Site icon Vistara News

ಸಾಲಭಂಜಿಕೆ ಅಂಕಣ| ಬಳೆಗಾರನಿಗೇಕೆ ಹಾಡುವ ಪಾಡು?

k s narasimhaswmi

(ಭಾಗ ೧)

ಬಳೆಗಾರನ ಹಾಡು ಕೆ.ಎಸ್.‌ ನರಸಿಂಹ ಸ್ವಾಮಿಯವರ ಬಹಳ ಹಳೆಯ ಮತ್ತು ಅತ್ಯಂತ ಜನಪ್ರಿಯ ಪದ್ಯ. ಒಂದು ಕವನ ಅದೆಷ್ಟು ಸೂಕ್ಷ್ಮ, ಅದೆಷ್ಟು ಸಂಕೀರ್ಣ ಎಂದು ತಿಳಿಯಲು ಈ ಪದ್ಯವನ್ನು ನಾನು ಮತ್ತೆ ಮತ್ತೆ ಓದುವುದಿದೆ. ಒಂದು ಓದಿನಲ್ಲಿ ಎಲ್ಲವನ್ನೂ ಹೇಳಿಬಿಟ್ಟ ಹಾಗೆನಿಸುವ ಈ ಪದ್ಯವನ್ನು ಹೊಸೆದಿರುವ ರೀತಿಯನ್ನು ಗಮನಿಸಬೇಕು.

ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನಗಳ ಪ್ರಪಂಚ ಒಬ್ಬ ಕನಸುಗಾರ ಕನಸಬಲ್ಲ ಗ್ರಾಮೀಣ ಪ್ರಪಂಚ. ಆ ಪ್ರಪಂಚದಲ್ಲಿ ಇಡೀ ಗ್ರಾಮವೇ ಒಟ್ಟು ಸಹಬಾಳ್ವೆ ನಡೆಸಿದಂತೆ ಭಾಸವಾಗುತ್ತದೆ. ಅಲ್ಲಿ ಶಾನಭೋಗರ ಮಗಳಿಗೆ ಸರಿಯಾದ ಗಂಡು ಸಿಗಲಿ ಎಂದು ಹಳ್ಳಿಗೆ ಹಳ್ಳಿಯೇ ಹಾರೈಸುತ್ತದೆ. ಹಾಗೆ ನೋಡಿದರೆ ಅಲ್ಲಿ ನವಿಲೂರಿಗೂ ಹೊನ್ನೂರಿಗೂ ಅಂತಹಾ ವ್ಯತ್ಯಾಸವೂ ಏನೂ ಇಲ್ಲ. ಎರಡೂ ಊರುಗಳೂ ಅಕ್ಕರೆಯ ರಮ್ಯ ತಾಣಗಳೇ. ಜೋಯಿಸರು, ನೆರೆಹೊರೆಯವರು, ಬಳೆಗಾರ, ಶಾನುಭೋಗರು ಇವರೆಲ್ಲರ ಮನಸ್ಸೂ ಚೊಕ್ಕ, ಮಮತೆಯ ಕೊಡ ಮತ್ತು ಇವರೆಲ್ಲರೂ ಯಾವ ಬೇಧ ಭಾವವೂ ಇಲ್ಲದೆ ಜನಪದ ಜಗತ್ತಿನಲ್ಲಿ ಕಾಣಬಹುದಾದ ಕೂಡು ಬಾಳುವೆಯನ್ನು ನಡೆಸುವವರು. ಇಂತಹಾ ಒಂದು ಊರಿನ ಮುದ್ದಿನ ಹೆಣ್ಣುಮಗಳು ಪದುಮ. (ಅವಳು ನರಸಿಂಹಸ್ವಾಮಿಯವರ ಕಾವ್ಯದ ನಾಯಕಿಯಾದ್ದರಿಂದ ನಮಗೆ ಹಾಗೆನ್ನಿಸುತ್ತದೆ. ಅಲ್ಲಿರುವ ಎಲ್ಲರೂ ಎಲ್ಲರಿಗೂ ಪ್ರಿಯ ಜೀವಗಳೇ.). ಅವಳೀಗ ತುಂಬು ಗರ್ಭಿಣಿ. ವಾಡಿಕೆಯಂತೆ ತವರಿನವರು ಕರೆದುಕೊಂಡು ಹೋಗಿದ್ದಾರೆ. ಅವಳಿಗೆ ಸೀಮಂತ.

ಕೆ ಎಸ್‌ ನರಸಿಂಹಸ್ವಾಮಿ

ಕವನ ಆರಂಭವಾಗುವುದು ಒಬ್ಬ ಬಳೆಗಾರ ಬರುವುದರ ಮೂಲಕ. ಅವನು ನಾಯಕನಿಗೆ ಪರಿಚಿತನೇ. ಏಕೆಂದರೆ ತನ್ನ ಹೆಸರು ಚೆನ್ನಯ್ಯ ಎಂದು ಹೇಳಿ ನೆನಪು ಮಾಡಿಕೊಡುತ್ತಿದ್ದಾನೆ. ಅವನು ಮಾತು ಆರಂಭಿಸುವ ರೀತಿ ನೋಡಿ. ಒಳಗಿದ್ದವನನ್ನು ದೊರೆ ಎಂದು ಸಂಬೋಧಿಸುತ್ತಾ ತಾನು ಅವನ ಮನೆ ಬಾಗಿಲಿಗೆ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ. ಮನೆಗೆ ಬರುವುದು ಬೇರೆ, ಬಾಗಿಲಿಗೆ ಬರುವುದು ಬೇರೆ. (ಮತ್ತೊಬ್ಬನ ಮನೆಯ ಬಾಗಿಲಲ್ಲಿ ನಿಲ್ಲುವುದು ಎಂದರೆ ಅದು ಬೇಡುವವನ ಸ್ಥಿತಿ). ಮುಂದೆ ಹೋಗು ಎನ್ನುವ ಮೊದಲೇ ನವಿಲೂರ ಮನೆಯಿಂದ ನುಡಿಯನ್ನು ತಂದಿದ್ದೇನೆ ಎಂದು ಹೇಳುವ ಮೂಲಕ ನಾಯಕನ ಗಮನವನ್ನು ತನ್ನತ್ತ ಸೆಳೆದುಕೊಳ್ಳುತ್ತಾನೆ. ಮುಂದಿನ ಸಾಲು ಇದೆಯಲ್ಲಾ ಅದು ನನ್ನನ್ನು ಯಾವತ್ತೂ ಬೆರಗಾಗಿಸುವ ಸಾಲು. “ಬಳೆಯ ತೊಡಿಸುವುದಿಲ್ಲ ನಿಮಗೆ” ಎನ್ನುವ ಬಳೆಗಾರ ಆ ಮಾತಿನ ಮೂಲಕ ಎರಡು ಹಕ್ಕಿಯನ್ನು ಹೊಡೆಯುತ್ತಾನೆ. ಬಳೆ ತೊಡಿಸುವುದು ಬಳೆಗಾರನ ವ್ಯಾಪಾರ. ತಾನಿಲ್ಲಿ ವ್ಯಾಪಾರಕ್ಕೆ ಬಂದಿಲ್ಲ, ಇದು ವ್ಯಾಪಾರಕ್ಕೆ ಹೊರತಾದ್ದು ಎಂಬುದು ವಾಚ್ಯಾರ್ಥ. ಹೆಣ್ಣಿಲ್ಲದ ಮನೆಯ ಬಾಗಿಲಿಗೆ ಬಳೆಗಾರ ಬಂದಿದ್ದಾನೆ, ಅಲ್ಲಿರುವ ಗಂಡಿಗೆ ಅವನು ಬಳೆಯನ್ನು ತೊಡಿಸುವುದಿಲ್ಲ ಎಂಬುದು ನಾಯಕನಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೂ ಹಾಗೆ ಹೇಳುವ ಮೂಲಕ ತಾನು ನಿಮಗೆ ಅಪಮಾನ ಮಾಡಲು ಮಂದಿಲ್ಲ ಎಂಬ ಮಾತನ್ನೂ ಸೂಕ್ಷ್ಮವಾಗಿ ನಾಯಕನಿಗೆ ಬಳೆಗಾರ ದಾಟಿಸುತ್ತಿದ್ದಾನೆ. ಅಂದರೆ ತಾನು ನಿಮ್ಮ ತಪ್ಪನ್ನು ಎತ್ತಿ ತೋರಿಸುತ್ತಿಲ್ಲ, ಅವಳ ಸಂಕಟವನ್ನು ಮಾತ್ರ ಹೇಳುತ್ತಿದ್ದೇನೆ ಎಂದು ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವ ವೈಖರಿ. ಅವನಿಗೇಕೆ ಈ ಕಷ್ಟ ? ಏಕೆಂದರೆ ಅವಳು ಅವನೂರ ಮಗಳು. ಹೀಗೊಂದು ತುಂಬು ಜಗತ್ತನ್ನು ಕಟ್ಟಿಕೊಡುತ್ತ ಮೈಮರೆಸುತ್ತಾರೆ ಕೆಎಸ್‌ನ. (ಗಂಡಿಗೆ ಬಳೆ ತೊಡಿಸುವುದೆಂದರೆ ಕಡಿಮೆ ಅಪಮಾನವೇ ನಮ್ಮ ಸಮಾಜದಲ್ಲಿ?)

ಆ ನುಡಿಯಾದರೂ ಏನು ಎಂದು ರಾಯರು ಆತಂಕ ಮಾಡಿಕೊಳ್ಳದಿರಲು, ಮಲ್ಲಿಗೆಯರಳು ಬಾಡದಷ್ಟು, ಕುಡಿದ ನೀರು ಅಲುಗದಷ್ಟು ಚೆನ್ನಾಗಿಯೇ ತವರಿನಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದು ಮೊದಲೇ ಹೇಳಿ ಅಮ್ಮನಿಗೆ ಬಳೆಯ ತೊಡಿಸಿದರು ಎಂಬ ಮಾತು ಮುಟ್ಟಿಸುತ್ತಾನೆ. ಇಲ್ಲಿಂದ ವಿಷಯ ಹೇಳುವ ಆರೋಹಣ ಆರಂಭವಾಗುತ್ತದೆ. ಅದು ಕತ್ತಿಯ ಅಲುಗಿನ ಮೇಲೆ ನಡೆದಂತಹಾ ಕಡು ಎಚ್ಚರಿಕೆಯ ಆರೋಹಣ. ಒಂದು ರಾಜಿಗೆ ಬೇಕಾದ ಮಾತುಗಳನ್ನು ಆಡಬೇಕಾದರೆ ಅದೆಷ್ಟು ಹಿಡಿತವಿರಬೇಕು, ಅದೆಷ್ಟು ತೂಕವಿರಬೇಕು ಮಾತಿನಲ್ಲಿ ಎಂಬುದನ್ನು ಚೆನ್ನಯ್ಯನ ಮಾತುಗಳಲ್ಲಿ ಕಲಿಯಬೇಕು. ಚೆನ್ನಯ್ಯನಿಗೇಕೆ ಅಷ್ಟು ಆಸ್ಥೆ ಎಂದು ಅನುಮಾನಿಸಬಾರದು ಈ ಮುನಿಸಿಕೊಂಡ ಗಂಡ ಎಂದು ಹಸೆಗೆ ಬಂದರು ತಾಯಿ ಎಂದು ಗೌರವ ಕೊಡುತ್ತಾನೆ. ಕಣ್ತುಂಬ ನೋಡಿದೆನು ಮುದುಕ ಎಂದು ತನ್ನ ವಯಸ್ಸನ್ನು ಮಧ್ಯದಲ್ಲಿ ಸೇರಿಸುತ್ತಾನೆ. ಸಿರಿಗೌರಿಯಂತೆ ಬಂದರು ಎಂದು ವರ್ಣಿಸುವ ಮೂಲಕ ನೋಡುವ ಕಾತರವನ್ನು ಮೂಡಿಸುತ್ತಾನೆ, ಸೆರಗಿನಲಿ ಕಣ್ಣೀರನೊರೆಸಿ ಎಂದು ಹೇಳುತ್ತಾ ಕಾತರವನ್ನು ಹೆಚ್ಚಿಸುತ್ತಾನೆ. ಅಂತಹಾ ಸುಖದಲ್ಲೂ ದೀಪದಲಿ ಬಿಡುಗಣ್ಣ ನಿಲಿಸಿ ನೆನೆದ ಗುಣವಂತೆಯ ಗುಣಗಾನ ಮಾಡುತ್ತಾನೆ.

ಹೂವು ಹಣ್ಣು ಹೊಸಸೀರೆ ರತ್ನದಾಭರಣ ಏನಿದ್ದರೂ ನೀವಿಲ್ಲದೂರಿನಲಿ ಆಕೆ ಕೊರಗುವ ಬಗೆ ಹೇಳಿ ಇವನ ಗಂಡು ಅಹಂ ಅನ್ನು ಹೆಚ್ಚಿಸುತ್ತಲೇ ನಿಮಗಿಲ್ಲ ಒಂದು ಹನಿ ಕರುಣ ಎನ್ನುತ್ತಾ ಆ ಅಹಂಗೆ ಸೂಜಿ ಚುಚ್ಚುತ್ತಾನೆ. ಮುಂದಿನ ಸಾಲುಗಳಂತೂ ಆ ಆರೋಹಣದ ತುತ್ತ ತುದಿ. ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು ಕುದಿಯಬಾರದು ಎಂದು ಹೇಳುತ್ತಿದ್ದಂತೆಯೇ ಅವನಿಗೆಲ್ಲಿ ಸಿಟ್ಟು ಬಂದೀತೋ ಎಂಬ ಆತಂಕದಲ್ಲಿ ನನ್ನ ದೊರೆಯೇ ಎಂದು ಎತ್ತರದಲ್ಲಿ ಕೂರಿಸುತ್ತಾನೆ. ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು ಒಣಗಬಾರದು ಒಡಲಚಿಲುಮೆ… ವಿವರಿಸಿದರೆ ಸೊಗಸೇ ಮಾಯವಾಗುವ ಸಾಲುಗಳಿವು. ಬಾಡುವುದು ತನ್ನ ಜೀವಗಳೇ ಎಂಬ ಮಾತು ಮನವರಿಕೆಯಾಗಿಯೆಂದು ಅನ್ನಿಸಿದ ಕೂಡಲೇ ಮತ್ತೊಂದು ಟ್ರಂಪ್ ಕಾರ್ಡ್ ತೆಗೆದೊಗೆಯುತ್ತಾನೆ. ಮಾವ ಮಾಡಿದ ತಪ್ಪಿಗೆ ಮಗಳೇನು ಮಾಡುತ್ತಾಳೆ ಎನ್ನುತ್ತಾ ಅಲ್ಲಿ ಮಾವನಿಗೂ ಅಳಿಯನಿಗೂ ಏನೋ ಗಲಾಟೆಯಾಗಿದೆ ಎಂದು ಅಳಿಯ ಹೋಗದಿರುವ ಕಾರಣವನ್ನು ಒಂದೇ ಸಾಲಿನಲ್ಲಿ ಹೇಳಿಬಿಡುತ್ತಾರೆ. ಅದೇ ಮನಸ್ಸಿನಲ್ಲಿ ಉಳಿಯಬಾರದಲ್ಲ. ಹೋಗಿಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು ಎನ್ನುತ್ತಾ ಮತ್ತೆ ಬೇಡುವವನ ಸ್ಥಾನದಲ್ಲಿ ನಿಲ್ಲುವ ಬಳೆಗಾರ ಓದುಗನ ಮನಸ್ಸಿನಲ್ಲಿ ಪದ್ಯದ ಆರೋಹಣದೊಟ್ಟೊಟ್ಟಿಗೇ ಬೆಳೆದು ನಿಲ್ಲುತ್ತಾನೆ.

ಇದನ್ನೂ ಓದಿ| ಸಾಲಭಂಜಿಕೆ ಅಂಕಣ: ಚೋಮನ ದುಡಿಯೂ ನಮ್ಮ ನುಡಿಯೂ

ಇಡೀ ಪದ್ಯದಲ್ಲಿ ನಾಯಕಿ ಯಾರೊಡನೆಯೂ ಅಳಲು ತೋಡಿಕೊಂಡಿಲ್ಲ, ಅದು ಆಡದೆಯೇ ಅರ್ಥ ಮಾಡಿಕೊಂಡ ಮಾತುಗಳು, ಆಡುವುದೆಲ್ಲವೂ ಬಳೆಗಾರನೇ. ಅವುಗಳಿಗೆ ಪ್ರತಿಯಾಗಿ ನಾಯಕನ ಮಾತುಗಳೂ ಇಲ್ಲ. ಆಡುತ್ತಾ ಹೋಗುವ ಮಾತುಗಳ ಆರೋಹಣ ಕ್ರಮ ಎದುರಿದ್ದವನ ಮೇಲೆ ಏನು ಪರಿಣಾಮಗಳನ್ನು ಉಂಟು ಮಾಡುತ್ತಿವೆ ಎಂಬುದನ್ನು ಓದುಗನಿಗೆ ಮುಟ್ಟಿಸುತ್ತವೆ. ಅವನು ಬೇಡುತ್ತಾನೆ, ಕಾಡುತ್ತಾನೆ, ಚುಚ್ಚುತ್ತಾನೆ, ಎಚ್ಚರಿಸುತ್ತಾನೆ. ಅಲ್ಲಿ ಬಳೆಗಾರನೇ ಬಂದಿದ್ದಾದರೂ ಏಕೆ ? ಬೇರೆ ಯಾರೂ ಸಂಧಾನಕ್ಕೆ ಬರಬಹುದಿತ್ತಲ್ಲ. ಯಾರು ಬರಬಹುದು ? ಆ ಕಾಲದ ಗಂಡಸರಿಗೆ ಇವಳ ಸಂಕಟದ ಅರಿವಿಲ್ಲ, ಹೆಂಗಸರಿಗೆ ತಲೆಬಾಗಿಲು ದಾಟಿ ಬರುವ ಸ್ವಾತಂತ್ರ್ಯವಿಲ್ಲ. ಒಂದು ವೇಳೆ ಬಂದರೂ ಅಳಿಯನೊಟ್ಟಿಗೆ ಹೀಗೆಲ್ಲಾ ಮಾತನಾಡಲು ಸಾಧ್ಯವೇ ಇಲ್ಲ. ಅಂದಿನ ಹೆಣ್ಣುಮಕ್ಕಳಿಗೆ ಹತ್ತಿರವಾಗಬಲ್ಲ ವ್ಯಾಪಾರಿ ಬಳೆಗಾರ ಮಾತ್ರ.

ಅವನಿಗೆ ಊರಿನ ಪ್ರತಿ ಹೆಣ್ಣುಮಕ್ಕಳ ನಾಡಿ ಮಿಡಿತ ಗೊತ್ತು. ಅವನಿಗೆ ಕೈ ಕೊಟ್ಟು ಕೂರುವ ಹೆಣ್ಣುಗಳು ಆರಿಸುವ ಬಳೆಗಳಿಂದಲೇ ಅವರ ಮನಸ್ಸು ಅರಿಯುವ ಹೆಂಗರುಳಿನವ. ಅವನು ವ್ಯಾಪಾರಿಯೇ ಆದರೂ ಹೆಂಗಸರು ಮನಬಿಚ್ಚಿ ಮಾತಾಡಬಲ್ಲರು. ಜನಪದ ಕವಿತೆಗಳಲ್ಲಿ ಬಳೆಗಾರ ಬಂದರೆ ಹೆಣ್ಣುಮಕ್ಕಳಿಗೆ ಸಂಭ್ರಮ. ತಮ್ಮ ತವರಿಗೆಲ್ಲಾದರೂ ಹೋಗಿಬಂದಿದ್ದಾನೆಯೇ ಎಂದು ವಿಚಾರಿಸುವ ಸಡಗರ. ಹೋಗಿಲ್ಲದಿದ್ದರೆ ಊರಿನ ದಾರಿ, ಪರಿಚಯ, ಮನೆಯ ವರ್ಣನೆ ಹೇಳಿ ಅಲ್ಲಿಗೂ ಹೋಗು ಎಂಬ ಒತ್ತಾಯ. ಸಾಮಾನ್ಯವಾಗಿ ಬಳೆ ತೊಡಿಸುವವ ವಯಸ್ಸಾದವನೇ. (ಅವನೊಟ್ಟಿಗೆ ಒಬ್ಬ ಗಂಟು ಹೊರುವ ಯುವಕನಿದ್ದರೂ ಇರಬಹುದು. ಅವನಿಗೆ ಬಳೆ ತೊಡಿಸುವ ಅಧಿಕಾರವಿಲ್ಲ.) ಇಂತಹಾ ಬಳೆಗಾರರ ಮೇಲೆ ಮನೆಮಂದಿಗೂ ವಿಶ್ವಾಸ. ಬಳೆಗಾರನಲ್ಲದೆ ಮತ್ತಾರು ಇಂತಹಾ ರಾಜಿಗೆ ಮನಮಾಡಿಯಾರು, ಧೈರ್ಯವಾಗಿ ಮುಂದೆ ಬಂದಾರು ? ಬಂದವರನ್ನು ಜನರು ನಂಬಿಯಾರು ? ಇಡೀ ಕವನ ಹೊಸೆದ ರೀತಿ ಒಂದು ಮಾರ್ದವ ಜಗತ್ತನ್ನು ನಮ್ಮ ಮುಂದಿಡುತ್ತದೆ. ಪರಿಪೂರ್ಣ ಕವನ ಎಂದೆನ್ನಿಸುತ್ತದೆ. ಆಪ್ತವಾಗುತ್ತದೆ.

ಇದನ್ನೂ ಓದಿ | ವಾಕಿಂಗ್‌ ಚಿತ್ರಗಳು ಅಂಕಣ | ಮನಸ್ಸನ್ನು ಓದಿ ಕತೆ ಬರೆಯಬಲ್ಲ ಮೆಶೀನು!

ಇಂತಹಾ ಒಂದು ಜಗತ್ತನ್ನು ಕಟ್ಟಿಕೊಟ್ಟ ನರಸಿಂಹಸ್ವಾಮಿಯವರು ನವ್ಯಕ್ಕೆ ಬಂದೊಡನೆ ಮಲ್ಲಿಗೆಯ ಬಳ್ಳಿ ಶಿಲಾಲತೆಯಾಗುತ್ತದೆ. ಗೋರಿಗಳ ಮೇಲೆ ಬಿಳಿಯ ಹೂಗಳ ಕವಿತೆ ಮೂಡುತ್ತದೆ (ಮಲ್ಲಿಗೆಯ ಹೂಗಳು ಬರಿ ಬಿಳಿಯ ಹೂಗಳಾಗುತ್ತವೆ). ಆ ಜಾನಪದ ಪ್ರಪಂಚ ಬದಲಾಗಿ ಮನೆಯಿಂದ ಮನೆಗೆ ಹಾದಿ ಸವೆಸುವ ಲೋಕ ಸೃಷ್ಟಿಯಾಗುತ್ತದೆ. ಅಂದರೆ ಕನಸಿನ ಲೋಕವನ್ನು ಬಿಟ್ಟು ವಾಸ್ತವದ ಕಠೋರ ಚಿತ್ರಣವನ್ನು ಕಟ್ಟಿಕೊಟ್ಟರಾ ನರಸಿಂಹಸ್ವಾಮಿಯವರು ? ಅಲ್ಲಿಯೂ ಅವರು ಕುಟುಂಬವನ್ನು ಬಿಡುವುದಿಲ್ಲ, ಅವರು ಒಂಟಿಯಲ್ಲ. ದಾರಿಯಲ್ಲಿ ಎಡವಿದರೂ, ಮುಳ್ಳು ಚುಚ್ಚಿದರೂ ಮಡದಿಯ ನೆನಪಾಗುತ್ತದೆ. ಅವರಿಬ್ಬರೂ ನಗರದ ಜನನಿಬಿಡ ವಾಸದಲ್ಲೂ ಸಹಚರಣವನ್ನು ಬಿಡುವುದೇ ಇಲ್ಲ. ಉದಾಹರಣೆಗೆ ನೋಡಿ:

ʻಸರಕು ಸುಮ್ಮನೆ ಭಾರ ಎಸೆಯಬಾರದೆ ಹೇಳುʼ
“ಎಸೆದರಾಯಿತೆ ಹೇಳಿ? ಮೊದಲು ಹೊಸತನು ತನ್ನಿ’
ʼಸ್ಥಳವಿಲ್ಲ ಬಂಡಿಯಲಿ’. ʻಹೊತ್ತು ಸಾಗಿಸಬೇಕು’
ಹೊತ್ತು ಸಾಗಿಸಬೇಕು? ಅದಕೆ ಕತ್ತಲೆ ಬೇಕು!
“ಕತ್ತಲೆಗೆ ಕಾಯೋಣ !”
(ಏಳು ಮಕ್ಕಳ ತಾಯಿ, ಸ್ನೇಹಮಯಿ, ನಕ್ಕಳು.)
ನಗೆ ಕೊಲ್ಲುವಂತೆ ಹಾಗೆ ಕೊಲ್ಲಲಾರದು; ಏಳು,
ಹೊಸಮನೆಗೆ ಹೋಗೋಣ ಮೊದಲು. ಸಂಜೆಗೆ ಬಂದು
ಸಾಗಿಸುವ ಕೆಲಸ ನನಗಿರಲಿ.
ಕಂಬನಿಗೊಳವ
ಕೆಂಗರಿಯ ಮೀನು ಕಲಕಿತ್ತು. ಗೆದ್ದಳು ಹೆಣ್ಣು!
ನಗಬಹುದು ಹೀಗೆ ಒಂದೊಂದು ಸಲ ಬದುಕಿನಲಿ.

ಎಷ್ಟು ಮನೆಗಳಲ್ಲಿ ನಡೆದಿರಬಹುದು ಹೀಗೆ.. ಪ್ರತಿಯೊಬ್ಬರಿಗೂ ತನ್ನದೇ ಎನ್ನಿಸುವಂತಹಾ ಜಗತ್ತನ್ನು ನವ್ಯದ ವ್ಯಷ್ಟಿ ಪ್ರಜ್ಞೆಯ ವ್ಯಾಪ್ತಿಯನ್ನು ತನ್ನದೇ ರೀತಿಯಲ್ಲಿ ಹಿಗ್ಗಿಸಿದವರು ನರಸಿಂಹ ಸ್ವಾಮಿಯವರು. ಒಟ್ಟೊಟ್ಟಿಗೆ ಬದುಕುತ್ತಾರೆ… ಒಬ್ಬರಿಗೊಬ್ಬರು ಸೋತು, ಒಬ್ಬರು ಮತ್ತೊಬ್ಬರನ್ನು ಗೆಲ್ಲಿಸುತ್ತಾ.. ಯಾವ ಪ್ರಕಾರಕ್ಕೆ ಹೋದರೂ ಮೂಲ ಮನೋಧರ್ಮ ವ್ಯತ್ಯಾಸವಾಗದು ನೋಡಿ.

(ಲೇಖಕರು ಕನ್ನಡ ಸಾಹಿತ್ಯದ ಗಾಢ ಓದುಗರು, ವಿಮರ್ಶಕಿ. ಕುಮಾರವ್ಯಾಸ, ಬೇಂದ್ರೆ, ಕೆಎಸ್‌ನ ಇವರಿಗೆ ಪ್ರಿಯ. ʼವಿಹಂಗಮʼ ಇವರ ಸಂಪಾದಿತ ಕೃತಿ.)

Exit mobile version