Site icon Vistara News

Sir C V Raman Birth Day | ಬೆಳಕಿಗೆ ಬೆಳಕು ಚೆಲ್ಲಿದ ದಿಗ್ಗಜ ಸರ್ ಸಿ.ವಿ.ರಾಮನ್

C V Raman

| ಡಾ. ಡಿ ಸಿ ರಾಮಚಂದ್ರ, ಶೀಕ್ಷೇತ್ರ ಆದಿಚುಂಚನಗಿರಿ

ಭಾರತೀಯ ವಿಜ್ಞಾನ ಕ್ಷೇತ್ರದ ದಂತಕಥೆ ಹಾಗೂ ನೊಬೆಲ್ ಪಾರಿತೋಷಕ ಮುಡಿಗೇರಿಸಿಕೊಂಡು ಶಬ್ದ, ಬೆಳಕು, ಸ್ವರ, ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕ, ಭೌತವಿಜ್ಞಾನಕ್ಕೆ ಹೊಸ ಆಯಾಮ ನೀಡಿ, ಭೌತ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಸರು ಚಿರಸ್ಥಾಯಿಯಾಗಿ ನೆಲೆಗೊಳಿಸಿ ಶಾಶ್ವತ ಕೀರ್ತಿ ಪಡೆದ ಶ್ರೇಷ್ಠಾತಿ ಶ್ರೇಷ್ಠ ವಿಜ್ಞಾನಿ, ಅಪ್ರತಿಮ ಚಿಂತನಕಾರ ಪ್ರಯೋಗಶೀಲ ಪಟು, ಸರ್ ಸಿ.ವಿ.ರಾಮನ್(Sir C V Raman).

ಚಂದ್ರಶೇಖರ್ ವೆಂಕಟರಾಮನ್ ನವೆಂಬರ್ ೭, ೧೮೮೮ರಲ್ಲಿ ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್ ಎಂಬಲ್ಲಿ ಜನಿಸಿದರು. ತಂದೆ ಚಂದ್ರಶೇಖರ್ ತಾಯಿ ಪಾರ್ವತಿ ಅಮ್ಮಾಳ್. ರಾಮನ್‌ರ ತಂದೆ ಅಧ್ಯಾಪಕರಾಗಿದ್ದರು. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್‌ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಆದರೆ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮನ್ ಹದಿನಾರನೇ ವಯಸ್ಸಿನಲ್ಲೇ ಬಿ.ಎ. ಮುಗಿಸಿಕೊಂಡರು. ತರುವಾಯ ಎಂ.ಎ. ಪರೀಕ್ಷೆಯಲ್ಲಿ ಪಾಸಾಗಿ ಅರ್ಥಶಾಖೆಯ ಅಧಿಕಾರಿಯಾಗಿ ಸೇನೆಯಲ್ಲಿ ತೊಡಗಿದರು. ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು. ಡಾ. ರಾಮನ್ ಮೇ ೬, ೧೯೦೭ರಲ್ಲಿ ಲೋಕಸುಂದರಿ ಅಮ್ಮಾಳ್ ಎಂಬಾಕೆಯನ್ನು ವಿವಾಹವಾದರು, ರಾಮನ್, ಲೋಕಸುಂದರಿ ಅಮ್ಮಾಳ್ ದಂಪತಿಗಳಿಗೆ ಚಂದ್ರಶೇಖರ್ ಮತ್ತು ರಾಧಾಕೃಷ್ಣನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.

ರಾಮನ್ ಮಹೋನ್ನತ ಆವಿಷ್ಕಾರ
ರಾಮನ್ ಪರಿಣಾಮ ಎಂಬ ತತ್ವವು ವಿಜ್ಞಾನಕ್ಕೆ ಸರ್ ಸಿ.ವಿ.ರಾಮನ್‌ರ ದೊಡ್ಡ ಕೊಡುಗೆ. ಆಕಾಶದ ನೀಲಿ ಬಣ್ಣ ಅವರನ್ನು ವಿಸ್ಮಯಗೊಳಿಸಿತ್ತು. ಅದು ಹೇಗೆ ಸಾಧ್ಯ? ಎಂಬ ಪ್ರಶ್ನೆ ರಾಮನ್‌ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತಾ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತಾ ಹಡಗಿನ ತುಂಬಾ ಓಡಾಡುತ್ತಿದ್ದರಂತೆ, ರಾಮನ್‌ರ ಸಹಪ್ರಯಾಣಿಕರು ಇಸ್ಪೀಟ್ ಬಿಂಗೋಗಳನ್ನು ಆಡುತ್ತಿದ್ದಾಗ ರಾಮನ್ ಒಂದು ಪ್ಯಾಕೆಟ್ ಸ್ಪೆಕ್ಟೊಮೀಟರ್‌ನಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದರು. ಹಾಗೂ ವಿವಿಧ ಮಾಧ್ಯಮಗಳಲ್ಲಿ ಬೆಳಕು ಪಸರಿಸುವ ಬಗ್ಗೆ ಒಂದು ಲೇಖನವನ್ನು ಬರೆದರು.

ಬೆಳಕಿನ ಆ ಸಂಶೋಧನೆ
ರಾಮನ್ ಇದೇ ವಿಷಯದ ಮೇಲೆ ಗಂಭೀರ ಸಂಶೋಧನೆ ಆರಂಭಿಸಿದರು. ವಿವಿಧ ರೀತಿಯ ದ್ರವಗಳ ಮೂಲಕ ಅವರು ಬೆಳಕಿನ ರಶ್ಮಿಗಳನ್ನು ಹಾಯಿಸಿ ಅವುಗಳ ಪರಿಣಾಮಗಳ ಅಧ್ಯಯನ ಮಾಡಿದರು. ಒಂದೇ ಬಣ್ಣದ ಬೆಳಕನ್ನು ಒಂದು ದ್ರವದ ಮೂಲಕ ಹಾಯಿಸಿದಾಗ ಬೆಳಕಿನ ಆ ಭಾಗ ಹಾಗೂ ದ್ರವದ ಕಣಗಳು ಪರಸ್ಪರ ಕಲೆತು ಬೆಳಕನ್ನು ಚದುರಿಸುತ್ತದೆ. ಆಗ ಹೊರಸೂಸುವ ಬೆಳಕು ಮೂಲ ಕಿರಣಕ್ಕಿಂತ ಭಿನ್ನವಾದ ಬಣ್ಣವನ್ನೇ ಹೊಂದಿರುತ್ತದೆ. ಅದು ಪ್ರಾಸಂಗಿಕ ಬೆಳಕಿಗೆ ಸಂಬಂಧಿಸಿದಂತೆ ಶಕ್ತಿಯ ಹೆಚ್ಚಿನ ಹಾಗೂ ಕೆಳಗಿನ ಸ್ತರಗಳಿಗೆ ಮಾರ್ಪಡುತ್ತದೆ ಎಂಬುದನ್ನು ಕೊನೆಗೆ ೧೯೨೮ರಲ್ಲಿ ಸ್ಥಿರಪಡಿಸಿದರು. ಇದೇ ಬಹುಪ್ರಸಿದ್ಧವಾದ ಹಾಗೂ ನಂತರ ನೋಬೆಲ್ ಪಾರಿತೋಷಕ ತಂದುಕೊಟ್ಟ ‘ರಾಮನ್ ಪರಿಣಾಮ’ ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ.

ರಾಮನ್‌ರವರಿಗೆ ಮನ್ನಣೆ ಗೌರವಗಳು ಬರುವುದಕ್ಕೆ ತಡವಾಗಲಿಲ್ಲ. ರಾಯಲ್ ಸೊಸೈಟಿಯಲ್ಲಿ ಸರ್ ಅರ್ನೆಸ್ಟ್ ರುಥರ್‌ಪೋರ್ಡ್ ರಾಮನ್ ಪರಿಣಾಮದ ಶೋಧ ಲೇಖನವನ್ನು ಪ್ರಕಟಿಸಿದರು. ಬ್ರಿಟಿಷ್ ಸರ್ಕಾರ ರಾಮನ್‌ ಅವರಿಗೆ ನೈಟ್‌ಹುಡ್ ಪ್ರಶಸ್ತಿ ಪ್ರದಾನ ಮಾಡಿತು. ೧೯೩೦ರ ಡಿಸೆಂಬರ್ ೩೧ರಂದು ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಪಾರಿತೋಷಕ ಬಂದಿತು. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯನ್ ಜನಾಂಗದವರಲ್ಲಿ ಇವರೇ ಮೊದಲಿಗರು. ಇವರಿಗೂ ಮುಂಚೆ ರವೀಂದ್ರನಾಥ ಠಾಗೂರರು ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದರು. ನಂತರ ೧೯೮೩ರಲ್ಲಿ ರಾಮನ್‌ರವರ ಸೋದರ ಅಳಿಯ ಸುಬ್ರಹ್ಮಣ್ಯನ್ ಚಂದ್ರಶೇಖರ್ ನೊಬೆಲ್ ಪ್ರಶಸ್ತಿ ಗಳಿಸಿದರು.

ಗೌರವ ಪ್ರಶಸ್ತಿಗಳು
ರಾಮನ್ ಅವರಿಗೆ ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ(೧೯೨೪), ನೈಟ್ ಹುಡ್ ಪ್ರಶಸ್ತಿ (೧೯೨೯), ನೊಬೆಲ್ ಪ್ರಶಸ್ತಿ (೧೯೩೦), ಮೈಸೂರು ಮಹಾರಾಜರಿಂದ ರಾಜಸಭಾ ಭೂಷಣ ಗೌರವ(೧೯೩೫), ಭಾರತ ರತ್ನ(೧೯೫೪) ಪ್ರಶಸ್ತಿಗಳು ಸಂದಿವೆ.

ಬೆಂಗಳೂರು ನಂಟು
ರಾಮನ್ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಸ್ಥಾಪಕ ಸದಸ್ಯರಾಗಿದ್ದರು. ರಾಮನ್ ಸಂಗೀತ ವಾದ್ಯಗಳ ದ್ವತಿಗತಿ ವಿಜ್ಞಾನದ ಮೇಲೂ ಕೆಲಸ ಮಾಡಿದರು. ಅವರು ಅಧ್ಯಾರೋಪಣ ವೇಗದ ಆಧಾರದ ಮೇಲೆ ಕಮಾನು ತಂತಿಗಳ ಅಡ್ಡಕಂಪನಗಳ ಸಿದ್ಧಾಂತವನ್ನು ರೂಪಿಸಿದರು. ತಬಲ ಮತ್ತು ಮೃದಂಗ ಮುಂತಾದ ಭಾರತೀಯ ಚರ್ಮ ವಾದ್ಯಗಳ ಶಬ್ದದ ಆವರ್ತಕ ಸ್ವರೂಪವನ್ನು ಕಂಡುಹಿಡಿದವರಲ್ಲಿ ಮೊದಲಿಗರು. ೧೯೪೩ರಲ್ಲಿ ಟ್ರಾವಂಕೂರ್ ಕೆಮಿಕಲ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್ ಎಂಬ ಕಂಪನಿಯನ್ನು ಆರಂಭಿಸಿದರು.
೧೯೩೪ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ.ರಾಮನ್ ನಂತರ ೧೯೪೩ರಲ್ಲಿ ರಾಮನ್ ಸಂಶೋಧನಾ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಪ್ರೊ. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ರಾಮನ್ ರೀಸರ್ಚ್ ಇನ್ಸಿಟಿಟ್ಯೂಟ್ ಎಂಬ ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಅವರ ಜೀವಿತ ಕಾಲದಲ್ಲೇ ಸ್ಥಾಪಿಸಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು. ಭಾವಿ ಸಂಶೋಧಕರಿಗೆ ಬಿಟ್ಟು ಹೋಗಿರುವ ಈ ಸಂಸ್ಥೆ ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನಾ ಸಂಸ್ಥೆಯಾಗಿದೆ. ಭಾರತ ರತ್ನ ಪ್ರಶಸ್ತಿ ಮತ್ತು ನೊಬೆಲ್ ಪಾರಿತೋಷಕ ಪಡೆದ ಸರ್ ಸಿ.ವಿ.ರಾಮನ್ ನವೆಂಬರ್ ೨೧ ೧೯೭೦ ರಂದು ನಿಧನರಾದರು.

ರಾಮನ್‌ಗೆ ನೊಬೆಲ್ ಪ್ರಶಸ್ತಿ ಬಂದ ಸುದಿನವನ್ನು ಭಾರತ ದೇಶದಲ್ಲಿ ಫೆ.೨೮ ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಆ ಮೂಲಕ ರಾಮನ್ ಹೆಸರನ್ನು ಹಸಿರಾಗಿರಿಸಿದ್ದಾರೆ.

ರಾಮನ್ ಸಂಕ್ಷಿಪ್ತ ನೋಟ
| ೧೨ನೇ ವಯಸ್ಸಿನಲ್ಲೇ ಮೆಟ್ರಿಕ್ಯುಲೆಶನ್ ಪೂರ್ಣ.
| ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎಸ್ಸಿ (೧೯೦೪) ಪದವಿ.
| ಎಂ.ಎಸ್ಸಿ (೧೯೦೭) ಪದವಿ.
| ೧೯೦೭ರಲ್ಲಿ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣ.
| ಕೋಲ್ಕೊತಾದಲ್ಲಿ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ವೃತ್ತಿ ಜೀವನ ಆರಂಭಿಸಿದರು.
| ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.
| ೧೯೧೭ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾದರು.
| ೧೯೨೪ರಲ್ಲಿ ಲಂಡನಿನ ಫೆಲೋ ಆಫ್ ರಾಯಲ್ ಸೊಸೈಟಿಗೆ ಆಯ್ಕೆಯಾದರು.

ಇದನ್ನೂ ಓದಿ | Dr APJ Abdul Kalam Birthday | ಭವ್ಯ ಭಾರತದ ಕನಸುಗಾರ, ಜನರ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ

Exit mobile version