Site icon Vistara News

ಸಮರಾಂಕಣ: ಸುಳ್ಳು ಪತ್ತೆ ಯಂತ್ರಗಳು ಎಷ್ಟು ನಂಬಿಕೆಗೆ ಅರ್ಹ? ಅವುಗಳನ್ನು ನಿಜಕ್ಕೂ ಬಳಸಬೇಕೆ?

lie detector

ಅತ್ಯಂತ ಪ್ರಸಿದ್ಧವಾದ, ಲಿಯು ಸಿಕ್ಸಿನ್ ಅವರ ವೈಜ್ಞಾನಿಕ ಕಾದಂಬರಿ ʼಥ್ರೀ ಬಾಡಿ ಪ್ರಾಬ್ಲಮ್ʼನಲ್ಲಿ ಮಾನವರು ಮೊದಲ ಬಾರಿಗೆ ಟ್ರಿಸೊಲಾರನ್‌ರನ್ನು ಭೇಟಿಯಾಗುತ್ತಾರೆ. ಟ್ರಿಸೊಲಾರನ್ ಎಂದರೆ ಒಂದು ಅನ್ಯಗ್ರಹ ಜನಾಂಗವಾಗಿದ್ದು, ಅವರು ಯೋಚನೆಗಳನ್ನು ಹಂಚಿಕೊಳ್ಳುವ ಕಾರಣ ಸುಳ್ಳು ಹೇಳುವುದು, ಮೋಸ ಮಾಡುವುದು ಸಾಧ್ಯವಿಲ್ಲದವರು. ಮಾನವರ ಯೋಜನೆಗಳು, ಆಲೋಚನೆಗಳು ಅವರಂತೆ ಸಾರ್ವಜನಿಕವಲ್ಲದೆ, ಖಾಸಗಿಯಾಗಿರುವುದರಿಂದ ಟ್ರಿಸೊಲಾರನ್ ಜನಾಂಗಕ್ಕೆ ಮಾನವರ ಮೇಲೆ ನಂಬಿಕೆ ಇರುವುದಿಲ್ಲ.

ನಮ್ಮ ಜೊತೆ ಮಾತನಾಡುತ್ತಿರುವ ವ್ಯಕ್ತಿ ನಮಗೆ ನಿಜ ಹೇಳುತ್ತಿದ್ದಾರೋ, ಇಲ್ಲವೋ ಎಂದು ಖಚಿತವಾಗಿ ತಿಳಿದುಕೊಳ್ಳಲು ನಮ್ಮಲ್ಲಿ ಯಾವುದೇ ನಿಖರ ಪರಿಹಾರೋಪಾಯಗಳಿಲ್ಲ. ಕೆಲವೊಂದು ಬಾರಿ ನಮ್ಮ ಪ್ರವೃತ್ತಿಗಳು, ಅಂದರೆ ದೇಹದ ಪರಿಭಾಷೆ ವಿಚಿತ್ರವಾಗಿರುವುದು, ಅಥವಾ ನಡವಳಿಕೆ ವಿಭಿನ್ನವಾಗಿರುವುದು ಅವರ ಮಾತುಗಳ ಸತ್ಯಾಸತ್ಯತೆಗಳ ಕುರಿತು ಒಂದಷ್ಟು ಸುಳಿವು ಕೊಡಬಹುದು. ಜನರು ಆಡುವ ಮಾತುಗಳು ಮತ್ತು ಅವರ ಆಂಗಿಕ ವರ್ತನೆಗಳಿಗೆ ಸಂಬಂಧವಿಲ್ಲದಂತೆ ಕಂಡರೆ, ಅವರು ನಿಜ ಹೇಳುತ್ತಿದ್ದಾರೋ ಇಲ್ಲವೋ ಎಂದು ತಿಳಿಯಬಹುದು. ಇದನ್ನು ಹೊರತುಪಡಿಸಿದರೆ, ನಾವು ಸಾಮಾನ್ಯವಾಗಿ ನಮ್ಮ ಜೊತೆಗಾರರ, ಸ್ನೇಹಿತರ ಮಾತುಗಳನ್ನು ನಂಬುತ್ತೇವೆ. ಏಕೆಂದರೆ ಅವರ ಮನಸ್ಸಿನ ಒಳಗೆ ಯಾವ ಆಲೋಚನೆಯಿದೆ ಎನ್ನುವುದು ನಮಗೆ ತಿಳಿದಿರುವುದಿಲ್ಲ.

ಹಾಗೆಂದ ಮಾತ್ರಕ್ಕೆ ಅದನ್ನು ತಿಳಿದುಕೊಳ್ಳಲು ನಾವು ಪ್ರಯತ್ನ ನಡೆಸಿಲ್ಲವೆಂದು ಅರ್ಥವಲ್ಲ. ಒಂದು ವೇಳೆ ಎದುರಿನ ವ್ಯಕ್ತಿ ನಿಜ ಹೇಳುತ್ತಾರೆಯೇ, ಸುಳ್ಳು ಹೇಳುತ್ತಿದ್ದಾರೆಯೇ ಎಂದು ತಿಳಿಯುವ ಕುರಿತು ಸೈದ್ಧಾಂತಿಕವಾಗಿಯಾದರೂ ಪ್ರಯತ್ನಗಳನ್ನು ನಡೆಸಲಾಗಿದೆ.

ಸುಳ್ಳು ಪತ್ತೆ ಹೇಗೆ ಅಭಿವೃದ್ಧಿ ಹೊಂದಿದೆ?

ಮೊತ್ತಮೊದಲ ಸುಳ್ಳು ಪತ್ತೆಹಚ್ಚುವಂತಹ ಪ್ರಯೋಗಗಳ ಉದಾಹರಣೆ ಕ್ರಿಸ್ತಪೂರ್ವ 1,000ನೇ ಇಸವಿಯಲ್ಲಿ ಚೀನಾದಲ್ಲಿ ದಾಖಲಾಗಿದೆ. ಯಾವನಾದರೂ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ ಎಂಬ ಅನುಮಾನ ಬಂದರೆ, ಆತನ ಬಾಯಿಗೆ ಒಂದು ಮುಷ್ಟಿ ಅಕ್ಕಿ ಹಾಕಲಾಗುತ್ತಿತ್ತು. ಸ್ವಲ್ಪ ಸಮಯದ ಬಳಿಕ ಅವನು ಅದನ್ನು ಉಗಿಯುವಂತೆ ಮಾಡಲಾಗುತ್ತಿತ್ತು. ಒಂದು ವೇಳೆ ಅಕ್ಕಿಯೇನಾದರೂ ಒಣಗಿಯೇ ಇದ್ದರೆ ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಆತ ದೋಷಿ ಎಂದು ಶಿಕ್ಷೆ ವಿಧಿಸಲಾಗುತ್ತಿತ್ತು.

ಈ ಕಾರ್ಯತಂತ್ರ ಒಂದು ರೀತಿ ಮಾನಸಿಕ ಪರಿಕಲ್ಪನೆಯಾಗಿತ್ತು. ಭಯ ಮತ್ತು ಉದ್ವೇಗಗಳ ಕಾರಣದಿಂದ ಬಾಯಲ್ಲಿ ಜೊಲ್ಲು ಸುರಿಯುವುದು ಕಡಿಮೆಯಾಗಿ, ಬಾಯಿ ಒಣಗುತ್ತದೆ. ಆದರೆ ಆಧುನಿಕ ಸುಳ್ಳುಪತ್ತೆ ಪರೀಕ್ಷೆಗಳು ಸಾಮಾನ್ಯವಾಗಿ ಶಾರೀರಿಕ ಸಂಕೇತಗಳು ಅಥವಾ ಸಾಮಾನ್ಯವಾಗಿ ʼಬಯೋಮಾರ್ಕರ್ಸ್’ ಎನ್ನುವ ಸಂಕೇತಗಳನ್ನು ಪರಿಗಣಿಸುತ್ತವೆ.

ಇದಕ್ಕೆ ಒಂದು ಉದಾಹರಣೆ ಎಂದರೆ ಪಾಲಿಗ್ರಾಫ್ ಅಥವಾ ಲೈ ಡಿಟೆಕ್ಟರ್ ಪರೀಕ್ಷೆ. ಇದನ್ನು ಹಲವು ದಶಕಗಳ ಕಾಲದಿಂದ ಆರೋಪಿಗಳ ವಿಚಾರಣೆಯ ಅಂಗವಾಗಿ ನಡೆಸುತ್ತಾ ಬರಲಾಗಿದೆ. ಇದು ವ್ಯಕ್ತಿಯಲ್ಲಿನ ರಕ್ತದೊತ್ತಡ, ಹೃದಯ ಬಡಿತ, ಬೆವರುವಿಕೆ, ಹಾಗೂ ಚರ್ಮದಲ್ಲಿನ ಬದಲಾವಣೆಗಳನ್ನು ಗುರುತಿಸುತ್ತದೆ.

ಸುಳ್ಳು ಪತ್ತೆಯ ನೈಜತೆ

ಇಷ್ಟೆಲ್ಲ ಬಳಕೆಯಲ್ಲಿದ್ದರೂ, ಇಂದಿಗೂ ಸುಳ್ಳು ಪತ್ತೆ ಪರೀಕ್ಷೆ ಎಷ್ಟು ಪರಿಣಾಮಕಾರಿ ಎನ್ನುವುದರ ಕುರಿತು ಅನುಮಾನಗಳೂ ಸಾಕಷ್ಟಿವೆ. ಅದರಲ್ಲಿ ಕಂಡುಬರುವ ದೈಹಿಕ ಬದಲಾವಣೆಗಳು ಸುಳ್ಳು ಹೇಳುವುದರಿಂದ ಮಾತ್ರವೇ ನಡೆಯುತ್ತವೆ ಎನ್ನಲಾಗದು. ಅದಲ್ಲದೆ ಸುಳ್ಳು ಹೇಳುವುದಕ್ಕೆ ಸಂಬಂಧಿತ ಲಕ್ಷಣಗಳು ಸಂಸ್ಕೃತಿ, ಜನಾಂಗ, ಲಿಂಗ, ಹಾಗೂ ವಯಸ್ಸಿನ ಆಧಾರದಲ್ಲಿ ಬದಲಾಗಬಹುದು. ಸುಳ್ಳು ಪತ್ತೆ ಪರೀಕ್ಷೆಯ ಫಲಿತಾಂಶಗಳು ಈ ಮೊದಲು ಒಂದು ಗುಂಪಿನ ಫಲಿತಾಂಶದ ಮೇಲೆ ಆಧಾರಿತವಾಗಿದ್ದರೆ, ಅದು ಎಲ್ಲರಿಗೂ ಅನ್ವಯವಾಗುತ್ತದೆ ಎನ್ನಲು ಸಾಧ್ಯವಿಲ್ಲ.

ಇನ್ನು ಪಕ್ಷಪಾತವೂ ಸಹ ಒಂದು ಪ್ರಮುಖ ವಿಚಾರವೇ ಆಗಿದೆ. ಸುಳ್ಳು ಪತ್ತೆ ಪರೀಕ್ಷೆಯಿಂದ ಪಡೆದ ಮಾಹಿತಿಗಳನ್ನು ಇತರ ಮಾಹಿತಿಗಳೊಡನೆ ಹೋಲಿಸಿ ನೋಡಿ, ಫಲಿತಾಂಶಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಲಾಗುತ್ತದೆ. ಒಂದು ವೇಳೆ ಇತರ ಫಲಿತಾಂಶಗಳು ಬೇರೆಯೇ ವರ್ಣ, ಜನಾಂಗ ಅಥವಾ ಲಿಂಗಕ್ಕೆ ಸೇರಿದವರಿಂದ ಪಡೆದುದಾದರೆ, ಈ ಪರೀಕ್ಷೆ ತಪ್ಪಾಗುವ ಸಾಧ್ಯತೆಗಳಿವೆ ಎಂದು ವಿಸ್‌ಕಾನ್ಸಿನ್ ವಿಶ್ವವಿದ್ಯಾಲಯದ ಜೋ ಆ್ಯನ್ ಒರಾವೆಕ್ ವಿವರಿಸುತ್ತಾರೆ.

ಅವರು ಇತ್ತೀಚೆಗೆ ಪ್ರಕಟಿಸಿದ ಅಧ್ಯಯನವೊಂದರಲ್ಲಿ ಆಧುನಿಕ ಸುಳ್ಳು ಪತ್ತೆ ಪರೀಕ್ಷೆಗಳ ಕುರಿತು ನೈತಿಕತೆ ಮತ್ತು ಪ್ರಾಯೋಗಿಕತೆಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರು ʼಬಯೋಮಾರ್ಕರ್’ ವಿಧಾನದಲ್ಲಿ ಸುಳ್ಳು ಪತ್ತೆಯಲ್ಲಿರುವ ಲೋಪಗಳನ್ನು ತೋರಿಸಿದ್ದಾರೆ.

“ಅಮಾಯಕರನ್ನು ಸುಳ್ಳಾಡುತ್ತಿದ್ದಾರೆ ಎಂದು ತಪ್ಪಾಗಿ ತೋರಿಸುವುದರ ಪರಿಣಾಮವಾಗಿ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತವೆ. ಒಂದು ವೇಳೆ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಸುಳ್ಳು ಹೇಳಿದ್ದಾರೆ ಎಂಬ ಫಲಿತಾಂಶ ಬಂದರೂ, ಅಪರಾಧ ಸಾಬೀತಾಗುವ ತನಕ ಅವರು ಅಪರಾಧಿಗಳಲ್ಲ. ಆದರೆ ಇಲ್ಲಿ ಅವರನ್ನು ಅಪರಾಧಿಗಳು ಎಂದು ಸಾಬೀತುಪಡಿಸುವುದಕ್ಕಿಂತ ಹೆಚ್ಚಾಗಿ, ಅವರು ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಹೆಣಗುವಂತಾಗುತ್ತದೆ. ಇದು ಸುಳ್ಳು ಪತ್ತೆ ಪರೀಕ್ಷೆಯ ವೈಫಲ್ಯದ ಪರಿಣಾಮಗಳು” ಎನ್ನುತ್ತಾರೆ ಒರಾವೆಕ್.

ಸುಳ್ಳು ಪತ್ತೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಲು ಸಾಧ್ಯವೇ?

ಇತ್ತೀಚೆಗೆ, ಶಿಕ್ಷಣ ತಜ್ಞರು ಸುಳ್ಳು ಪತ್ತೆ ಹಚ್ಚುವಲ್ಲಿ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯದ ಕುರಿತು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಟೆಲ್ ಅವೀವ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎಐ ಆಧಾರಿತ ಸುಳ್ಳು ಪತ್ತೆ ವಿಧಾನವನ್ನು 2021ರಲ್ಲಿ ಅಭಿವೃದ್ಧಿ ಪಡಿಸಿದರು. ಇದು ಮಾತನಾಡುವ ವ್ಯಕ್ತಿಗಳ ಮುಖದ ಅಭಿವ್ಯಕ್ತಿಗಳನ್ನು ಗಮನಿಸಿ, ಅವರು ಸುಳ್ಳು ಹೇಳುತ್ತಿದ್ದಾರೋ ಅಥವಾ ನಿಜವೋ ಎಂದು ತಿಳಿಯಲು ಯತ್ನಿಸುತ್ತದೆ.

ಸಂಶೋಧಕರ ಪ್ರಕಾರ, ಈ ವ್ಯವಸ್ಥೆ 73% ಯಶಸ್ಸಿನ ದರ ಹೊಂದಿದೆ. ಆದರೆ ಈ ವ್ಯವಸ್ಥೆಗಳು ಜನರ ಖಾಸಗಿತನದ ಹಕ್ಕು, ನ್ಯಾಯೋಚಿತತೆಗಳನ್ನು ಉಲ್ಲಂಘಿಸಬಹುದೇ ಎನ್ನುವ ಕಳವಳಗಳೂ ವ್ಯಕ್ತವಾಗಿವೆ.

“ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳು ಸ್ವಾಯತ್ತವಾಗಿ ಮಾಹಿತಿ ಕಲೆಹಾಕುತ್ತವೆ. ಇವುಗಳು ಸಂಕೀರ್ಣ ಉಪಾಯಗಳ (ಬಯೋಮಾರ್ಕರ್ ಆಫ್ ಡೀಸೀಟ್) ಮೇಲೆ ಆಧರಿತವಾಗಿದ್ದು, ಅವುಗಳು ವ್ಯಕ್ತಿಗೆ ಹೇಗೆ ಸಂಬಂಧಿಸಿವೆ ಎಂಬ ಆಧಾರದಿಂದ ಕಡಿಮೆ ಸ್ಪಷ್ಟತೆ ಹೊಂದಿರುವ ಫಲಿತಾಂಶಗಳನ್ನು ಒದಗಿಸುವ ಸಾಧ್ಯತೆಗಳಿವೆ” ಎನ್ನುತ್ತಾರೆ ಒರಾವೆಕ್.

ಇದನ್ನೂ ಓದಿ: ಸಮರಾಂಕಣ | ವಿಮಾನವಾಹಕ ನೌಕೆಯ ಮೇಲಿಳಿಯುವ ಅವಕಾಶ ವಂಚಿತವಾದ ನೌಕಾಪಡೆಯ ಪೈಲಟ್‌ಗಳು

ಕಳೆದ ಕೆಲ ದಶಕಗಳಿಂದ, ನರವಿಜ್ಞಾನಿಗಳು ಮೆದುಳಿನ ಚಿತ್ರಗಳನ್ನು ಸತತವಾಗಿ ಅವಲೋಕಿಸುತ್ತಾ, ವ್ಯಕ್ತಿಯ ಮನಸ್ಸಿನಲ್ಲಿ ಯಾವ ಯೋಚನೆಯಿದೆ ಎಂದು ತಿಳಿಯಲು ಪ್ರಯತ್ನ ನಡೆಸುತ್ತಿದ್ದಾರೆ. ವಿಜ್ಞಾನಿಗಳು ಎಫ್ಎಂಆರ್‌ಐ ಮಾಹಿತಿ ಮತ್ತು ಮೆಷಿನ್ ಲರ್ನಿಂಗ್ ಮೂಲಕ ಲಕ್ಷಣಿಕ ಮತ್ತು ಚಿತ್ರಣದ ಮಾಹಿತಿಗಳನ್ನು ಕಲೆಹಾಕಲು ಯಶಸ್ವಿಯಾಗಿದ್ದಾರೆ. ಇದೂ ಒಂದು ರೀತಿಯಲ್ಲಿ “ಮೈಂಡ್ ರೀಡಿಂಗ್” ಆಗಿದೆ. ಈ ವಿಧಾನಗಳನ್ನು ಬಳಸಿ, ವ್ಯಕ್ತಿ ಆಡುತ್ತಿರುವ ಮಾತುಗಳು ನಿಜವೋ ಸುಳ್ಳೋ ತಿಳಿಯಬಹುದು ಎಂದು ಜನರು ನಂಬುತ್ತಾರೆ.

ಆದರೆ 2019ರ ಒಂದು ಅಧ್ಯಯನದಲ್ಲಿ, ಪ್ಲಿಮೌತ್ ವಿಶ್ವವಿದ್ಯಾಲಯದ ಸಂಶೋಧಕರು ಮಾನಸಿಕ ತಂತ್ರಗಳ ಮೂಲಕ ಮತ್ತು ಮಾನಸಿಕ ಪ್ರತಿಯೋಚನೆಗಳ ಮೂಲಕ ಎಫ್ಎಂಆರ್‌ಐ ಸುಳ್ಳು ಪತ್ತೆ ಪರೀಕ್ಷೆಯನ್ನು ವಂಚಿಸಬಹುದು ಎಂದು ಸಾಬೀತುಪಡಿಸಿದ್ದರು. ಇದರ ಪರಿಣಾಮವಾಗಿ, ಒಂದಷ್ಟು ಜನರು ಕ್ರಿಮಿನಲ್ ಪ್ರಕರಣಗಳಲ್ಲಿ ಈ ತಂತ್ರಜ್ಞಾನವನ್ನು ಬಳಸುವುದೇ ಬೇಡವೇ ಎಂಬ ಗೊಂದಲ ಹೊಂದಿದ್ದಾರೆ.

ಅಪರಾಧ, ಉದ್ಯಮ ಹಾಗೂ ವಲಸೆಯಂತಹ ಹಲವು ವಿಚಾರಗಳಲ್ಲಿ ಸುಳ್ಳು ಪತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಹಲವು ಸೂಕ್ತ ಕಾರಣಗಳಿವೆ. ಆದರೆ, ಇಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕೇ ಬೇಡವೇ ಎಂದು ಯೋಚಿಸಲು ಹಲವು ನೈತಿಕ ಕಾರಣಗಳೂ ನಮ್ಮ ಮುಂದಿವೆ.

ಅಮೆರಿಕಾ ಮತ್ತು ಇತರ ರಾಷ್ಟ್ರಗಳಲ್ಲಿ ಕಾನೂನುಗಳು ಹಲವು ಸಂದರ್ಭಗಳಲ್ಲಿ ಸುಳ್ಳು ಪತ್ತೆ ತಂತ್ರಜ್ಞಾನವನ್ನು ಬಳಸುವುದು ಕಷ್ಟಕರವಾಗುವಂತೆ ಮಾಡಿವೆ. ಆದರೆ ಒರಾವೆಕ್ ಅವರ ಪ್ರಕಾರ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ನೂತನ ತಂತ್ರಜ್ಞಾನಗಳ ಸಹಾಯದಿಂದ ಸುಳ್ಳು ಪತ್ತೆಯ ವ್ಯಾಖ್ಯಾನ ಬದಲಾಗುತ್ತಿದೆ.

ಇದನ್ನೂ ಓದಿ: ಸಮರಾಂಕಣ | ವಿಮಾನದ ಚಕ್ರಗಳ ಹಿಂದೆ ಅಡಗಿದೆ ಅದ್ಭುತ ವಿಜ್ಞಾನ

Exit mobile version