದೆ ಹೋದರೆ ನಾವು ಭಾರತೀಯರೇ ಅಲ್ಲ ಬಿಡಿ! ಆಗಲೂ ಭಾರತವನ್ನು ಕಾಡಿದ್ದು ಒಳಗಿನ ಶತ್ರುಗಳೇ! ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟೆವು ಎಂದು ಹೊರಗಿಂದ ಶೋ ಮಾಡಿ ಒಳಗೊಳಗೆ ‘ಡೊಮಿನಿಯನ್ ರಿಪಬ್ಲಿಕ್ ‘ ಎಂಬ ಢೋಂಗಿ ಒಪ್ಪಂದಕ್ಕೆ ನಮ್ಮ ವರಿಷ್ಟರಿಂದ ಸಹಿಮಾಡಿಸಿದ, ಮತ್ತೆ ಮೂರು ವರ್ಷಗಳ ಕಾಲ ಭಾರತವನ್ನು ಕಾಡಿದ ಈಸ್ಟ್ ಇಂಡಿಯಾ ಕಂಪೆನಿಯ ವರಿಷ್ಠರಿಗೆ ಅದೇ ತಾನೇ ಬೇಕಾಗಿತ್ತು!

ಸ್ವಾತಂತ್ರ್ಯದ ನಂತರದ 78 ವರ್ಷಗಳು!

1945ರ ಹಿರೋಶಿಮಾ ಬಾಂಬ್ ಸ್ಫೋಟದ ನಂತರ ಜಪಾನ್ ಮತ್ತೆ ಎದ್ದು ಬಂದದ್ದು ದೇಶಪ್ರೇಮದ ಜಾಗೃತಿಯಿಂದ. ಭಾರತಕ್ಕೂ ಅಂತಹದ್ದೇ ಅವಕಾಶ ಇತ್ತು. 223 ವರ್ಷಗಳ ಸುದೀರ್ಘ ಸ್ವಾತಂತ್ರ್ಯದ ಹೋರಾಟದ ಕಾವು ಕಣ್ಣ ಮುಂದೆ ಇತ್ತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳು ಇದ್ದವು. ಕ್ರಾಂತಿಕಾರಿಗಳ ರಕ್ತಸಿಕ್ತ ಹೋರಾಟದ ಘಟನೆಗಳು ಇದ್ದವು. ನೇತಾಜಿ ಸುಭಾಸರ ‘ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ!’ ಮೊದಲಾದ ಘೋಷಣೆಗಳು ಇದ್ದವು. ಬಂಕಿಮ ಚಂದ್ರರ ಕ್ಷಾತ್ರತೇಜಸ್ಸಿನ ವಂದೇ ಮಾತರಂ ಗೀತೆ ಇತ್ತು. ಒಡೆದು ಹೋದ ಭಾರತವನ್ನು ಮತ್ತೆ ಏಕೀಕರಣ ಮಾಡಿದ ಸರ್ದಾರ್ ಪಟೇಲ್ ಅವರ ನೇತೃತ್ವ ಇತ್ತು. ಇದನ್ನೆಲ್ಲ ಬಂಡವಾಳವಾಗಿ ತೆಗೆದುಕೊಂಡಿದ್ದರೆ ಭಾರತವು ಯಾವಾಗಲೋ ‘ವಿಶ್ವಗುರು’ ಆಗುತ್ತಿತ್ತು. ಇನ್ನೂ ಪೂರ್ತಿ ಆಗಲಿಲ್ಲ ಅಂದರೆ ಅದಕ್ಕೂ ಕಾರಣ ಒಳಗಿನ ಶತ್ರುಗಳು.

ಭಾರತದ ಕ್ಷಾತ್ರತೇಜಸ್ಸು ಮತ್ತೆ ಎದ್ದು ಬರಬೇಕಾಗಿದೆ.

ನಾನು ಈವರೆಗೆ ಪಟ್ಟಿ ಮಾಡಿದ ಯಾವ ದೋಷವೂ ತಾಯಿ ಭಾರತಿಯದ್ದು ಅಲ್ಲ. ಆಕೆ ಹಿಂದೆಯೂ, ಇಂದಿಗೂ, ಮುಂದೆಯೂ ಸ್ವಯಂಭೂ ಸುವರ್ಣಗರ್ಭೆ! ಮಾತೃ ಸ್ವರೂಪಿಣಿ! ಜಗತ್ತಿನ ಬೇರೆ ಯಾವ ರಾಷ್ಟ್ರಕ್ಕೂ 10,000 ವರ್ಷಗಳ ಬರೆದಿಟ್ಟ ಇತಿಹಾಸ ಇಲ್ಲ, ಅದು ಭಾರತಕ್ಕಿದೆ ಎಂಬಲ್ಲಿಗೆ ಭಾರತವು ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದುಬರುವ ಸಾಧ್ಯತೆಗಳು ನಮ್ಮ ಕಣ್ಣ ಮುಂದಿವೆ. ಭಾರತವು ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕ ಶಕ್ತಿ ಆಗ್ತಾ ಇದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ಇಮೇಜ್ ಹೆಚ್ಚಾಗ್ತಾ ಇದೆ. ನಮ್ಮ ಸುತ್ತಮುತ್ತಲಿನ ಪಾಕಿಸ್ತಾನ್, ಬಾಂಗ್ಲಾ ದೇಶ, ಶ್ರೀಲಂಕಾ, ಅಫ್ಘಾನಿಸ್ತಾನಗಳು ಆರ್ಥಿಕವಾಗಿ ನಡುಗಿದರೂ ಭಾರತದ ಆರ್ಥಿಕತೆಯ ಒಂದು ಇಟ್ಟಿಗೆ ಕೂಡ ಅಲುಗಾಡಿಲ್ಲ ಅನ್ನೋದು ನಮ್ಮ ಭರವಸೆಯ ಕಾರಣ. ಕೊರಾನಾ ಮಹಾಮಾರಿಯನ್ನು ಹೇಗೆ ಲಸಿಕೆಗಳ ಅಭಿಯಾನದ ಮೂಲಕ ಭಾರತವು ಗೆದ್ದಿತು ಎನ್ನುವ ನಿದರ್ಶನ ನಮ್ಮ ಮುಂದಿದೆ. ಇಸ್ರೋ ಕೈಗೊಳ್ಳುತ್ತಿರುವ ವ್ಯೋಮ ಕಾರ್ಯಕ್ರಮಗಳನ್ನು ಜಗತ್ತು ಬೆರಗುಗಣ್ಣಿಂದ ನೋಡುತ್ತಿದೆ. ಸ್ವಾತಂತ್ರ್ಯದ ನಂತರ ನಡೆದ ಪ್ರತೀಯೊಂದು ಯುದ್ಧವನ್ನು
(ಒಂದನ್ನು ಬಿಟ್ಟು) ಭಾರತವು ದೊಡ್ಡಮಟ್ಟದಲ್ಲಿ ಗೆದ್ದಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಈಗ ಭಾರತದ ಗೆಳೆತನಕ್ಕಾಗಿ ಕಾಯುತ್ತಿವೆ ಅಂದರೆ ಅದು ಎಷ್ಟೊಂದು ಅದ್ಭುತವಾದ ಪರಿವರ್ತನೆ.

2047ರ ಹೊತ್ತಿಗೆ ಭಾರತವು ವಿಕಸಿತ ರಾಷ್ಟ್ರವಾಗುವ ಭರವಸೆ ನಮ್ಮೆಲ್ಲರನ್ನೂ ಸದ್ಯಕ್ಕೆ ಕೈ ಹಿಡಿದು ಮುನ್ನಡೆಸಲಿ.

ಜೈ ಹಿಂದ್!

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

Exit mobile version