ಬಾಲಿವುಡ್ ಸಿನಿಮಾ ಎಂದರೆ ಇಡೀ ಭಾರತವನ್ನು ಪ್ರತಿನಿಧಿಸುವ ಸಿನಿಮಾ ಎಂಬ ಅಭಿಪ್ರಾಯ ಹೊರದೇಶಗಳಲ್ಲಿದೆ. ಬಾಲಿವುಡ್ ಸಿನಿಮಾ ಹಾಡುಗಳನ್ನು ಚೀನಾ, ಜಪಾನ್, ಆಫ್ರಿಕಾ ದೇಶಗಳಲ್ಲೂ ಹಾಡುತ್ತ ಭಾರತೀಯ ಸಿನಿಮಾ ಜಗತ್ತನ್ನು ಸಂಭ್ರಮಿಸುವವರಿದ್ದಾರೆ. ಭಾರತ ಸರ್ಕಾರದ ವಿದೇಶಾಂಗ ಇಲಾಖೆಯಿಂದಲೂ ಬಾಲಿವುಡ್ ಜಗತ್ತನ್ನು ಭಾರತದ ಸಾಂಸ್ಕೃತಿಕ ರಾಯಭಾರಿ ಎಂದೇ ಅನೇಕ ಕಡೆಗಳಲ್ಲಿ ಪ್ರಚುರಪಡಿಸಲಾಗಿದೆ. ಸ್ವಾತಂತ್ರ್ಯಾನಂತರದಿಂದಲೂ ಇದು ನಡೆದುಕೊಂಡೇ ಬಂದಿದೆ. ಆದರೆ ಈಗ ಬಾಲಿವುಡ್‌ಗೆ ಬೌದ್ಧಿಕ ದಾರಿದ್ರ್ಯ ಆವರಿಸಿಕೊಂಡಿದೆ.
ಆಮೀರ್ ಖಾನ್ ನಟನೆಯ ದಂಗಲ್ ಚಲನಚಿತ್ರ ಚೀನಾದಲ್ಲಿ ಸೂಪರ್ ಹಿಟ್ ಆಗಿತ್ತು. ಹೆಣ್ಣು ಮಕ್ಕಳನ್ನು ಸಶಕ್ತರಾಗಿ ಬೆಳೆಸುವುದನ್ನು ಆ ಕಥೆ ತಿಳಿಸಿತ್ತು. ಪೋಷಕರು ತಮ್ಮ ಇಷ್ಟಕಷ್ಟಗಳನ್ನು ಮಕ್ಕಳ ಮೇಲೆ ಹೇರದೇ ಅವರಲ್ಲಿರುವ ನಿಜವಾದ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಗುರುತಿಸುವ ಕುರಿತು ನಿರ್ಮಾಣ ಮಾಡಿದ್ದ ತಾರೇ ಜಮೀನ್ ಪರ್ ಸಿನಿಮಾ ಸಹ ಚೀನಾದಲ್ಲಿ ಹಿಟ್ ಆಗಿತ್ತು. ಬೃಹತ್ ಮಮ್ಮಿಗಳಿಗೆ ಹೆಸರುವಾಸಿಯಾದ ಈಜಿಪ್ಟ್‌ನಲ್ಲಿ 80ರ ದಶಕದಿಂದಲೂ ಬಾಲಿವುಡ್ ಹವಾ ಇದೆ. ಪೋಲೆಂಡ್ ದೇಶದಲ್ಲಿ, ಕೌಟುಂಬಿಕ ಮೌಲ್ಯಗಳನ್ನು ಬಿತ್ತರಿಸುವ ಶಾರುಖ್ ಖಾನ್ ನಟನೆಯ ಕಭಿ ಖುಷಿ ಕಭಿ ಘಮ್ (2005) ಸಿನಿಮಾ, ಅದರ ಹಾಡುಗಳ ಸಾಲು ನಾಗರಿಕರಿಗೆ ಕಂಠಪಾಠವಾಗಿದ್ದವು. ಇಷ್ಟೇ ಏಕೆ, ಜರ್ಮನಿ, ಆಫ್ಘಾನಿಸ್ತಾನ, ನೈಜೀರಿಯಾ, ಪೆರು, ರಷ್ಯಾದಂತಹ ಹತ್ತಾರು ದೇಶಗಳಲ್ಲಿ ಬಾಲಿವುಡ್ ಅಭಿಮಾನಿಗಳಿದ್ದಾರೆ. ಜಪಾನಿನಲ್ಲಿ ವಿಶೇಷವಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಉದ್ದದ ಪಟ್ಟಿದೆ. ಭಾರತದಲ್ಲಿ ಸಿನಿಮಾ ಕ್ಷೇತ್ರ ಆರಂಭವಾಗುವುದಕ್ಕೆ ಎಷ್ಟು ಪವಿತ್ರವಾದ ಭೂಮಿಕೆ ಇದೆ ಎನ್ನುವುದನ್ನು ಮುಂದೆ ನೋಡೋಣ.
ಭಾರತದಲ್ಲಿ ಮೊದಲ ಚಲನಚಿತ್ರವನ್ನು ರೂಪಿಸಿದವರು ದಾದಾ ಸಾಹೇಬ್ ಫಾಲ್ಕೆ. 1913ರಲ್ಲಿ ಭಾರತದಲ್ಲಿ ಮೊದಲು ನಿರ್ಮಾಣವಾದ ಚಲನಚಿತ್ರ ರಾಜಾ ಹರಿಶ್ಚಂದ್ರದ ನಿರ್ದೇಶಕ, ಬರಹಗಾರ, ಸಂಕಲನಕಾರ, ಇತ್ಯಾದಿ ಇತ್ಯಾದಿ ಎಲ್ಲವೂ ಅವರೇ. 1911ರ ಸುಮಾರಿಗೆ ಮುಂಬೈನ ಅಮೆರಿಕ ಇಂಡಿಯಾ ಪಿಕ್ಚರ್ ಪ್ಯಾಲೇಸಿನಲ್ಲಿ ಪ್ರಾಣಿಗಳ ಕುರಿತು ಸಿನಿಮಾವೊಂದನ್ನು ವೀಕ್ಷಿಸಿದರು. ಪರದೆಯ ಮೇಲೆ ಪ್ರಾಣಿಗಳನ್ನು ನೋಡಿ ಆಶ್ಚರ್ಯಗೊಂಡು ಮತ್ತೊಮ್ಮೆ ವೀಕ್ಷಿಸಲು ತೆರಳಿದರು. ಅದು ಕ್ರಿಸ್ಮಸ್ ಸಮಯವಾದ್ದರಿಂದ ಏಸುಕ್ರಿಸ್ತನ ಚಲನಚಿತ್ರ ಪ್ರದರ್ಶನವಾಗುತ್ತಿತ್ತು. ಇದರ ಕುರಿತು ಫಾಲ್ಕೆ ಅವರು ಹೇಳುವಂತೆ “ಭೌತಿಕವಾಗಿ ನನ್ನ ಕಣ್ಣುಗಳ ಮುಂದೆ ಏಸುಕ್ರಿಸ್ತನ ಜೀವನ ಹಾದುಹೋಗುತ್ತಿರುವಂತೆಲ್ಲ ಮಾನಸಿಕವಾಗಿ ನನ್ನೊಳಗೆ ದೇವರುಗಳಾದ ರಾಮ, ಕೃಷ್ಣ, ಗೋಕುಲ, ಅಯೋಧ್ಯೆಗಳು ಹಾದುಹೋಗುತ್ತಿದ್ದವು. ಅದೊಂದು ಅದ್ಭುದ ಸೆಳೆತ. ನಾನು ಮತ್ತೊಂದು ಟಕೆಟ್ ತೆಗೆದುಕೊಂಡು ಇನ್ನೊಮ್ಮೆ ಸಿನಿಮಾ ವೀಕ್ಷಿಸಿದೆ. ಈ ಸಮಯದಲ್ಲಿ ನನ್ನ ಸಿನಿಮಾ ತೆರೆಯ ಮೇಲೆ ಕಾಣುತ್ತಿರುವಂತೆ ಭಾಸವಾಯಿತು. ಇದು ನಿಜವಾಗಲೂ ಸಾಧ್ಯವಿದೆಯೇ? ಭಾರತದ ಮಕ್ಕಳು ನಾವು ಇದನ್ನು ಮಾಡಲು ಆಗುತ್ತದೆಯೇ? ಭಾರತೀಯ ಚಿತ್ರಗಳು ಪರದೆ ಮೇಲೆ ಮೂಡಲು ಸಾಧ್ಯವಿದೆಯೇ?” ಎಂಬ ಚಿಂತನೆ ಮೂಡಿತು. ಆನಂತರವೇ ರಾಜಾ ಹರಿಶ್ಚಂದ್ರ ಸಿನಿಮಾ ನಿರ್ಮಾಣ ಮಾಡಿದರು.
ಭಾರತೀಯ ಸಿನಿಮಾ ಆರಂಭವಾಗಿದ್ದು ಹೀಗೆ. ತೆರೆಯ ಮೇಲೆ ಏನನ್ನು ತೋರಿಸಬೇಕು? ನಮ್ಮ ಶ್ರೀಮಂತ ಕಲೆ, ಸಂಸ್ಕೃತಿಯನ್ನು ಬಿತ್ತರಿಸಬೇಕು. ನಮ್ಮ ದೇಶದ ಶೂರ ವೀರರ ಕುರಿತು ಹೆಮ್ಮೆ ಎನ್ನಿಸುವಂತಹ ಕಥೆಗಳನ್ನು ಹೆಣೆಯಬೇಕು. ಅಷ್ಟೇ ಸಾಕೆ? ಹೊಗಳಿಕೊಂಡು ಕೂರುವುದೇ? ಅಲ್ಲ. ಸಮಾಜದಲ್ಲಿರುವ ಕೊರತೆಗಳನ್ನೂ ಹೇಳಬೇಕು. ಮನರಂಜನೆಗೆ ಧಕ್ಕೆ ಆಗದಂತೆಯೇ ಕಥೆಯ ಸೂತ್ರದಲ್ಲಿ ಸಾಮಾಜಿಕ ಸುಧಾರಣೆಯ ಅಂಶಗಳನ್ನೂ ಪೋಣಿಸುವುದೇ ನಿರ್ದೇಶಕನ, ಕಲಾವಿದನ, ಬರಹಗಾರನ ಜಾಣ್ಮೆ. ಇಂತಹ ಪ್ರಯತ್ನಗಳೂ ಭಾರತದಲ್ಲಿ ಸಾಕಷ್ಟು ನಡೆದವು, ನಡೆಯುತ್ತಿವೆ. ಇತ್ತೀಚಿನ ಉದಾಹರಣೆಯನ್ನೇ ನೋಡೋಣ.
2017ರಲ್ಲಿ ಅಕ್ಷಯ್ ಕುಮಾರ್ ನಟನೆಯ ʻಟಾಯ್ಲೆಟ್: ಏಕ್ ಪ್ರೇಮ್ ಕಥಾʼ (Toilet: Ek Prem Katha) ತೆರೆ ಕಂಡಿತು. ಭಾರತದಲ್ಲಿ ಇನ್ನೂ ಅನೇಕ ಗ್ರಾಮಗಳಲ್ಲಿ, ನಗರ ಪ್ರದೇಶಗಳಲ್ಲೂ ಬಯಲು ಬಹಿರ್ದೆಸೆಗೆ ತೆರಳುವವರಿದ್ದಾರೆ. ಇದರಿಂದ ಹೆಣ್ಣು ಮಕ್ಕಳಿಗೆ ಯಾವ ರೀತಿ ತೊಂದರೆ ಆಗುತ್ತದೆ, ಆರೋಗ್ಯದ ಹಾಗೂ ಮನಸ್ಸಿನ ಮೇಲೆ ಆಗುವ ಪರಿಣಾಮ ಏನು ಎನ್ನುವುದನ್ನು ತೋರಿಸಿಕೊಟ್ಟಿತು. ಇಷ್ಟು ಗಂಭೀರ ವಿಷಯವನ್ನು ಇದ್ದ ಹಾಗೆಯೇ ಹೇಳಿದರೆ ಜನರು ಏಕೆ ಚಿತ್ರಮಂದಿರಕ್ಕೆ ಬಂದು ವೀಕ್ಷಿಸುತ್ತಾರೆ? ಅದಕ್ಕಾಗಿಯೇ ಇಡೀ ಸಿನಿಮಾವನ್ನು ಹಾಸ್ಯಪ್ರಧಾನವಾಗಿಸಲಾಗಿದೆ. ಮನರಂಜನೆಗೆ ಬಂದ ಜನರು ಸಾಮಾಜಿಕ ಸಂದೇಶವನ್ನು ಹೊತ್ತೊಯ್ದರು. ಈ ಸಿನಿಮಾದಲ್ಲಿನ ನಟನೆಗೆ ಅಕ್ಷಯ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ವರದಿಗಳು ಹೇಳುವಂತೆ ಈ ಸಿನಿಮಾ 300 ಕೋಟಿ ರೂ. ಸಂಪಾದನೆ ಮಾಡಿತು. ಇದು ಅಲ್ಲಿವರೆಗೆ ಅಕ್ಷಯ್ ಕುಮಾರ್ ನಟನೆಯ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ.
ಇದನ್ನೂ ಓದಿ | ಸವಿಸ್ತಾರ ಅಂಕಣ | ಅಲ್ಲಮ ಪ್ರಭುಗಳು ಹೇಳಿದ ಮಾತು ಕಾಂಗ್ರೆಸ್ ಕುರಿತೇ ಆಗಿರಬೇಕು ಎನ್ನಿಸುವಂತಿದೆ!
ಇಷ್ಟೆಲ್ಲ ಹಿನ್ನೆಲೆ ಹೊಂದಿರುವ ಬಾಲಿವುಡ್ ಸಿನಿಮಾ ಬೌದ್ಧಿಕ ದಾರಿದ್ರ್ಯವನ್ನು ಎದುರಿಸುತ್ತಿದೆ. ಅತ್ಯುತ್ತಮ ಸಿನಿಮಾಗಳು ನಿರ್ಮಾಣವಾದಾಗಲೂ ಅತಿ ಕೀಳು ಮಟ್ಟದ ಪ್ರಚಾರ ಸಿನಿಮಾಗಳು ಬಂದಿದ್ದವು. ಆದರೆ ಇತ್ತೀಚೆಗೆ, ಜನರ ಭಾವನೆಗಳನ್ನು ಕೆಣಕುವುದೇ ಬಾಲಿವುಡ್ ಸಿನಿಮಾದ ಏಕಮಾತ್ರ ಉದ್ದೇಶ ಎಂಬಂತಾಗುತ್ತಿದೆ. ಅದರಲ್ಲೂ ಹಿಂದು ದೇವ ದೇವಿಯರ ಕುರಿತು ಅನಗತ್ಯವಾಗಿ, ಅಸಹ್ಯವಾಗಿ ಚಿತ್ರಿಸುವ ಪರಿಪಾಠ ಬೆಳೆಯುತ್ತಲೇ ಇದೆ. ಇಂತಹ ಚಲನಚಿತ್ರಗಳನ್ನು ಸರ್ಕಾರ ಬ್ಯಾನ್ ಮಾಡಬೇಕು ಎಂದು ಕೆಲವರು ಒತ್ತಾಯಿಸುತ್ತಾರೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ತುಸು ಹೆಚ್ಚೇ ಇರುವ ಭಾರತದಲ್ಲಿ ಅದು ಸಾಧ್ಯವಾಗಿಲ್ಲ. ಆದರೆ ಅದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಜತೆಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಸಂವಿಧಾನ ನೀಡಿರುವುದರಿಂದ, ಜನರು ತಮ್ಮಿಂತಾವೇ ಇಂತಹ ಸಿನಿಮಾಗಳನ್ನು ಬಹಿಷ್ಕಾರ (Boycott) ಮಾಡುತ್ತಿದ್ದಾರೆ. ಇದೀಗ ಬಹಿಷ್ಕಾರ ಮಾಡಬೇಕು ಎಂಬ ಸಿನಿಮಾಗಳ ಪಟ್ಟಿಗೆ 2023ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಪಠಾಣ್ ಸಿನಿಮಾ ಸೇರಿಕೊಂಡಿದೆ.
ಅದರಲ್ಲಿ ಬೇಷರಮ್ ರಂಗ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ವಸ್ತ್ರವನ್ನು ಧರಿಸಿರುವುದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ಹಿಂದು ಧರ್ಮಕ್ಕೆ ಮಾಡಿದ ಅಪಮಾನ ಎಂದು ಹೇಳುವ ಮೂಲಕ ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಅನೇಕರು ಅಕ್ಷಯ್ ಕುಮಾರ್ ನಟನೆಯ ಚಲನಚಿತ್ರದ ಫೋಟೊಗಳನ್ನು ಹರಿಬಿಟಿದ್ದಾರೆ. ಆ ಚಿತ್ರದಲ್ಲಿಯೂ ನಟಿಯೊಬ್ಬಳು ಕೇಸರಿ ಬಿಕಿನಿ ಧರಿಸಿದ್ದಳು, ಆಗ ಇಲ್ಲದ ಆಕ್ಷೇಪ ಈಗೇಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಶಾರುಖ್ ಖಾನ್ ಒಬ್ಬ ಮುಸ್ಲಿಂ, ಅದಕ್ಕಾಗಿ ವಿರೋಧಿಸುತ್ತಿದ್ದೀರ ಎನ್ನುತ್ತಿದ್ದಾರೆ. ಶಾರುಖ್ ಖಾನ್ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಸಿನಿಮಾ ನೋಡುವುದಾಗಿದ್ದರೆ ಇಷ್ಟು ವರ್ಷ ಕೇವಲ ಮುಸ್ಲಿಂ ವೀಕ್ಷಕರಿಂದಲೇ ಅವರು ಸೂಪರ್ ಸ್ಟಾರ್ ಎನಿಸಿಕೊಂಡರೇ? 1995ರಲ್ಲಿ ತೆರೆಕಂಡ ʻದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೇʼ ಸಿನಿಮಾ ಕೇವಲ ಮುಸ್ಲಿಂ ವೀಕ್ಷಕರಿಂದ ಗೆದ್ದಿತೇ? ʻಚಕ್ ದೇ ಇಂಡಿಯಾʼ ಸಿನಿಮಾವನ್ನು ನೋಡಿ ಎಲ್ಲರೂ ಚಪ್ಪಾಳೆ ಹೊಡೆಯಲಿಲ್ಲವೇ? ಅವರನ್ನು ಒಬ್ಬ ನಟನಾಗಿ ಬಾಲಿವುಡ್ ಪ್ರಿಯರು ಒಪ್ಪಿಕೊಂಡಿದ್ದಾರೆ. ಆದರೆ ಅವರು ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆಯೇ ಎಂಬುದು ಪ್ರಶ್ನೆ.
ಇದನ್ನೂ ಓದಿ | ಸವಿಸ್ತಾರ ಅಂಕಣ | ನೈತಿಕತೆ ಮೆರೆಯಲು ಅಂದು 6 ಶಾಸಕರನ್ನು ಉಚ್ಚಾಟಿಸಿದ ಪಕ್ಷಕ್ಕೆ ಇಂದು ರೌಡಿಗಳ ಅವಶ್ಯಕತೆ ಏಕೆ ಬಂತು?
2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಒಸಾಮಾ ಬಿನ್ ಲಾಡೆನ್ ದಾಳಿ ಮಾಡಿದ ನಂತರ ಆ ದೇಶದಲ್ಲಿ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ಅಮೆರಿಕದ ಸಂದರ್ಭವನ್ನು ಇಟ್ಟುಕೊಂಡು My Name Is Khan ಸಿನಿಮಾದಲ್ಲಿ ನಟಿಸಿದರು. ಇದರಲ್ಲಿನ ವಿಷಯಕ್ಕೂ ಭಾರತಕ್ಕೂ ಎಲ್ಲಿಂದೆಲ್ಲಿಗೂ ಸಂಬಂಧವಿಲ್ಲದ್ದು. ಬಾಲಿವುಡ್ ಎನ್ನುವ ಒಂದು ಜಗತ್ತನ್ನೇ ಸೃಷ್ಟಿಸಿಕೊಂಡಿದ್ದ ಕೆಲವರು ತಾವು ಹೇಳಿದ್ದೆಲ್ಲ ವೇದವಾಕ್ಯ ಎನ್ನುವಂತೆ ಭ್ರಮೆ ಹುಟ್ಟಿಸಿದ್ದರು. ತಮ್ಮ ವೈಯಕ್ತಿಕ ಜೀವನದಲ್ಲಿ ಹೇಗೆಯೇ ಇದ್ದರೂ ಸಿನಿಮಾ ಪರದೆಯಲ್ಲಿ ಉತ್ತಮ ನಡವಳಿಕೆಯ ಪೋಸ್ ಕೊಡಬಹುದು ಎಂಬ ಪರಿಸ್ಥಿತಿ ಆಗ ಇತ್ತು. ಆದರೆ ಈಗ ಸಮಯ ಬದಲಾಗಿದೆ.
ಸಿನಿಮಾ ನಟರ ವೈಯಕ್ತಿಕ ಜೀವನ ಹಾಗೂ ಪರದೆ ಮೇಲಿನ ನಟನೆಯನ್ನು ಹೋಲಿಕೆ ಮಾಡುತ್ತಿದ್ದಾರೆ. ಕಲಾ ಜಗತ್ತಿನಲ್ಲಿ ʻಬಿಲೀವ್ ಆರ್ಟ್, ನಾಟ್ ಆರ್ಟಿಸ್ಟ್ʼ ಎಂಬ ಮಾತು ಈಗ ಸೋತಿದೆ. ಅವರು ಕಲೆಯನ್ನು ಮಾತ್ರ ನಂಬುವುದಿಲ್ಲ. ಕಲೆಯನ್ನು ಕೆತ್ತಿದ ಕಲಾವಿದ ಹೇಗಿರುತ್ತಾನೆ ಎಂಬ ಕೌತುಕಕ್ಕೆ ಬೀಳುತ್ತಾರೆ. ಸತ್ಯ ಹೇಳಿ ಎಂದು ವೇದಿಕೆಯಲ್ಲಿ ಭಾಷಣ ಮಾಡುವವ, ವೇದಿಕೆಯಿಂದಾಚೆಗೆ ಸತ್ಯ ಹೇಳುತ್ತಿರುವವನೇ ಎಂದು ಪರಿಶೋಧಿಸುವುದು ಸಹಜ. ಕಲೆಯಷ್ಟೇ ಸುಂದರವಾಗಿದ್ದರೆ ಸಾಲದು, ಕಡೆದ ಕಲಾವಿದನೂ ಸುಂದರವಾಗಿರಬೇಕು ಎಂದು ಸಹೃದಯರು ಬಯಸುವುದರಲ್ಲಿ ತಪ್ಪೇನಿದೆ?
ಶಾರುಖ್ ಖಾನ್ ಪುತ್ರ ಇತ್ತೀಚೆಗೆ ಮಾದಕ ದ್ರವ್ಯ ಆರೋಪದಲ್ಲಿ ಬಂಧನಕ್ಕೊಳಗಾದಾಗ ಅವರ ನಡವಳಿಕೆಗಳನ್ನು ಜನರು ಗಮನಿಸಿದ್ದಾರೆ. ಸದಾ ಪಾನಮತ್ತರಾಗಿ, ಪಬ್, ಬಾರ್‌ಗಳಲ್ಲಿರುವ ಬಾಲಿವುಡ್ ನಟ-ನಟಿಯರು ಸಿನಿಮಾ ಬಿಡುಗಡೆಗೆ ಮುನ್ನ ಅಜ್ಮೇರ್‌ನ ದರ್ಗಾಕ್ಕೊಂದು ಭೇಟಿ, ಕಾಶಿ ವಿಶ್ವನಾಥನ ದೇವಸ್ಥಾನಕ್ಕೊಂದು ಭೇಟಿ, ವೈಷ್ಣೋಮಾತಾ ಮಂದಿರದಲ್ಲೊಂದು ಕೈಮುಗಿದು ಸಿನಿಮಾಕ್ಕೆ ಪ್ರಚಾರ ಗಿಟ್ಟಿಸುವ ತಂತ್ರವನ್ನು ಜನರು ನೋಡಿದ್ದಾರೆ.
ಕಳೆದ ಆರೇಳು ತಿಂಗಳಲ್ಲಿ ದೇಶದಲ್ಲಿ ಅಸುರಕ್ಷತೆಯ ವಾತಾವರಣದಿಂದಾಗಿ ಪತ್ನಿ ಭಯಭೀತಳಾಗಿದ್ದು, ದೇಶವನ್ನೇ ತೊರೆದುಬಿಡೋಣ ಎನ್ನುತ್ತಿದ್ದಾಳೆ ಎಂದು 2015ರಲ್ಲಿ ಆಮೀರ್ ಖಾನ್ ಹೇಳಿದ್ದರು. ಆರೇಳು ತಿಂಗಳಲ್ಲಿ ಅಂತಹದ್ದು ಏನಾಗಿತ್ತು? 2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಹಿಡಿದಿದ್ದರು. ಇಡೀ ದೇಶದ ಜನರೇ ಅಭೂತಪೂರ್ವವಾಗಿ ಬೆಂಬಲಿಸಿದ ಪ್ರಧಾನಿ ವಿರುದ್ಧ ಆಮೀರ್ ಮಾಡಿದ ಆರೋಪಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಯಿತು. ಆಮೀರ್ ಖಾನ್ 2006ರಲ್ಲಿಯೂ ಗುಜರಾತ್‌ನಲ್ಲಿ ಸರ್ದಾರ್ ಸರೋವರ್ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಯನ್ನು ವಿರೋಧಿಸಿ ಅಂದಿನ ಮುಖ್ಯಮಂತ್ರಿ ಮೋದಿ ವಿರುದ್ಧ ಹೇಳಿಕೆ ನೀಡಿ ಬಂದಿದ್ದರು. ಆದರೂ 2016ರಲ್ಲಿ ದಂಗಲ್ ಸಿನಿಮಾವನ್ನು ಜನರು ವೀಕ್ಷಿಸಿದರು. ಇದು ಭಾರತದ ನಾಗರಿಕರ ಕ್ಷಮಾಗುಣ ಹಾಗೂ ಶುದ್ಧ ಮನರಂಜನೆಯನ್ನು ವೀಕ್ಷಿಸುವ ಪ್ರಬುದ್ಧತೆ.
ಇದನ್ನೂ ಓದಿ | ಸವಿಸ್ತಾರ ಅಂಕಣ | ಮುಸ್ಲಿಂ ಪ್ರತ್ಯೇಕತೆ ಹೋಗಲಾಡಿಸಲು ಇದು ಪರಿಹಾರ ಆಗಬಲ್ಲದೇ?
ಆದರೆ ಬಾಲಿವುಡ್ ತನ್ನ ಪ್ರಬುದ್ಧತೆಯನ್ನು ಹೆಚ್ಚಿಸಿಕೊಳ್ಳಲೇ ಇಲ್ಲ. ಇಲ್ಲಿನ ನಾಗರಿಕರನ್ನು ತುಚ್ಛವಾಗಿ ತೋರಿಸುವ ಸ್ಲಂ ಡಾಗ್ ಮಿಲಿಯನೇರ್‌ನಂತಹ ಸಿನಿಮಾಗಳನ್ನು ತನ್ನ ಜಾಗತಿಕ ಮುಖವಾಣಿಯನ್ನಾಗಿಸಿತು. ಭಾರತದ ಸಂಸ್ಕೃತಿಯನ್ನು ಪರದೆಯ ಮೇಲೆ ತೋರಿಸಬೇಕು ಎಂದು ಸಿನಿಮಾ ಮಾಡಿದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರಿಗೆ ನೀಡುತ್ತಿರುವ ಉಡುಗೊರೆ ಇದೆಯೇ?
ಇಲ್ಲಿ ಅಸಹನೆಯ ವಾತಾವರಣ ಇದೆ ಎನ್ನುವ ಈ ಸಿನಿಮಾ ನಟರು ಅಕ್ಕಪಕ್ಕದ ಮುಸ್ಲಿಂ ದೇಶಗಳಲ್ಲಿ ಎಷ್ಟು ಸಹನಶೀಲತೆ ಇದೆ ಎಂದು ಹೇಳಬಲ್ಲರೇ? ಇಲ್ಲಿಯ ಶೇ.10ರಷ್ಟಾದರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರೀಕ್ಷಿಸಬಹುದೇ? ಅಷ್ಟಕ್ಕೂ ಸಿನಿಮಾವನ್ನು ಬಹಿಷ್ಕಾರ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ಕಾರ್ಯವಂತೂ ಅಲ್ಲ. ತಮ್ಮ ದೇವಾನುದೇವತೆಗಳನ್ನು, ಸಂಸ್ಕೃತಿಯನ್ನು, ಮಹಿಳೆಯರನ್ನು ಅಸಹ್ಯವಾಗಿ ತೋರಿಸಿದ್ದಕ್ಕೆ ಎಲ್ಲಿಯೂ ಯಾರೂ ಕೊಲ್ಲುವ ಹಂತಕ್ಕೆ ಹೋಗಿಲ್ಲ. ಸಂವಿಧಾನವೇ ನೀಡಿರುವ ಪ್ರತಿಭಟನೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಬ್ರಿಟಿಷರ ವಿರುದ್ಧವೂ ನಾವು ಅದನ್ನು ಪ್ರಯೋಗಿಸಿದ್ದೇವೆ. ಶ್ರೀಸಾಮಾನ್ಯರು ತಮ್ಮನ್ನು ಯಾರದರೂ ಬೈದರೆ, ಟೀಕಿಸಿದರೆ ಸಹಿಸಿಕೊಳ್ಳುತ್ತಾರೆ. ಆದರೆ, ತಾವು ನಂಬಿರುವ ದೇವರೆಂಬ ನಂಬಿಕೆ, ದೇಶ-ಕೋಶವೆಂಬ ಶ್ರದ್ಧೆ, ಭಾಷೆ -ಸಂಸ್ಕೃತಿ ಎಂಬ ಭಾವನೆಯನ್ನು ಹೀಗಳೆದರೆ ಸಹಿಸಿಕೊಳ್ಳಲಾರರು. ಅವರು ಪ್ರತಿಭಟಿಸುತ್ತಾರೆ.
ಹಾಗೆ ನೋಡಿದರೆ, ಭಾರತೀಯ ಸಮಾಜ ಎಂದಿಗೂ ಸುಧಾರಣೆಗೆ ವಿಮುಖವಾಗಿಲ್ಲ. ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ತೋರಿಸಿದರೆ ಎಂದಿಗೂ ಪ್ರತಿಭಟಿಸಿಲ್ಲ. ಇತ್ತೀಚೆಗಷ್ಟೆ ವಿಶ್ವಾದ್ಯಂತ ಸೂಪರ್ ಹಿಟ್ ಆದ ಕಾಂತಾರ ಸಿನಿಮಾದ ನಡುವೆಯೂ, ಜಾತಿ ವ್ಯವಸ್ಥೆ, ಜಮೀನುದಾರಿಕೆ ದಬ್ಬಾಳಿಕೆಯಂತಹ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಯಾರಾದರೂ ಅದನ್ನು ಆಕ್ಷೇಪಿಸಿದರೇ? ವಿಶೇಷವಾಗಿ ದಕ್ಷಿಣ ಭಾರತದಿಂದ ಆರ್‌ಆರ್‌ಆರ್, ಬಾಹುಬಲಿ, 777 ಚಾರ್ಲಿ, ಪೊನ್ನಿಯನ್ ಸೆಲ್ವನ್, ಕಾಂತಾರದಂತಹ ಅತ್ಯುತ್ತಮ Content ಇರುವ ಸಿನಿಮಾಗಳು ತೆರೆ ಕಂಡು ಬಾಕ್ಸ್ ಆಫೀಸ್‌ನಲ್ಲೂ ಹಿಟ್ ಆಗುತ್ತಿವೆ. ಆದರೆ ಬಾಲಿವುಡ್ ಮಾತ್ರ ತನ್ನ ಬೌದ್ಧಿಕ ದಾರಿದ್ರ್ಯವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅದೇ ಅರೆನಗ್ನತೆಯನ್ನು ಮತ್ತಷ್ಟು ಹೆಚ್ಚಿಸಿ ಮುಕ್ಕಾಲು ನಗ್ನತೆಯಲ್ಲೇ ಸಂತೋಷ ಕಾಣುತ್ತಿದೆ. ಇದೆಲ್ಲವನ್ನೂ ಮೀರಿ, ಪಠಾಣ್ ಸಿನಿಮಾ ಕುರಿತು ಅಕ್ಷೇಪಿಸಿದ್ದಕ್ಕೆ ಇಡೀ ಸಾಮಾಜಿಕ ಜಾಲತಾಣವೇ ನಕಾರಾತ್ಮಕತೆಯಿಂದ ಕೂಡಿದೆ ಎಂದು ಶಾರುಖ್ ಖಾನ್ ಬುದ್ಧಿವಾದ ಬೇರೆ ಹೇಳಲು ಮುಂದಾಗಿದ್ದಾರೆ. ಬಾಲಿವುಡ್‌ಗೆ ಆವರಿಸಿರುವ ಬೌದ್ಧಿಕ ದಾರಿದ್ರ್ಯತನಕ್ಕೆ ದಾರ್ಷ್ಟ್ಯದ ಕಿರೀಟವನ್ನೂ ತೊಡಿಸಿಕೊಂಡಾಗಿದೆ. ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?
ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಂದು ಧರ್ಮಕ್ಕೆ, ಸಂಪ್ರದಾಯಕ್ಕೆ ಹೇಗೆ ಸೀಮಿತಗೊಳಿಸಲಾಯಿತು, ಬುದ್ಧಿಜೀವಿಗಳು ಎನ್ನಿಸಿಕೊಂಡವರು ಇದಕ್ಕೆ ಎಷ್ಟು ತುಪ್ಪ ಸುರಿದರು ಎನ್ನುವುದನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಇದನ್ನೂ ಓದಿ: ಸವಿಸ್ತಾರ ಅಂಕಣ | ಅಲ್ಲಮ ಪ್ರಭುಗಳು ಹೇಳಿದ ಮಾತು ಕಾಂಗ್ರೆಸ್ ಕುರಿತೇ ಆಗಿರಬೇಕು ಎನ್ನಿಸುವಂತಿದೆ!