Site icon Vistara News

ಸಾಲಭಂಜಿಕೆ ಅಂಕಣ: ಚೋಮನ ದುಡಿಯೂ ನಮ್ಮ ನುಡಿಯೂ

malini

ಕಾರಂತರ ʻಚೋಮನ ದುಡಿʼ ಕಾದಂಬರಿಯನ್ನು ಓದಿದ ಕೆಲವರು ʻʻಇಲ್ಲಿರುವುದು ಚೋಮನಲ್ಲ, ನೈಜ ಚೋಮನ ಸ್ವರೂಪವೇ ಬೇರೆʼʼ ಎಂದಿದ್ದರಂತೆ. “ಇವನು ನನ್ನ ಚೋಮ, ನಾನು ಕಂಡ ಚೋಮ, ಇವನಿರುವುದು ಹೀಗೇ” ಎಂದು ಕಾರಂತರೂ ಗುಡುಗಿದ್ದರಂತೆ. ಪರ ವಿರೋಧ ಮಾತುಗಳೆಷ್ಟು ಬಂದವೋ ಆ ಮಾತು ಒತ್ತಟ್ಟಿಗಿರಲಿ, ಆ ಎರಡೂ ವಾದಗಳೂ ನನಗೆ ಸತ್ಯವೆನ್ನಿಸುತ್ತದೆ. ರಾಮ, ಕೃಷ್ಣ ಮುಂತಾದ ದೇವತೆಗಳು, ಊರ ಪಟೇಲರೋ, ಶ್ಯಾನುಭೋಗರೋ ಕಥೆಗಳ ನಾಯಕರಾಗುತ್ತಿದ್ದ ಕಾಲದಲ್ಲಿ ಚೋಮನನ್ನು ನಾಯಕನನ್ನಾಗಿಸಬಹುದು ಎಂಬುದು ಕಾರಂತರಿಗೆ ಅನಿಸಿದ್ದು, ಕಾಡಿದ್ದು, ಅವನ ತಲ್ಲಣಗಳನ್ನು ದಾಖಲು ಮಾಡಿದ್ದು ಗಮನಾರ್ಹ ಅಂಶ. ಹಾಗೆಂದು ಅಲ್ಲಿರುವುದು ಚೋಮನ ಸಂಪೂರ್ಣ ದರ್ಶನ ಎಂದು ಹೇಳಲಾಗದು. ಅದು ಕಾರಂತರ ಅನುಭವವಲ್ಲ. ಅವರ ನೋಟದ ಮಿತಿಯಲ್ಲಿ ಚೋಮನನ್ನು ಚಿತ್ರಿಸಿದ್ದು. ಚೋಮನ ಸಂಕಟ ಕಾರಂತರಿಗೆ ಅರಿವಾಗಬಹುದು, ಚೋಮನ ಹೊರಜಗತ್ತು ಕಾರಂತರಿಗೆ ದಕ್ಕಲೂಬಹುದು.. ಚೋಮನ ಒಳಜಗತ್ತು ದಕ್ಕುವುದು ಕಷ್ಟ. ಚೋಮನೇ ಆ ಕಥೆಯನ್ನು ಬರೆದಿದ್ದರೆ ಅಲ್ಲಿ ಚೋಮನ ನೋವು, ನಲಿವು, ಅವನ ಪ್ರೇಮ, ಕಾಮ, ಅಸಹಾಯಕತೆ, ಸಿಟ್ಟು, ದೀನತೆ ಎಲ್ಲಕ್ಕೂ ಬೇರೆಯದೇ ಆಯಾಮ ದಕ್ಕುತ್ತಿತ್ತು. ಆ ನಿಟ್ಟಿನಲ್ಲಿ ಇಲ್ಲಿರುವುದು ನಿಜವಾದ ಚೋಮನಲ್ಲ ಎಂಬ ಮಾತು ನಿಜವೇ.

ಅಥವಾ ಹೀಗೆ ನೋಡೋಣ- ಕಾರಂತರ ಬದುಕಿನಲ್ಲಿ ಕಾರಂತರ ಒಡನಾಟಗಳು ನೇರ ಅನುಭವಗಳೇ. ಕಾರಂತರ ಕಣ್ಣಲ್ಲಿ ಚೋಮ ಕಾಣುವ ರೀತಿ ಕಾರಂತರ ನೇರ ಅನುಭವವೂ ಹೌದು. ಅಲ್ಲಿ ನಾಯಕನಲ್ಲದ ನಾಯಕನಾಗಿ ಚೋಮನ ಸಂಕಟಗಳನ್ನು ದಾಖಲು ಮಾಡುತ್ತಾರೆ. ಚೋಮ, ಚೋಮನಂತಹವರು ಇರುವುದು ಜೀತಕ್ಕಾಗಿಯೇ ಎಂಬ ಪರಂಪರೆಯ ನಂಬಿಕೆಯನ್ನು ಮೀರಿ ನಮ್ಮೆಲ್ಲರಂತೆಯೇ ಇರುವ ಒಂದು ಜೀವದ ಅಸಹಾಯಕ ಪರಿಸ್ಥಿತಿ ಕಾರಂತರ ಒಳಗಣ್ಣಿಗೆ ಗೋಚರವಾಗುತ್ತದೆ. ತಮ್ಮ ಕಣ್ಣಿಗೆ ಕಂಡ ಬದುಕನ್ನು ಅವರು ನಿರ್ಭಿಢೆಯಿಂದ ಜನರ ಮುಂದಿಡುತ್ತಾರೆ. ಇವನು ಚೋಮ, ನಮ್ಮೆಲ್ಲರ ತುಳಿತಕ್ಕೆ ನಲುಗುತ್ತಿರುವವನು. ಕೊನೆಗೂ ಗಡಿ ದಾಟಲಾಗದೆ ಕುಸಿಯುವ ಚೋಮ ನಮ್ಮಲ್ಲಿ ಮೂಡಿಸುವುದು ಅಂತಹ ಸಹಸ್ರಾರು ಚೋಮರ ಅಸಹಾಯಕ ಪರಿಸ್ಥಿತಿಯನ್ನು… ಹೀಗೆ ನೋಡಿದಾಗ ಅಲ್ಲಿರುವುದೂ ನಿಜವಾದ ಚೋಮನೇ.

ಬಹಳ ಇತ್ತೀಚೆಗಿನ ಕಾಲದವರೆಗೂ ಸಾಹಿತ್ಯದಲ್ಲಿ ಇಂತಹ ಪ್ರಜ್ಞೆಗಳು ದಾಖಲಾಗಿರಲಿಲ್ಲ. ಮಾನವೀಯತೆಯನ್ನು ಬಹುತೇಕ ಸಾಹಿತಿಗಳು ಮೆರೆದಿದ್ದರೂ ಅವರ ಕಣ್ಣಿನಲ್ಲಿ ಇಂತಹವರ ಚಿತ್ರಣಗಳು ಮೂಡಿಬಂದಿದ್ದವೇ (ಮೊಸರಿನ ಮಂಗಮ್ಮ, ವೆಂಕಟಿಗನ ಹೆಂಡತಿ ಮುಂತಾದವುಗಳು) ಹೊರತು ಅವರದೇ ನೇರ ಅನುಭವಗಳ ಕಥನಗಳು ಬಂದಿರಲಿಲ್ಲ. ಹಾಗೆ ಯಾರನ್ನೂ ಅನುಕರಿಸದೆ ಅಲ್ಲಿಯವರೆಗೆ ಇದ್ದ ರೀತಿಗಿಂತ ಭಿನ್ನವಾಗಿ ತಾವು ಕಂಡುಂಡ ಜಗತ್ತನ್ನು, ತಮ್ಮ ಪರಿಸರದ ಅನುಭವಗಳನ್ನು ಶ್ರೇಷ್ಠ ಕಾದಂಬರಿಗಳಾಗಿಸಿ ಕನ್ನಡಿಗರ ಕೈಗಿಟ್ಟವರು ಕುವೆಂಪು. ಆ ಎರಡೂ ಕಾದಂಬರಿಗಳಲ್ಲಿ ಅಲ್ಲಿಯವರೆಗೆ ಸಾಹಿತ್ಯ ಲೋಕ ಕಾಣದಿದ್ದ ಒಕ್ಕಲಿಗ ಸಮಾಜದ ನೇರ ಸಶಕ್ತ ಚಿತ್ರಣವಿತ್ತು. ತಮ್ಮ ಜಗತ್ತನ್ನು ಕುವೆಂಪು ಜಗತ್ತಿನೆದುರು ಅನಾವರಣಗೊಳಿಸಿದ ನಂತರ ಸಾಹಿತ್ಯ ಜಗತ್ತಿನಲ್ಲೊಂದು ಮಿಂಚಿನ ಸಂಚಲನ ಮೂಡಿತು. ಹೊಸ ಪ್ರಪಂಚ ಕಣ್ಣೆದುರು ತೆರೆದುಕೊಂಡಾಗ ಆ ಬರಹದಲ್ಲಿದ್ದ ಪ್ರಾಮಾಣಿಕತೆ, ತಾಜಾತನಕ್ಕೆ ಓದುಗ ಮನಸೋತ. ಹೊಸ ಬಗೆಯ ಕಥನಗಳು ಹೊರಬರಲಾಂಭಿಸಿದವು.

ಶ್ರೀಕೃಷ್ಣ ಆಲನಹಳ್ಳಿಯವರ ಕಥೆಗಳ ಸೊಗಡನ್ನು, ಅದರಲ್ಲಿದ್ದ ಪೋಲಿತನವನ್ನು, ಅದರ ಮಣ್ಣಿನ ವಾಸನೆಯನ್ನು ಓದುಗ ತನ್ನ ಉಸಿರೊಳಗೆಳೆದುಕೊಂಡು ನಕ್ಕ. ತೇಜಸ್ವಿಯವರು ವೈನೋದಿಕ ದೃಷ್ಟಿಕೋನದ ಮೂಲಕವೇ ಆ ಪ್ರಪಂಚವನ್ನು ಬಿಚ್ಚಿಡುವ ಕಥೆಗಾರಿಕೆಯನ್ನು ಬೆರಗಿನಿಂದ ಓದದವರಾರು? ಸಿದ್ದಲಿಂಗಯ್ಯನವರ ಬರಹಗಳು ಮತ್ತಷ್ಟು ಕೊರತೆಯನ್ನು ನೀಗಿದರೆ, ಅವರ ಊರುಕೇರಿ ಎಂಬ ಆತ್ಮಕಥನದಲ್ಲಿ ಅವರು ತಮ್ಮ ಸಮುದಾಯ ಹೇಗಿತ್ತೋ ಹಾಗೆ ಚಿತ್ರಿಸಿ (ನೋವು ಅಥವಾ ನಲಿವು ಯಾವುದನ್ನೂ ವೈಭವೀಕರಿಸದೆ) ಆ ಜಗತ್ತನ್ನು ಮಿಕ್ಕ ಜಗತ್ತಿಗೆ ತೋರಿಸುತ್ತಾರೆ. ದೇವನೂರರ ಒಡಲಾಳದ ಸಾಕವ್ವನ ಸಂಕಟ ಎಂದೂ ಹುಂಜ ಸಾಕದವನ ಕರುಳು ಕರಗಿಸಿದರೆ, ಅಂತಹಾ ಜಗತ್ತಿನ ಪರಿಚಯ ನಮ್ಮದಾಗಿಸುವ ದೇವನೂರು ಓದುಗರವರೇ ಆಗಿಬಿಡುತ್ತಾರೆ. ಒಡಲಾಳದ ಸಾಕವ್ವನ ಸಂಕಟ ದೊಡ್ಡದೋ, ಖಾಸನೀಸರ ತಬ್ಬಲಿಗಳ ತಂಗಿಯ ಯಾತನೆ ದೊಡ್ಡದೋ ಎಂದು ನಾವು ಪ್ರಶ್ನಿಸಿಕೊಳ್ಳಲು ಸಾಧ್ಯವೇ? ಸಾಕವ್ವನ ಸಂಕಟದಷ್ಟೇ ವಸುಧೇಂದ್ರರ ಮನೀಷೆಯ ಮಡಿಹೆಂಗಸರ ಸಂಕಟವೂ ಮನಕರಗಿಸುವುದಲ್ಲವೇ? ಅಲ್ಲಿ ಶ್ರೇಣೀಕೃತ ಜಾತಿ ಪದ್ಧತಿಯ ವ್ಯವಸ್ಥೆ ನೋವಿನ ತೀವ್ರತೆಯ ನಿರ್ವಹಣೆಯನ್ನು ಮಾಡಲು ಸಾಧ್ಯವೇ? ಇವೆಲ್ಲವೂ ನಮ್ಮದಾಗುವುದು ಓದಿನಿಂದ ಮಾತ್ರ ಸಾಧ್ಯ. ನಾವು ಕಂಡೇ ಇರದ ಪ್ರಪಂಚವೊಂದನ್ನು ನಮ್ಮ ಮುಂದಿಡಬಲ್ಲದ್ದು ಪುಸ್ತಕಗಳು… ಓದು. ಇಲ್ಲಿ ಕಾಣಿಸಿರುವುದು ನಾನು ಕೆಲವೇ ಉದಾಹರಣೆಗಳನ್ನಷ್ಟೇ.

ಇದನ್ನೂ ಓದಿ: ಹೊಸ ಪುಸ್ತಕ: ಭಾರತದ ಆರ್ಯರು ಇರಾನಿನಿಂದ ಬಂದವರೇ?

ನಿರಾಕರಣೆ ಎಂಬುದೊಂದು ಸಹಜ ಸಿದ್ಧ ಹಕ್ಕು. ಲೇಖಕ ಬರೆದುದೆಲ್ಲವನ್ನೂ ಓದುಗ ಓದಬೇಕೆಂದೇನೂ ಇಲ್ಲ. ತನಗಿಷ್ಟವಿಲ್ಲದುದನ್ನು ನಿರಾಕರಿಸುವ ಹಕ್ಕು ಅವನಿಗೆ ಸಹಜವೇ. ಇದು ಅನಾದಿ ಕಾಲದಿಂದಲೂ ಇದ್ದುದೇ. ಆದರೆ ಆ ನಿರಾಕರಣೆಗೊಂದು ಜವಾಬ್ದಾರಿ ಬೇಕಾಗುತ್ತದೆ. ನವೋದಯವನ್ನು ನಿರಾಕರಿಸಿದ ಅಡಿಗರು ನವ್ಯವೆಂಬ ಹೊಸತನ್ನು ಎದುರಿಗಿಟ್ಟರು. ಅಡಿಗರ ದಾರಿಯಲ್ಲಿ ನಡೆಯಲೊಲ್ಲದ ಎಕೆಆರ್ ತಮ್ಮದೇ ಛಾಪು ಮೂಡಿಸಿದರು. ತಿರುಮಲೇಶ್ ಅವರಂತೂ ತಮ್ಮನ್ನು ತಾವೇ ನಿರಾಕರಿಸಿಕೊಳ್ಳುತ್ತಾ, ತಮ್ಮನ್ನು ತಾವೇ ಅಚ್ಚರಿಗೊಳಿಸಿಕೊಳ್ಳುತ್ತಾ ಈಗಲೂ ಬರೆಯುತ್ತಿದ್ದಾರೆ. ದೇವನೂರು ಮಹಾದೇವ ತಮ್ಮ ಪ್ರಾದೇಶಿಕ ಸೊಗಡಿನಲ್ಲಿಯೇ ಪವಾಡ ಸೃಷ್ಟಿಸಿದರು. ಪ್ರತಿಭಾ ಕಾವ್ಯಲೋಕ ತಿರುಗಿ ನೋಡುವಂತೆ ಹೊಸ ಹುಡುಗಿಯರ ತಲ್ಲಣಗಳನ್ನು ಬರೆದರೆ, ಬೇರೆಯದೇ ವಿಷಯಗಳ ಬಗ್ಗೆ ನಮ್ಮ ಛಂದಸ್ಸೇ ಬೇರೆ ಎನ್ನುವಂತೆ ಲಲಿತಾ ಸಿದ್ಧಬಸವಯ್ಯ ಸೆಟೆದು ನಿಂತರು. ಒಂದು ಸಶಕ್ತ ನಿರಾಕರಣೆಗೆ ಪರ್ಯಾಯವೊಂದನ್ನು ಸೃಷ್ಟಿಸುವ ಶಕ್ತಿಯಿದ್ದರೆ ಹಾಗೆ ಸೃಷ್ಟಿಯಾಗುವ ಪರ್ಯಾಯವೂ ಅಷ್ಟೇ ಸಶಕ್ತವಾಗಿರುತ್ತದೆ. ಸಾಹಿತ್ಯ ಪ್ರಪಂಚವನ್ನು ಸಮಗ್ರವಾಗಿ ಒಪ್ಪಿ ಅಪ್ಪಿಕೊಳ್ಳಬೇಕೆಂದೇನೂ ಇಲ್ಲ. ಆದರೆ ನನ್ನ ಧೋರಣೆ, ಸಿದ್ಧಾಂತಕ್ಕಿಂತ ಭಿನ್ನವಾಗಿದ್ದನ್ನೂ ಆ ಸಮಗ್ರದ ಭಾಗವಾಗಿಯೇ ನೋಡಬೇಕಾಗುತ್ತದೆ.

ತಮ್ಮ ಮೊದಲ ಸಂಸ್ಕೃತ ತರಗತಿಯಲ್ಲೇ ಆದ ಅವಮಾನ ಸಹಿಸಿಕೊಂಡೂ, ಭಾರತೀಯ ಪುರಾಣ ಪ್ರಪಂಚವನ್ನು ಸಂಸ್ಕೃತದ ಮೂಲಕವೇ ಅರಗಿಸಿಕೊಂಡು ರಾಮಾಯಣ ದರ್ಶನಂ ಎಂಬ ಮೇರು ಕಾವ್ಯವನ್ನೇ ಕನ್ನಡಿಗನಿಗಿತ್ತ ಕುವೆಂಪು ಅದನ್ನು ಮಾಡಿದ್ದು ಕೇವಲ ಛಲಕ್ಕೆ? ಅವರಲ್ಲಿ ಅಸೀಮ ಸಾಹಿತ್ಯ ಪ್ರೀತಿ, ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಗೌರವ ಇರದಿದ್ದರೆ ಇದು ಸಾಧ್ಯವಿತ್ತೇ? ಹಾಗೆಂದು ಕೇವಲ ಕುವೆಂಪು ಕಾದಂಬರಿಗಳೋ, ಕೇವಲ ಮಾಸ್ತಿ ಕಥೆಗಳೋ, ಕೇವಲ ಅಡಿಗರ ಪದ್ಯಗಳೋ ಮಾತ್ರ ಸಾಹಿತ್ಯದ ಸಮಗ್ರ ದರ್ಶನ ಮಾಡಿಸಬಲ್ಲುದೇ?
ಒಂದು ಕಾಲದ ಒಂದಿಡೀ ಸಮಾಜದ ನಡಾವಳಿಗಳನ್ನು, ಅದರ ಪರಿಪೂರ್ಣ ಚಿತ್ರಣವನ್ನು ಈ ಎಲ್ಲ ಸಾಹಿತಿಗಳೂ ಸೇರಿಯೇ ಓದುಗನ ಮುಂದಿಡಬೇಕಾಗುತ್ತದೆ. ಇದರಿಂದ ಪ್ರತಿ ಸಮಾಜದಲ್ಲೂ, ಪ್ರತೀ ವರ್ಗದಲ್ಲೂ ಜೀವಂತಿಕೆಯಿದೆ ಎಂಬುದು ಓದುಗನಿಗೆ ಮನದಟ್ಟಾಗದಿದ್ದರೆ, ಪ್ರತಿ ಮನುಷ್ಯನಿಗೂ ಅವನದೇ ಆದ ಘನತೆಯಿದೆ ಎಂದು ಗೌರವಿಸದಿದ್ದರೆ ಅದು ಓದೇ ಅಲ್ಲ. ಹೀಗೊಂದು ಅರಿವು ತರದ ಓದು ಏಕಾಗಿ? ಹಾಗಾಗಿಯೇ ಸಾಹಿತಿಯ ಮುಂದೆ ಬಹಳ ದೊಡ್ಡ ಸವಾಲು ಇರುತ್ತದೆ. ಪ್ರಾಮಾಣಿಕವಾಗಿ ಬರೆಯುವ ಸವಾಲು. ಓದುಗನಿಗಿರುವುದು ಆ ಪ್ರಾಮಾಣಿಕತೆಯನ್ನು ಗುರುತಿಸುವ ಸವಾಲು. ಸದ್ಯದ ತುರ್ತು ಅದೇ.

ಅಂಕಣಕಾರರ ಪರಿಚಯ: ಮಾಲಿನಿ ಗುರುಪ್ರಸನ್ನ ಅವರು ಹೃದಯದಲ್ಲಿ ಸದಾ ಕನ್ನಡ ಕವಿತೆ ಕತೆಗಳನ್ನು ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಕನ್ನಡ ಸಾಹಿತ್ಯದ ಗಾಢ ಓದುಗರಾದ ಮಾಲಿನಿ ಅವರ ವಿಮರ್ಶೆಗಳು ಸಮಕಾಲೀನ ವೈಚಾರಿಕ ಒಳನೋಟಗಳಿಂದ ಪುಷ್ಟವಾಗಿರುತ್ತವೆ. ʻವಿಹಂಗಮʼ ಅವರ ಸಂಪಾದಿತ ಕೃತಿ.

ಇದನ್ನೂ ಓದಿ: ಸೈನ್ಸ್‌ ಸೆನ್ಸ್‌ ಅಂಕಣ: ʼಲಿಡಾರ್‌ʼ ಶೋಧ ಬೆಳಕಿಗೆ ತಂದ ಕಾಡಾದ ನಾಡಿನ ಕಥೆ

Exit mobile version