| ಮಯೂರಲಕ್ಷ್ಮಿ
ಇಂದು ಬ್ರಿಟಿಷರ ವಿರುದ್ಧ ಹೋರಾಟದ ಸಾಹಸಿ ಬಲಿದಾನಿ ಅಷ್ಫಾಕುಲ್ಲಾ ಖಾನ್ ಜನ್ಮ ದಿನ…
ಅಕ್ಟೋಬರ್ 22, 1900ರಲ್ಲಿ ಉತ್ತರ ಪ್ರದೇಶದ ಶಹಜಹಾನ್‍ಪುರದ ಶ್ರೀಮಂತ ಪಠಾನ್ ಕುಟುಂಬದಲ್ಲಿ ಜನಿಸಿದ್ದ ಅಷ್ಫಾಕುಲ್ಲಾ ಖಾನ್ ಸ್ನೇಹಿತ ರಾಮ್ ಪ್ರಸಾದ್ ಬಿಸ್ಮಿಲ್ ರಚಿಸಿದ್ದ ಸ್ವಾತಂತ್ರ ಗೀತೆಗಳು ಮತ್ತು ಉರ್ದು ಶಾಯರಿಗಳಿಂದ ಸ್ಫೂರ್ತಿ ಪಡೆದಿದ್ದ. ದೇಶವನ್ನು ತಾಯಿಯಂತೆ ಪ್ರೀತಿಸುತ್ತಾ ಅನೇಕ ಶಾಯರಿಗಳನ್ನು ರಚಿಸಿ ಹಾಡುತ್ತಿದ್ದ.
ಎಚ್.ಎಸ್.ಆರ್.ಎ ಸಂಘಟನೆ ಸೇರಿ ಆಜಾದ್ , ಭಗತ್ ಮತ್ತು ಬಿಸ್ಮಿಲ್ ಅವರೊಡನೆ ಹೋರಾಟಕ್ಕೆ ಸಿದ್ಧನಾಗಿದ್ದ. ಕ್ರಾಂತಿಕಾರಿಗಳ ಮುಂದಿನ ಯೋಜನೆ ಸಿದ್ಧವಾಗಿತ್ತು. ಬ್ರಿಟಿಷರ ಬೊಕ್ಕಸದಲ್ಲಿದ್ದ ಖಜಾನೆಯನ್ನು ವಶಪಡಿಸಿಕೊಳ್ಳುವ ತಂತ್ರ ಹೂಡಿದರು. ವಿವಿಧ ಪ್ರಾಂತಗಳಿಂದ ವಸೂಲಿಯಾಗಿದ್ದ ಅಪಾರ ಹಣ ಬ್ರಿಟಿಷ್ ಸರ್ಕಾರದ ಬೊಕ್ಕಸ ಸೇರಲು ಕಬ್ಬಿಣದ ಪೆಟ್ಟಿಗೆಗಳಲ್ಲಿ ರೈಲುಗಳಲ್ಲಿ ಸಾಗಣೆಯಾಗುತ್ತಿತ್ತು.
ಸಹರಾನ್‍ಪುರದ ರೈಲ್ವೇ ಲೈನಿನ ಬಳಿಯ ಕಾಕೋರಿ ಎನ್ನುವ ನಿಲ್ದಾಣದಲ್ಲಿ ಅವರೆಲ್ಲರೂ ಕಾಯುತ್ತಿದ್ದರು.
ರೈಲು ಕಾಕೋರಿ ನಿಲ್ದಾಣ ಬಿಡುತ್ತಿದ್ದಂತೆಯೇ ದ್ವಿತೀಯ ದರ್ಜೆಯ ಬೋಗಿಯಲ್ಲಿದ್ದ ಕ್ರಾಂತಿಕಾರಿಗಳು ಖಜಾನೆಯ ಬೋಗಿಯನ್ನು ಪ್ರವೇಶಿಸಿದರು. ಕಾವಲುಗಾರರಿಗೆ ಬಂದೂಕು ಗುರಿಯಿಟ್ಟು ಹೆದರಿಸಿದರು. ಪ್ರಯಾಣಿಕರು ಜೀವಭಯದಿಂದ ಸುಮ್ಮನಿದ್ದರು.
ಕ್ರಾಂತಿಕಾರಿಗಳು ಬೋಗಿಯನ್ನು ಎರಡೂ ಬದಿಗಳಿಂದ ಬಂದ್ ಮಾಡಿದರು. ಕಬ್ಬಿಣದ ಪೆಟ್ಟಿಗೆಗಳನ್ನು ಸುತ್ತಿಗೆಯಿಂದ ಒಡೆದದ್ದು ಭೀಮನಂತೆ ಬಲಶಾಲಿಯಾಗಿದ್ದ ಅಷ್ಫಾಕ್. ಭರಪೂರ ಐದು ಸಾವಿರ ರೂಪಾಯಿಗಳ ಖಜಾನೆ ವಶಪಡಿಸಿಕೊಂಡು ಯಾರಿಗೂ ಹಾನಿ ಮಾಡದೆ ಅಲ್ಲಿಂದ ಹೊರಟರು. ಅಂದಿನ ಸಾಹಸದಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ರಾಂತಿಕಾರಿ ಸ್ವಾತಂತ್ರ ಯೋಧ ಅಷ್ಫಾಕುಲ್ಲಾ ಖಾನ್ ತಂಡದ ತೀವ್ರ ಶೋಧ ಕಾರ್ಯಕ್ಕೆ ಬ್ರಿಟಿಷ್ ಸರ್ಕಾರ ಮುಂದಾಯಿತು.
ಘಟನೆ ನಡೆದ ಒಂದು ತಿಂಗಳ ನಂತರ ಬ್ರಿಟಿಷರು ರಾಂ ಪ್ರಸಾದ್ ಬಿಸ್ಮಿಲ್‍ರನ್ನು ಸೆರೆಹಿಡಿದರು.
ಆದರೆ ಅಷ್ಫಾಕುಲ್ಲಾ ಖಾನ್ ತಪ್ಪಿಸಿಕೊಂಡಾಗಿತ್ತು. ವಿದೇಶಕ್ಕೆ ಹೋಗಿ ಕ್ರಾಂತಿಯನ್ನು ತೀವ್ರಗೊಳಿಸುವುದು ಯೋಜನೆಯಾಗಿತ್ತು. ದೆಹಲಿಯಲ್ಲಿ ಮಾರುವೇಷದಲ್ಲಿದ್ದ. ಸ್ನೇಹಿತನೊಬ್ಬ ಮಾಡಿದ ದ್ರೋಹದಿಂದ ಬ್ರಿಟಷ್ ಪೋಲಿಸರಿಗೆ ಅಷ್ಫಾಕ್ ಸುಳಿವು ಸಿಕ್ಕಿತು. ಅವರನ್ನು ಸೆರೆಹಿಡಿದು ಫೈಸಾಬಾದ್ ಜೈಲಿನಲ್ಲಿರಿಸಿದರು.
ಇದನ್ನೂ ಓದಿ: Bhagat Singh Birthday | ಲೇಖನ | ಯುವಕರಿಗೆ ಸದಾ ಸ್ಫೂರ್ತಿ ಕ್ರಾಂತಿಕಾರಿ ಭಗತ್ ಸಿಂಗ್
ನ್ಯಾಯಾಲಯ ಬಿಸ್ಮಿಲ್, ಅಷ್ಫಾಕುಲ್ಲಾ ಖಾನ್ ಮತ್ತು ಇನ್ನಿಬ್ಬರು ಕ್ರಾಂತಿಕಾರಿಗಳ ಮೇಲೆ ಕಾಕೋರಿ ರೈಲು ದರೋಡೆಯ ಆಪಾದನೆ ಹೊರಿಸಿತು. 1027, ಡಿಸಂಬರ್ 17 ಅವರಿಗೆ ಫೈಸಾಬಾದ್ ಜೈಲಿನಲ್ಲಿ ಮರಣದಂಡನೆಯೆಂದು ನ್ಯಾಯಾಲಯ ಘೋಷಿಸಿತು. ಆ ದಿನ ಅಷ್ಫಾಕುಲ್ಲಾ ಖಾನ್ ದೇವರನ್ನು ಪ್ರಾರ್ಥಿಸಿ, ದೇಶಕ್ಕೆ ನಮಿಸಿ ನೇಣುಗಂಬವನ್ನೇರಿದ. ಸಾಹಸಿ ಅಷ್ಫಾಕುಲ್ಲಾ ಖಾನ್ ಬಲಿದಾನ ಅವಿಸ್ಮರಣೀಯ.
ಜೈ ಹಿಂದ್ ..!