ಫ್ರಾನ್ಸ್ ಮೂಲದ ಡಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿಸುತ್ತಿರುವ Rafale Jet ಒಂದು ಮಧ್ಯಮ ಗಾತ್ರದ, ಬಹುಪಾತ್ರಗಳ ಯುದ್ಧ ವಿಮಾನ. ಅವಳಿ ಇಂಜಿನ್‌ಗಳನ್ನು ಹೊಂದಿರುವ ರಫೇಲ್, ಏರ್ ಸುಪ್ರಿಮಸಿ, ರಿಕನಯಸೆನ್ಸ್, ಭೂ ಬೆಂಬಲ, ಪ್ರಬಲವಾದ ದಾಳಿ (ಬಾಲಾಕೋಟ್ ಏರ್ ಸ್ಟ್ರೈಕ್), ಆ್ಯಂಟಿ ಶಿಪ್ ದಾಳಿ ಹಾಗೂ ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯುವ ಮುಂತಾದ ಸಾಕಷ್ಟು ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲದು.
4++ ತಲೆಮಾರಿನ ಯುದ್ಧ ವಿಮಾನ
ಯುದ್ಧ ವಿಮಾನಗಳನ್ನು ಸಾಮಾನ್ಯವಾಗಿ ಬೇರೆ ಬೇರೆ ತಲೆಮಾರುಗಳಾಗಿ ವಿಭಾಗಿಸಲಾಗುತ್ತದೆ. ಮೊದಲನೇ ತಲೆಮಾರಿನ ಯುದ್ಧ ವಿಮಾನಗಳಲ್ಲಿ ಸ್ವರಕ್ಷಣಾ ಸಾಮರ್ಥ್ಯದ ಕೊರತೆ ಇತ್ತು. ಅವುಗಳು ದಾಳಿ ನಡೆಸಲು ಮೆಷಿನ್ ಗನ್ ಹೊಂದಿದ್ದವು ಅಥವಾ ಆಕಾಶದಿಂದ ಭೂಮಿಗೆ ಬಾಂಬ್ ಎಸೆಯುತ್ತಿದ್ದವು. ಸಬ್‌ಸಾನಿಕ್ ವೇಗದಲ್ಲಿ ಚಲಿಸುತ್ತಿದ್ದವು. ನಂತರದ ತಲೆಮಾರಿನ ಯುದ್ಧ ವಿಮಾನಗಳು ಕೆಲವು ಸಂದರ್ಭಗಳಲ್ಲಿ ಶಬ್ದದ ವೇಗದಲ್ಲಿ ಹಾರಾಟ ನಡೆಸುತ್ತಿದ್ದವು. ಅವುಗಳಲ್ಲಿ ರೇಡಾರ್ ಮತ್ತು ಸೆಮಿ ಆ್ಯಕ್ಟಿವ್ ಗೈಡೆಡ್ ಕ್ಷಿಪಣಿಗಳೂ ಇದ್ದವು. ಮೂರನೇ ತಲೆಮಾರಿನ ಯುದ್ಧ ವಿಮಾನಗಳಲ್ಲಿ ಬಿಯಾಂಡ್ ವಿಷುವಲ್ ರೇಂಜ್ ದಾಳಿ ನಡೆಸುವ ಸಾಮರ್ಥ್ಯವಿತ್ತು. ಅದರ ಬಳಿಕ ನಾಲ್ಕನೇ ತಲೆಮಾರಿನ ಯುದ್ಧ ವಿಮಾನಗಳಲ್ಲಿ ಹೆಡ್- ಅಪ್ ಡಿಸ್‌ಪ್ಲೇ, ಫ್ಲೈ ಬೈ ವೈರ್ ತಂತ್ರಜ್ಞಾನ ಸೇರಿಕೊಂಡಿದ್ದವು.
4++ ತಲೆಮಾರಿನ ರಫೇಲ್ ಯುದ್ಧ ವಿಮಾನದಲ್ಲಿ ಸ್ಟೆಲ್ತ್ ಸಾಮರ್ಥ್ಯ ಅಳವಡಿಸಿಕೊಳ್ಳಲಾಯಿತು. ರಫೇಲ್‌ನಲ್ಲಿ ಆಧುನಿಕ ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ ಥರದ ಆಧುನಿಕ ರೇಡಾರ್‌ಗಳನ್ನು ಅಳವಡಿಸಲಾಗಿದೆ. ಇದರ ವೈಶಿಷ್ಟ್ಯ ಎಂದರೆ, ಇದು ವಾಯುಪ್ರದೇಶದಲ್ಲಿ ಕಂಡುಬರುವ ಎಲ್ಲಾ ವಸ್ತುಗಳನ್ನು, ಉಪಕರಣಗಳನ್ನು ಗುರುತಿಸಬಲ್ಲದು. ಅಗತ್ಯ ಬಿದ್ದರೆ ಯುದ್ಧ ವಿಮಾನ ಅವುಗಳನ್ನು ಹೊಡೆದುರುಳಿಸಬಲ್ಲದು.
ಎಲ್ಲವನ್ನೂ ಅರಿತುಕೋ
ಸಾಂದರ್ಭಿಕ ಅರಿವು ಅಂದರೆ ಸಾಮಾನ್ಯವಾಗಿ ಸುತ್ತಮುತ್ತಲಿನ ವಾತಾವರಣ ಮತ್ತು ವಿವಿಧ ಸಂದರ್ಭಗಳನ್ನು ಅರಿಯುವಲ್ಲಿ ಪೈಲಟ್‌ಗೆ ಇರುವ ಸಾಮರ್ಥ್ಯ. ರಫೇಲ್ ತನ್ನಲ್ಲಿ ಅಳವಡಿಸಿರುವ ಒಂದು ಮಾಡ್ಯುಲರ್ ಮಾಹಿತಿ ಸಂಸ್ಕರಣಾ ಘಟಕದ ಮೂಲಕ 19 ಸಂಸ್ಕರಣಾ ಪವರ್ ಟೀಮ್ ಮತ್ತು ಇತರ ಮಾಹಿತಿ ಮೂಲಗಳನ್ನು ಸಂಪರ್ಕಿಸುತ್ತದೆ. ಇದು ಯುದ್ಧ ರಂಗವನ್ನು ಅರ್ಥ ಮಾಡಿಕೊಳ್ಳುವ ರಫೇಲ್ ಸಾಮರ್ಥ್ಯವನ್ನು ಐವತ್ತು ಪಟ್ಟು ಹೆಚ್ಚಿಸುತ್ತದೆ.
ರಫೇಲ್‌ನಲ್ಲಿರುವ ಒಂದು ಕ್ರಾಂತಿಕಾರಿ ಅಂಶವೆಂದರೆ ಥೇಲ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಟಿಎಎಲ್ಐಒಎಸ್ ಅಥವಾ ಟಾರ್ಗೆಟಿಂಗ್ ಲಾಂಗ್ ರೇಂಜ್ ಐಡೆಂಟಿಫಿಕೇಷನ್ ಓಪ್ಟ್ರೋನಿಕ್ ಸಿಸ್ಟಮ್. ಈ ವ್ಯವಸ್ಥೆ ಹಗಲಾದರೂ ರಾತ್ರಿಯಾದರೂ ಯುದ್ಧರಂಗವನ್ನು ಬಣ್ಣಗಳೊಂದಿಗೆ ತೋರಿಸುತ್ತದೆ. ಇದು ಚಲಿಸುತ್ತಿರುವ ಗುರಿಯನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ. ಥೇಲ್ಸ್ ರಫೇಲ್ ಯುದ್ಧ ವಿಮಾನದಲ್ಲಿ ಪ್ಯಾಸಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ ಉಪಕರಣವನ್ನು ಒದಗಿಸಿದ್ದು, ಇದು ಒಂದು ಪ್ರದೇಶವನ್ನು ಸ್ಕ್ಯಾನ್ ಮಾಡುತ್ತಾ, ಆ ಸಂಪೂರ್ಣವಾಗಿ ಹೊಸದಾದ ಪ್ರದೇಶದಲ್ಲಿರುವ ಪ್ರತಿಯೊಂದನ್ನೂ ಗುರುತಿಸಬಲ್ಲದು. ಪೈಲಟ್ ವಿಮಾನದಲ್ಲಿ ಆಗಸಕ್ಕೇರಿ, ವಾಯು ಪ್ರದೇಶದಲ್ಲಿ ಶತ್ರುಗಳ ಹಡಗುಗಳಿಗಾಗಿ ಸ್ಕ್ಯಾನ್ ಮಾಡುವಾಗ ರಫೇಲ್ ಯುದ್ಧರಂಗದಲ್ಲಿ ಶತ್ರುವಿನ ಇರುವಿಕೆ ಗುರುತಿಸಲು ಇನ್ನಷ್ಟು ಬೋಟುಗಳಿವೆಯೇ ಎಂದು ಹುಡುಕಾಡಬಲ್ಲದು.
ಇದನ್ನೂ ಓದಿ: ಸಮರಾಂಕಣ ಅಂಕಣ | Iran drones: ಇರಾನನ್ನು ಡ್ರೋನ್ ಸೂಪರ್ ಪವರ್ ಅನ್ನುತ್ತಾರೆ ಯಾಕೆ?
ಸರ್ವರಂಗ ಸರ್ವತಂತ್ರ ನಿಪುಣ
ಭಾರತೀಯ ವಾಯುಸೇನೆ ಈಗಾಗಲೇ ರಫೇಲ್‌ನಲ್ಲಿ ಸ್ಕಾಲ್ಪ್ ಎಂಬ ಸ್ಟೆಲ್ತ್ ಕ್ಷಿಪಣಿಯನ್ನು ಅಳವಡಿಸಿದೆ. ಇದು ರೇಡಾರ್‌ಗಳ ಕಣ್ಣು ತಪ್ಪಿಸಿ, ಅತ್ಯಂತ ಕೆಳಹಂತದಲ್ಲಿ ಹಾರಾಡಬಲ್ಲದು. ಇದು ಅಣ್ವಸ್ತ್ರ ಸಿಡಿತಲೆಗಳನ್ನೂ ಹೊತ್ತೊಯ್ಯಬಲ್ಲದಾದ್ದರಿಂದ ಇದನ್ನು ಭವಿಷ್ಯದಲ್ಲಿ ಬ್ರಹ್ಮೋಸ್ ಕ್ಷಿಪಣಿಯೊಡನೆಯೂ ಜೋಡಿಸಬಹುದಾಗಿದೆ. ಗಾಳಿಯಿಂದ ಗಾಳಿಗೆ ಅಥವಾ ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ಕ್ಷಿಪಣಿಗಳೆಲ್ಲವನ್ನೂ ರಫೇಲ್ ಜೋಡಿಸಿಕೊಳ್ಳಬಲ್ಲದು. ರಫೇಲ್ ಎಎಂ- 39 ಎಕ್ಸೋಸೆಟ್ ಆ್ಯಂಟಿ ಶಿಪ್ ಕ್ಷಿಪಣಿಯನ್ನು ಬಳಸಿ ಶತ್ರು ಹಡಗನ್ನೂ ಧ್ವಂಸಗೊಳಿಸಬಲ್ಲದು.
ಒಂದು ವೇಳೆ ಕಾರ್ಯಾಚರಣೆಯಲ್ಲಿ ಶತ್ರು ಯುದ್ಧವಿಮಾನದೊಡನೆ ಗಾಳಿಯಲ್ಲಿ ಸೆಣಸಾಡುವ ಅಗತ್ಯ ಬಂದರೆ, ರಫೇಲ್‌ಗೆ ಆರು ಎಂಐಸಿಎ ಗಾಳಿಯಿಂದ ಗಾಳಿಗೆ ದಾಳಿ ನಡೆಸಬಲ್ಲ ಕ್ಷಿಪಣಿಗಳನ್ನು ಜೋಡಿಸಬಹುದಾಗಿದೆ. ನೆಲದ ಮೇಲಿನ ಗುರಿಯ ಮೇಲೆ ದಾಳಿ ನಡೆಸಬೇಕಾದರೆ ಅದು ಹೆಚ್ಚುವರಿಯಾಗಿ ಮೂರು ಲೇಸರ್ ನಿರ್ದೇಶಿತ ಬಾಂಬ್‌ಗಳು ಹಾಗೂ ಎಂಐಸಿಎ ಕ್ಷಿಪಣಿಗಳನ್ನು ಕೊಂಡೊಯ್ಯಬಲ್ಲದು.
ಸುಳಿವೇ ನೀಡದಂತೆ ದಾಳಿ, ಸ್ಟೆಲ್ತ್ ಸಾಮರ್ಥ್ಯ
ಒಂದು ಯುದ್ಧ ವಿಮಾನದ ವಿಚಾರದಲ್ಲಿ, ಎರಡು ಪದಗಳು ಆ ಯುದ್ಧ ವಿಮಾನ ಇನ್ನೊಂದು ಯುದ್ಧ ವಿಮಾನದ ಎದುರು ಎಷ್ಟು ಉತ್ತಮವಾಗಿದೆ ಎಂದು ತಿಳಿಸುತ್ತವೆ. ಅವೆಂದರೆ ಇನ್ಸ್ಟಾಂಟೇನಿಯಸ್ ಟರ್ನ್ ರೇಟ್ ಮತ್ತು ಸಸ್ಟೇಯ್ನ್ಡ್ ಟರ್ನ್ ರೇಟ್. ಇಲ್ಲಿ ಟರ್ನ್ ರೇಟ್ ಎಂದರೆ ಯುದ್ಧ ವಿಮಾನವು ಆಕಾಶದಲ್ಲಿ ತನ್ನ ಪಥವನ್ನು ಬದಲಾಯಿಸುವ ವೇಗ. ಇನ್ಸ್ಟಾಂಟೇನಿಯಸ್ ಟರ್ನ್ ರೇಟ್ ಎಂದರೆ ಅದು ಎಷ್ಟು ವೇಗವಾಗಿ ಪಥ ಬದಲಾಯಿಸುತ್ತದೆ ಎಂದು ಸೂಚಿಸುತ್ತದೆ. ಇದರಲ್ಲಿ ಹಲವು ಸಂದರ್ಭಗಳಲ್ಲಿ ಯುದ್ಧ ವಿಮಾನ ತನ್ನ ವೇಗ ಮತ್ತು ಹಾರಾಟದ ಎತ್ತರವನ್ನು ಕಳೆದುಕೊಳ್ಳುತ್ತದೆ. ಆದರೆ ಸಸ್ಟೇಯ್ನ್ಡ್ ಟರ್ನ್ ರೇಟ್ ಎಂದರೆ ಯುದ್ಧ ವಿಮಾನ ವೇಗ ಮತ್ತು ಎತ್ತರವನ್ನು ಕಳೆದುಕೊಳ್ಳದೆ ತನ್ನ ಪಥವನ್ನು ಬದಲಿಸುವ ವೇಗವನ್ನು ಸೂಚಿಸುತ್ತದೆ.
ಇದನ್ನೂ ಓದಿ: ಧೀಮಹಿ ಅಂಕಣ: ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ ಇದು! ಅಂದಿನ ಆಡಳಿತ ಹೀಗಿತ್ತು
ರಫೇಲ್ ಅತ್ಯಂತ ವೇಗವಾದ ಇನ್ಸ್ಟಾಂಟೇನಿಯಸ್ ಮತ್ತು ಸಸ್ಟೇಯ್ನ್ಡ್ ಟರ್ನ್ ರೇಟ್ ಹೊಂದಿದೆ. ಇದರೊಡನೆ, ರಫೇಲ್ ಹೆಚ್ಚಿನ ಲಿಫ್ಟ್, ಆ್ಯಂಟಿ ಸ್ಟಾಲ್ ಪ್ರೊಟೆಕ್ಷನ್ ಮತ್ತು ಅತ್ಯಧಿಕ ಚಾಲನಾ ಕುಶಲತೆಯನ್ನು ಹೊಂದಿದೆ.
ಶತ್ರುಗಳ ರೇಡಾರ್ ಕಣ್ಣಿಗೆ ಬೀಳದಂತೆ ಚಲಿಸಲು ರಫೇಲ್ ಕೆಲವು ಸ್ಟೆಲ್ತ್ ತಂತ್ರಜ್ಞಾನವನ್ನು ಹೊಂದಿದೆ. ಇದು ರೇಡಾರ್ ವಿಚಲನೆ ನಡೆಸಬಲ್ಲ ವಸ್ತುಗಳನ್ನು ಹೊಂದಿದ್ದು, ಅವುಗಳು ರಫೇಲ್ ರೇಡಾರ್‌ನಲ್ಲಿ ಕಾಣಿಸಿಕೊಳ್ಳದಂತೆ ಮಾಡುತ್ತವೆ. ರಫೇಲ್ ಯುದ್ಧ ವಿಮಾನದ ಸ್ಟೆಲ್ತ್ ಸಾಮರ್ಥ್ಯವನ್ನು ಅದರ ಸ್ಪೆಕ್ಟ್ರಾ ಎಂಬ ಇಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಒದಗಿಸುತ್ತದೆ. ಇದು ಶತ್ರುಗಳ ರೇಡಾರ್ ಪತ್ತೆಹಚ್ಚುವಿಕೆಯನ್ನು ಗಮನಿಸಿ, ಅದನ್ನು ನಿವಾರಿಸುವಂತಹ ಆ್ಯಕ್ಟಿವ್ ಕ್ಯಾನ್ಸಲೇಷನ್ ಸಿಗ್ನಲ್‌ಗಳನ್ನು ರವಾನಿಸುತ್ತದೆ. ಸ್ಪೆಕ್ಟ್ರಾ ಸಾಮಾನ್ಯವಾಗಿ ಶತ್ರುವಿನ ರೇಡಾರನ್ನು ಗೊಂದಲಕ್ಕೀಡು ಮಾಡುತ್ತದೆ. ಅದರಿಂದಾಗಿ ರಫೇಲ್ ರೇಡಾರ್ ಕಣ್ಣಿಗೆ ಮಣ್ಣೆರಚಿ ಅಲ್ಲಿಂದ ಹಾರಿ ಹೋಗುತ್ತದೆ.
ಉಳಿದ ಯುದ್ಧ ವಿಮಾನಗಳಿಂದ ಒಂದು ಕೈ ಮೇಲೆ
ರಫೇಲ್ ತನ್ನ ಹಳೆಯದಾಗಿರುವ ಯುದ್ಧ ವಿಮಾನಗಳಿಗೆ ಸಮರ್ಥ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದ, ಆಕ್ರಮಣಕಾರಿ ನೆರೆ ದೇಶಗಳನ್ನು ಎದುರಿಸಬೇಕಿದ್ದ ಭಾರತೀಯ ವಾಯುಪಡೆಗೆ ಒಂದು ಹೊಸ ಹುರುಪನ್ನು ನೀಡಿದೆ. ರಫೇಲ್ ಯುದ್ಧ ವಿಮಾನವನ್ನು ಚೀನಾದ ಜೆ- 20 ಯುದ್ಧ ವಿಮಾನಕ್ಕೆ ತಕ್ಕ ಪ್ರತ್ಯುತ್ತರ ಎನ್ನಲಾಗಿದೆ. ಚೀನಾದ ಜೆ- 20 ಐದನೇ ತಲೆಮಾರಿನ ಯುದ್ಧ ವಿಮಾನ ಎಂದು ಹೇಳಿಕೊಳ್ಳುತ್ತಿದ್ದರೂ, ಅದು ಹೆಚ್ಚೆಂದರೆ 3.5ನೇ ತಲೆಮಾರಿನ ಜೆಟ್ ಎನ್ನಲಾಗುತ್ತದೆ.
ರಫೇಲ್ ಯುದ್ಧ ವಿಮಾನವನ್ನು ಲಾಕ್‌ಹೀಡ್ ಮಾರ್ಟಿನ್‌ನ ಎಫ್- 35 ಯುದ್ಧ ವಿಮಾನದೊಡನೆ ಹೋಲಿಸುವುದೆಂದರೆ ಅದು ಆ್ಯಪಲ್ ಹಣ್ಣನ್ನು ಕಿತ್ತಳೆಯೊಡನೆ ಹೋಲಿಸಿದಂತಾಗುತ್ತದಷ್ಟೇ. ಎಫ್- 35 ಆಧುನಿಕ ಉಪಕರಣಗಳನ್ನು ಹೊಂದಿರುವ ಅತ್ಯಾಧುನಿಕ ಯುದ್ಧ ವಿಮಾನವೇ. ಆದರೆ ಅದು ನೇರಾನೇರ ಹೋರಾಟದ ವಿಚಾರದಲ್ಲಿ ರಫೇಲನ್ನು ಸೋಲಿಸುವಷ್ಟು ಸಮರ್ಥವಾಗಿಲ್ಲ. ಭಾರತ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಚೀನಾ ಮತ್ತು ಪಾಕಿಸ್ತಾನದ ಯುದ್ಧ ವಿಮಾನಗಳೊಡನೆ ಸೆಣಸಾಡಲು ಸಿದ್ಧತೆ ನಡೆಸಬೇಕಿದೆ. ಭಾರತೀಯ ವಾಯುಪಡೆ ಹೇಳಿದ ಹಲವು ಬದಲಾವಣೆಗಳೊಂದಿಗೆ ರಫೇಲ್ ವಿಮಾನದ ವೆಚ್ಚ ಹೆಚ್ಚಾಗುತ್ತದೆ. ಆದರೆ ರಫೇಲ್ ಭಾರತದ ಸಾಮರ್ಥ್ಯವನ್ನು ಇನ್ನೂ ಎತ್ತರಕ್ಕೇರಿಸಬಲ್ಲ, ಭಾರತದ ಬತ್ತಳಿಕೆಯಲ್ಲಿರುವ ಅತ್ಯಂತ ಪ್ರಬಲ ಅಸ್ತ್ರ.
ಅಂಕಣಕಾರರ ಪರಿಚಯ: ಗಿರೀಶ್ ಲಿಂಗಣ್ಣ ಅವರು ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಇಂಡೋ- ಜರ್ಮನ್ ಸಹಯೋಗದ ಸಂಸ್ಥೆ) ನಿರ್ದೇಶಕರಾಗಿದ್ದಾರೆ. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ವಿಶ್ಲೇಷಕರಾಗಿದ್ದಾರೆ. ಅವರ ಲೇಖನಗಳು ಅಂತಾರಾಷ್ಟ್ರೀಯ, ರಾಷ್ಟ್ರ ಹಾಗೂ ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ.