ಮಾರುತಿ ಪಾವಗಡ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಹದಿನೈದು ದಿನಗಳು ಕಳೆದು ಹೋಗಿವೆ. ಅದರಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಗ್ಯಾರಂಟಿಗಳಿಗೆ ಸರ್ಕಾರ ಮುದ್ರೆ ಒತ್ತಿದೆ. ಇನ್ನೇನ್ನಿದ್ದರೂ ಜನರ ಕೈಗೆ ಈ ಗ್ಯಾರಂಟಿ ಸೇರುವುದು ಮಾತ್ರ ಬಾಕಿಯಿದೆ. ಈ ನಡುವೆ ಹೊಸ ಸರ್ಕಾರ ಬಂದ ಮೇಲೆ ಹಲವು ನಡೆಗಳು ಬಹಳ ಚರ್ಚೆ ಆಗ್ತಿವೆ. ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ವಿಧಾನಸೌಧದಲ್ಲಿ ಗಿಜಿಗಿಡುವ ಜನ ಮತ್ತು ಕೈ ಕಾರ್ಯಕರ್ತರ ಮಾತುಗಳು ಭಾರಿ ಸದ್ದು ಆಗುತ್ತಿವೆ.
ರೌಂಡ್ ಟೇಬಲ್ ಸ್ನೇಹಿತರು ದೂರವಾದರಾ?
ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡು ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾದಾಗ ಇದ್ದ ಟೀಮ್ ಈಗ ಕಾಣಿಸುತ್ತಿಲ್ಲ. ಸಿದ್ದರಾಮಯ್ಯಗೆ ಅಂದು ಸಾಥ್ ಕೊಟ್ಟವರು ವಿ.ಎಸ್ ಉಗ್ರಪ್ಪ, ಎಚ್ ಎಂ ರೇವಣ್ಣ, ಪ್ರಕಾಶ್ ರಾಥೋಡ್, ಆಶೋಕ್ ಪಟ್ಟಣ್. ಸರ್ಕಾರ ಬರುವವರೆಗೂ ಸಿದ್ದರಾಮಯ್ಯ ಜತೆ ಕಾಣಿಸಿಕೊಳ್ಳುತ್ತಿದ್ದ ಪಟ್ಟಣ್, ಉಗ್ರಪ್ಪ, ರಾಥೋಡ್ ಕಾಣಿಸಿಕೊಳ್ಳದಿರುವುದು ಕೆಪಿಸಿಸಿಯಲ್ಲಿ ಚರ್ಚೆ ಆಗ್ತಿದೆ.
40% ಬ್ರಾಂಡ್ ಬದಲಿಸಲು ಸಾಧ್ಯವಿಲ್ಲ!
ನಮಗೆ ಪತ್ರಕರ್ತರಿಗೆ ವಿಧಾನಸೌಧದಲ್ಲಿ ಡಿ ದರ್ಜೆಯ ನೌಕರರ ಸಂಪರ್ಕ ಹೆಚ್ಚು. ಯಾಕೆಂದರೆ ಅಧಿಕಾರಿಗಳಿಂದ ಸಿಗದ ಮಾಹಿತಿ ಡಿ ದರ್ಜೆಯ ನೌಕರರಿಂದ ಸಿಗುತ್ತದೆ. ಇದೇ ರೀತಿ ರೌಂಡ್ ಹಾಕುತ್ತಿದ್ದಾಗ ಪರಿಚಿತ ಡಿ ದರ್ಜೆ ಸಿಬ್ಬಂದಿಯೊಬ್ಬರು, ಹೆಂಗ್ ಅಣ್ಣಾ ಸಿದ್ದಣ್ಣನ ಸರ್ಕಾರ ಅಂದ್ರು. ಪರವಾಗಿಲ್ಲ, ಬಂದ ಹದಿನೈದು ದಿನಕ್ಕೆ ಗ್ಯಾರಂಟಿ ಜಾರಿ ಮಾಡಿದ್ರು, ಅದರಲ್ಲಿ ಒಂದಷ್ಟು ತಪ್ಪುಗಳಿದ್ದರೂ ಬಹುಸಂಖ್ಯಾತರಿಗೆ ಅನುಕೂಲ ಅಂದೆ. ಸ್ವಲ್ಪ ಭ್ರಷ್ಟಾಚಾರ ಸಹ ಕಡಿಮೆ ಆಗಬಹುದು ಎಂದೂ ಮಾತು ಸೇರಿಸಿದೆ. ಅವರು ನನಗೆ ತಿರುಗಿ ಹೇಳಿಯೇ ಬಿಟ್ಟರು: ಮಲ್ಯ ವಿದೇಶಕ್ಕೆ ಹಾರಿದರೂ ಅವನ ಕಿಂಗ್ ಫಿಶರ್ ಬ್ರಾಂಡ್ ಮಾತ್ರ ಕಡಿಮೆ ಆಗಲಿಲ್ಲ. ನಮ್ಮ ವಿಧಾನಸೌಧದಲ್ಲೂ ಕೂಡ ಅಷ್ಟೇ. ಸರ್ಕಾರ ಯಾವುದೇ ಪಕ್ಷದ್ದು ಬಂದರೂ 40 % ಭ್ರಷ್ಟಾಚಾರದ ಬ್ರಾಂಡ್ ಬದಲಾಗಲ್ಲ. ಸ್ವಲ್ಪ ಹೆಚ್ಚಿಗೆ ಆಗಬಹುದು ಅನ್ನೋದಾ?!
ಚಿಕ್ಕಬಳ್ಳಾಪುರದ ಯುವ ಶಾಸಕನ ಕಿರಿಕಿರಿಗೆ ಕೈ ನಾಯಕರು ಸುಸ್ತು
ಈ ಚಿಕ್ಕಬಳ್ಳಾಪುರದ ಶಾಸಕನ ನಡೆನುಡಿ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಆಗುತ್ತಿದೆ. ಕೆಲವರು ಇವನೊಬ್ಬ ಅಂಡೆಪಿರಕಿ ಅಂದರೆ, ಕೆಲವರು ರಾಜಕಾರಣಿ ಹೀಗೆಯೇ ಇರಬೇಕು ಅಂತಿದ್ದಾರೆ. ಆದ್ರೆ ತೆಲುಗಿನಲ್ಲಿ ಅಕ್ಕೋ ಅಮ್ಮೋ ಅನ್ನೋ ಈ ಮಹಾನುಭಾವನ ಕಿರಿಕಿರಿ ಮಿತಿ ಮೀರಿದೆ ಅನ್ನುವವರೂ ಇದ್ದಾರೆ. ಫೋನ್ ನಂಬರ್ ಕೊಡ್ತಾನೆ ರಿಸೀವ್ ಮಾಡಲ್ಲ. ಬರೀ ಹೇಳ್ತಾನೆ, ಹೇಳೋದನ್ನ ಮಾಡಲ್ಲ. ಆಕಾಶ ತೋರಿಸುತ್ತಾನೆ, ನೆಲ ಮರೆತುಬಿಟ್ಟಿದ್ದಾನೆ. ಈ ನಡೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಹಲವರಿಗೆ ಬೇಸರ ತರಿಸಿದೆಯಂತೆ. ಯಾಕೆಂದರೆ ಈ ಅಣ್ಣಾ ಕ್ಯಾಮೆರಾ ಇಲ್ಲದೇ ಕೆಲಸ ಮಾಡಲ್ಲ. ಕಾಂಗ್ರೆಸ್ ಗಾಳಿಯಲ್ಲಿ ಗೆದ್ದ ಅಣ್ಣಾ ಕಾರ್ಯಕರ್ತರನ್ನ ಬಾಯಿಗೆ ಬಂದ ಹಾಗೆ ಮಾತನಾಡ್ತಾನೆ. ಈ ದೂರು ಕೆಪಿಸಿಸಿವರೆಗೂ ಬಂದಿದೆ. ಈತನ ಆಕ್ಟಿಂಗ್ ನೋಡಿದ ಹಲವರು ಇದೇ ಫಸ್ಟ್ ಇದೇ ಲಾಸ್ಟ್ ಅಂತಿದ್ದಾರೆ!
ಡಿಸಿಎಂ ಆದ ಮೇಲೆ ಡಿಕೆಶಿ ಬದಲಾಗಿದ್ದಾರೆ
ಡಿ ಕೆ ಶಿವಕುಮಾರ್ ಡಿಸಿಎಂ ಆಗಿ ಮೂರನೆಯ ಮಹಡಿಯಲ್ಲಿ ಮೂರು ರೂಮ್ ಪಡೆದ ಮೇಲೆ ಓವರ್ ಸ್ಪೀಡ್ ಆಗಿದ್ದಾರೆ. ಇವರ ಸ್ಪೀಡ್‌ಗೆ ಅಧಿಕಾರಿಗಳು ಸೈಡ್ ಕೊಟ್ಟು ದೂರದಲ್ಲಿ ಅವಿತು ಕುಳಿತುಕೊಳ್ಳುತ್ತಿದ್ದಾರೆ. ಅವರೇಕೆ ಈಗ ಮೀಡಿಯಾದವರು ಸಹ ಡಿಸಿಎಂ ನೋಡಿದ್ರೆ ದೂರ ಹೋಗುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಇನ್ನು ಶಾಸಕರು ಇವರ ಮೇಲೆ ಕೊಡುವ ದೂರು ಮಾತ್ರ ಬದಲಾಗಿಲ್ಲ. ಹೀಗಾಗಿ ಅವರ ಹಿತೈಷಿ ಒಬ್ಬರು, ಏನ್ರಿ ಇನ್ನೂ ಐದು ವರ್ಷ ನಿಮ್ಮದೇ ಸರ್ಕಾರ ಅಂದ್ವಿ. ಏನು ಬಂತು ನಮ್ಮ ಸಾಹೇಬರು ಅಧಿಕಾರಿಗಳ ಮೇಲೆ ಗುರ್ ಗುರ್ ಅಂತಾರೆ, ಶಾಸಕರ ನೋಡಿ ಅರ್ಧತಲೆ ಎತ್ತಿ ಏನ್ ಎನ್ ಅನ್ನೋದು ಬಿಟ್ಟಿಲ್ಲ. ಇನ್ನು ಕೊನೆಯವರೆಗೂ ಡಿಕೆಶಿನೇ ಸಿಎಂ ಎಂದು ಬ್ರೇಕಿಂಗ್ ಹಾಕಿದ ಮೀಡಿಯಾದವರ ಮೇಲೂ ಸಿಟ್ಟು ಮಾಡಿಕೊಂಡವರೇ ಅಂದು ಬಿಡೋದಾ?
ಇದನ್ನೂ ಓದಿ : D ಕೋಡ್ ಅಂಕಣ: ಕ್ರೀಡಾ ಸಂಸ್ಥೆಗಳಿಂದ ರಾಜಕಾರಣಿಗಳನ್ನು ಹೊರಹಾಕುವುದು ಯಾವಾಗ?
ಪಕ್ಷ ಅಧಿಕಾರಕ್ಕೆ ಬಂದರೂ ಕಾಂಗ್ರೆಸ್ ವಕ್ತಾರರಿಗೆ ಒಂದು ಥ್ಯಾಕ್ಸ್ ಹೇಳಲಿಲ್ಲ!
ಪಕ್ಷ ಅಧಿಕಾರಕ್ಕೆ ತರಲು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಎಷ್ಟು ಮುಖ್ಯವೋ ಮಾಧ್ಯಮಗಳಲ್ಲಿ ಪಕ್ಷದ ಪರ ಸಮರ್ಥನೆ ಸಹ ಅಷ್ಟೇ ಮುಖ್ಯ. ನಿನ್ನೆ ಒಬ್ಬರು ವಕ್ತಾರರು ಸಿಕ್ಕಿದ್ರು. ಬಿಡ್ರಿ ನಿಮ್ಮ ಕಷ್ಟಕ್ಕೆ ಫಲ ಸಿಕ್ತು ಅಂದೆ. ಎಲ್ರೀ ನಮ್ಮನ್ನ ಯಾರೂ ಕೇಳೋರಿಲ್ಲ. ನಮ್ಮದು ಬರೀ ಬಿಜೆಪಿ ಮತ್ತು ನಿಮ್ಮ ಆಂಕರ್‌ಗಳ ಜತೆ ಗುದ್ದಾಡುವುದೇ ಕಾಯಕವಾಗಿದೆ. ಈ ಕ್ಷಣಕ್ಕೂ ಒಂದು ಸಭೆ ಕರೆದು ಥ್ಯಾಂಕ್ಸ್ ಹೇಳಲಿಲ್ಲ ಅಂದರು. ಬೇಸರಿಸಿಕೊಳ್ಳಬೇಡಿ ನಿಗಮ, ಮಂಡಳಿ ಇದೆ ಅಂದೆ. ನಮಗೆ ಮಾಧ್ಯಮವೇ ಮಂಡಳಿ, ಮಾಧ್ಯಮವೇ ನಿಗಮ ಅಂದು ಬಿಟ್ಟರು. ಪಾಪ ಪಕ್ಷ ಸಮರ್ಥನೆ ಮಾಡಿದವರಿಗೆ ಒಂದು ಥ್ಯಾಂಕ್ಸ್ ಹೇಳಿದ್ರೆ ಇವರದ್ದು ಏನು ಹೋಗ್ತಿತ್ತು ಅನ್ನೋ ಬೇಸರ ಸಹಜ.
ವಿಧಾನಸೌಧದ ಮೂರನೇ ಮಹಡಿಗೆ ಟ್ರಾಫಿಕ್ ಪೊಲೀಸ್ ಬೇಕು
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ವಿಧಾನಸೌಧದ ಮೂರನೇ ಮಹಡಿ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಕಚೇರಿ ಮರೆತುಬಿಟ್ಟಿದ್ದಾರೆ. ಬಾವುಟ ಕಟ್ಟಿದವರು, ಕಟ್ಟದೇ ಇರೋರು ವಿಧಾನಸೌಧ ಸೇರಿದ್ದಾರೆ. ಅದರಲ್ಲೂ ಕನಕಪುರ, ಬೆಳಗಾವಿ ಮೇಡಂ ಟೀಮ್ ಕಚೇರಿ ಮುಂದೆ ಒಬ್ಬ ಟ್ರಾಫಿಕ್ ಪೊಲೀಸ್‌ನ ಹಾಕಬೇಕು ಅನ್ನೋ ಮಾತು ವಿಧಾನಸೌಧದಲ್ಲಿ ಕೇಳಿ ಬರುತ್ತಿದೆ.